Wednesday, March 11, 2009

ನಿನ್ನಲೊಂದು ಬಿನ್ನಹ

ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ?

ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ?


ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ?

ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ ಸಹಮತವಿದ್ದುದೂ ನಿಜವಲ್ಲವೆ?


ಏಕೀ ಸಂಶಯ ಅಪನಂಬಿಕೆ ನುಸುಳಿದೆ ನಮ್ಮ ನಡುವಲ್ಲಿ?

ಅಥವಾ ಸಮಾಜ ಏನೆನ್ನಬಹುದೆಂಬ ಭಯ ಮನೆಮಾಡಿದೆಯೇ ನಿನ್ನಲ್ಲಿ?


ಇದೇ ಮೊದಲಲ್ಲ ನೀ ನನ್ನ ಬಯಕೆಗೆ ತಣ್ಣೀರೆರಚಿದ್ದು

ಸವಿಮಾತ ಮೂಲಕವೇ ನನ್ನ ಪುಟ್ಟ ಹೃದಯಕ್ಕೆ ಚುಚ್ಚಿದ್ದು


ಕಂಗಳ ತುಂಬಿರುವ ಹನಿಗಳು ನಿನಗೆ ಕಾಣದೆ?

ತಾಳಲಾರೆ ನೋವ ನಾನಿನ್ನು ಮುಂದೆ


ನಾ ಬರೆದ ಬಾಳಚಿತ್ರ ಕಣ್ಣೀರಿನಿಂದಲೇ ಅಳಿಸಿ ಹೋಗಿದೆ

ಪುನಃ ಅದನು ಚಿತ್ರಿಸುವ ಆಸೆಯು ಬತ್ತಿ ಹೋಗಿದೆ

ಇನ್ನು ನೀನೆ ನನ್ನೀ ಬಾಳ ಕಥೆಗಾರ

ಮರುನುಡಿಯಿಲ್ಲದೆ ಪಾಲಿಸುವೆ ನಿನ್ನ ಆದೇಶವ ಪೂರ"


ಇಲ್ಲ…. ಹೀಗೆ ಹೇಳಿ ನನ್ನ ಕನಸನ್ನೆಲ್ಲ ಸುಟ್ಟು ಹಾಕಲು ನಾ ಯೋಗಿಯಲ್ಲ

ನನ್ನಾಸೆಯ ನೀನು ಗೌರವಿಸುವೆಯೆಂಬ ಆಶಯವೂ ಸೋತಿಲ್ಲ


ಹೇಳು ಮುಂದೊಂದು ದಿನ ನನಗೂ ಸಮಯ ಬರುವುದಲ್ಲವೇ?

ನನ್ನ ಕನಸಿನ ಜೀವನ ಜೀವಿಸಲು ಅವಕಾಶ ಕೊಡುವೆಯಲ್ಲವೇ?

Sunday, March 1, 2009

ಬಾ ನನ್ನ ಜೊತೆಯಾಗಿ

ಬೈಕನ್ನೇರಿ ಇರುಳಿನಲಿ
ಬೀಸುವ ಗಾಳಿಯ ವೇಗದಲಿ
ಘಟ್ಟದ ತಿರುವುಗಳನ್ನು ದಾಟಿ
ದೂರ ಕಳೆದು ಹೋಗುವ||

ಮನೋಹರ ಬೆಟ್ಟದಂಚಿನಲ್ಲಿ
ಹೂಗಳ ಏಣಿ ಮಾಡಿ
ಮೋಡದ ಮೇಲೆ ಏರುತ
ಚಂದ್ರಲೋಕಕ್ಕೆ ಹಾರುವ||

ಚುಕ್ಕಿ ಚಂದ್ರಮರ ಮದುವೆಗೆ
ಚಪ್ಪರವ ಕಟ್ಟುವ
ಅವರ ಮಿಲನ ಮಹೋತ್ಸವದಿ
ಸಂಭ್ರಮದಿ ಪಾಲ್ಗೊಳ್ಳುವ||

ಬಂದ ತಾರೆಗಳನೆಲ್ಲ ಎಣಿಸುವ
ಪ್ರತಿ ತಾರೆಗೂ ನಮ್ಮ
ಕನಸ ಬರೆದು ಕಟ್ಟುವ
ಸ್ವಪ್ನಲೋಕವನ್ನೆ ಬರಿದು ಮಾಡುವ||

ಜಗದ ನಿಯಮ ಮುರಿಯುವ
ಕಾಲವನ್ನೆ ತಡೆಯುವ
ಮೈ ಮರೆತು ವಿಹರಿಸುತ
ಇರುಳ ಪೂರ ಕಳೆಯುವ||

ನಾ ಪ್ರಕೃತಿಯ ಮಡಿಲಲ್ಲಿ
ನೀ ನನ್ನ ಮಡಿಲಲ್ಲಿ
ಬೇರೇನು ಬೇಕು ಹೇಳು
ಪ್ರೀತಿಯೆ ತುಂಬಿರಲು ಕಂಗಳಲಿ||

ಹೇಳು ಗೆಳೆಯ ಬೇರೆಲ್ಲಿದೆ
ಅವನಿಯೊಳಿಂಥ ಸುಖ
ನನಗ್ಯಾರುಂಟು ನೀನಲ್ಲದೆ
ಬಾ ನನ್ನ ಜೊತೆಯಾಗಿ ಸಖ||