Friday, July 24, 2015

ಪ್ರಕೃತಿ

ನಾ ಬೇಡಿದೆ

ಜೀವನದಾ ಬಳ್ಳಿಯು ಸೊರಗುತಿರುವಾಗ
ನೀರಿಲ್ಲದೆ ತಾ ಒಣಗುತಿರುವಾಗ
ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ
ಚಿಗುರುವ ಚೈತನ್ಯ ತುಂಬುವ
ಸುಧೆಯಾಗು ನೀನು, ಮಳೆಯಾಗು ನೀನು ……

ನಿರಾಸೆಯ ಗವಿಯ ನಾ ಹೊಕ್ಕಿರುವಾಗ
ಕತ್ತಲ ಭೀತಿಯಿಂದ ತತ್ತರಿಸಿರುವಾಗ
ಭಯಾನಕ ಕಗ್ಗತ್ತಲ ಕೊಂದು
ಬಾಳ ದಾರಿಯ ತೋರುವ
ಆಶಾಕಿರಣವಾಗು ನೀನು, ಬೆಳಕಾಗು ನೀನು…….

ಕಷ್ಟಗಳ ಚಳಿಯಲ್ಲಿ ನಾ ನಡುಗಿರುವಾಗ
ದುಷ್ಟರ ಅಟ್ಟಹಾಸದೆದುರು ಕಂಗೆಟ್ಟಿರುವಾಗ
ಚಳಿಯ ಮಾರುತಗಳ ಎದುರಿಸಿ
ದುಷ್ಟರ ಹಾದಿಯನು ದುರ್ಗಮಗೊಳಿಸುವ
ತಡೆಯಾಗು ನೀನು, ಹೆಬ್ಬಂಡೆಯಾಗು ನೀನು…….

ಭವದ ಬೇಗೆಯಲಿ ನಾನು ಬೇಯುತಿರುವಾಗ
ನೋವುಗಳ ತಾಪದಿ ಪರಿತಪಿಸಿರುವಾಗ
ಬಿಸಿಲ ಬೇಗೆಯ ತಣಿಸಿ
ಜೀವಕ್ಕೆ ತಂಪನ್ನೀಯುವ
ವರವಾಗು ನೀನು, ತಂಗಾಳಿಯಾಗು ನೀನು……

ಅಶರೀರ ವಾಣಿಯೊಂದು ನುಡಿಯಿತು

ಹೀಗೇಕೆ ಬೇಡುತಿರುವೆ ನೀ ನನನ್ನು
ಗುರುತಿಸಿಲ್ಲವೇ ನೀನು ನಿನ್ನ ಶಕ್ತಿಯನ್ನು?

ನಿನಗಿರುವ ಗುರಿ ನಿನ್ನಾಕಾಂಕ್ಷೆಯ ಕಾಮನಬಿಲ್ಲು
ನಿನ್ನ ಶ್ರಮವೇ ಅದಕೆ ನೀರೆರೆವ ಮಳೆ
ನಿನ್ನ ಛಲವೇ ನಿನಗೆ ದಾರಿ ತೋರುವ ಬೆಳಕು
ನಿನ್ನ ಧೈರ್ಯವೇ ಹೆಬ್ಬಂಡೆ
ನಿನ್ನ ಜೀವನದಲ್ಲಿರುವ ಪ್ರೀತಿ ವಿಶ್ವಾಸಗಳೇ ತಂಗಾಳಿ

ಈ ಶಕ್ತಿಗಳಿದ್ದು ಈ ದೈನ್ಯತೆ ನಿನಗೇಕೆ?
ನೀ ಸಮರ್ಥನಾಗಿರುವಾಗ ನನ್ನ ಹಂಗೇಕೆ?
ಇವೆಲ್ಲವುಗಳ ಸದ್ವಿನಿಯೋಗ ನೀ ಮಾಡು
ಸಿಗುವುದು ಕೀರ್ತಿ- ಯಶಸ್ಸು ನೀ ನೋಡು…..


ಹೌದಲ್ವೆನ್ರಿ ನಾವೇನೇನನ್ನು ಬಯಸುತ್ತೇವೋ ಅದೆಲ್ಲ ನಮ್ಮಲ್ಲೇ ಇದೆ…..ಹಾಗಾಗಿ ನಾವು ಈಗ ಇರೋ ಪರಿಸ್ಥಿತಿಗೆ ನಾವೇ ಜವಾಬ್ದಾರರು….ಒಳ್ಳೆಯದಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ನಮ್ಮಿಂದಲೇ ಆಗಿರುತ್ತೆ. ನಮಗಿರುವ ಎಲ್ಲ ಸದ್ಗುಣಗಳ ಉಪಯೋಗದಿಂದ ಈ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದವರು ನಾವೇ ಅಲ್ವ…… ನಮ್ಮ ಜೀವನವನ್ನು ಬೇರೆ ಯಾರೋ ಬಂದು ಸುಧಾರಿಸಲಿ ಅನ್ನೋದು ಮೂರ್ಖತನ ಅಲ್ವ……..ನೀವೇ ಯೋಚನೆ ಮಾಡಿ………

Friday, June 12, 2015

ವಾಗರ್ಥ

ಈ ಮಾತುಗಳೇಕೆ ಹೀಗೆ?
ಹೇಳಿದರೂ ಹೇಳದಂತೆ,
ಕೇಳಿದರೂ ಕೇಳದಂತೆ,
ಅರಿತರೂ ಅರಿಯದಂತೆ!

ಪದಗಳನ್ನು ಪೋಣಿಸಿದ
ಮಾತುಗಾರನ ಆಂತರ್ಯದಲ್ಲಿ
ಹೇಳಲೇ, ಹೇಳದೇ ಉಳಿದುಬಿಡಲೇ
ಎಂಬ ಗೊಂದಲದ ನೆರಳು!

ಕಿವಿಗೆ ಬಿದ್ದ ಸ್ವರವ ಆಯ್ದ
ಕೇಳುಗನ ಅಂತರಾಳದಲ್ಲಿ
ಕೇಳಿದ ಮಾತು ಸತ್ಯವೇ ಅಥವಾ
ಕೇಳಿದ್ದೇ ಸುಳ್ಳೇ ಎಂಬ ಗೋಜಲು

ಪುನರಚಿತ ಶಬ್ದ ಮಾಲೆಗೆ
ಅರ್ಥ ತುಂಬುವ ಕೇಳುಗನಿಗೆ
ಕಹಿ ಸತ್ಯದ ದರ್ಶನವಾದರೆ,
ತಿಳಿದದ್ದೂ ತಿಳಿಯದಂಥ ಕತ್ತಲು!

ಹೇಳುಗನು ಹೇಳಬಯಸುವ ಮಾತು
ಕೇಳುಗನು ಕೇಳಬಯಸುವ ಮಾತಿನ
ಅರ್ಥ ವ್ಯತ್ಯಾಸದಲಿ ಕಳೆದುಹೋದರೆ,
ಈ ಮಾತಿನರ್ಥ ಯಾರ ಸ್ವತ್ತು?

Saturday, January 31, 2015

ಕನಸೇ….

-->
ಈ ಜಗತ್ತಲ್ಲಿ ಯಾರಿಗೆ ತಾನೆ ಕನಸುಗಳು ಬೀಳೋದಿಲ್ಲ ಹೇಳ್ರಿ… ಕೆಲವರು ಮಲಗಿದ್ದಾಗಷ್ಟೇ ಕನಸು ಕಂಡರೆ ಕೆಲವರು ಜಾಗೃತರಾಗಿದ್ದಾಗಲೇ ಕನಸು ಕಾಣುತ್ತಾರೆ… ಕೆಲವರು ಕಂಡ ಕನಸನ್ನು ನನಸಾಗಿಸಿದರೆ ಕೆಲವರು ಆ ಕನಸು ನನಸಾಗಿಸುವ ಪ್ರಯತ್ನವನ್ನೇ ಮಾಡುವುದಿಲ್ಲ… ನಾವು ಅದಕ್ಕೆ ಗಮನ ಕೊಡಲಿ ಕೊಡದೆ ಇರಲಿ ಕನಸುಗಳನ್ನಂತು ಕಾಣುತ್ತಲೇ ಇರುತ್ತೇವೆ… ಅಲ್ವ..
ರಾತ್ರಿ ಮಲಗಿದ್ದಾಗ ಕಾಣೋ ಕನಸುಗಳು ಕೆಲವೊಮ್ಮೆ ನಗು ತರುವಂಥವಾಗಿರುತ್ತವೆ… ಇಂಥ ಸಂದರ್ಭಗಳು ನಮ್ಮ ಜೀವನದಲ್ಲಿ ಬರಲು ಸಾಧ್ಯವೇ ಇಲ್ಲ ಅಂತ ಅನ್ನಿಸೋದು ಅಷ್ಟೆ ನಿಜ…. ಕಾಣದ ಎಷ್ಟೋ ಸುಂದರ ತಾಣಗಳಲ್ಲಿ ವಿಹರಿಸಿದ್ದೇನೆ… ಕಲ್ಪನೆಗೆ ನಿಲುಕದ ಮನೋಹರ ದೃಶ್ಯಗಳನ್ನು ಕಂಡಿದ್ದೇನೆ …. ಕೆಲವು ಕನಸುಗಳಂತೂ ನಿಜವಾದರೆ ಎಷ್ಟು ಚಂದ ಅಂತ ಯೋಚನೆ ಮಾಡಿದ್ದೀನಿ…. ಒಂದು ಸುಂದರಲೋಕ ತನ್ನಷ್ಟಕ್ಕೆ ತಾನೆ ತೆರೆದುಕೊಳ್ಳುತ್ತಾ ಹೋದಂತೆ ಅದರಲ್ಲೇ ಲೀನವಾಗಿ ಅಂಥ ಮೋಹಕತೆಗೆ ಮರುಳಾಗಿ ಮತ್ತೆ ವಾಸ್ತವ ಸ್ತಿತಿಗೆ ಮರಳಿದಾಗ ಇನ್ನೊಂದಿಷ್ಟು ಹೊತ್ತು ಹಾಗೆ ಇರಬಾರದಾಗಿತ್ತ ಅಂತ ಬೇಸರಾನು ಪಟ್ಟಿದ್ದೀನಿ…..
ಕೆಲವೊಮ್ಮೆ ಅಷ್ಟೆ ಭಯಾನಕ ಕನಸುಗಳನ್ನು ಕಂಡು ಬೆಚ್ಚಿ ಬಿದ್ದದ್ದು ಇದೆ… ಆದ್ರೆ ಅದೇನಿದ್ದರು ಚಿಕ್ಕ ವಯಸ್ಸಿಗೆ ಸೀಮಿತವಾಗಿತ್ತು….. ಈಗ ಅಂತ ಭಯ ಹುಟ್ಟಿಸುವ ಕನಸುಗಳನ್ನು ಕಂಡದ್ದೇ ಇಲ್ಲ… ನಾನು ಚಿಕ್ಕವಳಿದ್ದಾಗ ಒಂದು ಸಿನಿಮ ನೋಡಿ ಎಷ್ಟು ಭಯ ಪಟ್ಟಿದ್ದೆ ಅಂದ್ರೆ… ಕಣ್ಣು ಮುಚ್ಚಿಇನ್ನೇನು ನಿದ್ದೆ ಬಂತು ಅಂದ್ರೆ ಅದೇ ಚಿತ್ರಗಳು…. ಸುಮಾರು ೧೫ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ… ಆದ್ರೆ ಈಗ ಅದನ್ನು ನೆನೆಸಿಕೊಂಡರೆ ನಗು ಬರುತ್ತೆ…. ಅದರಲ್ಲಿ ಅಷ್ಟು ಹೆದರಿಕೊಳ್ಳುವಂಥದ್ದು ಏನು ಇರಲಿಲ್ಲ ಅಲ್ವ ಅಂತ ನಕ್ಕು ಸುಮ್ಮನಾಗ್ತೀನಿ ಅಷ್ಟೆ…
ಬರಿ ಇದಷ್ಟೇ ಕನಸಲ್ಲ ಅಲ್ವ…. ನಾವು ಜಾಗೃತರಾಗಿದ್ದಾಗ ನಮ್ಮ ಮುಂದಿನ ಜೀವನ ಹೀಗೆ ಇರಬೇಕು ಅಂತ ನಾವು ಹಾಕೋ ಯೋಜನೆಗಳನ್ನು ನಾವು ಕನಸುಗಳು ಅಂತಾನೆ ಕರೆಯೋದು ಅಲ್ವ…. ಈ ಮುಂಚೆ ಹೇಳಿದ ಕನಸುಗಳು ನಿದ್ದೆಯಲ್ಲಿ ಗೋಚರಿಸಿದರೆ ಈ ಕನಸುಗಳು ನಮಗೆ ನಿದ್ದೆಮಾಡಲು ಬಿಡುವುದಿಲ್ಲ…. ಕಂಡ ಕನಸು ಬರಿ ಕನಸಾಗಿಯೇ ಮಣ್ಣಾಗುವುದಕ್ಕೆ ಬಿಡದೆ ಆ ಕನಸನ್ನು ಬೆನ್ನಟ್ಟಿ ಅದನ್ನು ನನಸು ಮಾಡಿಯೇ ತೀರಬೇಕೆಂಬ ಛಲ ನಮ್ಮಲ್ಲಿ ಉದಯವಾದರೆ ನಮ್ಮನ್ನು ತಡೆಯುವವರು ಯಾರು ಇರೋಲ್ಲ ನೀವೇನಂತೀರಿ?
ಇತ್ತೀಚ್ಗೆ ನಾನು ಓದಿದ “THE ALCHEMIST” ಎಂಬ ಕಥೆಯಲ್ಲಿ ನನಗಿಷ್ಟವಾಗಿದ್ದು ಅದೇ ಸಾಧಿಸಿಯೇ ತೀರಬೇಕೆಂಬ ಕಥಾನಾಯಕನ ಛಲ… ಏನೇ ಕಷ್ಟ ಎದುರಾದರು ಅದನ್ನು ಸಮರ್ಥವಾಗಿ ಎದುರಿಸಿ ನಮ್ಮ ಕನಸಿಗೆ ಸಾಕಾರ ರೂಪ ಕೊಡುವ ಹಂಬಲ, ಅದನ್ನು ಕಾರ್ಯರೂಪಕ್ಕೆ ತರಬೇಕೆಂಬ ದೃಢ ನಿರ್ಧಾರ ಜೊತೆಗಿದ್ದರೆ ಅಸಾಧ್ಯವಾದ ಕೆಲಸ ಯಾವುದು ಇಲ್ಲ……
ನಾವೆಲ್ಲರೂ ನಮ್ಮ ಜೀವನ ಹೀಗೆ ಇರಬೇಕೆಂದು ಕನಸು ಕಂಡೆ ಇರುತ್ತೇವೆ…. ಆದರೆ ಅದು ನನಸಾಗುವುದಕ್ಕೆ ಬೇಕಾದಷ್ಟು ಸಮಯ ಇದೆಅಂತ ಕೈ ಕಟ್ಟಿ ಕೂರುವುದಕ್ಕಿಂತ ಆ ಗುರಿಯತ್ತ ಸಾಗುವ ಸಲುವಾಗಿ ನಮ್ಮ ಪಾಲಿನ ಕರ್ತವ್ಯವನ್ನು ಮಾಡಲೇಬೇಕು ಅಲ್ವ… ಆದರೆ ಆಕನಸುಗಳು practical ಆಗಿ ಇರಬೇಕು ಅನ್ನೋದನ್ನು ನಮ್ಮ ಮನಸಲ್ಲಿಟ್ಟುಕೊಂಡಿರಬೇಕು…
ನಾವು ಕಂಡ ಕನಸುಗಳಲ್ಲಿ ಕೆಲವು ನಿಜವಾಗಿದ್ದರೆ ಎಷ್ಟು ಚೆನಾಗಿರ್ತಿತ್ತು ಅಂತ ಹೇಗೆ ಯೋಚಿಸ್ತೀವೋ ಹಾಗೆ ಕೆಲವು ನಮ್ಮ ಬಾಳಹಾದಿಯಲ್ಲಿ ಯಾವುದೇ ಕಾರಣಕ್ಕೂ ಇದಿರಾಗದೆ ಇರಲಿ ಅಂತಾನು ಬಯಸ್ತೀವಿ…. ಕಂಡ ಕನಸೆಲ್ಲ ನನಸಾಗದೇ ಇರಬಹುದು ಆದರೆ ಅದನ್ನು ಸಾಧಿಸುವ ನಮ್ಮ ಹಾದಿಗೆ ಯಾವತ್ತು ಮಬ್ಬು ಆವರಿಸಲು ಬಿಡದೆ ಅದರತ್ತ ಇಡುವ ಪ್ರತಿ ಹೆಜ್ಜೆಯೂ ಮುಂದೆಯೇ ಇಡಬೇಕು …. ಯಾವುದೋ ಒಂದು ವಿಘ್ನ ಎದುರಾಯಿತೆಂದು ನಮ್ಮ ಹೆಜ್ಜೆ ಹಿಂದೆ ಸರಿಯಬಾರದು…. ವಿಘ್ನಗಳಿರೋದೆ ನಮಗೆ ತೊಡುಕುಂಟು ಮಾಡೋಕೆಅಲ್ವ….
ಹಗಲುಗನಸನ್ನು ಯಾರು ಬೇಕಾದ್ರೂ ಕಾಣುತ್ತಾರೆ ಆದರೆ ಅದು ನಿಜ ಜೀವನದಲ್ಲಿ ರೂಪ ಪಡೆಯುವುದನ್ನು ಕಾಣುವುದು ಎಲ್ಲರಿಗೂ ಸಾಧ್ಯವಿಲ್ಲ….. ಏನೇ ಆಗಲೀ ನಿಮ್ಮ practical ಕನಸುಗಳೆಲ್ಲ ನನಸಾಗಲಿ….

Monday, December 8, 2014

ಸ್ನೇಹ

ಧ್ವನಿಯಾಗುವ ಮೊದಲೇ
ಹೃದಯದ ಮಾತನ್ನರಿಯುವ
ಮಾಯಾಶಕ್ತಿ ಸ್ನೇಹ

ಸೋತು ಬಳಲಿದ ಜೀವಕೆ
ಭರವಸೆಯ ತುಂಬುವ
ಜೀವ ಚೈತನ್ಯ ಸ್ನೇಹ

ಕಂಡ ಕನಸನು ಕಾಯ್ದು
ತಪ್ಪಿಲ್ಲದೆ ಗುರಿ ತಲುಪಿಸುವ
ಮಾರ್ಗದರ್ಶಕ ಸ್ನೇಹ

ಕಂಬನಿ ತುಂಬಿದ ಮೊಗದಿ
ನಗೆಯ ಹೂವನ್ನರಳಿಸುವ
ವಿದೂಷಕ ಸ್ನೇಹ

ಮನಕೆ ಇರುಳಾವರಿಸಿದಾಗ
ಪ್ರೀತಿಯ ಬೆಳಕಿನೆಡೆಗೊಯ್ಯುವ
ದಿವ್ಯ ಪ್ರಣತಿ ಸ್ನೇಹ

ದಾರಿಯಲ್ಲೆಲ್ಲೊ ಒಂದಾಗಿ
ಜೊತೆಯಾಗಿಯೇ ನಡೆವ
ನಮ್ಮದೇ ನೆರಳು ಸ್ನೇಹ

ಯಾವ ಬೇಲಿಗೂ ತೊಡಕದ
ಯಾವ ಮಾತಿಗೂ ನಿಲುಕದ
ಬಣ್ಣಿಸಲಾಗದ ಬಂಧ ಸ್ನೇಹ

ಬಾಳಿನ ಬೃಹತ್ ಗ್ರಂಥದಲಿ
ಕಲೆತ ಮನಸು ಜೊತೆಗೆ ಬರೆದ
ಮಧುರ ಕಾವ್ಯ ಸ್ನೇಹ

Monday, December 1, 2014

ನಿವೇದನೆ

ನಿನ್ನಾಗಮನದಿಂದ ಮನೋರಾಜ್ಯದಲಿ
ಮೂಡಿ ಬಂತು ಒಲವಿನಾ ಮಧುರ ಕಾಂತಿ
ಜಗವೊಂದರೆಚಣ ತಟಸ್ಥವಾಯಿತೋ ಎಂಬ ಭ್ರಾಂತಿ

ಆ ನಿನ್ನ ಮೋಹಕ ನಗೆಯ ಸೂಸಿ
ಮೊದಲ ನೋಟದಲ್ಲೇ ಮನಸ ಕದ್ದೆಯಲ್ಲಾ
ನಿನ್ನ ಹೆಸರಿನದೇ ಜಪವಾಗಿದೆ ನನಗೀಗ ದಿನವೆಲ್ಲಾ

ನೀನು ಕಾಣದಾದಾಗ ತಳಮಳಿಸಿ
ಕಾಯುವೆನು ಅನವರತ ನಿನಗಾಗಿ ಹಂಬಲಿಸಿ
ಸದಾಕಾಲ ನಿನ್ನೊಂದಿಗಿರಬೇಕೆಂದು ಅನುಕ್ಷಣವೂ ಅಪೇಕ್ಷಿಸಿ

ಸೋಲಿನ ಭೀತಿಯ ಮಬ್ಬಿನಲ್ಲಿಯೂ
ತೋರಿದೆ ನೀನು ಗುರಿಯೆಡೆಗಿನ ಹಾದಿ ಸ್ಪಷ್ಟವಾಗಿ
ಪೆದ್ದು ಮನದ ಮೊದ್ದು ಮಾತಿಗೆಲ್ಲಾ ಬೇಸರಿಸದೆ ಕಿವಿಯಾಗಿ

ಮನಸೂರೆಗೊಳ್ಳುವ ವ್ಯಕ್ತಿತ್ವ
ಅಮಿತ ಆತ್ಮವಿಶ್ವಾಸ ಚೈತನ್ಯದ ಗಣಿ ನೀನು
ನಿನ್ನಿಂದ ಸ್ಫೂರ್ತಿ ಪಡೆದು ನಿನಗೆಂದೆಂದೂ ಋಣಿ ನಾನು

ನೀ ನನಗೆಂದೆಂದಿಗೂ ಸಿಗುವುದಿಲ್ಲ
ಎಂಬರಿವಿದ್ದರೂ ನನ್ನಲ್ಲೊಂದು ಬಯಕೆ
ಮಾಡಬೇಕು ನಿನ್ನಲ್ಲಿ ನನ್ನ ಮೊದಲ ಪ್ರೇಮದರಿಕೆ

Monday, November 24, 2014

ಬಯಕೆ

ಮುಗ್ಧ ಮನದ ಅಂಗಳದಲ್ಲಿ
ಯಾರೋ ಎಸೆದ ಬೀಜವೊಡೆದು
ಚಿಗುರಿತೊಂದು ಪುಟ್ಟ ಬಯಕೆ

ತಿಳಿಯದ ಭಾವಗಳ ನೀರ ಕುಡಿದು
ಕೇಳದ ಮಾತುಗಳ ಆರೈಕೆ ಪಡೆದು
ಹೆಮ್ಮರವಾಯ್ತು ಬಯಕೆ

ಕೋಟೆಯ ಕಾವಲನ್ನು ಭೇದಿಸಿ
ಬಂಧನದ ಕೊಂಡಿಯನ್ನು ಛೇದಿಸಿ
ಜೀವ ತಳೆಯುವ ಮನಸು

ಯಾರೂ ಕೇಳದ ಹಾಡನ್ನು ಹಾಡಿ
ಯಾರೂ ಬಾರದ ಹಾದಿಯಲ್ಲಿ ನಡೆದು
ಕಾಣದೂರಿನ ಬೆಳಕ ಕಾಣುವ ಕನಸು

ಗೊಂದಲಗಳ ಗೂಡಲ್ಲಿ ಅರಳಿದ
ಆಸೆಯ ಅಭಿವ್ಯಕ್ತಿ ಹೇಗೆ?
ಭಾವಗಳೆಲ್ಲಾ ಚೆಲ್ಲಾಪಿಲ್ಲಿ

ಮನದಲ್ಲಿ ಮೂಡದ ಮಾತುಗಳಿಗೆ
ಸವಿಜೇನ ಬೆರೆಸುವುದು ಹೇಗೆ?
ಮೌನವೇ ಭಾಷೆ ಇಲ್ಲಿ

ಪದಗಳ ಗೋಜಲಿಗೆ ಸಿಲುಕದೆ
ವ್ಯಕ್ತವಾಯ್ತು ಅಂತರ್ದನಿ
ಮನಸೀಗ ಒಡೆದ ಕನ್ನಡಿ

Wednesday, July 17, 2013

ಮಾತು - ಮೌನ

ಹೇಳಬೇಕೆನಿಸಿದೆ ನನಗೆ ನೂರಾರು ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು
ಅವಿತು ಹೆದರಿ ಬಾರದಿರಲು ನಾನು ಮೂಕಿಯೇ?
ಮಾತು ಒಳಗೆ ನಶಿಸಿ ಹೋಗೆ ತಪ್ಪು ನನ್ನದೇ??

ಪೋಣಿಸಿಟ್ಟ ಮುತ್ತ ಹಾರ ಚೆಂದ ಕೊರಳಲಿ
ಆದರದನು ತೂರಿಬಿಟ್ರೆ ನೋವು ಮನದಲಿ
ಮಾತನಾಡೋ ಬಯಕೆ ನನಗೆ ತುಂಬಿ ಬರುತಿದೆ
ಮೌನ ಮರೆತುಬಿಡುವೆನೆಂಬ ಭಯವು ಕಾಡಿದೆ

ಚಂದ್ರನಿರದ ಬಾನಿನಲ್ಲಿ ಚುಕ್ಕಿರಾಜ್ಯವು
ಆದರೇನು ಕಾಡದೇನು ಚಂದ್ರನಂದವು
ಭಾವದರ್ಥ ತಿಳಿಸೆ ಭಾಷೆ ಇರಲಿ ಸಾವಿರ
ಅವನು ಮೀರಿ ನಿಂತ ಮೌನದಾಳ ಸಾಗರ

ಅರಳಿ ನಿಂತ ಸುಮಗಳೆಲ್ಲಾ ಮುಡಿಯೆ ಯೋಗ್ಯವೇ?
ತುಟಿಗೆ ಬಂದ ಮಾತನೆಲ್ಲಾ ತಿಳಿಸೆ ಸಾಧ್ಯವೇ?
ಮೌನ ಚಿನ್ನ ಮಾತು ಬೆಳ್ಳಿ ನಮ್ಮ ಜಗದಲಿ
ಇರಲಿ ಬಿಡು ಮೌನ ಪರದೆ ಏಕೆ ಸರಿಸಲಿ

Friday, June 14, 2013

ಚಿತ್ರಕಾವ್ಯ

ಮನದ ಭಿತ್ತಿಯ ಮೇಲೆ
ಭಾವತರಂಗಗಳ ಚಿತ್ತಾರ|
ಅರ್ಥೈಸುವುದು ಹೇಗಿದನು
ಇದೋ ಆಧುನಿಕ ಕಾವ್ಯ||

ವರ್ಣರಂಜಿತವೋ ವರ್ಣಾರ್ಭಟವೋ
ಬಣ್ಣಗಳದೇ ಸಾಮ್ರಾಜ್ಯವಿದು|
ಅರ್ಥಗರ್ಭಿತವೋ ಅರ್ಥರಹಿತವೋ
ಕುತೂಹಲದ ಖನಿಜವಿದು||

ಒಂದೊಂದು ಭಾವಕ್ಕೆ
ಒಂದೊಂದು ಬಣ್ಣವೇ?
ಬಣ್ಣಗಳ ಬಂಧನಕ್ಕೂ ಸಿಲುಕದ
ಅತ್ಯುನ್ನತ ಭಾವನಿರೂಪಣೆಯೇ?

ಗುರಿಯಿಲ್ಲದೆ ಅಲೆದಾಡುವ
ಹುಚ್ಚು ಮನಸಿನ ಗೊಂದಲವೇ?
ಅಥವಾ ಸಂಕೀರ್ಣ ಮನಸಿನ
ಸುವ್ಯವಸ್ಥಿತ ಕಲಾರೂಪವೇ?

ತಿಳಿಸಲು ಚಿತ್ತಾರದ ಒಳಾರ್ಥ
ಚಿತ್ರಕಾರನೊಬ್ಬನೇ‌ ಸಮರ್ಥ|
ಆದರೆ ಕಲಾವಿದನ ಪರಿಚಯವೇ ನನಗಿಲ್ಲ
ಚಿತ್ತಾರದ ಮೂಲೆಯಲ್ಲಿ ಹಸ್ತಾಕ್ಷರವಿಲ್ಲ!

Monday, June 25, 2012

ಹೀಗೊಂದು ರಾತ್ರಿ

ನಿಜ ಹೇಳ್ಬೇಕು ಅಂದ್ರೆ ನಾನು ಈ‌ ವರ್ಷ ಇನ್ನೊಂದು ಬ್ಲಾಗ್ ಬರಹ ಪ್ರಕಟ ಮಾಡ್ತೀನಿ ಅಂತ ನಿಜವಾಗಲೂ ಅಂದುಕೊಂಡಿರಲಿಲ್ಲ. ಸಧ್ಯಕ್ಕೆ ಏನು ಬರೀಬೇಕು ಅನ್ನೋದು ಗೊತ್ತಿರಲಿಲ್ಲ. ಆದ್ರೆ ನಿನ್ನೆ ರಾತ್ರಿ ನನ್ನ ಕನಸಲ್ಲಿ ಒಂದು ವಿಚಿತ್ರ ನಡೀತು. ಅದು ಏನು ಅಂತ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು. ಹಾಗಾಗಿ...

ಆ ವಿಚಿತ್ರ ಏನು ಅಂತೀರಾ?‌ ನಿನ್ನೆ ರಾತ್ರಿ ನನ್ನ ಕನಸಲ್ಲಿ ನಾನು ಓದ್ತಾ ಕೂತಿದ್ದೆ (ಕನಸಲ್ಲೂ ಓದೋದೇನಾ?‌ ಅಂತ ಕೇಳ್ಬೇಡಿ...just imagine...) ಅದು ಎಲ್ಲಿ ಅಂತೀರಾ? ಒಂದು ಸುಂದರವಾದ ಪಾರ್ಕಲ್ಲಿ. ಅಷ್ಟೇನೂ‌ ಜನರ ಓಡಾಟ ಇರದಿದ್ದ ಆ ಪ್ರದೇಶ ಶಾಂತವಾಗಿ ಓದಲು ಅನುಕೂಲಕರವಾಗಿತ್ತು. ನಾನು ನನ್ನ ಪಾಡಿಗೆ ಓದ್ತಾ ಇದ್ದಾಗ ಇಬ್ಬರು ಹುಡುಗರು ಅಲ್ಲಿಗೆ ಬಂದ್ರು. ಬಂದವರೇ‌ ತಮ್ಮ ತಮ್ಮಲ್ಲೇ ಮಾತನಾಡುತ್ತ ನಾನು ಕೂತಿದ್ದ ಜಾಗಕ್ಕೆ ತುಂಬಾ ಸಮೀಪ ಬಂದಿದ್ರು...ಅವರು ಮಾತಾಡೋದು ನನಗೆ ಕೇಳುವಷ್ಟು ಹತ್ರ. ಅವರು ಹತ್ತಿರ ಬಂದಾಗ ನನಗೆ ಗೊತ್ತಾಗಿದ್ದು ಅವರ ನಡುವೆ  ಕವನಗಳ ಜುಗಲಬಂದಿ ನಡೀತಾ ಇತ್ತು ಅಂತ. ಒಂದೊಂದು ಕವನವೂ‌ ಇನ್ನೊಂದಕ್ಕಿಂತ ಚೆನ್ನಾಗಿತ್ತು. ಅದನ್ನು ಕೇಳಿದಾಗ ನಾನು ಜೋರಾಗಿ ಚಪ್ಪಾಳೆ ತಟ್ಟಿದೆ. ಅವರಿಬ್ಬರೂ ನನ್ನ ನೋಡಿ ನಕ್ಕರೆ ಹೊರತು ಬೇರೇನೂ ಮಾತಾಡಲಿಲ್ಲ . ಜುಗಲಬಂದಿ ಮುಂದುವರೀತಾ ಇತ್ತು. ಅದರಲ್ಲಿ ನನಗೆ ನೆನಪಿರೋದು ತುಂಬಾ ಇಷ್ಟವಾಗಿದ್ದು ಇದು.

ಬಿಸಿಲ ಬೇಗೆಯಲಿ ಕಾದ
ಬಸವಳಿದು ಒಣಗಿದ್ದ
ಇಳೆಗೆ ತಂಪನೆರೆಯುವ
ಮಳೆಯಾಗಿ ಬಂದೆ ನೀನು

ಮಣ್ಣಲ್ಲಿ ಒಂದಾಗಿ
ಹೇಗೋ ಶಾಂತವಾಗಿದ್ದೆ  
ನಿನ್ನ ಸವಿಸ್ಪರ್ಶದಿಂದ
ಕಾಯೊಡೆದು ಚಿಗುರಿದೆ ನಾನು

ನಿಜ ಹೇಳ್ತೀನಿ...ಆಗ ಆ ಹುಡುಗ ಎಷ್ಟು ಇಷ್ಟ ಆಗಿಬಿಟ್ಟ್ ಗೊತ್ತಾ... ಆದ್ರೆ ಈಗ ಅವನ ಮುಖಾನೇ ನೆನಪಾಗ್ತಾ ಇಲ್ಲ. ಛೆ! bad luck :(

ಇನ್ನೊಂದು ವಿಷ್ಯ ಇವತ್ತು ಬ್ಲಾಗಲ್ಲಿ ಈ ಸಾಲುಗಳನ್ನಷ್ಟೇ ಬರೀಬೇಕು ಅಂತ ಅಂದುಕೊಂಡಿದ್ದೆ... ಆದ್ರೆ ಕನಸಲ್ಲಿ ಬಂದಿದ್ದ ಆ ಹುಡುಗ ಈ ಸಾಲುಗಳನ್ನು ಎಷ್ಟು ಚೆನ್ನಾಗಿ ಹೇಳಿದ್ದ ಅಂದ್ರೆ ಅವನಿಗೆ credits ಕೊಡದೆ ಇರಲಾಗಲಿಲ್ಲ. ಹಾಗಾಗಿ ಇಡೀ ಕಥೆ ಇಲ್ಲಿದೆ :)