Wednesday, June 3, 2009

ಮತ್ತೆ ಒಂದಾಗಬಾರದೇಕೆ?

ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ
ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ.
ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ
ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ.

ರಸ್ತೆ ಬದಿಯಲ್ಲಿತ್ತು ದುಂಡು ಮಲ್ಲಿಗೆ
ಆಗ ತಾನೆ ಜಗವ ನೋಡುತ ತನ್ನ ಕಣ್ತೆರೆದು.
ಕೇಳಿತು ಸಿಂಧೂರ "ಹೇಗಿರುವೆ ಗೆಳತಿ
ಹೇಗೆ ಸಾಗಿದೆ ನಿನ್ನ ಜೀವನವಿಂದು?"

"ಏನ ಹೇಳಲಿ ನಾನು?
ದೇವರ ಪೂಜೆಗಷ್ಟೇ ನಾನೀಗ ಸೀಮಿತ.
ಸುಕೋಮಲೆಯರ ಮುಡಿಯೇರುವುದೇ
ನನ್ನ ಈಗಿನ ಇಂಗಿತ."

ಮಾತು ಹೊರಡಲಿಲ್ಲ ಸಿಂಧೂರಕೆ
ಏನು ಹೇಳಿದರದೂ ಕಡಿಮೆಯೇ.
"ಒಂದೇ ದೋಣಿಯ ಪಯಣಿಗರು ನಾವು
ನನಗೂ ಒದಗಿದೆ ನಿನ್ನೀ ಸ್ಥಿತಿಯೇ."

ಘಲ್ ಘಲ್ಲೆನುತ ಊರೆಲ್ಲ ಓಡಾಡುತ್ತಿದ್ದ
ಕಾಲ್ಗೆಜ್ಜೆಯ ನೆನೆಯಿತು ಮನ.
ಮಲ್ಲಿಗೆಯ ಜೊತೆಗೂಡಿ
ಮುಂದುವರೆಸಿತು ತನ್ನ ಪ್ರಯಾಣ.

ಹುಡುಕುತ ಅಲೆದವು ಪುಷ್ಪ-ಸಿಂಧೂರ
ಕೊನೆಗೆ ಕಪಾಟಿನಲ್ಲಿ ಕಂಡಿತು ನೂಪುರ.
ಭೇಟಿಯಾದವು ಹಸಿರ ಗಾಜಿನ ಬಳೆಗಳನ್ನೂ
ಮತ್ತದೇ ಕಪಾಟಿನ ಮೂಲೆಯಲ್ಲಿ.

ಅಂದು ಒಂದರೆಘಳಿಗೆಯೂ ನಿಲ್ಲದಿದ್ದ
ಗೆಜ್ಜೆಯು ಇಂದು ಮೌನದಿ ಮಲಗಿದೆ.
ಎಲ್ಲ ಕಾರ್ಯಗಳಲ್ಲೂ ತನ್ನ ನಿನಾದ ಹೊಮ್ಮಿಸುತ್ತಿದ್ದ
ಗಾಜಿನ ಬಳೆಗಳೂ ಈಗ ಮೂಲೆಗುಂಪಾಗಿವೆ

ಒಬ್ಬರನ್ನೊಬ್ಬರು ಬಿಟ್ಟಿರದಿದ್ದ ಇವರೆಲ್ಲ
ಎಷ್ಟೋ ವರುಷಗಳ ನಂತರ ಸಂಧಿಸಿದ್ದರೂ ಮಾತೇಕೆ ಒಂದೂ ಇಲ್ಲ?
ಮಾತು ಬೇಕೇ ಇವರ ನಡುವಲ್ಲಿ
ಎಲ್ಲರೂ ತಮಗೊದಗಿರುವ ಸ್ಥಿತಿಗೆ ಕೊರಗುತಿರುವಲ್ಲಿ

ಎಲ್ಲರೊಳಿದ್ದ ಪ್ರಶ್ನೆಗಳಿಷ್ಟೇ
ಬದಲಾಯಿಸಿದ್ದೇನು ನಮ್ಮನ್ನೆಲ್ಲ ಒಂದಾಗಿಸಿದ್ದ "ಆಕೆ"ಯನ್ನು
ಬಿಟ್ಟಿರಲಾಗದಿದ್ದ ನಂಟನ್ನೂ ಕಿತ್ತೆಸೆಯುವಂತೆ
ಭಾವನೆಗಳನ್ನೆಲ್ಲ ಭಸ್ಮ ಮಾಡಿದ್ದು "ಆಕೆ"ಗೆ ಕಂಡೂ ಕಾಣದಂತೆ?

ನಾವೇರದೆತ್ತರಕ್ಕೆ "ಆಕೆ" ಬೆಳೆದಿರುವಳೇ?
ನಮಗೇ "ಆಕೆ"ಯ ಸಿಂಗರಿಸುವ ಅರ್ಹತೆಯಿಲ್ಲವೇ?
ಉತ್ತರಿಸುವವರು ಯಾರು ಈ ಪ್ರಶ್ನೆಗಳಿಗೆ?
ಕೇಳಿಸೀತೇ ಈ ಪ್ರಶ್ನೆಗಳು "ಆಕೆ"ಗೆ?

ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೂ ಚಿಂತೆಯಿಲ್ಲ
ನಮ್ಮೆಲ್ಲರನ್ನೊಮ್ಮೆ ನೋಡು ಗೆಳತಿ.
ಬಿಂಕ ಬಿಗುಮಾನವ ಬಿಟ್ಟು ಒಂದಾಗುವ ನಾವೆಲ್ಲರೂ
ಆ ಹಿಂದಿನ ವೈಭವ ನೆನಪಿಸುವ ನೋಡುವವರ ಕಂಗಳಿಗೂ.