Friday, November 19, 2010

ವಿದಾಯ

ಮರೆತ ಸ್ವರಗಳ ಮೊರೆತ
ಎದೆಯ ಸಾಗರದೊಳಗೆ
ಭಾವನೆಗಳ ಭೋರ್ಗರೆತ
ಮನದ ಕಡಲೊಳಗೆ

ಇನ್ನು ಬೇಸರಿಸಿ ಫಲವಿಲ್ಲ
ಕವಲುದಾರಿಯಲ್ಲಿ ನಿಂತಾಯ್ತು
ನೆನಪುಗಳಿಗಾಗಿ ಒದ್ದಾಡಿ ಸುಖವಿಲ್ಲ
ಪಯಣ ಮುಂದುವರೆಯಬೇಕು

ಎಲ್ಲರೆದುರು ಮಾತನಾಡಿದರೆಲ್ಲಿ
ಬಿಕ್ಕುವೆನೋ ಎಂಬ ಹಿಂಜರಿಕೆ
ನಾ ಹೇಳಬೇಕಾದ್ದೆಲ್ಲವ
ನನ್ನ ಮೌನವೇ ತಿಳಿಸಿತಲ್ಲವೇ?

ದೂರಾಗುವ ಕಾಲ ಬಂದಾಯ್ತು
ಸಮಯ ಕಾದೀತೇ ನಮಗಾಗಿ?
ಕಣ್ಣೆದುರಿಲ್ಲದಿದ್ದರೂ ಮನದಲ್ಲಿರಿ
ಕಾಡುವ ಸಿಹಿ ಸವಿ ನೆನಪಾಗಿ

ಕೊನೆಯ ಮಾತು:‌ ಇದುವರೆಗೆ PESIT ಯಲ್ಲಿ ನನ್ನ ಜೊತೆಗಿದ್ದು ಮಧುರಾತಿಮಧುರ ನೆನಪುಗಳ ರಾಶಿಯನ್ನು ಒಟ್ಟುಗೂಡಿಸಿ ನೆನಪಿನ ಪುಟಗಳ ತುಂಬಾ ತುಂಬಿರುವ ನನ್ನೆಲ್ಲಾ ಸ್ನೇಹಿತರಿಗೆ....

Sunday, November 7, 2010

ನಿನ್ನೆ ನಾಳೆಗಳ ನಡುವೆ

ನಿನ್ನೆಯ ನೆನಪು ಅಚಲ
ಯಾರೋ ಕಟ್ಟಿ ಬಿಟ್ಟು ಹೋದ
ಕೋಟೆಯಂತ
ಚಂಡಮಾರುತಗಳಿಗೂ ಜಗ್ಗದ
ಬಂಡೆಕಲ್ಲಿನಂತೆ

ನಾಳೆಯ ಕನಸು ಮಧುರ
ಎಲ್ಲಿಂದಲೋ‌ ಪರಿಮಳ ಸೂಸುವ
ಸೂಜಿಮಲ್ಲೆಯಂತೆ
ಜೀವನೋತ್ಸಾಹ ತುಂಬಿ ತರುವ
ಭರವಸೆಯ ಬೆಳಕಂತೆ

ಆದರೇನು
ನೆನಪು ನೂರು ಕಾಡಲು
ಸಮಯ ಮರಳಿ ಬರುವುದೇ?
ಕನಸು ನೂರು ಕೂಡಲು
ಬಾಳ ಕೀಲಿ ಸಿಗುವುದೇ?

ನಿನ್ನೆಗಳ ಸಾಗರದೊಳಗೆ ಮುಳುಗಿ
ನಾಳೆಯ ದಂಡೆ ಸೇರುವ ಅಪೇಕ್ಷೆ
ನಿನ್ನೆಯ ಸಂಕೋಲೆಗಳೊಳಗೆ
ನಾಳೆಯ ಸ್ವಾತಂತ್ರ್ಯದ ನಿರೀಕ್ಷೆ

ಬದುಕು ಸಾಗುವುದು
ಕಳೆದು ಹೋದ ನಿನ್ನೆಯಲ್ಲೂ‌ ಅಲ್ಲ
ಮುಂಬರುವ ನಾಳೆಯಲ್ಲೂ‌ ಅಲ್ಲ
ನಿನ್ನೆ ನಾಳೆಗಳ ನಡುವ ಕೊಂಡಿಯಲ್ಲಿ
ಇಂದಿನ ದಿನದ ಬೆಚ್ಚಗಿನ ಗೂಡಿನಲ್ಲಿ

ನಿನ್ನೆಯ ಸೆರಗು ಸರಿಸಿ ಅರಳಿದ
ಇಂದಿನ ಸುಮವಿದು ಕಂಪ ಬೀರಲಿ
ನಿನ್ನೆಯ ಬುನಾದಿಯ ಮೇಲೆ
ನಾಳೆಯ ಮಹಲು ಕಟ್ಟುವ
ಇಂದಿನ ಕೆಲಸ ಕೈಗೂಡಲಿ

Monday, September 6, 2010

ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ

"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ"
"ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?"
"ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು."
ಹೌದಲ್ಲ... ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?

ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ "ಇಲ್ಲ". ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ.....

ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ ಶಕ್ತಿಶಾಲಿ ಆಂಟೆನಾದ ಮೂಲಕ ಸುಮಾರು ೫೦ ಕಿ.ಮೀ. ದೂರದವರೆಗೆ ಸಂದೇಶಗಳನ್ನು ಬ್ರಾಡ್ ಕಾಸ್ಟ್ ಮಾಡಲಾಗುತ್ತಿತ್ತು. ಆದರೆ ಸೆಲ್ಯುಲಾರ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಒಂದು ಶಕ್ತಿಶಾಲಿ ಆಂಟೆನಾದ ಬದಲಿಗೆ ಅನೇಕ ಕಡಿಮೆ ಶಕ್ತಿಯ ಆಂಟೆನಾಗಳಿಂದ ವ್ಯಾಪ್ತಿ ಪ್ರದೇಶದೊಳಗಿನ ಗ್ರಾಹಕರನ್ನು ತಲುಪುವ ವ್ಯವಸ್ಥೆ ಆರಂಭವಾಯಿತು. ಇಂಥ ಒಂದು ಕಡಿಮೆ ಶಕ್ತಿಯ ಆಂಟೆನಾದಿಂದ ಸಂಪರ್ಕ ಸೇವೆ ಪಡೆಯುವ ಒಂದು ಭೌಗೋಳಿಕ ಪ್ರದೇಶಕ್ಕೆ "ಸೆಲ್" ಎಂದು ಹೆಸರು. ಹಾಗೆ ಈ ಆಂಟೆನಾ ಹಾಗೂ ಅದಕ್ಕೆ ಸಂಬಂಧಿಸಿದ ಸಿಗ್ನಲ್ ಪ್ರೊಸೆಸಿಂಗ್ ಹಾರ್ಡ್ ವೇರ್ ಗೆ ಬೇಸ್ ಟ್ರಾನ್ಸೀವರ್ ಸ್ಟೇಷನ್(BTS) ಎಂಬ ಹೆಸರು.ಒಂದು ಅಥವಾ ಅದಕ್ಕಿಂತ ಹೆಚ್ಚು BTS ಗಳನ್ನು ನಿಯಂತ್ರಿಸುವುದು ಬೇಸ್ ಸ್ಟೇಷನ್ ಕಂಟ್ರೋಲರ್ (BSC) . ಹಲವಾರು BSCಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಕರೆ ಪೂರ್ಣಗೊಳಿಸುವುದು ಮೊಬೈಲ್ ಸ್ವಿಚಿಂಗ್ ಸೆಂಟರ್ (MSC). ಇಲ್ಲಿ ಕೇವಲ BTS ಮತ್ತು ಮೊಬೈಲ್ ನಡುವೆ ಮಾತ್ರ ಗಾಳಿಯಲ್ಲಿ ತರಂಗಗಳ ಮೂಲಕ ಸಂದೇಶ ರವಾನೆಯಾಗುತ್ತದೆ.

ಗ್ರಾಹಕರಿಗೆ ಮೊಬೈಲ್ ಸೇವೆ ಒದಗಿಸುವ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ BTS, BSC ಹಾಗೂ MSCಗಳನ್ನು ಹೊಂದಿರುತ್ತದೆ. ಒಂದು ನೆಟ್ ವರ್ಕ್ ನ MSC ತನ್ನ ನೆಟ್ ವರ್ಕಿನ ಇತರೆ MSCಗಳೊಂದಿಗೆ ಹಾಗೂ ಇತರೆ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕಗಳ ಎಕ್ಸ್ ಚೇಂಜ್ ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.ಇದಲ್ಲದೇ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ ಕೆಲವು ಮಾಹಿತಿಗಳನ್ನು ಹೋಂ ಲೊಕೇಶನ್ ರೆಜಿಸ್ಟರ್(HLR) ಹಾಗೂ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR) ನಲ್ಲಿ ಹೊಂದಿರುತ್ತವೆ.ಅನೇಕ MSCಗಳು ಕಾರ್ಯ ನಿರ್ವಹಿಸುತ್ತಿರುವ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಎಲ್ಲಾ ಗ್ರಾಹಕರ ಮಾಹಿತಿಯನ್ನು  HLR ಹೊಂದಿದ್ದರೆ, ಒಂದು MSCಯ ವ್ಯಾಪ್ತಿಗೊಳಪಡುವ ಭೌಗೋಳಿಕ ಪ್ರದೇಶದಲ್ಲಿ ಆ ಸಮಯದಲ್ಲಿರುವ ಗ್ರಾಹಕರ ಮಾಹಿತಿಯನ್ನು VLR ಹೊಂದಿರುತ್ತದೆ.ಪ್ರತಿಯೊಂದು MSCಯೊಂದಿಗೆ ಒಂದು VLR ಇರುತ್ತದೆ.ಯಾವ ಗ್ರಾಹಕ ಯಾವ MSC-VLR ಗೆ ಸೇರಿದ ಪ್ರದೇಶದಲ್ಲಿದ್ದಾನೆ ಎಂಬುದು HLR ಗೆ ತಿಳಿದಿರುತ್ತದೆ. ಗ್ರಾಹಕರಿಗೆ ಸೇವೆ ಒದಗಿಸಲು ಬೇಕಾದ ಎಲ್ಲಾ ಮಾಹಿತಿಗಳನ್ನು HLRನಿಂದ VLR ಪಡೆಯುತ್ತದೆ.

ಪ್ರತಿಯೊಂದು ಅಧಿಕೃತ ಮೊಬೈಲ್ ಹ್ಯಾಂಡ್ ಸೆಟ್ ೧೫ ಅಂಕಿಗಳ IMEI (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. (ನಿಮ್ಮ ಮೊಬೈಲಿನ IMEI ನಂಬರ್ ತಿಳಿಯಲು *#೦೬# ಡಯಲ್ ಮಾಡಿ) . ಎಲ್ಲಾ ಅಧಿಕೃತ ಮೊಬೈಲ್ ಹ್ಯಾಂಡ್ಸೆಟ್ ಗಳ IMEI ನಂಬರ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್ ರೆಜಿಸ್ಟರಿನಲ್ಲಿ( EIR) ದಾಖಲಾಗಿರುತ್ತದೆ. ಮೊಬೈಲ್ ಗ್ರಾಹಕರನ್ನು ಗುರುತಿಸಲು ಪ್ರತಿ ಸಿಮ್ ಕಾರ್ಡ್ ೧೫ ಅಂಕಿಗಳ IMSI(ಇಂಟರ್ನ್ಯಾಷನಲ್ ಮೊಬೈಲ್ ಸುಬ್ಸ್ ಕ್ರೈಬರ್ ಐಡೇಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. ಇದೇ ನಂಬರ್ ಅಥೆಂಟಿಕೇಶನ್ ಸೆಂಟರ್( AUC) ನಲ್ಲಿಯೂ ದಾಖಲಾಗಿರುತ್ತದೆ.

ನಾವು ಒಂದು ನೆಟ್ ವರ್ಕ್ ಇಂದ ಸೇವೆ ಪಡೆಯಲು ಅರ್ಜಿ ಸಲ್ಲಿಸಿ ಸಿಮ್ ಕಾರ್ಡ್ ಪಡೆದಾಗ ನಮ್ಮ ವಿವರಗಳು,ನಾವು ಪಡೆದಿರುವ ಸರ್ವೀಸಸ್ ನ ವಿವರಗಳು ಹಾಗೂ ನಾವು ಸಬ್ಸ್ ಕ್ರೈಬ್ ಮಾಡಿರುವ ಪ್ಲಾನ್ ಎಲ್ಲಾ ಆ ನೆಟ್ ವರ್ಕಿನ ಹೋಂ ಲೊಕೇಶನ್ ರೆಜಿಸ್ಟರಿನಲ್ಲಿ(HLR) ದಾಖಲಾಗುತ್ತದೆ. ನಮ್ಮ ಮೊಬೈಲ್ ಉಪಕರಣದೊಳಗೆ ನಾವು ಸಿಮ್ ಅಳವಡಿಸಿದಾಗ ಅದು ಎಲ್ಲಾ ನೆಟ್ ವರ್ಕ್ ಗಳಿಗೆ ಸೇರಿರುವ BTSಗಳಿಗೆ ಸಂದೇಶ ರವಾನಿಸುತ್ತದೆ.ಸಂದೇಶ ರವಾನಿಸುತ್ತಿರುವ ಸಿಮ್ ನಲ್ಲಿರುವ IMSI ನಂಬರನ್ನೂ ತನ್ನ HLR ಅಲ್ಲಿರುವ ಮಾಹಿತಿಯನ್ನೂ ಪರಿಶೀಲಿಸಿ ಅಧಿಕೃತ ನೆಟ್ ವರ್ಕ್ ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತದೆ. ಗ್ರಾಹಕರ ಮಾಹಿತಿಯನ್ನು ಗೌಪ್ಯವಾಗಿಡಲು ಟೆಂಪೊರರಿ ಮೊಬೈಲ್ ಸಬ್ಸ್ ಕ್ರೈಬರ್ ಐಡೆಂಟಿಫಿಕೇಶನ್(TMSI) ನಂಬರ್ ಗಳನ್ನು ನೀಡಲಾಗುತ್ತದೆ.

ನಾವು ಮೊಬೈಲನ್ನು ಬಳಸದಿದ್ದಾಗಲೂ ಅದು ಆನ್ ಆಗಿದ್ದಲ್ಲಿ ಮೊಬೈಲ್ ನಿಯಮಿತವಾಗಿ BTSಗಳಿಗೆ ಸಂದೇಶ ರವಾನಿಸುತ್ತಿರುತ್ತದೆ. ನಮ್ಮ ಮೊಬೈಲ್ ತನ್ನ ಸುತ್ತಲಿನ ಗರಿಷ್ಟ ೬ BTSಗಳಿಂದ ಸಂದೇಶಗಳನ್ನು ಸ್ವೀಕರಿಸಲು ಶಕ್ತವಾಗಿರುತ್ತದೆ. ಸ್ವೀಕರಿಸಿದ ಸಿಗ್ನಲ್ ಗಳ ವಿವರವನ್ನು ಪುನಃ BTSಗಳ ಮುಖಾಂತರ BSC ಪಡೆಯುತ್ತದೆ. ಹಾಗೂ ಗರಿಷ್ಟ ಶಕ್ತಿ ಹೊಂದಿರುವ ಸಿಗ್ನಲ್ ಯಾವ BTSನಿಂದ ಮೊಬೈಲನ್ನು ತಲುಪುತ್ತಿರುತ್ತದೆಯೋ ಅದರ ಮೂಲಕ ಸೇವೆ ಒದಗಿಸುತ್ತದೆ.ನಾವು ಯಾವ BTSನಿಂದ ಸೇವೆ ಪಡೆಯುತ್ತಿದ್ದೇವೆ ಎಂಬುದರ ಆಧಾರದ ಮೇಲೆ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR)ನಲ್ಲಿ ನಾವೀಗಿರುವ ಸ್ಥಳದ ಮಾಹಿತಿ ಅಪ್ಡೇಟ್ ಆಗುತ್ತದೆ. ಒಂದು BTS ಮುಖೇನ ಸೇವೆ ಪಡೆಯುತ್ತಿದ್ದರೂ ಮೊಬೈಲ್ ತನ್ನ ಸುತ್ತಲಿನ ಇತರೆ BTSಗಳಿಂದ ಪಡೆಯುತ್ತಿರುವ ಸಿಗ್ನಲ್ ಬಗೆಗಿನ ಮಾಹಿತಿಯನ್ನು ನಿಯಮಿತವಾಗಿ BSCಗಳಿಗೆ ರವಾನಿಸುತ್ತಿರುತ್ತದೆ. ಇದು Idle state.

ನಾವು ಕರೆ ಮಾಡಲು ಡಯಲ್ ಮಾಡಿದಾಗ ನಮ್ಮ ಮೊಬೈಲ್ ಇಂದ BSCಗೆ ಹಾಗೂ ಅಲ್ಲಿಂದ MSCಗೆ ಸಂದೇಶ ಹೋಗುತ್ತದೆ. ನಮ್ಮ ಕರೆ MSCಗೆ ತಲುಪಿದಾಗ ಕರೆ ಪೂರ್ಣಗೊಳಿಸುವ ಮೊದಲು EIR ನಲ್ಲಿ ನಮ್ಮ ಮೊಬೈಲ್ ಸೆಟ್ ನ IMEI ದಾಖಲಾಗಿದೆಯೇ ಎಂದು ಪರಿಶೀಲಿಸುತ್ತದೆ. AUCಯಲ್ಲಿರುವ ಕೆಲವು ರಾಂಡಮ್ ಸಂಕೇತಗಳನ್ನು ನಮ್ಮ ಮೊಬೈಲ್ ಗೆ ಕಳುಹಿಸುತ್ತದೆ. ಅದಕ್ಕುತ್ತರವಾಗಿ ನಮ್ಮ ಮೊಬೈಲ್ ಕಳುಹಿಸಿದ ಸಂಕೇತಗಳ ಆಧಾರದ ಮೇಲೆ ನಾವು ಅಧಿಕೃತ ಗ್ರಾಹಕರೆಂಬುದನ್ನು ದೃಢೀಕರಿಸುತ್ತದೆ.(ಗ್ರಾಹಕರ ಕರೆಗೆ ಸುರಕ್ಷತೆ ಒದಗಿಸುವುದು ಇದರ ಉದ್ದೇಶ. ಈ ಸಂಕೇತಗಳು ಒಂದು ಕರೆಯಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತವೆ. ಹಾಗಾಗಿ ಒಂದು ಕರೆಯ ಸಂಕೇತಗಳು ತಿಳಿದರೂ ಪ್ರಯೋಜನವಿಲ್ಲ.) HLR ನಲ್ಲಿರುವ ಡಾಟಾಬೇಸ್ ನ ಮಾಹಿತಿಯನ್ನನುಸರಿಸಿ ನಾವು ಮಾಡುತ್ತಿರುವ ಕರೆ ನಾವು ಪಡೆದಿರುವ ಸೇವೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ಈ ಎಲ್ಲಾ ದೃಢೀಕರಣದ ನಂತರ MSC ಕರೆ ಸ್ವೀಕರಿಸಬೇಕಾದ ವ್ಯಕ್ತಿಗೆ ಸೇವೆ ಒದಗಿಸುತ್ತಿರುವ MSCಯ ಆಧಾರದ ಮೇಲೆ ಮುಂದಿನ ಕೆಲಸವನ್ನು ನಿಭಾಯಿಸುತ್ತದೆ. ಕರೆ ಸ್ವೀಕರಿಸುತ್ತಿರುವ ವ್ಯಕ್ತಿ ಕೂಡ ಅದೇ MSC VLR ಪ್ರದೇಶಕ್ಕೆ ಸೇರಿದವನಾದರೆ ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವಿಸ್ ನ ದೃಢೀಕರಣವನ್ನು ತನ್ನ AUC ,EIR, HLR VLR ನ ಮೂಲಕ ಮುಗಿಸಿ ನಂತರ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವನ್ನೇರ್ಪಡಿಸುತ್ತದೆ. ಬೇರೆ MSC ಗೆ ಸೇರಿದವನಾದರೆ ಗೇಟ್ ವೇ MSCಗೆ ಸಂದೇಶ ಹೋಗುತ್ತದೆ. ಗೇಟ್ ವೇ MSC ತನ್ನಲ್ಲಿರುವ  ಮಾಹಿತಿಗನುಗುಣವಾಗಿ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ MSCಗೆ ಸಂದೇಶ ರವಾನಿಸುತ್ತದೆ. ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವೀಸ್ ದೃಢೀಕರಣದ ನಂತರ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವೇರ್ಪಡುತ್ತದೆ.  ಒಮ್ಮೆ ನಮ್ಮ ಕರೆಗೆ ಒಂದು ಸಂಪರ್ಕ ಕೊಂಡಿ ಏರ್ಪಟ್ಟ ಮೇಲೆ ಕರೆ ಸ್ವೀಕರಿಸುತ್ತಿರುವ ಮೊಬೈಲ್ ರಿಂಗಣಿಸುತ್ತದೆ. ಕರೆ ಸ್ವೀಕರಿಸಿದರೆ  MSC ಕರೆಯ ಸಮಯ, ಕಾಲಾವಧಿ ಹಾಗೂ ನಮ್ಮ ಪ್ಲಾನ್ ನ ಆಧಾರದ ಮೇಲೆ ನಮ್ಮ ಕರೆಗೆ ಚಾರ್ಜ್ ಗಳನ್ನು ವಿಧಿಸುತ್ತದೆ. ಕರೆ ಸ್ವೀಕರಿಸದಿದ್ದರೆ ಅದು ಮಿಸ್ಡ್ ಕಾಲ್.

ನೋಡಿ ನಾವು ಕರೆ ಮಾಡಿದ್ರೂ ಮಿಸ್ಡ್ ಕಾಲ್ ಕೊಟ್ರೂ ಈ ಎಲ್ಲಾ ಸಿಗ್ನಲ್ಲಿಂಗ್ ನಡೆಯಲೇಬೇಕು. ಹಾಗಾಗಿ ಮುಂದೆ ನೀವು ಮಿಸ್ಡ್ ಕಾಲ್ ಕೊಡುವ ಮುನ್ನ ಒಂದು ಮಿಸ್ಡ್ ಕಾಲ್ ಗೆ ಎಷ್ಟೆಲ್ಲಾ ಸಿಗ್ನಲ್ಲಿಂಗ್ ವ್ಯರ್ಥವಾಗುತ್ತದೆಂಬುದನ್ನು ಯೋಚಿಸಿ.

ಮುಗಿಸುವ ಮುನ್ನ: ನಿಮ್ಮ  ಮೊಬೈಲಿನ IMEI ನಂಬರನ್ನು ತಿಳಿದುಕೊಂಡು ಅದನ್ನು ಒಂದೆಡೆ ಜೋಪಾನವಾಗಿಟ್ಟುಕೊಳ್ಳಿ. ಅಕಸ್ಮಾತ್ ದುರದೃಷ್ಟವಶಾತ್ ನಿಮ್ಮ ಮೊಬೈಲ್ ಕಳೆದುಹೋದರೆ ಆ ನಂಬರನ್ನು ಬಳಸಿ EIR ನಲ್ಲಿ ಅದನ್ನು ಬ್ಲಾಕ್ ಲಿಸ್ಟ್ ಮಾಡಬಹುದು. ಆಗ ಕದ್ದವರೂ ನಿಮ್ಮ ಮೊಬೈಲನ್ನು ಬಳಸಲಾರರು.

Sunday, September 5, 2010

ನನ್ನ ಟೀಚರ್ಸ್

ನಾನು ಚಿಕ್ಕವಳಿದ್ದಾಗ ಸ್ಕೂಲಿಗೆ ಸೇರುವ ಮುನ್ನವೇ ಪ್ರತಿದಿನ ಅಕ್ಕನನ್ನು ಸ್ಕೂಲಿಗೆ ಬಿಟ್ಟು ಬರೋದಕ್ಕೆ ಅಪ್ಪನ ಜೊತೆ ಹೋಗ್ತಿದ್ದೆ. ಅದೇನು ಸ್ಕೂಲಿನ ಬಗ್ಗೆ ಇದ್ದ ಆಸೆಯೋ ಅಥವಾ ಅಪ್ಪನ ಸ್ಕೂಟರಿನ ಮೇಲಿನ ಮೋಹವೋ ಗೊತ್ತಿಲ್ಲ. ಆದ್ರೆ ಒಂದು ದಿನ ಅಪ್ಪ ಏನಾದ್ರೂ ನನ್ನ ಮನೇಲಿ ಬಿಟ್ಟು ಹೋದ್ರೆ ಮನೇಲಿ ರಂಪ ಆಗ್ತಿದ್ದಿದ್ದು ಗ್ಯಾರಂಟಿ. ಅಮ್ಮನ ಕೈಯಿಂದ ಎರಡೇಟು ಬಾಯಿ ಮೇಲೆ ಬೀಳೋವರೆಗೆ ಸೈರನ್ ನಿಲ್ತಿರ್ಲಿಲ್ಲ. ಅದು ಇರ್ಲಿ ನನ್ನ ಚಿಕ್ಕ ವಯಸ್ಸಿನ ತರ್ಲೆ ತುಂಟಾಟಗಳ ಬಗ್ಗೆ ಇನ್ನೊಮ್ಮೆ ಬರೀತೀನಿ ಈಗ ಬರೆಯಬೇಕು ಅಂತಿರೋದು ನನ್ನ ಸ್ಕೂಲಿನ ಬಗ್ಗೆ. ಅಲ್ಲಿನ ಶಿಕ್ಷಕರ ಬಗ್ಗೆ...

ಅಕ್ಕ, ನಾನು, ಈಗ ನನ್ನ ತಮ್ಮ ಎಲ್ರೂ ಓದಿದ್ದು ಒಂದೇ ಸ್ಕೂಲಿನಲ್ಲಿ.ವಿಜಯನಗರದ ಬಳಿ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಕಾರ್ಡಿಯಲ್ ಪ್ರೌಢಶಾಲೆಯಲ್ಲಿ. ಹನ್ನೆರಡು ವರ್ಷ ಒಂದೇ ಸ್ಕೂಲು. ಮೊದಲಿನಿಂದಲೂ ಸ್ಕೂಲಿಗೆ ಹೋಗ್ಬೇಕು ಅಂತ ಇಷ್ಟ ಇದ್ದಿದ್ರಿಂದ ನಾನ್ಯಾವತ್ತೂ ಸ್ಕೂಲಿಗೆ ಹೋಗೊಲ್ಲ ಅಂತ ಹಠ ಮಾಡಿಲ್ಲ. LKGಯಲ್ಲಿ ಸ್ಲೇಟ್ ಮೇಲೆ ತಿದ್ದಿಸಿದ್ದ ಲಕ್ಷ್ಮಿ ಮ್ಯಾಮ್, UKGಯಲ್ಲಿ ಸ್ಪೋರ್ಟ್ಸ್ ಅಲ್ಲಿ ಗೆದ್ದಾಗ ಖುಷಿಪಟ್ಟ ರಮಾಮಣಿ ಮ್ಯಾಮ್ , ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹಾಡಿಗೆ ಡಾನ್ಸ್ ಹೇಳಿಕೊಟ್ಟಿದ್ದ ರಮಾಮಣಿ , ರಮಾರಾವ್ ಮತ್ತೆ ಲಕ್ಷ್ಮಮ್ಮಮ್ಮ ಮ್ಯಾಮ್- ಎಲ್ಲರ ಮುಖಗಳು ಆ ಸನ್ನಿವೇಶಗಳು ಇನ್ನು ಅದು ಹೇಗೆ ನೆನಪಲ್ಲಿವೆ ಅನಿಸುತ್ತೆ.

ನರ್ಸರಿ ಮುಗಿಸಿ ಮೊದಲನೇ ತರಗತಿಗೆ ಹೋಗಬೇಕಾದ ಮೊದಲ ದಿನ ಇನ್ನು ಚೆನ್ನಾಗಿ ನೆನಪಿದೆ. ಮೊದಲೇ ಸ್ವಲ್ಪ ತಡವಾಗಿ ಹೋಗಿದ್ದೆ. ಅಷ್ಟು ಹೊತ್ತಿಗಾಗಲೇ ನಮ್ಮ HM ಮೇರಿ ಜಾರ್ಜ್ ಪ್ರಾರ್ಥನೆಗೆ ಅಂತ ಮೊದಲನೇ ಮಹಡಿಯಲ್ಲಿರುವ ಅವರ ಕೋಣೆಯಿಂದ ಕೆಳಗಿಳಿದು ಬಂದಿದ್ರು. ಬೆಲ್ ಇನ್ನೂ ಆಗಿರಲಿಲ್ಲ. ನಾನು ನನ್ನ ಹೊಸ ಬ್ಯಾಗ್ ಲಂಚ್ ಬ್ಯಾಗ್ ಎಲ್ಲಾ ಹಿಡಿದು ಸೀದಾ ಅವರ ಬಳಿ ಹೋಗಿ "ಮಿಸ್ ಫಸ್ಟ್ ಸ್ಟ್ಯಾಂಡರ್ಡ್ ವೇರ್?" ಅಂತ ಕೇಳಿದ್ದೆ. ಅವರೇ ಕರೆದುಕೊಂಡು ಹೋಗಿ ನನ್ನ ತರಗತಿಯಲ್ಲಿ ಬಿಟ್ಟಿದ್ರು. ಆಗ ನಮಗೆ ಕ್ಲಾಸ್ ಟೀಚರ್ ಆಗಿದ್ದು ನಳಿನಿ ಮ್ಯಾಮ್.

ಆಮೇಲೆ ಬಂದ ಗೀತಾ ಮ್ಯಾಮ್ ,ಇಂಗ್ಲೀಶ್ ಅಲ್ಲೇ ಮಾತಾಡಬೇಕು ಅಂತ ಕಟ್ಟಪ್ಪಣೆ ಮಾಡಿದ್ದ ಉಷಾ ಮ್ಯಾಮ್, ಕ್ರಾಫ್ಟ್ ಹೇಳಿಕೊಡಲಿಕ್ಕೆ ಬರ್ತಾ ಇದ್ದ ನಮ್ಮ ಸ್ಕೂಲಿನಲ್ಲಿ ಎಲ್ಲರಿಗಿಂತ ಹಿರಿಯರಾಗಿದ್ದ ಪಾರ್ವತಮ್ಮ ಮ್ಯಾಮ್ (ಅಜ್ಜಿ ಮಿಸ್) ,ಅವರೇ ಹೇಳುತ್ತಿದ್ದಂತೆ ಕೋಳಿ ಕಾಲಿನಂತಿದ್ದ ನನ್ನ ಕನ್ನಡ ಬರವಣಿಗೆಯನ್ನು ಗುಂಡಗೆ ಮಾಡಿದ ಭವಾನಿ ಭಟ್ ಮ್ಯಾಮ್, ಗಣಿತ ಪುಸ್ತಕದಲ್ಲಿ ಪ್ರತಿ ಬಾರಿಯೂ ಗುಡ್, ವೆರಿ ಗುಡ್ ಕೊಡ್ತಾ ಇದ್ದ, ಪ್ರತಿ ಬಾರಿಯೂ ಶಾಲಾ ವಾರ್ಷಿಕೋತ್ಸವಕ್ಕೆ ಸಮೂಹ ಗಾನಕ್ಕೆ ಹಾಡು ಹೇಳಿಕೊಡ್ತಾ ಇದ್ದ ಶಾಂತಲಾ ಮ್ಯಾಮ್, "ಯಾಕೋ ದಡ್ಡ" ಅಂತ ಬೈತಿದ್ದ ರತ್ನ ಮ್ಯಾಮ್ , ಹಿಂದಿ ಹೇಳಿಕೊಟ್ಟಿದ್ದ ಉಮಾ ಮಹೇಶ್ವರಿ ಮ್ಯಾಮ್, ಪ್ರೀತಿಯ ಪ್ರೇಮಾ ಮ್ಯಾಮ್, ನನ್ನ ಈಗಿನ ಇಂಕ್ ಪೆನ್ ಪ್ರೀತಿಗೆ ನಾಂದಿ ಹಾಡಿದ ಸರಸ್ವತಿ ಮ್ಯಾಮ್, "ಅಕ್ಕನ ತದ್ವಿರುದ್ಧ ನೀನು- ಚಾಟರ್ ಬಾಕ್ಸ್" ಅಂತ ಬೈತಿದ್ದ ನಿರ್ಮಲಾ ಮ್ಯಾಮ್,"ನೀನು ತುಂಬಾ ಜಾಣ, ತು.......ಸ್ಸು ಕೋಣ" ಅಂತ ಪ್ರೀತಿಯಿಂದಾನೇ ಮೂದಲಿಸ್ತಾ ಇದ್ದ ಅನ್ನಪೂರ್ಣ ಮ್ಯಾಮ್, "Stand at ease"  "attention" ಅಂತಿದ್ದವರಿಗೆ ಹಿಂದಿಯಲ್ಲಿ "ಸಾವ್ ಧಾನ್", "ವಿಶ್ರಾಮ್" ಅಂತ PT ಮಾಡಿಸಿದ್ದ ಸುರೇಶ್ ಸರ್, ಆನಂತರ ಬಂದ ಜೈ ಶಂಕರ್ ಸರ್, ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾನೆಣಿಸಿದಷ್ಟು ಅಂಕ ಬರದಿದ್ದಾಗ ಸಮಾಧಾನ ಮಾಡಿದ್ದ ವನಮಾಲಾ ಮ್ಯಾಮ್, ಸಮಾಜ ಶಾಸ್ತ್ರದ ತರಗತಿಗಳಲ್ಲಿ ರಾಜರ ಕತೆಗಳನ್ನು ಹೇಳ್ತಾ ಇದ್ದ ಸುನಂದಾ ಮ್ಯಾಮ್, ಪ್ರೇಯರ್ ಹೇಳಿಕೊಟ್ಟಿದ್ದ ಸುಜಯಾ ಮ್ಯಾಮ್, ಸಂಸ್ಕೃತವನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದ ನಾಗವೇಣಿ ಮ್ಯಾಮ್,ಎಲ್ಲರಿಗೂ ಒಂದೊಂದು ನಿಕ್ ನೇಮ್ ಇಟ್ಟು ಕರೀತಿದ್ದ ಸುಭಾಷಿಣಿ ಮ್ಯಾಮ್, ತಮ್ಮ ಇಂಗ್ಲೀಶ್ ಮಾತನಾಡುವ ಶೈಲಿಯಿಂದ ಸ್ಕೂಲಲೆಲ್ಲಾ ಪ್ರಸಿದ್ಧರಾಗಿದ್ದ ರಂಗರಾಜು ಸರ್, ಸರಿಯಾಗಿ ತಯಾರಾಗದೇ ಬಂದು ವಿದ್ಯಾರ್ಥಿಗಳಿಂದಾನೆ ಗಣಿತದ ಸಮಸ್ಯೆಗಳನ್ನು ಬಿಡಿಸುವುದನ್ನು ಹೇಳಿಸಿಕೊಂಡಿದ್ದ ಮಂಜುನಾಥ್ ಸರ್, ನಮ್ ಮನೆ ಹತ್ರಾನೆ ಇದ್ದ ಹೆಗಡೆ ಸರ್, ಮೂರ್ತಿ ಸರ್ ಮತ್ತೆ ನರಸಯ್ಯ ಸರ್, ಡ್ರಾಮಾ ಹೇಳಿಕೊಟ್ಟಿದ್ದ ರಮೇಶ್ ಸರ್, ಮೊದಲ ಬಾರಿ ಸ್ಕೂಲ್ ಡೇಯಲ್ಲಿ ನಿರೂಪಣೆ ಮಾಡಲು ಅವಕಾಶ ಮಾಡಿಕೊಟ್ಟ ರೋಷಿಣಿ ಮ್ಯಾಮ್, CETಯಲ್ಲಿ rank ತಗೊಂಡು ಸ್ಕೂಲಿಗೆ ಹೋದಾಗ ಖುಷಿ ಪಟ್ಟ ಎಲ್ಲಾ ಟೀಚರ್ಸ್.... ಎಲ್ಲಾ ಮರೆಯಲಾಗದ ದಿನಗಳು...

ನೆನಪಿನ ಭಿತ್ತಿಯ ಮೇಲೆ ತಮ್ಮ ಹಸ್ತಾಕ್ಷರವನ್ನು ಅಚ್ಚಳಿಯದಂತೆ ಮೂಡಿಸಿರುವ ನನ್ನೆಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....

Wednesday, July 28, 2010

ನಾ ಕಳೆದುಹೋದೇನು....

ಮನಸಿದು ನನ್ನದು
ಪುಟ್ಟ ಕಂದಮ್ಮನಂತೆ.
ಮುಗ್ಧತೆಯೇ ಎಲ್ಲಾ
ಇನಿತೂ ಕಪಟವಿಲ್ಲ.

ಪುಟ್ಟ ಅಂಗಳದಲ್ಲಿನ
ವಿಹಾರ ಮುಗಿದಾಯ್ತು.
ಪ್ರಪಂಚದೊಳು ಕಾಲಿಡುವ
ಸಮಯ ಬಂದಾಯ್ತು.

ಮನೆಯಿಂದಾಚೆ
ಕಾಲಿರಿಸಲೂ ಅಂಜಿಕೆ.
ಕಾಣದ ಲೋಕವಿದು
ನಾ ಎದುರಿಸಲಿ ಹೇಗೆ?

ಹೊರಗೆ ಕತ್ತಲಲ್ಲೂ ಹೊಳೆವ
ಮಿಣುಕು ದೀಪಗಳ ಮಾಯೆಯೊಳಗೆ
ನಾ ಕುರುಡಿಯಾದೇನು.

ಕ್ಷಣಕೊಂದರಂತೆ ಬದಲಾಗುವ
ಬಿನ್ನಾಣದ ಮಾತುಗಳ ನಡುವೆ
ನಾ ಮೂಕಿಯಾದೇನು.

ಪರಿಚಿತರೂ ಅಜ್ಞಾತರಂತಿರುವ
ಸ್ವಾರ್ಥ ಜನರ ನಡುವೆ
ನಾ ಕಳೆದುಹೋದೇನು.

ನಂಬಿಹೆನು ನಾನು
ಆಸರೆಯು ನೀನೆಂದು.
ಈ ಕ್ರೂರ ಲೋಕದೊಳು
ಬೆಂಗಾವಲೆನಗೆಂದು.

ಹಿಡಿಯುವೆನು ಬಿಗಿಯಾಗಿ
ನಾ ನಿನ್ನ ಕೈಯನ್ನು.
ನಡೆಯದಿರು ದೂರಾಗಿ
ಸಡಿಲಿಸಿ ಹಿಡಿತವನ್ನು.

Friday, July 16, 2010

ಇನ್ನು ತಡವೇಕೆ?

ನನ್ನ ಎದುರು ನಿಂತು ನೀನು
ಮಾತನಾಡದಿದ್ದರೇನು
ನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?

ನನ್ನ ಕಂಡ ಒಡನೆ ನಿನ್ನ
ತುಟಿಯಂಚಿನಲ್ಲಿ ಮಿಂಚಿ ಹೋದ
ನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?

ನಾನು ಕಾಣದಿಲ್ಲದಾಗ
ರಾತ್ರಿ ಪೂರ ನಿದ್ರೆಯಿರದೆ
ನನ್ನ ನೆನೆದು ಕಂಡ ಕನಸು ಇನ್ನು ಗೌಪ್ಯವೇ?

ಹೃದಯ ಬರೆದ ಒಲವಿನೋಲೆ
ನನಗೆ ತೋರದಿದ್ದರೇನು
ನಿನ್ನ ಮನದ ಭಾವಗೀತೆ ನನಗೆ ಕೇಳದೆ?

ಸರಿಸಿಬಿಡು ಮೌನ ತೆರೆಯ
ಅರಳಲಿನ್ನು ಸುಖದ ಘಳಿಗೆ
ಕನಸು ಮನಸು ಹಂಚಿಕೊಳಲು ತಡವು ಏತಕೆ?

(ಪ್ರೇರಣೆ : ನನಗೆ ಬಂದ ಒಂದು sms )

Friday, July 2, 2010

ಪಯಣ

ಅಂತ್ಯವಿರದ ಹಾದಿಯಲ್ಲಿ
ದಿಗಂತದಾಚೆಗಿನ ಊರಿಗೆ
ವಿಶ್ರಾಂತಿಯಿಲ್ಲದ ಪಯಣ

ನೂರಾರು ಕವಲುಗಳು
ಹಲವಾರು ಯೋಚನೆಗಳು
ಹೊಸ ಲೋಕದನಾವರಣ

ದಾರಿ ತೋರುವ ಫಲಕಗಳಿಲ್ಲ
ಹೆಜ್ಜೆಗುರುತುಗಳ ಸುಳಿವಿಲ್ಲ
ನನ್ನದೇ ಹಾದಿಯ ಅನ್ವೇಷಣೆ

ಎದುರುಗೊಂಡ ಹಲವಾರು ಮುಖಗಳು
ಮುಗುಳ್ನಗೆಯೇ ಮಾತು
ಹೆಸರಿಲ್ಲದ ಸಂಬಂಧದಂಕುರ

ಜೊತೆಜೊತೆಗೆ ಕೆಲವು ಹೆಜ್ಜೆ
ಸವಿ ಮಾತ ಮಕರಂದ
ಸ್ನೇಹದಮೃತ ಸಿಂಚನ

ಕ್ರಮಿಸಿರುವುದೆರಡೇ ಮೈಲಿ
ಗಮ್ಯವಿನ್ನೂ ಬಹುದೂರ
ಗುರಿಯೆಡೆಗಿನ ನಡಿಗೆ ನಿರಂತರ

Thursday, July 1, 2010

ಮೊಗ್ಗಿನ ಮನಸು

ಸಂಜೆಯ ತಂಗಾಳಿಗೆ
ತನ್ನನ್ನೊಡ್ಡಿ ನಿಂತ ಮೊಗ್ಗು
ಮಾಸದ ನಗೆಯೊಂದಿಗೆ
ನಾಳೆಗೆ ಕಾದಿದೆ.

ಇರುಳ ಬೆಳದಿಂಗಳಾಟ
ರವಿಯ ಹೊಂಗಿರಣ ಸ್ಪರ್ಶ
ಕಚಗುಳಿಯಿಡುವ ಮಳೆ
ಕನಸಿನ ತೇರು ಹೊರಟಿದೆ.

ನಾಳೆಯನಿಂದೇ ಕಂಡವರ್ಯಾರು?
ಕನಸಿಗೆ ಬೇಲಿ ಕಟ್ಟುವರ್ಯಾರು?
ನಾಳೆಯ ಗೆಲ್ಲುವ ಛಲವೊಂದಿರಲು
ಹೂವಿನ ನಗುವನು ಕಸಿಯುವರ್ಯಾರು?

Wednesday, June 23, 2010

In love...

ನೀನು ನಮ್ಮ ಮನೆಗೆ ಬರೋದಕ್ಕೆ ಮುಹೂರ್ತ ನಿಗದಿಯಾದಾಗ ನನಗೇನೋ ಒಂಥರಾ ಕಾತರ. ನಾನು ತುಂಬಾ ದಿನದಿಂದ ಕಾಣ್ತಾ ಇದ್ದ ಕನಸು ನನಸಾಗೋ ಸಮಯ ಬಂತು ಅಂತ ಒಳಗೊಳಗೇ ಖುಷಿ. ಹೇಗಿರ್ತೀಯೋ ಏನೋ ಅನ್ನೋ ಅನುಮಾನ ಇದ್ರೂ ನನ್ ಸೆಲೆಕ್ಷನ್ ಅಲ್ವಾ ಚೆನ್ನಾಗೇ ಇರ್ತೀಯ ಅನ್ನೋ ವಿಶ್ವಾಸ. ಅಂತೂ ಇಂತೂ ಭಾನುವಾರ ಸಂಜೆ ನಮ್ಮನೆಗೆ ನೀನು ಬಂದಿದ್ದು ಯಾರಿಗೆ ಇಷ್ಟ ಆಯ್ತೋ ಇಲ್ವೋ ನನಗಂತೂ ತುಂಬಾ ಸಂತೋಷ ಆಯ್ತು.ನನ್ನ ತಮ್ಮಂಗೆ ಕೂಡ ನಿನ್ನ ಬಗ್ಗೆ ಕುತೂಹಲ ಇದ್ದಿದ್ದು ಗೊತ್ತಾಯ್ತು. ಪರವಾಗಿಲ್ಲ ನನ್ನ ಸೆಲೆಕ್ಷನ್ ಅಪ್ರೂವ್ ಮಾಡೋಕೆ ಇನ್ನೊಬ್ರು ಜೊತೆಗೆ ಸಿಕ್ಕಿದ್ರು ಅಂತನ್ನಿಸ್ತು.
ನೀನು ಮನೆಗೆ ಬಂದಾಗಿನಿಂದ ನಿನ್ನ ಬಗ್ಗೆ ತಿಳಿದುಕೊಳ್ಳೋಕೆ ತುಂಬಾ ಪ್ರಯತ್ನ ಪಡ್ತಾ ಇದ್ದೀನಿ. ನಿನ್ನ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದಾಗಲೂ ನಿನ್ನ ಬಗ್ಗೆ ಅಭಿಮಾನ ಜಾಸ್ತಿಯಾಗ್ತಾ ಇದೆ. ಹಾಗೆ ನನ್ನ ಆಯ್ಕೆ ಬಗ್ಗೆ ಹೆಮ್ಮೆ ಆಗ್ತಾ ಇದೆ. ನಾನು ನಿನ್ನನ್ನು ಇಷ್ಟೊಂದು ಹಚ್ಚಿಕೊಳ್ತೀನಿ. ಇಷ್ಟೊಂದು ಇಷ್ಟ ಪಡೋಕೆ ಶುರು ಮಾಡ್ತೀನಿ ಅಂತ ನಿಜವಾಗಲೂ ಅಂದುಕೊಂಡಿರಲಿಲ್ಲ. ಅಂತೂ ನನ್ನ ಜೀವನದಲ್ಲಿ ಪ್ರೀತಿ ಚಿಗುರೊಡೆದಿದೆ.
Yes I am in love... in love with my new cam...

ನಾನು ಮೊದಲನೇ ವರ್ಷದ ಪದವಿಪೂರ್ವ ತರಗತಿಯಲ್ಲಿದ್ದಾಗ ಅಪ್ಪನ camera ತಗೊಂಡು ಹೋಗಿ ಕಳೆದುಕೊಂಡಾಗಿನಿಂದ ನಾನು ಒಂದು camera ತಗೊಳ್ಳಬೇಕು ಅಂತ ತುಂಬಾ ಇಷ್ಟ ಇತ್ತು. ಆದ್ರೆ ಅಪ್ಪಂಗೆ ನೀವು ನನಗೊಂದು camera ಕೊಡಿಸಿ ಅಂತ ಕೇಳೋ ಧೈರ್ಯ ಇರ್ಲಿಲ್ಲ.ಪ್ರತಿ ಬಾರಿ ಅದರ ಬಗ್ಗೆ ಮಾತಾಡುವಾಗ ಮನೇಲಿದ್ದ camera ಕಳೆದು ಹಾಕಿದ್ದೀನಿ ಅನ್ನೋ ಪಾಪ ಪ್ರಜ್ಞೆ ನಾನು ಆ ಅರ್ಹತೆ ಕಳೆದುಕೊಂಡಿದ್ದೀನಿ ಅಂತ ನನ್ನನ್ನ ಎಚ್ಚರಿಸುತ್ತಿತ್ತು. ಆದ್ರೆ ನನಗೆ ನಮ್ಮ ಕಾಲೇಜಿನ ವತಿಯಿಂದ Prof.MRD Merit Scholarship ಅಂತ ರೂ.೫೦೦೦ ಕೈಗೆ ಬಂದಾಗ ಇದರಿಂದ ನಾನು camera ತಗೊಳ್ಳಬೇಕು ಅಂತ ಅನ್ನಿಸಿದ್ರೂ ಈ ದುಡ್ಡಿಗೆ ನಾನು ಬಯಸುವಂಥಾ camera ಸಿಗೋದಿಲ್ಲ ಅಂತ ಗೊತ್ತಿತ್ತು. ಆದ್ರೂ ಅಪ್ಪ "ಈ ದುಡ್ಡಲ್ಲಿ ಏನ್ಮಾಡ್ತೀಯಮ್ಮಾ? " ಅಂತ ಕೇಳಿದಾಗ," ಅಪ್ಪ ನಾನು camera ತಗೊಳ್ತೀನಿ" ಅಂತ ಹೇಳ್ದೆ. ಅಪ್ಪ "ತಗೊಳ್ಳೋದು ತಗೊಳ್ತೀಯ ಚೆನ್ನಾಗಿರೋದೇ ತಗೋ. ಉಳಿದ ದುಡ್ಡು  ನಾನು ಕೊಡ್ತೀನಿ" ಅಂತ ಹೇಳಿದಾಗ ಖುಷಿಯಿಂದ ಕುಣಿದಾಡಿದ್ದೆ. ಇದಾಗಿ ೬-೭ ತಿಂಗಳಾದರೂ camera ತೆಗೆದುಕೊಳ್ಳುವ  ಯೋಜನೆ ಮುಂದೂಡುತ್ತಲೇ ಹೋಯ್ತು.

ಹೋದ ವಾರ ಅಪ್ಪನ ಜೊತೆ bank ಗೆ ಹೋದಾಗ "ಅಪ್ಪ, camera ತಗೊಳ್ತೀನಿ. ನನ್ನ ಅಕೌಂಟಲ್ಲಿರೋ ದುಡ್ಡು ಡ್ರಾ ಮಾಡ್ತೀನಿ" ಅಂತ ಹೇಳಿ ದುಡ್ಡು ಡ್ರಾ ಮಾಡಿ ಮನೆಗೆ ತಂದಿಟ್ಟೆ. ಆಮೇಲೆ BSNL Training ಗೆ ನೋಂದಣಿ ,GRS trip ಅಂತ ಸಮಯ ಹೊರಟೇ ಹೋಯ್ತು. ಭಾನುವಾರ ಬೆಳಿಗ್ಗೆ ಎಲ್ರೂ ತಿಂಡಿ ತಿಂದು ಮಾತಾಡ್ತಾ ಕೂತಿದ್ದಾಗ "ಅಪ್ಪ ಇವತ್ತು ಏನಾದ್ರೂ ಕೆಲ್ಸ ಇದ್ಯಾ?" ಅಂದೆ. ಅಪ್ಪ "ಯಾಕೆ camera ತಗೊಳ್ಳೋಕಾ?" ಅಂದ್ರು. ಹೂಂ ಅಂದೆ. "ಸರಿ. ಸಂಜೆ ಹೋಗೋಣ" ಅಂದ್ರು. ಸಂಜೆ ರಾಜಾಜಿನಗರದಲ್ಲಿರೋ ezone ಕಡೆ ಹೊರಟಿತು ನಮ್ಮ ಸವಾರಿ. ಅಲ್ಲಿ ನಾನು ತಗೊಂಡಿದ್ದು ನಮ್ಮ budget ಗೆ ಒಪ್ಪುವಂಥ Sony Cybershot W320.

ಅದರ features ಬಗ್ಗೆ handbook ಅಲ್ಲಿ ಓದಿ ಒಂದೊಂದನ್ನೇ ಪ್ರಯೋಗ ಮಾಡುತ್ತಾ, Image editing tool PMB ಅಲ್ಲಿ ನಾನು Image Processing ಅಲ್ಲಿ ಕಲಿತದ್ದನ್ನು ಉಪಯೋಗಿಸಿ ಚಿತ್ರಗಳನ್ನು edit ಮಾಡ್ತಾ ಈ ರಜೆ ಕಳೀತಾ ಇದ್ದೀನಿ.ದಿನೇ ದಿನೇ ನನ್ನ camera ಬಗ್ಗೆ ಒಲವು ಜಾಸ್ತಿಯಾಗ್ತಾ ಇದೆ. ಒಲವು ಜಾಸ್ತಿಯಾಗುತ್ತೋ ಅಥವಾ ಹೋಗ್ತಾ ಹೋಗ್ತಾ ಕಮ್ಮಿಯಾಗುತ್ತೋ ಗೊತ್ತಿಲ್ಲ. ಆದ್ರೆ ಒಂದಂತೂ ನಿಜ "Photography is not my passion. Its just that I am interested in it" . ಈ ವಾರ ನಾ ತೆಗೆದ ಚಿತ್ರಗಳಲ್ಲಿ ನನಗೆ ಇಷ್ಟ ಆದ ಚಿತ್ರಗಳು ಇವು.... :)Friday, June 4, 2010

ನೀನ್ಯಾರೋ???

ಪರಿಚಯಕ್ಕೂ ಮೊದಲೇ ನನ್ನ
ಸೆಳೆದುಕೊಂಡು ನಿನ್ನ ಕಡೆಗೆ
ನನ್ನ ಗೆದ್ದ ಜಾದುಗಾರ ನೀನ್ಯಾರೋ?

ನನ್ನ ಮನದಂಗಳಕ್ಕೆ ಇಣುಕಿ
ಮಧುರ ತರಂಗಗಳನೆಬ್ಬಿಸಿ
ಮನವ ಕದಡಿದ ಪೋರ ನೀನ್ಯಾರೋ?

ಕಣ್ಣ ರೆಪ್ಪೆಯನ್ನು ಮುಚ್ಚಿದ್ದರೂ
ನೆನಪಾಗಿ ನನ್ನ ಬಿಡದೆ ಕಾಡಿ
ನಿದ್ರೆ ದೂರ ಮಾಡಿದ ತುಂಟ ನೀನ್ಯಾರೋ?

ಬೇಕು ಎಂದು ನನ್ನ ಕೂಡದೆ
ಬೇಡವೆಂದು ದೂರ‍ ದೂಡದೆ
ಹತ್ತಿರವಿದ್ದೂ ದೂರ ನಿಲ್ಲೋ ಗೆಳೆಯ ನೀನ್ಯಾರೋ?

ಕಷ್ಟ ಸುಖದಿ ಜೊತೆಗೆ ನಿಂತು
ನನ್ನ ತುಂಬಾ ನೀನೇ ತುಂಬಿ
ಹೆಸರ ತಿಳಿಸದ ಚೋರ ನೀನ್ಯಾರೋ?

Wednesday, June 2, 2010

ದಾರಿ ಹುಡುಕಬೇಕಿದೆ...

ಮನಸಿನ ಎಲ್ಲಾ ಮಾತುಗಳು
ಮೌನದ ಮುಸುಕಿನಲ್ಲೇ ಜೀವಿಸುತ್ತಿದ್ದಾಗ
ಅವುಗಳಿಗೆ ಅಕ್ಷರ ರೂಪ ಕೊಡಬಲ್ಲೆನೆಂಬ
ಆಶಾಭಾವನೆಯಿಂದ ಬರೆಯಲಾರಂಭಿಸಿದೆ.
ಆದರೆ ನನಗೀಗ ಅನಿಸುತಿದೆ
ತೋಚಿದ್ದನ್ನೆಲ್ಲಾ ನಾ ಬರೆಯಲಾರೆನೆಂದು
ಕೆಲವು ತುಸು ಗಂಭೀರ‍..ಹಲವು ತೀರಾ ಬಾಲಿಶ
ಕೆಲವೋ ಅರ್ಥವಿಲ್ಲದ ದಿಕ್ಕಿಲ್ಲದ ಆಸೆಗಳು....
ಮನಸಿನೊಳಗಿರುವುದನ್ನು ನಾನು ಹಂಚಿಕೊಳ್ಳಬೇಕಿದೆ
ಆದರೆ ಅವುಗಳನ್ನು ಅಕ್ಷರಗಳಲ್ಲಿ ಬಂಧಿಸಲಾರೆ...
ಭಾವಗಳನ್ನು ಬಂಧನದಿಂದ ಮುಕ್ತಗೊಳಿಸಬೇಕಿದೆ
ಆದರೆ ಅದಕ್ಕೊಂದು ದಾರಿಯನ್ನು ಹುಡುಕಬೇಕಿದೆ...

Saturday, May 15, 2010

ಮನಸಿದು ಗೊಂದಲಗಳ ಗೂಡು

ಇಲ್ಲಿ ಕೊನೆ ಮೊದಲಿಲ್ಲ
ಅರ್ಥದ ಹುಡುಕಾಟ ವ್ಯರ್ಥ
ಅಯೋಮಯ ಪದಪುಂಜ

ಸ್ಮೃತಿ ಪಟಲದ ಮೇಲೆ
ಬೇಡದ ಗೊಡವೆಗಳ ತಾಂಡವ ನೃತ್ಯ
ಅರ್ಧಸತ್ಯದ ಅಟ್ಟಹಾಸ

ಸುಡುವ ನಿರಾಸೆಯ ಬೆಂಕಿ
ಕನಸೆಂಬ ಕೂಸುಗಳ ಕಗ್ಗೊಲೆ
ಸಿಡಿದೇಳಲಾಗದ ಅಸಹಾಯಕತೆ

ಅಂಜಿಕೆಯ ನೆಳಲಲ್ಲೇ ಕೊಳೆತ
ದಾಕ್ಷಿಣ್ಯದರಮನೆಯಲ್ಲಿ ದಾಸ್ಯ
ಇನ್ನೆಲ್ಲೋ ಸ್ವಾತಂತ್ರ್ಯದ ಮೊಳಕೆ

ಭ್ರಮೆಯ ಜಾಲದೊಳಗೆ ಬಂಧಿ
ಕಣ್ಣು ಕುಕ್ಕುವ ಕಾಮನೆಗಳು
ಚಾಂಚಲ್ಯವಷ್ಟೇ ಸ್ಥಿರ

ಮನದ ಕಿನಾರೆಯ ಮೇಲೆ
ದ್ವಂದ್ವಗಳ ಚಂಡಮಾರುತ ದಾಳಿ
ಗೊಂದಲಗಳ ಓಕುಳಿ

ನಾ ನೋಡಿದಂತೆ ಲೋಕ
ಅಂತರಾಳದಲ್ಲಿ ಸೌಖ್ಯ
ಕಂಡದ್ದಷ್ಟೇ ನನಗೆ ತಿಳಿದ ಸತ್ಯ

ಕಾರ್ಮೋಡ ಕವಿದ ಬಾನು
ಅಂಚಲ್ಲೊಂದು ಬೆಳ್ಳಿರೇಖೆ
ಅವಕಾಶಗಳ ದಿಗಂತದ ವಿಸ್ತರಣ

Saturday, May 8, 2010

ಅಮ್ಮ

ಇವತ್ತು ಬೆಳಿಗ್ಗೆ ಎದ್ದು ದಿನಪತ್ರಿಕೆ ಓದೋಣ ಅಂತ ಹೋದಾಗ ಅಪ್ಪ ಮುಖಪುಟ ಹಿಡಿದು ಕೂತಿದ್ದರು.ಪಕ್ಕದಲ್ಲೇ ಇದ್ದ ಲವಲvk ಹಿಡಿದವಳಿಗೆ ಮೊದಲ ಕಂಡದ್ದು ಅಮ್ಮಂದಿರ ದಿನದ ವಿಶೇಷ ಅಂಕಣ. ಆಗ ನಾನು ಯಾಕೆ ನನ್ನಮ್ಮನ ಬಗ್ಗೆ ಬರೆಯಬಾರದು ಅನ್ನಿಸ್ತು. ಅದರ ಫಲವಾಗಿ ಈ ಪೋಸ್ಟ್.

ನನಗಿಂತ ಮೊದಲು ನಮ್ಮಪ್ಪ ಅಮ್ಮನಿಗೆ ಒಂದು ಹೆಣ್ಣು ಮಗು ಇದ್ದಿದ್ದರಿಂದ ನಾನು ಹುಟ್ಟಿದಾಗ ಗಂಡು ಮಗು ಆಗಬೇಕು ಅಂತಾನೆ ಎಲ್ಲರ ಬಯಕೆಯಾಗಿತ್ತು.ಅದು ಸುಳ್ಳಾದಾಗ ಈ ವಿಷಯವಾಗಿ ಮಾತುಗಳನ್ನು ಕೇಳಿದ್ದು ನನ್ನಮ್ಮ, ಆ ಮಾತುಗಳು ನನ್ನ ತಮ್ಮ ಹುಟ್ಟುವವರೆಗೆ ಕೇಳುತ್ತಲೇ ಬಂದರು.ಆದರೂ ಅಮ್ಮ ಯಾವತ್ತೂ ಆ ಅಸಹನೆಯನ್ನು ನಮ್ಮ ಮುಂದೆ ತೋರಿಸಿಲ್ಲ.

ಬಹುಶಃ ಬೇರಾವುದೇ ಮಗು ನೀಡಿರದಷ್ಟು ಕಷ್ಟವನ್ನು ಚಿಕ್ಕವಳಿದ್ದಾಗ ನಾನು ಅಮ್ಮಂಗೆ ಕೊಟ್ಟಿದ್ದೀನಿ. ಅಮ್ಮನ್ನ ಬಿಟ್ಟು ಬೇರೆ ಯಾರ ಬಳಿಯೂ ಹೋಗುತ್ತಿರಲಿಲ್ಲ. ಅಪ್ಪನ ಬಳಿ ಕೂಡ ಹೋಗ್ತಾ ಇರ್ಲಿಲ್ಲ. ಅಮ್ಮ ಅಡುಗೆ ಮಾಡುತ್ತಿರಲಿ,ಬಟ್ಟೆ ಒಗೆಯುತ್ತಿರಲಿ ಅಥವಾ ಮನೆ ಒರೆಸುತ್ತಿರಲಿ ನನ್ನನ್ನು ಯಾವಾಗಲೂ ಎತ್ತಿಕೊಂಡೇ ಇರ್ಬೇಕಿತ್ತು. ಒಂದು ನಿಮಿಷ ಕೆಳಗಿಳಿಸಿದರೂ ನನ್ನ ಸೈರನ್ ಶುರು. ೧೦ ತಿಂಗಳಿಗೆಲ್ಲಾ ಚೆನ್ನಾಗಿ ಮಾತನಾಡಲು ನೆಡೆದಾಡಲು ಕಲಿತ ಮೇಲಂತೂ ನನ್ನನ್ನು ಸುಧಾರಿಸುವುದೇ ಅಮ್ಮನಿಗೆ ದೊಡ್ಡ ತಲೆನೋವಾಗಿತ್ತು. ನಮ್ಮಮ್ಮನ ಮೂರೂ ಮಕ್ಕಳಲ್ಲಿ ಆರೋಗ್ಯದ ವಿಷಯದಲ್ಲಿ ತುಂಬಾ ಸೆನ್ಸಿಟಿವ್ ಆಗಿದ್ದು ನಾನು. ಹಾಗಾಗಿ ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು.

ನನಗಾಗ ಸುಮಾರು ೩ ವರ್ಷವಿದ್ದಿರಬೇಕು. ವಿಪರೀತ ಜ್ವರದಿಂದ ಪ್ರಜ್ಞೆ ತಪ್ಪುವಂತಾಗಿತ್ತು. ಆ ಜ್ವರ ಗುಣವಾದ ಮೇಲೆ ನಾನು ನನ್ನಪ್ಪನನ್ನು ತುಂಬಾ ಹಚ್ಚಿಕೊಂಡಿದ್ದು. ಅಲ್ಲಿಯವರೆಗೆ ಎಲ್ಲದಕ್ಕೂ ಅಮ್ಮ ಅಮ್ಮ ಅನ್ನುತ್ತಿದ್ದವಳು ಅಪ್ಪನ ಮುದ್ದಿನ ಮಗಳಾಗಿದ್ದು ಅಮ್ಮನಿಗೆ ಸ್ವಲ್ಪವಾದರೂ ಬೇಜಾರಾಗಿರುತ್ತೆ ಅಲ್ಲಾ...

ಆಮೇಲೆ ಅಮ್ಮನಿಗಿಂತ ಅಪ್ಪನೇ ಹತ್ತಿರವಾಗುತ್ತಾ ಹೋದರು. ಅಪ್ಪ ಮನೆಗೆ ಬಂದ ತಕ್ಷಣ ಅವರ ತೊಡೆಯೇರಿ ಕುಳಿತುಬಿಡುತಿದ್ದೆ. ಯಾರಾದರೂ ನೀನು ಅಪ್ಪನ ಮಗಳಾ ಅಮ್ಮನ ಮಗಳಾ ಅಂತ ಕೇಳಿದ್ರೆ ನಾನು ನಮ್ಮಪ್ಪನ ಮಗಳು ಅಂತಾನೇ ಹೇಳ್ತಿದ್ದೆ. ನನಗೆ ನೆನಪಿರೋ ಹಾಗೆ ನಾನು ನಮ್ಮಮ್ಮನ ಮಗಳು ಅಂತ ಹೇಳಿಯೇ ಇಲ್ಲ. ಅಮ್ಮಂಗೆ ಆಗ ನಾನೆಷ್ಟು ಕಷ್ಟ ಪಟ್ರೂ ನನ್ನ ಮಗಳು ಅದನ್ನು ತಿಳಿದುಕೊಳ್ತಾ ಇಲ್ಲವಲ್ಲಾ ಅನ್ನೋ ನೊವಿತ್ತಾ?? ಗೊತ್ತಿಲ್ಲ....

ಆದ್ರೂ ಅಮ್ಮಂಗೆ ನನ್ನ ಮೇಲಿನ ಕಾಳಜಿ ಕಡಿಮೆಯಾಗಲಿಲ್ಲ. ನನ್ನಂತೆ ನನ್ನ ಮಕ್ಕಳೂ ಆಗಬಾರದು. ಪ್ರತಿಯೊಂದಕ್ಕೂ ಇನ್ನೊಬ್ಬರ ಮೇಲೆ ಡಿಪೆಂಡ್ ಆಗಬಾರದು. ಹೆಣ್ಣು ಮಕ್ಕಳೂ ಸ್ವಾವಲಂಬಿಗಳಾಗಬೇಕು ಎಂಬುದು ನಮ್ಮಮ್ಮನ ಆಸೆಯಾಗಿತ್ತು. ಹಾಗಾಗಿಯೇ ಅಕ್ಕ ಡಿಗ್ರಿ ಮುಗಿಸುವ ಮುನ್ನ ಬಂದ ಎಲ್ಲಾ ಪ್ರಪೋಸಲ್ ಗಳನ್ನೂ ಅಮ್ಮ ತಾವಾಗಿಯೇ ತಿರಸ್ಕರಿಸಿದ್ದರು. ಕೆಲವನ್ನಂತೂ ಮನೆಯವರೆಲ್ಲರ(ಅಪ್ಪನದೂ ಸಹ) ವಿರೋಧ ಕಟ್ಟಿಕೊಂಡು ತಾವೊಬ್ಬರೇ ಎದುರಿಸಿದ್ದರು.

ಕೆಲವೊಮ್ಮೆ ಅಮ್ಮ ನಾನಾಡಿದ ಮಾತನ್ನ ವಿರೋಧಿಸಿದಾಗ ಅವರು ನನ್ನ ಶತ್ರುವೇನೋ ಅನ್ನೋ ಹಾಗೆ ನೋಡಿದ್ದೀನಿ. ಯಾವಾಗಲೋ ಅಮ್ಮನ ಮಡಿಲಲ್ಲಿ  ಮಲಗಲು ಹೋದಾಗ ಅಮ್ಮ "ಅಯ್ಯೋ ಕಾಲು ನೋಯ್ತಾ ಇದೆ ನೀನು ಬೇರೆ ಬಂದ್ಯಾ ಮಲಗೋಕೆ" ಅಂತ ಅಂದಿದ್ದನ್ನೇ ಹಿಡಿದುಕೊಂಡು ಅಮ್ಮನಿಗೆ ನನ್ನ ಬಗ್ಗೆ ಪ್ರೀತಿನೇ ಇಲ್ಲ ಅಂತಾನೂ ಯೋಚ್ನೆ ಮಾಡಿದ್ದೀನಿ. ಅಮ್ಮನಿಗಿಂತ ನಾನು ಹೆಚ್ಚು ವಿಷಯ ತಿಳಿದುಕೊಂಡಿದ್ದೀನಿ ಅಂತ ಅಮ್ಮನ ಮುಂದೇನೆ ಬೀಗಿದ್ದೀನಿ. ಅಮ್ಮ ಏನಾದ್ರೂ ತಪ್ಪು ಮಾತಾಡಿದಾಗ ಅಪ್ಪನ ಜೊತೆ ಸೇರಿ ಅವರನ್ನು ಗೇಲಿ ಮಾಡಿದ್ದೀನಿ.

ನನಗೆ ಸಿ.ಇ.ಟಿ.ಯಲ್ಲಿ
೯ನೆಯ rank ಬಂದಾಗ "ದಿ ಹಿಂದೂ" ದಿನಪತ್ರಿಕೆಯವರು ದೂರವಾಣಿ ಸಂದರ್ಶನ ನಡೆಸಿದ್ದರು. ಆಗಲೂ ನಾನು ಅಪ್ಪನ ಮಗಳಾಗಿಯೇ ಉತ್ತರಿಸಿದ್ದೆ. "ನನಗೆ ವಿಶ್ವಾಸವಿಲ್ಲದಿದ್ದರೂ ನನ್ನಪ್ಪ ನನಗೆ ನೀನು ಒಳ್ಳೆಯ rank ಪಡೀತೀಯ ಅಂತಿದ್ರು. ಅವರು ಆ ರೀತಿ ನನ್ನಲ್ಲಿ ವಿಶ್ವಾಸ ತುಂಬಿದ್ದುದರಿಂದಲೇ ನಾನು ಈ rank ಪಡೆಯಲು ಸಾಧ್ಯವಾಯ್ತು" ಅಂತ ಹೇಳಿದ್ದೆ. ಅದನ್ನು ಕೇಳಿ ಅಮ್ಮನಿಗೇನನಿಸಿತೋ ಏನೋ "ನೋಡು ನನ್ನ ಮಗಳು ಅವರಮ್ಮ ಅವಳಿಗೇನೂ ಮಾಡೇ ಇಲ್ಲ ಅನ್ನೋ ಥರಾ ಮಾತಾಡ್ತಾಳೆ. ಅವಳಿಗೆ ಅವಳ ಅಪ್ಪಾನೇ ಎಲ್ಲ " ಅಂತಂದ್ರು. ಮೊದಲ ಸಲ ನನಗೆ ನಾನು ನಮ್ಮಮ್ಮನ್ನ neglect ಮಾಡ್ತಾ ಇದ್ದೀನಾ ಅನ್ನೊ ಪಾಪ ಪ್ರಜ್ಞೆ ಕಾಡಿದ್ದು ಆಗಲೇ.

ನಾನು ಇಂಜಿನಿಯರಿಂಗ್ ಸೇರಿದ ಮೇಲೆ ಅಮ್ಮನಿಗೆ gall bladder ಅಲ್ಲಿ ತೊಂದರೆ ಉಂಟಾಗಿ ಸುಮಾರು ೨ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಗಲೂ ನಾನು ಅಮ್ಮನ್ನ ನೋಡೋಕೆ ಅಂತ ಆಸ್ಪತ್ರೆಗೆ ಹೋಗಿದ್ದು ಮೂರೋ ನಾಲ್ಕು ಬಾರಿ ಅಷ್ಟೆ. ನನಗ್ಯಾಕೋ ಆಸ್ಪತ್ರೆಯಲ್ಲಿರುವವರನ್ನು ಹೋಗಿ ಮಾತಾಡಿಸಬೇಕು ಅಂತ ಅನ್ನಿಸೋದೇ ಇಲ್ಲ.ಆಗಂತೂ ಅಮ್ಮ ನಾನು ಸತ್ರೂ ನನ್ನ ಮಗಳು ಬೇಜಾರು ಮಾಡಿಕೊಳ್ಳೊಲ್ಲವೇನೋ ಅಂದ್ರು. ಈಗಲೂ ಕೆಲವೊಮ್ಮೆ ನಾನು ಆಗ ಮಾಡಿದ್ದು ಸರೀನಾ ತಪ್ಪಾ ಗೊತ್ತಾಗದೇ ಒದ್ದಾಡ್ತೀನಿ.

ಆದರೂ ಇವತ್ತಿಗೂ ನಾನು ಅಪ್ಪನ ಮಗಳೇ. ಅಪ್ಪನ ತೊಡೆಯ ಮೇಲೆ ಮಲಗಿದಂತೆ ಅಮ್ಮನ ಮಡಿಲಲ್ಲಿ ಮಲಗೊಲ್ಲ. ಅಪ್ಪನ ಕೈತುತ್ತು ಸವಿದಂತೆ "ಅಮ್ಮ ತಿನ್ನಿಸು" ಅಂತಾನೂ ಕೇಳೊಲ್ಲ. ಹೀಗ್ಯಾಕೆ??? ನನಗೋಸ್ಕರ ಅಮ್ಮ ಕಷ್ಟ ಪಡ್ತಾರೆ ಅಂತ ಗೊತ್ತಿದ್ರೂ ಅಮ್ಮ ಎಲ್ಲರಿಗಿಂತ ನಂಗೆ ನೀವು ತುಂಬಾ ಇಷ್ಟ ಅಂತ ಯಾಕೆ ಹೇಳೊಲ್ಲ? ನಂಗೊತ್ತು ನೀನು ಯಾವತ್ತಿದ್ರೂ ನಿಮ್ಮಪ್ಪನ ಮಗಳೇ ಅಂತ ಅಮ್ಮ ಅಂದಾಗ, ಇಲ್ಲಮ್ಮ ನಾನು ನಿಮ್ಮ ಮಗಳೂ ಕೂಡ ಅಂತ ಯಾಕೆ ಹೇಳೊಲ್ಲ? ಅಪ್ಪನ ಪ್ರೀತಿ ಮುಂದೆ ಅಮ್ಮನ ಪ್ರೀತಿ ಯಾಕೆ ಮಂಕಾಗಿ ಕಾಣ್ತಾ ಇದೆ? ಉತ್ತರ ಗೊತ್ತಿಲ್ಲ...

Sunday, April 25, 2010

ಏನು ಕಾರಣ

ನಿನ್ನನ್ನು ಮೊದಲ ಬಾರಿ ಕಂಡ
ನೆನಪಿನ್ನೂ ಹಚ್ಚಹಸುರಾಗಿದೆ
ಕನಸಿನ ರಾಜಕುಮಾರನೇ
ಜೀವತಳೆದು ಕಣ್ಣೆದುರು ನಿಂತಂತೆ

ಯಾರನ್ನೂ ಇಷ್ಟಪಡದವಳು
ನಿನ್ನ ಕಂಡೊಡನೆ ಕೆಂಪಾಗಿದ್ದೇಕೆ?
ತಿಳಿಯದಾಗಿದೆ ಉತ್ತರ
ನೀ ನನ್ನ ಬಾಳಲ್ಲಿ ಬಂದದ್ದೇಕೆ?

ಕಪ್ಪೆಚಿಪ್ಪೊಳಗಿನ ಮುತ್ತಂತಿರುವೆ
ಜಗವ ತಿಳಿಯಬೇಕು ನೀನು
ಎಲ್ಲವ ನೋಡಬೇಕು ಹುಡುಗಿ
ತಿಳಿಯಬೇಕೆಲ್ಲವ ಕಾಣದ್ದನ್ನೂ ಹುಡುಕಿ

ಎಂದು ನೀ ನನಗೆ ಹೇಳುತ್ತಿದ್ದರೆ
ನನ್ನ ಮನಸಲ್ಲೇನೋ ಉಲ್ಲಾಸ
ನೀನೊಬ್ಬ ನನ್ನೊಂದಿಗಿದ್ದರೆ
ಜಗತ್ತನ್ನೇ ಗೆದ್ದ ಉತ್ಸಾಹ

ಮೌನಗೌರಿಯಂತಿದ್ದವಳಿಗೆ
ಪಟ ಪಟ ಮಾತ ಕಲಿಸಿದವ ನೀನು
ಮಾತಿನೊಂದಿಗೆ ನನ್ನೊಳಗೀಗಿರುವ
ಆತ್ಮವಿಶ್ವಾಸ ತುಂಬಿದ್ದೂ ನೀನು

ನೀ ನನ್ನವನೇ ಕಣೋ ಹುಡುಗ ಎಂದು
ಹೇಳಬೇಕೆನಿಸುತ್ತದೆ ನೂರಾರು ಬಾರಿ
ಮನದಲ್ಲಿ ಅರಳಿದ ಮಾತು
ತುಟಿಗೆ ಬರುವುದರೊಳಗೆ ಸಾಯುತ್ತದೆ

ಕೊನೆಗೂ ಹೇಳಲೇಬೇಕೆಂದು ನಿರ್ಧರಿಸಿ
ನಿನ್ನೆದುರು ಸಾಲಂಕೃತಳಾಗಿ ಬಂದಾಗ
ತುಂಬಾ ಚೆಂದ ಕಾಣ್ತಿ ನೀನು
ಆದರೂ ಕಾಡುತಿದೆಯೇನೋ ಕೊರತೆ

ನೋಡಲದು ಕಂಗಳಿಗೆ ಸೊಗಸು
ನಿನ್ನ ಮುಡಿಯಲಿರೆ ಮಲ್ಲಿಗೆ
ತರುವೆನೀಗಲೇ ನಾನದನು
ಕಾಯುತಿರು ನೀ ನಾ ಹೋಗಿ ಬರುವೆ  ಎಂದು ಹೇಳಿ ಒಂದೇ ಉಸಿರಿನಲಿ ಹೊರಟು ಹೋದೆ ನೀ ಹಿಂದೆ ನೋಡದೇ
ಹೊರಬರಲು ಅಣಿಯಾಗಿದ್ದ ಮಾತು
ಪುನಃ ಮನದೊಳಗೆ ಬಂಧಿಯಾಯ್ತು
ನನ್ನ ಮುಗ್ಧ ಮನಸಿನೊಂದಿಗೆ
ಚೆಲ್ಲಾಟವಾಡುವ ಬಯಕೆಯೇ ವಿಧಿಯೇ?
ಮಲ್ಲಿಗೆ ತರುವೆನೆಂದು ಸಂಜೆ ಹೋದವನು
ಇನ್ನೂ ಹಿಂದಿರುಗಿ ಬಂದಿಲ್ಲವೇಕೆ?

ಮಲ್ಲಿಗೆಯ ಹುಡುಕಾಟ ತಡವಾಯ್ತೋ?
ಬರುವ ಹಾದಿಯಲ್ಲಿ ನೂರಾರು ವಿಘ್ನಗಳೋ?
ಅಥವಾ ಹೂವಿನ ಅಂದಕ್ಕೆ ಸೋತು
ಅಲ್ಲೇ ಇದ್ದು ಬಿಡುವ ನಿರ್ಧಾರವೋ?

( ವಿ.ಕ.ದಲ್ಲಿ ಇಂದು ಪ್ರಕಟವಾಗಿರುವ ಮಣಿಕಾಂತ್ ಅವರ ಲೇಖನದಿಂದ ಪ್ರೇರಿತ)

Tuesday, March 30, 2010

ಇರಲಿ ಈ ಬಂಧ ಶಾಶ್ವತ

ಕಣ್ಣ ತುಂಬ ನೂರು ಕನಸು
ಮನವ ಕಾಡೋ ನೂರು ನೆನಪು
ಹೊತ್ತು ಹೊಸತು ಹೆಜ್ಜೆಯಿಡಲು
ನಿಮ್ಮ ಭೇಟಿಯಾಯಿತು

ಮೊದಲ ದಿನವೇ ಮಾತನಾಡಿ
ಇಷ್ಟಾನಿಷ್ಟ ತಿಳಿದುಕೊಂಡು
ಕಷ್ಟ ಸುಖವ ಹಂಚಿಕೊಳಲು
ಸ್ನೇಹ ಕುದುರಿತು

ಹಲವು ವಿಷಯಗಳನು ಕೆದಕಿ
ನೆನಪುಗಳನು ಮೆಲುಕು ಹಾಕಿ
ನಾವು ಜೊತೆಯಲಿರಲು ಸಮಯ
ಲೆಕ್ಕ ತಪ್ಪಿತು

ಬಿರುಕು ಎಲ್ಲೂ ಮೂಡಲಿಲ್ಲ
ಜಗಳಕಿಲ್ಲಿ ಜಾಗವಿಲ್ಲ
ಮನವ ಅರಿತ ಮೇಲೆ ವಿರಸ
ಕಾಣದಾಯಿತು

ನಾನು ನಡೆವ ಹಾದಿಯಲ್ಲಿ
ಜೊತೆಗೆ ನೀವು ಹೆಜ್ಜೆಯಿಡಲು
ಅಕ್ಕಪಕ್ಕ ಸುತ್ತಮುತ್ತ
ಹಸಿರೆ ತುಂಬಿದೆ

ನನ್ನ ನಿಮ್ಮ ನಡುವ ಬಂಧ
ಹೇಳಲಿಕ್ಕೆ ಪದಗಳಿಲ್ಲ
ಮಾತು ಕೂಡ ಸೋಲನೊಪ್ಪಿ
ಮೌನವಾಗಿದೆ

ಯಾರ ಪುಣ್ಯಫಲವೋ
ನಮ್ಮ ಬಂಧನ
ಎಂದೂ ಹೀಗೆ ಇರಲಿ ನಮ್ಮ
ಭಾವ ಸ್ಪಂದನ

Thursday, March 4, 2010

ಇಂದಿನ ಪಯಣ

ಇವತ್ತು ಬಸಲ್ಲಿ ಕಾಲೇಜಿಗೆ ಹೋಗ್ತೀನಿ ಅಂತ ಹೇಳಿ ಮನೆ ಬಿಟ್ಟಾಗ ೧೦:೧೫. ೧೧:೩೦ಕ್ಕೆ microcontrollers ಪರೀಕ್ಷೆ ಶುರು ಆಗೋದಿತ್ತು. ನಮ್ಮ ಮನೆಯಿಂದ ಸುಮಾರು ಒಂದುವರೆ ಕಿ.ಮೀ. ದೂರವಿರುವ ವಿಜಯನಗರ ಬಸ್ ನಿಲ್ದಾಣಕ್ಕೆ ನಡೆಯುತ್ತಾ ಹೊರಟೆ. ವಿಜಯನಗರ ಪಾದಚಾರಿ ಸುರಂಗ ಮಾರ್ಗದಲ್ಲಿ ಮೊದಲ ಸಲ ನಡೆದು ನಿಲ್ದಾಣ ತಲುಪಿದಾಗ ೧೦:೨೮. ಸರಿ ಬಸ್ ಗೋಸ್ಕರ ಕಾಯ್ತಾ ಇದ್ದೆ. ನಮ್ಮ ಕಾಲೇಜಿನ ಕೆಲವು ಹುಡುಗಿಯರು ಅದೇ ನಿಲ್ದಾಣದಲ್ಲಿ ಕಾಯುತ್ತಿದ್ದರು. ೧೦:೪೦ ಆದರೂ ನಮ್ಮ ಕಾಲೇಜು ಮಾರ್ಗದಲ್ಲಿ ಹೋಗುವ ಯಾವ ಬಸ್ ಕೂಡ ಬರಲಿಲ್ಲ. ಅದಕ್ಕೂ ಮುಂಚೆ ಬಂದಿದ್ದ ೪೦೧ R ಅಲ್ಲಿ ನಾಯಂಡಹಳ್ಳಿವರೆಗೆ ಹೋಗಿ ಅಲ್ಲಿಂದ ಇನ್ನೊಂದು ಬಸ್ ಅಲ್ಲಿ ಹೋಗಬಹುದಿತ್ತು ಅಂತ ಅನ್ನಿಸಿದ್ರೂ ಈಗ ನಾನು ಈ ಥರ ಯೋಚ್ನೆ ಮಾಡಿದ್ರೆ ಹೋಗಿರೋ ಬಸ್ ವಾಪಸ್ ಬರೊಲ್ಲ ಅಲ್ವಾ ಕಾಯೋಣ ಅಂತ ಅಲ್ಲೆ ನಿಲ್ದಾಣದಲ್ಲಿ ನಿಂತೆ.

ಇನ್ನೊಂದು ೫ ನಿಮಿಷವಾದ ಮೇಲೆ ಅಲ್ಲಿ ಕಾಯುತ್ತಿದ್ದ ನಮ್ ಕಾಲೇಜಿನ ೩ ಹುಡುಗಿಯರು ಆಟೋದಲ್ಲಿ ಹೊರಟು ಹೋದರು. ಅಯ್ಯೊ ನಾನೇನು ಮಾಡಲಿ... ಇನ್ನೇನು ಮಾಡೋದು ಇನ್ನೊಂದ್ ಐದು ನಿಮಿಷ ನೋಡೋದು ಬಸ್ ಸಿಗಲಿಲ್ಲ ಅಂದ್ರೆ ಆಟೋದಲ್ಲೇ ಹೋಗೋದು ಅಂತ ಅಂದುಕೊಳ್ತಾ ಇರೋವಾಗ್ಲೇ ಬಂತು ಬನಶಂಕರಿಗೆ ಹೋಗೋ ಪುಷ್ಪಕ್ ಪ್ಲಸ್... ಹತ್ತಿ ಡ್ರೈವರ್ ಹಿಂದಿನ ಸೀಟಲ್ಲೇ ಕುಳಿತೆ. ಇದೇ ಮೊದಲೇನಾಗಿರಲಿಲ್ಲ. ಆದರೂ ನಾನು ಮುಂಚೆ ಅಲ್ಲಿ ಕುಳಿತಾಗ ಗಮನಿಸುತ್ತಿದ್ದ ವಿಷಯ ಮತ್ತು ಇವತ್ತು ಗಮನಿಸಿದ ವಿಷಯ ಬೇರೆಯವು... ಮುಂಚೆ ಅಲ್ಲಿ ಕುಳಿತಾಗ ಬಸ್ ಗೆ ಹತ್ತುವವರು ಇಳಿಯುವವರು ಕಿಟಕಿಯಿಂದ ಕಾಣುವ ಸುತ್ತ ಮುತ್ತ ಇರುವ ಅಂಗಡಿಗಳ ಪೋಸ್ಟರ್ ಗಳೇ ಕಣ್ಣಿಗೆ ಬೀಳ್ತಾ ಇದ್ವು. ಇವತ್ತು ಅದರ ಜೊತೆಗೆ ಡ್ರೈವರ್ ಗಾಡಿ ಹೇಗೆ ಓಡಿಸ್ತಾರೆ ಅನ್ನೋದನ್ನು ಗಮನಿಸ್ತಾ ಇದ್ದೆ.... ಗಾಡಿ ವೇಗಕ್ಕೆ ತಕ್ಕಂತೆ ಗೇರ್ ಬದಲಾಯಿಸುತ್ತಿದ್ದುದು, ಸ್ಪೀಡೋಮೀಟರ್ ಅಲ್ಲಿ ಕಾಣುವ ಗಾಡಿಯ ವೇಗ ಎಲ್ಲವನ್ನು ಗಮನಿಸುತ್ತಿದ್ದೆ.ನಮ್ಮ ಆಭಿರುಚಿ ಆಸಕ್ತಿಗಳು ಬದಲಾದಂತೆ ನಮ್ಮ ಕಣ್ಣಿಗೆ ಕಾಣುವ ವಿಷಯಗಳು ಬದಲಾಗುತ್ತವೆ ಅಲ್ವಾ... ಹೀಗೆ ಅತ್ತಿಗುಪ್ಪೆ ಬಳಿ ಬಂದಾಗ ಎಂದಿನಂತೆ ಅಲ್ಲಿ ಟ್ರಾಫಿಕ್ ಜಾಮ್.

ಗಡಿಯಾರ ಗಂಟೆ ೧೧:೦೦ ತೋರಿಸ್ತಾ ಇತ್ತು. ಅಯ್ಯೊ ಈ ಟ್ರಾಫಿಕ್ ಹೀಗೆ ಇದ್ರೆ ನಾನು ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗ್ತೀನಾ... ಪರೀಕ್ಷೆ ಸಮಯದಲ್ಲಿ ಬಸ್ಸಲ್ಲಿ ಹೋಗುವ ನಿರ್ಧಾರ ತಗೊಂಡಿದ್ದು ತಪ್ಪಾಯ್ತು ಅಂತ ಒಂದು ಮನಸ್ಸು ಹೇಳ್ತಿತ್ತು. ಆದ್ರೆ ಇನ್ನೊಂದು ಮನಸ್ಸು ೮:೧೫ಕ್ಕೆ ಕಾಲೇಜಿಗೆ ಹೋಗೋದಿಕ್ಕೆ ನೀನು ಸ್ಕೂಟಿಯಲ್ಲಿ ಬರ್ತಾ ಇದ್ದಾಗ ಇದೇ ಜಂಕ್ಷನ್ ಅಲ್ಲಿ ೮:೦೦ ಗಂಟೆಗೆ ಇದ್ರು ೮:೧೦ ಕ್ಕೆಲ್ಲಾ ಕಾಲೇಜ್ ತಲುಪ್ತಾ ಇರ್ಲಿಲ್ವಾ ಅಂತಿತ್ತು. ಹೇಗೋ ಅದೇ ಟ್ರಾಫಿಕ್ ಅಲ್ಲೇ ದೀಪಾಂಜಲಿನಗರದ ಬಳಿಯಿರುವ ಸರ್ಕಲ್ ಗೆ ಬರುವಷ್ಟರಲ್ಲಿ ೧೧:೧೦ ಆಗಿತ್ತು. ಇನ್ನು ಮೈಸೂರು ರಸ್ತೆಯಲ್ಲಿ ಯಾವುದೇ ಬ್ಲಾಕ್ ಇರದಿರಲಿ ಅಂತ ದೇವರಲ್ಲಿ ಬೇಡಿಕೊಂಡೆ.

ಇನ್ನು ಮುಂದೆ ಎಲ್ಲಾ ಸುಸೂತ್ರವಾಗಿತ್ತು. ಎಲ್ಲೂ ಜಾಮ್ ಆಗದೇ ಪಿ.ಇ.ಎಸ್. ಕಾಲೇಜಿನ ನಿಲ್ದಾಣದಲ್ಲಿಳಿದಾಗ ೧೧:೧೮. ಹಾಗೆ ರಸ್ತೆ ದಾಟಿ ಬಂದಾಗ ದಾರಿಯಲ್ಲಿ ಎದುರುಗೊಂಡ ಜೂನಿಯರ್ಸ್ ಸಹನಾ ಮತ್ತೆ ನವೀನ್ ಜೊತೆ ಮಾತಾಡ್ತಾ ಇದ್ದಾಗ ಪರೀಕ್ಷೆಯ ಮೊದಲ ಬೆಲ್ ಹೊಡೆಯಿತು.ಸರಿ ಅವರಿಗೆ ಪರೀಕ್ಷೆಗೆ "ಆಲ್ ದಿ ಬೆಸ್ಟ್" ಹೇಳಿ ನನ್ನ ತರಗತಿಗೆ ಓಡಿದೆ. ಸರಿಯಾದ ಸಮಯಕ್ಕೆ ಕಾಲೇಜ್ ಸೇರಿ ಪರೀಕ್ಷೆ ಬರೆದೆ.

ವಾಪಸ್ ಬರುವಾಗ ನಿಲ್ದಾಣಕ್ಕೆ ಬಂದ ಐದು ನಿಮಿಷಗಳೊಳಗೆ ೫೦೦ ಕೆ ಮಾರ್ಕೊಪೋಲೋ ಬಸ್ ಹತ್ತಿದೆ. ಸುಮಾರು ೧:೪೦ ಕ್ಕೆಲ್ಲಾ ವಿಜಯನಗರ ತಲುಪಿದೆ. ಅಲ್ಲಿಂದ ಮತ್ತೆ ಮನೆ ಕಡೆ ನಡಿಗೆ. ಮನೆಗೆ ಬಂದ ತಕ್ಷಣ ಅಪ್ಪ ಕೇಳಿದ್ರು ಹೇಗಿತ್ತು ಬಸಲ್ಲಿ ಹೋದ ಅನುಭವ ಅಂತ. ನಾನು ಚೆನ್ನಾಗಿತ್ತು ಅಂದೆ. ಅಮ್ಮ "ಹೂಂ... ಬಿಸಿಲಲ್ಲಿ ನಡೆದು ಬಂದಿದ್ದೀಯಾ..,ಕೆನ್ನೆಯೆಲ್ಲಾ ಹೇಗೆ ಕೆಂಪಗಾಗಿದೆ ನೋಡ್ಕೋ. ನೀನು ಹೀಗೆ ಒಂದು ತಿಂಗಳು ಈ ಬೇಸಿಗೆಯಲ್ಲಿ ಬಸಲ್ಲಿ ಕಾಲೇಜಿಗೆ ಹೋಗಿ ಬಂದ್ರೆ ನೋಡೋಕೆ ಆಗೊಲ್ಲ ಹಾಗಾಗ್ತೀಯಾ" ಅಂದ್ರು. ಏನೇ ಅಂದ್ರೂ ಇವತ್ತಿನ ಪಯಣ ಮಾತ್ರ ಚೆನ್ನಾಗಿತ್ತು.

ಅಂದ ಹಾಗೆ ಪಿ.ಇ.ಎಸ್.ಐ.ಟಿ. ಸೇರಿದ ಮೇಲೆ ಇದು ಮೂರನೇ ಬಾರಿ ನಾನು ಬಸಲ್ಲಿ ಕಾಲೇಜಿಗೆ ಹೋಗಿದ್ದು :)

Friday, January 29, 2010

ಏನನ್ನಾದರೂ ಬರೆಯಬೇಕೆಂಬ ಆಸೆ

ಏನನ್ನಾದರೂ ಬರೆಯಬೇಕೆಂಬ ಆಸೆ
ಬರೆಯಲಿ ಏನು ತಿಳಿಯದಾಗಿದೆ
ಬಡಿದೆಬ್ಬಿಸಿ ದಾರಿ ತೋರೆನಗೆ ಎಂದರೂ
ಮನಸಿಂದು ಮೌನವಾಗಿದೆ

ಕಂಡ ಕನಸು ನನಸಾಗದಾದಾಗ
ಕನಸುಗಳಿಗೆನ್ನಲ್ಲಿ ಜಾಗವಿಲ್ಲವೆಂದು
ಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆ
ಕನಸ ಕಂಡ ಮನಸನ್ನೇ ದೂಷಿಸಿದ ಫಲವೇ?

ಒಂದರ ಹಿಂದೊಂದು ಬೆಂಬಿಡದೆ ಮನದ ಕಿನಾರೆಯ
ಸ್ಪರ್ಶಿಸುತ್ತಿದ್ದ ಭಾವನೆಗಳಿಗೆನ್ನಲ್ಲಿ ಸಮಯವಿಲ್ಲವೆಂದು
ಅವುಗಳನ್ನು ನನ್ನೊಳಗೆ ಅಡಗಿಸಿಡುವ ಸಾಹಸದಿ
ನನ್ನ ಮನಕ್ಕೆ ಬೀಗ ಜಡಿದೆನೆ?

ಬೀಗ ಜಡಿದಿದ್ದರೂ ಬೀಗವನೊಡೆದು
ಹೊರಬಂದ ಭಾವನೆಗಳ ಉತ್ಕೃಷ್ಟತೆಯ
ಪದಗಳಲಿ ವಿವರಿಸಲು ಅಶಕ್ತಳಾದಾಗ
ಸೋಲಿನ ಭೀತಿಯಿಂದ ಸುಮ್ಮನಾದೆನೆ?

ನೂರಾರು ಭಾವಗಳೀಗ ಒಮ್ಮೆಲೆ ಪ್ರವಹಿಸಿ
ಕಾಣದೂರಿಗೆನ್ನ ಕೊಂಡೊಯ್ಯುತ್ತಿವೆ
ಬೆರಳುಗಳ ಮಧ್ಯೆ ಬಂಧಿಯಾಗಿರುವ ಲೇಖನಿಯ
ಬುದ್ಧಿಯ ಹಿಡಿತದಲ್ಲಿರುವ ಪದಗಳು ಆಳುತ್ತಿವೆ

ಪದಗಳು ನೆನಪಾಗಲೊಲ್ಲವು ಇಂದು
ಬರೆಯಬೇಕೆಂಬ ಆಸೆಯು ಸೋಲನ್ನೊಪ್ಪದು
ಬಂಧಿಯಾದ ಲೇಖನಿಯೇ ಭಾವವನ್ನು ಬಿಡುಗಡೆಗೊಳಿಸೀತೆ?
ಮನಸಿನ ಮೌನದ ಮಾತಿಗೆ ಅಕ್ಷರ ರೂಪ ಕೊಟ್ಟೀತೇ?