ಹುಚ್ಚೆದ್ದು ಕುಣಿಯುತಿರುವ
ಆಸೆಗಳನೆಲ್ಲ ತಡೆದಿಟ್ಟುಕೊಂಡು
ಹಾರಾಡುತಿರುವ ಮನಸನ್ನು
ತಹಬಂದಿಗೆ ತಂದುಕೊಂಡು
ತಪ್ಪದೆ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ
ಕಾಳಜಿಯಿಂದ ಸಿಂಗರಿಸಿಕೊಂಡು
ಮನದಾಳದಲ್ಲಿ ನಿನ್ನ
ನೆನಪುಗಳನ್ನೇ ತುಂಬಿಕೊಂಡು
ನಿರಾಸೆಗೊಳಿಸದೆ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
ಮುನಿಸಿಕೊಂಡಿದ್ದರೆ ರಮಿಸಿ
ಕೋಪ ತಣಿಸುವೆಯೆಂದು
ಜೊತೆಯಲ್ಲಿ ಕುಳಿತು ನನ್ನ
ಕನಸುಗಳಿಗೆ ರೂಪ ಕೊಡುವೆಯೆಂದು
ನನಗೋಸ್ಕರ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
ಮುಡಿದ ಮಲ್ಲಿಗೆ
ಹೂವಿನ ದಂಡೆ ಬಾಡಿದರೂ
ಕಾಯುವ ಬೇಸರ
ಎಡಬಿಡದೆ ಕಾಡಿದರೂ
ತಡವಾದರೂ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||