ಓ ಏನಿದು ವಿಜಯ್ ಇಂದ ಫೇಸ್ ಬುಕ್ಕಲ್ಲಿ ಫ್ರೆಂಡ್ ರಿಕ್ವೆಸ್ಟ್. ಎಷ್ಟು ತರ್ಲೆ ಮಾಡ್ತಿದ್ದ ಇವನು. ಈಗ್ಲೂ ಹಾಗೆ ಇದ್ದಾನಾ ಕೇಳ್ಬೇಕು.ನಮ್ ಸ್ಕೂಲ್ ವಿಜಯ್ ನ ಅಕೌಂಟೇ ಇದು. ಅವನೂ ಆನ್ ಲೈನ್ ಇದ್ದಾನೆ.
"ಹಾಯ್ ವಿಜಯ್ ಹೇಗಿದ್ದೀಯೋ? ಯಾವ ಕಾಲೇಜ್ ಸೇರಿಕೊಂಡೆ?”
"ಏನೇ ಚೈತ್ರ....ಕೊನೆಗೂ ಫೇಸ್ ಬುಕ್ ಅಕೌಂಟ್ ಒಪನ್ ಮಾಡಿದ್ಯಲ್ಲ.... ಇನ್ನು ಎಷ್ಟು ವರ್ಷಾನೇ ಕಾಲೇಜಿಗೆ ಹೋಗ್ಲಿ? ನಿನ್ ಜೊತೇನೇ ಎಂ.ಬಿ.ಎ. ಮುಗಿಸಿದ್ನಲ್ಲೇ. ನೀನಿನ್ನು ಕಾಲೇಜಿಗೆ ಹೋಗ್ತಾ ಇದ್ದೀಯಾ?".
"ಸಾರಿ ಮಿಸ್ಟರ್ ವಿಜಯ್ ನಾನು ನೀವೆಣಿಸಿದ ಚೈತ್ರ ಅಲ್ಲ. ನಾವಿಬ್ಬರೂ ಒಂದೇ ಸ್ಕೂಲಿನವರಾದ್ದರಿಂದ ಈ ರೀತಿ ಗೊಂದಲವಾಗಿದೆ. ಕ್ಷಮಿಸಿ”
"ಪರವಾಗಿಲ್ಲ ಬಿಡ್ರೀ. ಇಬ್ರೂ ಒಂದೇ ಸ್ಕೂಲ್ ಅಂದ ಮೇಲೆ ಒಬ್ಬರನೊಬ್ಬರು ನೋಡಿರ್ತೀವಿ. ನೀವು ಸ್ಟೇಟ್ ಲೆವೆಲ್ ಅಲ್ಲಿ ಹಾಡಿ ಬಹುಮಾನ ಪಡೆದಿದ್ದ ಚೈತ್ರಾನಾ?"
"ಹೌದು"
"ನಿಮ್ಮಂಥವರ ಪರಿಚಯ ಆಗಿದ್ದು ಒಳ್ಳೇದಾಯ್ತು ಬಿಡಿ.ನಾನು ಸ್ಕೂಲಲ್ಲೇ ನಿಮ್ಮ ಅಭಿಮಾನಿ. ನಿಮಗಿಂತ ೫ ವರ್ಷ ಸೀನಿಯರ್. ಈಗ ಒಂದು ಎಂ.ಎನ್.ಸಿ ಯಲ್ಲಿ ಕೆಲ್ಸ ಮಾಡ್ತಿದ್ದೀನಿ. ಏನ್ರೀ ಯಾವುದೇ ರಿಯಾಲಿಟಿ ಶೋನಲ್ಲೂ ನಿಮ್ಮ ಮುಖ ಕಾಣಿಸ್ತಿಲ್ಲ"
"ಇಲ್ಲ ನಮ್ಮ ಮನೆಯಲ್ಲಿ ಅದಕ್ಕೆಲ್ಲಾ ಒಪ್ಪೊಲ್ಲ."
"ಹೋ ಹಾಗಾ? ಏನು ಓದ್ತಾ ಇದ್ದೀರಾ ಈಗ?"
"ನಾನು ಇಂಜಿನಿಯರಿಂಗ್ ೫ನೇ ಸೆಮಿಸ್ಟರ್.ಎಂ.ಎಸ್. ರಾಮಯ್ಯ. ಐ.ಎಸ್."
"ಹೋ ನಮ್ ಕಾಲೇಜೇ.ಆದ್ರೆ ನಂದು ಕಂಪ್ಯೂಟರ್ ಸೈನ್ಸ್."
"ಹೌದಾ.."
"ಸರೀ ರೀ ನಾನು ಹೊರಡೋ ಹೊತ್ತಾಯ್ತು. ಇನ್ನೊಮ್ಮೆ ಸಿಗ್ತೀನಿ. ಕೆಲವೊಮ್ಮೆ ಫೇಸ್ ಬುಕ್ ನಲ್ಲಿ ಈ ಥರದ ಗೊಂದಲದಿಂದ ಒಳ್ಳೆ ಫ್ರೆಂಡ್ಸೇ ಸಿಗ್ತಾರೆ. ಬೈ"
ಅಲ್ಲಾ ಗುರುತು ಪರಿಚಯ ಇಲ್ಲದವನ ಜೊತೆ ಅದು ಹೇಗೆ ಮಾತಾಡಲಿ? ನನ್ನ ಫ್ರೆಂಡ್ಸ್ ಲಿಸ್ಟ್ ಇಂದ ಅವನ ಹೆಸರನ್ನ ತೆಗೆದುಬಿಡ್ಲಾ ? ಅಯ್ಯೋ ಕರೆಂಟ್ ಬೇರೆ ಈಗ್ಲೇ ಹೋಗ್ಬೇಕಾ? ನಾಳೆ ನೋಡೋಣ.
*******
"ನಮಸ್ಕಾರ್ರೀ"
"ನಮಸ್ತೆ"
"ಏನ್ರೀ ಇಷ್ಟು ದಿನ ಕಾಣಲೇ ಇಲ್ಲ"
"ಇಂಟರ್ನಲ್ಸ್ ಇತ್ತು. ಓದ್ತಿದ್ದೆ."
"ಓಹ್... ಹೆಂಗ್ ಮಾಡಿದ್ರಿ?"
"ಚೆನ್ನಾಗಿ ಮಾಡಿದೆ."
"ನನ್ನ ಬ್ಲಾಗ್ ನೋಡಿದ್ರಾ?"
"ಇಲ್ಲ"
"ಲಿಂಕ್ ಕಳಿಸ್ತೀನಿ. ನೋಡಿ ಹೇಳಿ ಹೇಗಿದೆ ಅಂತ."
"ಚೆನ್ನಾಗಿದೆ ನಿಮ್ಮ ಬ್ಲಾಗ್"
"ಥ್ಯಾಂಕ್ಸ್... ನೀವು ಬರೀತೀರಾ?"
"ಸ್ಕೂಲಲ್ಲಿ ಬರೀತಿದ್ದೆ. ಈಗ ಬರೀತಿಲ್ಲ"
"ಯಾಕ್ರೀ ಬಿಟ್ರೀ? ನೀವು ಒಂದು ಬ್ಲಾಗ್ ಶುರು ಮಾಡಿ. ಗೊತ್ತಿರೋದನ್ನ ಹಂಚಿಕೊಂಡ್ರೆ ಹೆಚ್ಚು ಖುಷಿ"
"ಸರಿ ಪ್ರಯತ್ನ ಪಡ್ತೀನಿ."
"ಪ್ರಯತ್ನ ಪಡ್ತೀನಿ ಅಂತ ಅಲ್ಲಾ ಬ್ಲಾಗ್ ಶುರು ಮಾಡ್ತೀನಿ ಅಂತ ಹೇಳ್ರೀ"
":) ಸರಿ ಶುರು ಮಾಡ್ತೀನಿ"
"thats like a good girl. ನಿಮ್ಮ ಬ್ಲಾಗ್ ಓದೋದಕ್ಕೆ ಕಾಯ್ತಾ ಇರ್ತೀನಿ"
":)"
ಅಲ್ಲ ಪರಿಚಯ ಆಗಿ ಇನ್ನೂ ಒಂದು ವಾರಾನೂ ಆಗಿಲ್ಲ ಆಗ್ಲೇ ಇಷ್ಟು ಸಲುಗೆಯಿಂದ ಮಾತಾಡ್ತಾನಲ್ಲ ಇವನ ಜೊತೆ ಫ್ರೆಂಡ್ ಶಿಪ್ ಮುಂದುವರೆಸಲಾ ಬೇಡ್ವಾ? ಸ್ವಲ್ಪ ತಲೆ ತಿಂತಾನೆ ಅನ್ನೋದನ್ನ ಬಿಟ್ರೆ ಅವನಿಂದ ನನಗೇನು ತೊಂದ್ರೆಯಾಗಿಲ್ಲವಲ್ಲ. ನೋಡೋಣ ನಮ್ ಕಾಲೇಜಲ್ಲೇ ಸೀನಿಯರ್ ಬೇರೆ. ಏನಾದ್ರೂ ತಿಳಿದುಕೊಳ್ಳಬೇಕು ಅಂದ್ರೆ ಹೆಲ್ಪ್ ಆಗುತ್ತೆ.
*******
"ನೀವು ಇಷ್ಟು ಚೆನ್ನಾಗಿ ಕವನ ಬರೀತೀರ ಅಂತ ಗೊತ್ತೇ ಇರ್ಲಿಲ್ಲ"
"ಕವಯಿತ್ರಿ ಅಂತ ಹೇಳಿಕೊಂಡು ನಾನು ಬರೆಯೋದೆಲ್ಲಾ ಕವನ ಅಂತ ಹೇಳಿಕೊಳ್ಳೋ ಅಷ್ಟೇನು ನಾನು ಚೆನ್ನಾಗಿ ಬರೆಯೊಲ್ಲ ಅಂತ ನಂಗೆ ಗೊತ್ತು. ಏನೋ ನನಗೆ ಹೊಳೆದ ನಾಲ್ಕು ಸಾಲು ಬರೀತೀನಿ ಅಷ್ಟೇ"
"ಏನೇ ಹೇಳ್ರಿ ನನಗಿಂತ ಚೆನ್ನಾಗಿ ಬರೀತೀರಾ.ಬರೆಯೋದನ್ನಂತೂ ಬಿಡ್ಬೇಡ್ರೀ... ಅಂದ ಹಾಗೆ ಯಾಕೆ ಈ ಸ್ಟೇಟಸ್ ':(' ? "
"ಅದಾ... ನಾನು ನನ್ನ ರೆಸ್ಯುಮೆ ತಯಾರು ಮಾಡ್ಬೇಕು. ಏನು ಬರೀಬೇಕು ಏನು ಬರೀಬಾರ್ದು ಒಂದು ಗೊತ್ತಾಗ್ತಿಲ್ಲ. ಕಂಫ್ಯೂಸ್ ಆಗಿದ್ದೀನಿ"
"ಅಷ್ಟೇನಾ ಅದಕ್ಯಾಕೆ ಅಷ್ಟೊಂದು ಯೋಚ್ನೆ ಮಾಡ್ತೀರಾ...ಒಂದೆರಡು ಸ್ಯಾಂಪಲ್ ರೆಸ್ಯುಮೆ ಕಳಿಸ್ತೀನಿ. ಅವನ್ನ ನೋಡಿ ನಿಮಗೊಂದು ಐಡಿಯಾ ಬರಬಹುದು"
"ತುಂಬಾ ಥ್ಯಾಂಕ್ಸ್"
"ಥ್ಯಾಂಕ್ಸ್ ಎಲ್ಲಾ ಯಾಕ್ರೀ...ನಿಮ್ ಸೀನಿಯರ್ ಆಗಿ ನಿಮ್ಮನ್ನ ಗೈಡ್ ಮಾಡೋದ್ ನನ್ ಡ್ಯುಟಿ"
":)"
ಒಳ್ಳೆ ಹುಡುಗ ಅನಿಸುತ್ತೆ. ನಾನೇ ಸುಮ್ನೆ ಏನೇನೋ ಯೋಚ್ನೆ ಮಾಡ್ತಿದ್ದೆ. ನನ್ನ ಬಗ್ಗೆ ಎಷ್ಟು ಕೇರ್ ತಗೊಳ್ತಾನೆ. ಬಹುಶಃ ನಾವಿಬ್ರೂ ಈ ರೀತಿ ಮೀಟ್ ಮಾಡ್ಬೇಕು ಅನ್ನೋದು ದೇವರ ಆಸೆ ಅನಿಸುತ್ತೆ. ಯಾರು ಏನು ಅಂತ ಗೊತ್ತಿಲ್ದೆ ಅವನ ಜೊತೆ ಇಂಥ ಫ್ರೆಂಡ್ ಶಿಪ್ ಮುಂದುವರೀತಾ ಇದೆ.Hope this friendship continues forever...
*******
"ರಿಸಲ್ಟ್ ಏನಾಯ್ತ್ರೀ?"
"ನಂಗೆ ೯.೨೫ ಬಂತು"
"ಹೋ ಕಂಗ್ರಾಟ್ಸ್ ರೀ... ಇಷ್ಟೊಂದು ಮಾರ್ಕ್ಸ್ ತಗೊಂಡು ನೀವು ನನಗಿಂತ ಜಾಸ್ತಿ ಮಾರ್ಕ್ಸ್ ತಗೊಂಡಿರೋನೇ ಬೇಕು ಅಂದ್ರೆ ನಿಮ್ಮಪ್ಪ ಅಮ್ಮಂಗೆ ಹುಡುಕೋಕೆ ಕಷ್ಟ ಆಗುತ್ತೆ"
"ಅದು ಬಿಡ್ರೀ...ಅದು ಅವರ ತಲೆ ನೋವು...ನನಗಿನ್ನೂ ಟೈಮಿದೆ... ಮದ್ವೆ ಆಗೋ ಸಮಯಕ್ಕೆ ಯೋಚ್ನೆ ಮಾಡಿದ್ರೆ ಆಯ್ತು"
"ಒಂದು ಮಾತಂತೂ ನಿಜ ಕಣ್ರೀ. ನಿಮ್ ಕೈ ಹಿಡಿಯೋ ಹುಡುಗ ಅದೃಷ್ಟ ಮಾಡಿರ್ತಾನೆ"
"ತುಂಬಾ ಏರಿಸ್ತಾ ಇದ್ದೀರಾ ಆಮೇಲೆ ನನ್ನ ಕೆಳಗಿಳಿಸೋಕೆ ಏಣಿ ತರ್ಬೇಕಾಗುತ್ತೆ ಅಷ್ಟೇ"
"ತರೋಣ ಬಿಡಿ....ಅಲ್ಲಾ..ನಾವು ಫೇಸ್ ಬುಕ್ ಮೂಲಕ ಪರಿಚಯ ಆಗಿ ಹತ್ ಹತ್ರ ೬ ತಿಂಗಳಾಯ್ತು. ನೀವು ನಂಗೆ ತುಂಬಾ ಇಷ್ಟ ಆಗ್ಬಿಟ್ಟಿದ್ದೀರಾ.. ನಿಮ್ಮ ಮುಗ್ಧತೆ, ಮಗುವಿನಂಥಾ ಮನಸು, ನಿಮ್ಮ ಕವನ ಎಲ್ಲಾ ತುಂಬಾ ಇಷ್ಟ ಆಗಿದೆ."
"ನಂಗೂ ಅಷ್ಟೇ... ನಮ್ಮಿಬ್ಬರ ಆಲೋಚನಾ ಶೈಲಿ ಬೇರೆ ಇದ್ರೂ ಇಬ್ಬರೂ ನಮ್ಮ ನಮ್ಮ ವಿಷಯವನ್ನು ಪ್ರಸ್ತಾಪಿಸಿದಾಗ ಡಿಸ್ಕಸ್ ಮಾಡಿ ಸರಿ ಯಾವುದು ತಪ್ಪು ಯಾವುದು ಅಂತ ನಿರ್ಧರಿಸೋದು ನನಗೆ ತುಂಬಾ ಇಷ್ಟ ಆಗುತ್ತೆ."
"ಹೌದ್ರೀ...ಸರಿಯಾಗಿ ಹೇಳಿದ್ರಿ.You are more than a friend to me"
" :) "
ಅವನು ನನ್ನ ಇಷ್ಟ ಪಡ್ತಾ ಇದ್ದಾನಾ? ಒಳ್ಳೆ ಹುಡುಗ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಲ್ಲ ಅಂದ್ರೆ ಪರಿಚಯ ಆಗಿ ಇಷ್ಟು ದಿನ ಆದ್ರೂ ಒಂದು ದಿನ ಕೂಡ ಮಿಸ್ ಬಿಹೇವ್ ಮಾಡಿಲ್ಲ. ಅವನು ನನ್ನ ಇಷ್ಟ ಪಡ್ತಾ ಇದ್ರೆ ನಾನು ಖಂಡಿತ ಅವನನ್ನ ಒಪ್ಪಿಕೊಳ್ತೀನಿ... ಮನೇಲೂ ನನ್ನಿಷ್ಟಕ್ಕೆ ಒಪ್ತಾರೆ. ಆದ್ರೆ ನಾನಿನ್ನು ಚಿಕ್ಕವಳು. ಈಗ್ಲೇ ಇದರ ಬಗ್ಗೆ ಎಲ್ಲಾ ಯೋಚ್ನೆ ಬೇಡ. ಈಗ ಓದೋ ವಯಸ್ಸು. ನಾನು ಓದ್ಬೇಕು ಅಷ್ಟೇ.
*******
"ವಿಜಯ್, ನಿಮಗೊಂದು ಗುಡ್ ನ್ಯೂಸ್"
"ನಿಮಗೂ ಒಂದು ಗುಡ್ ನ್ಯೂಸ್"
"ಏನದು ಗುಡ್ ನ್ಯೂಸ್?"
"ಮೊದಲು ನೀವು ಹೇಳಿ"
"ನಾನು ಪ್ಲೇಸ್ ಆದೆ. ಡೆಲಾಯ್ಟ್ ನಲ್ಲಿ"
"ಹೋ ಕಂಗ್ರಾಟ್ಸ್. ಟ್ರೀಟ್ ಯಾವಾಗ?"
"ನೀವು ಸಿಕ್ಕಾಗ"
"ಸರಿ ಈ ಸಂಡೆ ಚಂದ್ರಾ ಲೇ ಔಟಲ್ಲಿರೋ ಪೋಲಾರ್ ಬೇರ್ ಅಲ್ಲಿ ಮೀಟ್ ಮಾಡೋಣ. ಟ್ರೀಟ್ ಕೊಡಿಸುವಿರಂತೆ"
"ನಿಮ್ ಗುಡ್ ನ್ಯೂಸ್ ಏನು ಅಂತ ಹೇಳಲೇ ಇಲ್ಲ"
"ಸಂಡೇ ಮೀಟ್ ಮಾಡ್ತೀವಲ್ಲಾ ಆಗ ಹೇಳ್ತೀನಿ"
ಮೊದಲ ಸಲ ಮೀಟ್ ಮಾಡ್ತಾ ಇದ್ದೀವಿ. ಹೇಳಿ ಬಿಡ್ಲಾ ನೀವು ಅಂದ್ರೆ ನನಗೆ ತುಂಬಾ ಇಷ್ಟ ಅಂತ. ಛೆ ಛೆ ಬೇಡ.. ಮೊದಲ ಸಲಾನೇ ಈ ಹುಡ್ಗಿ ಏನು ಹೀಗೆ ಮಾತಾಡ್ತಾ ಇದ್ದಾಳೆ ಅಂತ ನನ್ನ ಜೊತೆ ಮಾತಾಡೋದನ್ನೇ ನಿಲ್ಲಿಸಿಬಿಟ್ರೆ. ಬೇಡ ಅವರೂ ನನ್ನ ಇಷ್ಟ ಪಡ್ತಾರಾ ಅಂತ ತಿಳಿದುಕೊಂಡು ಆಮೇಲೆ ಹೇಳಿದ್ರಾಯ್ತು.
*******
"ಚೈತ್ರ ಅಂದ್ರೆ ನೀವೇನಾ?"
"ಹೌದು...ನೀವು ವಿಜಯ್?"
"ಹೌದು"
"ನಿಮ್ಮನ್ನ ನೋಡಿ ತುಂಬಾ ಖುಷಿಯಾಯ್ತು"
"ನಂಗೂ ಅಷ್ಟೇ"
"ಅಲ್ರೀ ನಿಮ್ಮನ್ನ ಮೊದಲ ಸಲ ಭೇಟಿಯಾಗ್ತಿರೋದು ಅಂತ ಅನ್ನಿಸ್ತಾನೇ ಇಲ್ಲ."
"ಸುಮಾರು ಒಂದುವರೆ ವರ್ಷದಿಂದ ಪರಿಚಿತರಲ್ವಾ ಅದಕ್ಕೆ"
"ಅದು ನಿಜ ಬಿಡಿ. ಅದೂ ಬೇರೆ ಸ್ಕೂಲ್ ಫಂಕ್ಷನ್ ಅಲ್ಲೆಲ್ಲಾ ನಿಮ್ಮನ್ನ ನೋಡಿದ್ನಲ್ಲಾ... ಈಗ್ಲೂ ಹಾಗೇ ಇದ್ದೀರಾ"
"ಹೌದು ಎಲ್ರೂ ಹಾಗೇ ಹೇಳ್ತಾರೆ ಸ್ವಲ್ಪಾನೂ ಬದಲಾಗಿಲ್ಲ ನೀನು ಅಂತ. ಆಮೇಲೆ ಗುಡ್ ನ್ಯೂಸ್ ಅಂತ ಹೇಳಿದ್ರಲ್ಲ ಏನದು?"
"ನಾವಿವತ್ತು ಮೀಟ್ ಮಾಡದೇ ಇದ್ರೂ ಇನ್ನೊಂದು ವಾರದಲ್ಲಿ ಖಂಡಿತ ಮೀಟ್ ಮಾಡ್ತಿದ್ವಿ. ಯಾಕಂದ್ರೆ ನಿಮ್ಮ ಫ್ರೆಂಡ್ ಮದ್ವೆ ಅಂತ ಕರೆದ್ರೆ ನೀವು ಬರ್ದೇ ಇರ್ತಿರ್ಲಿಲ್ಲ ಅಲ್ವಾ"
"ಹೋ.. ನಿಮ್ಮ ಮದ್ವೆನಾ?? ಯಾರು ಆ ಅದೃಷ್ಟವಂತೆ?"
"ಚೈತ್ರ"
"???"
"ನನ್ನ ಕ್ಲಾಸ್ ಮೇಟ್. ಇಬ್ರೂ ಒಂದೇ ಸ್ಕೂಲ್. ಒಟ್ಟಿಗೆ ಎಂ.ಬಿ.ಎ. ಮಾಡಿದ್ವಿ, ಇನ್ ಫಾಕ್ಟ್ ಅವಳಿಗೆ ಕಳಿಸಬೇಕಿದ್ದ ರಿಕ್ವೆಸ್ಟ್ ನಿಮಗೆ ಬಂದಿದ್ದು. "
"ಹೋ ಹೌದಲ್ಲಾ... "
"ನೀವು ಖಂಡಿತಾ ಬರಬೇಕು. ನಾನು ಚೈತ್ರಳಿಗೆ ನಿಮ್ಮ ಬಗ್ಗೆ ತುಂಬಾ ಹೇಳಿದ್ದೀನಿ. ಅವಳು ನಿಮ್ಮನ್ನ ಮೀಟ್ ಮಾಡ್ಬೇಕು ಅಂತ ತುಂಬಾ ಇಷ್ಟ ಪಡ್ತಿದ್ದಾಳೆ."
"ನನಗೆ ನಿಮ್ಮಂಥ ಒಳ್ಳೆ ಫ್ರೆಂಡ್ ಸಿಗೋದಕ್ಕೆ ಕಾರಣರಾದ ಚೈತ್ರಳನ್ನು ನಾನೂ ಮೀಟ್ ಮಾಡ್ಬೇಕು"
"ಸರೀ ರಿ ಇನ್ನೊಮ್ಮೆ ಫ್ರೀಯಿದ್ದಾಗ ಸಿಗ್ತೀನಿ.ಇದು ನನ್ನ ಮದ್ವೆ ಕಾರ್ಡು.. ತಪ್ಪದೇ ಮದುವೆಗೆ ಬರಬೇಕು.... "
"ಸರಿ. ಸಂಡೇ ಅಲ್ಲ ಖಂಡಿತಾ ಬರ್ತೀನಿ.. It was a pleasure meeting u"
"same here"
ಅಲ್ಲಾ ಅವನ ಮನಸಲ್ಲೇನಿದೆ ಅಂತ ತಿಳಿದುಕೊಳ್ದೇ ಏನೇನೋ ಯೋಚ್ನೆ ಮಾಡಿದ್ದು ನನ್ನ ತಪ್ಪು.ವಿಜಯ್ ಚೈತ್ರ ಖುಷಿಯಾಗಿರ್ಲಿ. ಏನೇ ಆಗ್ಲಿ ಚೈತ್ರ ನಿಜವಾಗ್ಲೂ ಅದೃಷ್ಟವಂತೆ. ನಾನೂ ಅದೃಷ್ಟವಂತೇನೇ ಇಲ್ಲಾ ಅಂದ್ರೆ ವಿಜಯ್ ನಂಥ ಒಳ್ಳೆ ಫ್ರೆಂಡ್ ನಂಗೆ ಸಿಗ್ತಿದ್ನಾ??
*******