Tuesday, March 30, 2010

ಇರಲಿ ಈ ಬಂಧ ಶಾಶ್ವತ

ಕಣ್ಣ ತುಂಬ ನೂರು ಕನಸು
ಮನವ ಕಾಡೋ ನೂರು ನೆನಪು
ಹೊತ್ತು ಹೊಸತು ಹೆಜ್ಜೆಯಿಡಲು
ನಿಮ್ಮ ಭೇಟಿಯಾಯಿತು

ಮೊದಲ ದಿನವೇ ಮಾತನಾಡಿ
ಇಷ್ಟಾನಿಷ್ಟ ತಿಳಿದುಕೊಂಡು
ಕಷ್ಟ ಸುಖವ ಹಂಚಿಕೊಳಲು
ಸ್ನೇಹ ಕುದುರಿತು

ಹಲವು ವಿಷಯಗಳನು ಕೆದಕಿ
ನೆನಪುಗಳನು ಮೆಲುಕು ಹಾಕಿ
ನಾವು ಜೊತೆಯಲಿರಲು ಸಮಯ
ಲೆಕ್ಕ ತಪ್ಪಿತು

ಬಿರುಕು ಎಲ್ಲೂ ಮೂಡಲಿಲ್ಲ
ಜಗಳಕಿಲ್ಲಿ ಜಾಗವಿಲ್ಲ
ಮನವ ಅರಿತ ಮೇಲೆ ವಿರಸ
ಕಾಣದಾಯಿತು

ನಾನು ನಡೆವ ಹಾದಿಯಲ್ಲಿ
ಜೊತೆಗೆ ನೀವು ಹೆಜ್ಜೆಯಿಡಲು
ಅಕ್ಕಪಕ್ಕ ಸುತ್ತಮುತ್ತ
ಹಸಿರೆ ತುಂಬಿದೆ

ನನ್ನ ನಿಮ್ಮ ನಡುವ ಬಂಧ
ಹೇಳಲಿಕ್ಕೆ ಪದಗಳಿಲ್ಲ
ಮಾತು ಕೂಡ ಸೋಲನೊಪ್ಪಿ
ಮೌನವಾಗಿದೆ

ಯಾರ ಪುಣ್ಯಫಲವೋ
ನಮ್ಮ ಬಂಧನ
ಎಂದೂ ಹೀಗೆ ಇರಲಿ ನಮ್ಮ
ಭಾವ ಸ್ಪಂದನ

Thursday, March 4, 2010

ಇಂದಿನ ಪಯಣ

ಇವತ್ತು ಬಸಲ್ಲಿ ಕಾಲೇಜಿಗೆ ಹೋಗ್ತೀನಿ ಅಂತ ಹೇಳಿ ಮನೆ ಬಿಟ್ಟಾಗ ೧೦:೧೫. ೧೧:೩೦ಕ್ಕೆ microcontrollers ಪರೀಕ್ಷೆ ಶುರು ಆಗೋದಿತ್ತು. ನಮ್ಮ ಮನೆಯಿಂದ ಸುಮಾರು ಒಂದುವರೆ ಕಿ.ಮೀ. ದೂರವಿರುವ ವಿಜಯನಗರ ಬಸ್ ನಿಲ್ದಾಣಕ್ಕೆ ನಡೆಯುತ್ತಾ ಹೊರಟೆ. ವಿಜಯನಗರ ಪಾದಚಾರಿ ಸುರಂಗ ಮಾರ್ಗದಲ್ಲಿ ಮೊದಲ ಸಲ ನಡೆದು ನಿಲ್ದಾಣ ತಲುಪಿದಾಗ ೧೦:೨೮. ಸರಿ ಬಸ್ ಗೋಸ್ಕರ ಕಾಯ್ತಾ ಇದ್ದೆ. ನಮ್ಮ ಕಾಲೇಜಿನ ಕೆಲವು ಹುಡುಗಿಯರು ಅದೇ ನಿಲ್ದಾಣದಲ್ಲಿ ಕಾಯುತ್ತಿದ್ದರು. ೧೦:೪೦ ಆದರೂ ನಮ್ಮ ಕಾಲೇಜು ಮಾರ್ಗದಲ್ಲಿ ಹೋಗುವ ಯಾವ ಬಸ್ ಕೂಡ ಬರಲಿಲ್ಲ. ಅದಕ್ಕೂ ಮುಂಚೆ ಬಂದಿದ್ದ ೪೦೧ R ಅಲ್ಲಿ ನಾಯಂಡಹಳ್ಳಿವರೆಗೆ ಹೋಗಿ ಅಲ್ಲಿಂದ ಇನ್ನೊಂದು ಬಸ್ ಅಲ್ಲಿ ಹೋಗಬಹುದಿತ್ತು ಅಂತ ಅನ್ನಿಸಿದ್ರೂ ಈಗ ನಾನು ಈ ಥರ ಯೋಚ್ನೆ ಮಾಡಿದ್ರೆ ಹೋಗಿರೋ ಬಸ್ ವಾಪಸ್ ಬರೊಲ್ಲ ಅಲ್ವಾ ಕಾಯೋಣ ಅಂತ ಅಲ್ಲೆ ನಿಲ್ದಾಣದಲ್ಲಿ ನಿಂತೆ.

ಇನ್ನೊಂದು ೫ ನಿಮಿಷವಾದ ಮೇಲೆ ಅಲ್ಲಿ ಕಾಯುತ್ತಿದ್ದ ನಮ್ ಕಾಲೇಜಿನ ೩ ಹುಡುಗಿಯರು ಆಟೋದಲ್ಲಿ ಹೊರಟು ಹೋದರು. ಅಯ್ಯೊ ನಾನೇನು ಮಾಡಲಿ... ಇನ್ನೇನು ಮಾಡೋದು ಇನ್ನೊಂದ್ ಐದು ನಿಮಿಷ ನೋಡೋದು ಬಸ್ ಸಿಗಲಿಲ್ಲ ಅಂದ್ರೆ ಆಟೋದಲ್ಲೇ ಹೋಗೋದು ಅಂತ ಅಂದುಕೊಳ್ತಾ ಇರೋವಾಗ್ಲೇ ಬಂತು ಬನಶಂಕರಿಗೆ ಹೋಗೋ ಪುಷ್ಪಕ್ ಪ್ಲಸ್... ಹತ್ತಿ ಡ್ರೈವರ್ ಹಿಂದಿನ ಸೀಟಲ್ಲೇ ಕುಳಿತೆ. ಇದೇ ಮೊದಲೇನಾಗಿರಲಿಲ್ಲ. ಆದರೂ ನಾನು ಮುಂಚೆ ಅಲ್ಲಿ ಕುಳಿತಾಗ ಗಮನಿಸುತ್ತಿದ್ದ ವಿಷಯ ಮತ್ತು ಇವತ್ತು ಗಮನಿಸಿದ ವಿಷಯ ಬೇರೆಯವು... ಮುಂಚೆ ಅಲ್ಲಿ ಕುಳಿತಾಗ ಬಸ್ ಗೆ ಹತ್ತುವವರು ಇಳಿಯುವವರು ಕಿಟಕಿಯಿಂದ ಕಾಣುವ ಸುತ್ತ ಮುತ್ತ ಇರುವ ಅಂಗಡಿಗಳ ಪೋಸ್ಟರ್ ಗಳೇ ಕಣ್ಣಿಗೆ ಬೀಳ್ತಾ ಇದ್ವು. ಇವತ್ತು ಅದರ ಜೊತೆಗೆ ಡ್ರೈವರ್ ಗಾಡಿ ಹೇಗೆ ಓಡಿಸ್ತಾರೆ ಅನ್ನೋದನ್ನು ಗಮನಿಸ್ತಾ ಇದ್ದೆ.... ಗಾಡಿ ವೇಗಕ್ಕೆ ತಕ್ಕಂತೆ ಗೇರ್ ಬದಲಾಯಿಸುತ್ತಿದ್ದುದು, ಸ್ಪೀಡೋಮೀಟರ್ ಅಲ್ಲಿ ಕಾಣುವ ಗಾಡಿಯ ವೇಗ ಎಲ್ಲವನ್ನು ಗಮನಿಸುತ್ತಿದ್ದೆ.ನಮ್ಮ ಆಭಿರುಚಿ ಆಸಕ್ತಿಗಳು ಬದಲಾದಂತೆ ನಮ್ಮ ಕಣ್ಣಿಗೆ ಕಾಣುವ ವಿಷಯಗಳು ಬದಲಾಗುತ್ತವೆ ಅಲ್ವಾ... ಹೀಗೆ ಅತ್ತಿಗುಪ್ಪೆ ಬಳಿ ಬಂದಾಗ ಎಂದಿನಂತೆ ಅಲ್ಲಿ ಟ್ರಾಫಿಕ್ ಜಾಮ್.

ಗಡಿಯಾರ ಗಂಟೆ ೧೧:೦೦ ತೋರಿಸ್ತಾ ಇತ್ತು. ಅಯ್ಯೊ ಈ ಟ್ರಾಫಿಕ್ ಹೀಗೆ ಇದ್ರೆ ನಾನು ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗ್ತೀನಾ... ಪರೀಕ್ಷೆ ಸಮಯದಲ್ಲಿ ಬಸ್ಸಲ್ಲಿ ಹೋಗುವ ನಿರ್ಧಾರ ತಗೊಂಡಿದ್ದು ತಪ್ಪಾಯ್ತು ಅಂತ ಒಂದು ಮನಸ್ಸು ಹೇಳ್ತಿತ್ತು. ಆದ್ರೆ ಇನ್ನೊಂದು ಮನಸ್ಸು ೮:೧೫ಕ್ಕೆ ಕಾಲೇಜಿಗೆ ಹೋಗೋದಿಕ್ಕೆ ನೀನು ಸ್ಕೂಟಿಯಲ್ಲಿ ಬರ್ತಾ ಇದ್ದಾಗ ಇದೇ ಜಂಕ್ಷನ್ ಅಲ್ಲಿ ೮:೦೦ ಗಂಟೆಗೆ ಇದ್ರು ೮:೧೦ ಕ್ಕೆಲ್ಲಾ ಕಾಲೇಜ್ ತಲುಪ್ತಾ ಇರ್ಲಿಲ್ವಾ ಅಂತಿತ್ತು. ಹೇಗೋ ಅದೇ ಟ್ರಾಫಿಕ್ ಅಲ್ಲೇ ದೀಪಾಂಜಲಿನಗರದ ಬಳಿಯಿರುವ ಸರ್ಕಲ್ ಗೆ ಬರುವಷ್ಟರಲ್ಲಿ ೧೧:೧೦ ಆಗಿತ್ತು. ಇನ್ನು ಮೈಸೂರು ರಸ್ತೆಯಲ್ಲಿ ಯಾವುದೇ ಬ್ಲಾಕ್ ಇರದಿರಲಿ ಅಂತ ದೇವರಲ್ಲಿ ಬೇಡಿಕೊಂಡೆ.

ಇನ್ನು ಮುಂದೆ ಎಲ್ಲಾ ಸುಸೂತ್ರವಾಗಿತ್ತು. ಎಲ್ಲೂ ಜಾಮ್ ಆಗದೇ ಪಿ.ಇ.ಎಸ್. ಕಾಲೇಜಿನ ನಿಲ್ದಾಣದಲ್ಲಿಳಿದಾಗ ೧೧:೧೮. ಹಾಗೆ ರಸ್ತೆ ದಾಟಿ ಬಂದಾಗ ದಾರಿಯಲ್ಲಿ ಎದುರುಗೊಂಡ ಜೂನಿಯರ್ಸ್ ಸಹನಾ ಮತ್ತೆ ನವೀನ್ ಜೊತೆ ಮಾತಾಡ್ತಾ ಇದ್ದಾಗ ಪರೀಕ್ಷೆಯ ಮೊದಲ ಬೆಲ್ ಹೊಡೆಯಿತು.ಸರಿ ಅವರಿಗೆ ಪರೀಕ್ಷೆಗೆ "ಆಲ್ ದಿ ಬೆಸ್ಟ್" ಹೇಳಿ ನನ್ನ ತರಗತಿಗೆ ಓಡಿದೆ. ಸರಿಯಾದ ಸಮಯಕ್ಕೆ ಕಾಲೇಜ್ ಸೇರಿ ಪರೀಕ್ಷೆ ಬರೆದೆ.

ವಾಪಸ್ ಬರುವಾಗ ನಿಲ್ದಾಣಕ್ಕೆ ಬಂದ ಐದು ನಿಮಿಷಗಳೊಳಗೆ ೫೦೦ ಕೆ ಮಾರ್ಕೊಪೋಲೋ ಬಸ್ ಹತ್ತಿದೆ. ಸುಮಾರು ೧:೪೦ ಕ್ಕೆಲ್ಲಾ ವಿಜಯನಗರ ತಲುಪಿದೆ. ಅಲ್ಲಿಂದ ಮತ್ತೆ ಮನೆ ಕಡೆ ನಡಿಗೆ. ಮನೆಗೆ ಬಂದ ತಕ್ಷಣ ಅಪ್ಪ ಕೇಳಿದ್ರು ಹೇಗಿತ್ತು ಬಸಲ್ಲಿ ಹೋದ ಅನುಭವ ಅಂತ. ನಾನು ಚೆನ್ನಾಗಿತ್ತು ಅಂದೆ. ಅಮ್ಮ "ಹೂಂ... ಬಿಸಿಲಲ್ಲಿ ನಡೆದು ಬಂದಿದ್ದೀಯಾ..,ಕೆನ್ನೆಯೆಲ್ಲಾ ಹೇಗೆ ಕೆಂಪಗಾಗಿದೆ ನೋಡ್ಕೋ. ನೀನು ಹೀಗೆ ಒಂದು ತಿಂಗಳು ಈ ಬೇಸಿಗೆಯಲ್ಲಿ ಬಸಲ್ಲಿ ಕಾಲೇಜಿಗೆ ಹೋಗಿ ಬಂದ್ರೆ ನೋಡೋಕೆ ಆಗೊಲ್ಲ ಹಾಗಾಗ್ತೀಯಾ" ಅಂದ್ರು. ಏನೇ ಅಂದ್ರೂ ಇವತ್ತಿನ ಪಯಣ ಮಾತ್ರ ಚೆನ್ನಾಗಿತ್ತು.

ಅಂದ ಹಾಗೆ ಪಿ.ಇ.ಎಸ್.ಐ.ಟಿ. ಸೇರಿದ ಮೇಲೆ ಇದು ಮೂರನೇ ಬಾರಿ ನಾನು ಬಸಲ್ಲಿ ಕಾಲೇಜಿಗೆ ಹೋಗಿದ್ದು :)

Friday, January 29, 2010

ಏನನ್ನಾದರೂ ಬರೆಯಬೇಕೆಂಬ ಆಸೆ

ಏನನ್ನಾದರೂ ಬರೆಯಬೇಕೆಂಬ ಆಸೆ
ಬರೆಯಲಿ ಏನು ತಿಳಿಯದಾಗಿದೆ
ಬಡಿದೆಬ್ಬಿಸಿ ದಾರಿ ತೋರೆನಗೆ ಎಂದರೂ
ಮನಸಿಂದು ಮೌನವಾಗಿದೆ

ಕಂಡ ಕನಸು ನನಸಾಗದಾದಾಗ
ಕನಸುಗಳಿಗೆನ್ನಲ್ಲಿ ಜಾಗವಿಲ್ಲವೆಂದು
ಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆ
ಕನಸ ಕಂಡ ಮನಸನ್ನೇ ದೂಷಿಸಿದ ಫಲವೇ?

ಒಂದರ ಹಿಂದೊಂದು ಬೆಂಬಿಡದೆ ಮನದ ಕಿನಾರೆಯ
ಸ್ಪರ್ಶಿಸುತ್ತಿದ್ದ ಭಾವನೆಗಳಿಗೆನ್ನಲ್ಲಿ ಸಮಯವಿಲ್ಲವೆಂದು
ಅವುಗಳನ್ನು ನನ್ನೊಳಗೆ ಅಡಗಿಸಿಡುವ ಸಾಹಸದಿ
ನನ್ನ ಮನಕ್ಕೆ ಬೀಗ ಜಡಿದೆನೆ?

ಬೀಗ ಜಡಿದಿದ್ದರೂ ಬೀಗವನೊಡೆದು
ಹೊರಬಂದ ಭಾವನೆಗಳ ಉತ್ಕೃಷ್ಟತೆಯ
ಪದಗಳಲಿ ವಿವರಿಸಲು ಅಶಕ್ತಳಾದಾಗ
ಸೋಲಿನ ಭೀತಿಯಿಂದ ಸುಮ್ಮನಾದೆನೆ?

ನೂರಾರು ಭಾವಗಳೀಗ ಒಮ್ಮೆಲೆ ಪ್ರವಹಿಸಿ
ಕಾಣದೂರಿಗೆನ್ನ ಕೊಂಡೊಯ್ಯುತ್ತಿವೆ
ಬೆರಳುಗಳ ಮಧ್ಯೆ ಬಂಧಿಯಾಗಿರುವ ಲೇಖನಿಯ
ಬುದ್ಧಿಯ ಹಿಡಿತದಲ್ಲಿರುವ ಪದಗಳು ಆಳುತ್ತಿವೆ

ಪದಗಳು ನೆನಪಾಗಲೊಲ್ಲವು ಇಂದು
ಬರೆಯಬೇಕೆಂಬ ಆಸೆಯು ಸೋಲನ್ನೊಪ್ಪದು
ಬಂಧಿಯಾದ ಲೇಖನಿಯೇ ಭಾವವನ್ನು ಬಿಡುಗಡೆಗೊಳಿಸೀತೆ?
ಮನಸಿನ ಮೌನದ ಮಾತಿಗೆ ಅಕ್ಷರ ರೂಪ ಕೊಟ್ಟೀತೇ?

Thursday, December 31, 2009

೨೦೦೯ ಒಂದು ಸುತ್ತು

೨೦೦೯ ನನ್ನ ಪಾಲಿಗೆ ತುಂಬ ವಿಶಿಷ್ಟವಾದ /ವಿಚಿತ್ರವಾದ ಯಾವುದೇ ಅನುಭವಗಳನ್ನು ನೀಡಲಿಲ್ಲ.... ಆದ್ರೂ ೨೦೦೯ರಲ್ಲಿ ಆದದ್ದೇನು ಅಂತ ಯೋಚಿಸಿದ್ರೆ ನೆನಪಾಗೋ ವಿಷ್ಯಗಳನ್ನು ಇಲ್ಲಿ ದಾಖಲಿಸುವ ಯತ್ನ...
ತುಂಬಾ ಖುಷಿಯಾದ ದಿನ - ನಾನು ಎಡೆಯೂರು ಮಾರ್ಗವಾಗಿ ತಿಪಟೂರು ತಾಲೂಕಿನಲ್ಲಿರುವ ನಮ್ಮ ಮನೆದೇವರ ದೇವಸ್ಥಾನಕ್ಕೆ ಸ್ವತಂತ್ರವಾಗಿ ಕಾರ್ ಓಡಿಸಿಕೊಂಡು ಹೋಗಿದ್ದು. ಅವತ್ತು ಒಟ್ಟು ೨೮೪ ಕಿ.ಮೀ. ಕ್ರಮಿಸಿದ್ವಿ.
ತುಂಬಾ ಬೇಸರ ತಂದ ಮಾತು - ಕಾರ್ ಓಡಿಸೋದು ಹೇಳಿಕೊಡುತ್ತಿದ್ದಾಗ ಅಪ್ಪ "ಈ ಜನ್ಮದಲ್ಲಿ ನೀನು ಕಾರ್ ಓಡಿಸೋದು ಕಲಿಯೊಲ್ಲ ಬಿಡು" ಅಂದಿದ್ದು
ಸಂತೋಷ ತಂದ ಮಾತು - ಅಪ್ಪ "ನೀನು ನಮ್ಮ ಮನೆಯ ಕಲಶ" ಎಂದು ಹೇಳಿದ್ದು
ಮರೆಯಲಾರದ ದಿನ -ನನ್ನಕ್ಕನ ನಿಶ್ಚಿತಾರ್ಥದ ದಿನ/ ನನ್ನ ಸ್ನೇಹಿತೆಯ ಹುಟ್ಟುಹಬ್ಬದ ಜೊತೆ ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದ ದಿನ
ಸಂತಸದ ಒಡನಾಟ - ಸಂಪದದ್ದು
ತುಂಬಾ ಬೇಸರವಾದ ಕ್ಷಣ -external evaluator ನನ್ ಸೆಮಿನಾರ್ ಕೇಳಲು ಆಸಕ್ತಿಯಿಲ್ಲ ಎಂದಾಗ
ತುಂಬಾ ನೋವಾಗಿದ್ದು - ಸಹಪಾಠಿಗಳು ಮೈಸೂರಿಗೆ ಪ್ರವಾಸಕ್ಕೆಂದು ಹೋದಾಗ ಅವರ ಜೊತೆ ನಾನು ಹೋಗಲಾಗದಿದ್ದಾಗ
ವರ್ಷ ಹೆಚ್ಚು ಬಾರಿ ಕೇಳಿದ compliment - ನಿಮ್ಮ ನಗು ಚೆನ್ನಾಗಿದೆ... ಇದನ್ನಂತೂ ಕೇಳಿ ಕೇಳಿ ನಂಗೆ ಬೇಜಾರಾಗಿ ಹೋಗಿದೆ....
ವರ್ಷ ಮಾಡಿದ ಪ್ರಮುಖ ಕೆಲಸ - ೪ ವೀಲರ್ D.L. ತಗೊಂಡಿದ್ದು... ಇನ್ನು ೨೦ ವರ್ಷ ಅದರ ಬಗ್ಗೆ ಚಿಂತೆಯಿಲ್ಲ...
ಆರೋಗ್ಯದ ದೃಷ್ಟಿಯಿಂದ ಮಾಡಿದ ನಿರ್ಣಯ- ನಾನು ದೇಹ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬುದು. ಅದರ ಬಗ್ಗೆ ಆಗಲೇ ಕಾರ್ಯಪ್ರವೃತ್ತಳಾಗಿ ಭಾಗಶಃ ಯಶಸ್ವಿಯಾಗಿದ್ದೇನೆ ;)
ಇನ್ನೊಂದು ವಿಷ್ಯ : ನನ್ನ ಮೊದಲ ಸೀರೆ ಕೊಂಡುಕೊಂಡಿದ್ದು ೨೦೦೯ರಲ್ಲೆ

Wednesday, December 23, 2009

ಸುನಾಮಿಗೆ ೫ ವರ್ಷ

ಸುನಾಮಿ
ನೀ ಪ್ರಕೃತಿಯಲ್ಲಿರುವ ಮಾಯೆ
ಬಂದು, ಇಂದಿಗೂ ಉಳಿಸಿರುವೆ ನಿನ್ನ ಕರಾಳ ಛಾಯೆ |

ಬಂದೆ ನೀ ಡಿಸೆಂಬರ್ ಇಪ್ಪತ್ತಾರರಂದು
ರಜಾದಿನವಾದ್ದರಿಂದ ಇದ್ದರು ಬಹಳ ಜನ ಬಂದರಿನಲ್ಲಿ ಅಂದು |

ನೀ ಬಂದೆ ಕೊಡದೆ ಯಾವುದೇ ಮುನ್ಸೂಚನೆ
ಇರಲಿಲ್ಲ ಒಂದು ಕ್ಷಣವೂ ಜನರಿಗೆ ಮಾಡಲು ಯೋಚನೆ |

ಸುನಾಮಿ - ಹೆಸರೇ ಹೇಳುವಂತೆ ನೀ ಬಂದರಿನ ಅಲೆ
ಆದ್ದರಿಂದ ಬೀಸಿದೆಯೇನು ಬಂದರಿನಲ್ಲಿದ್ದವರಿಗೆಲ್ಲಾ ಮರಣದ ಬಲೆ?

ನೀ ಕೊಂದೆ ಹಲವರ ಪ್ರೀತಿಪಾತ್ರರನ್ನು
ಅವರು ಶಪಿಸುತ್ತಿದ್ದಾರೆ ಇಂದಿಗೂ ನಿನ್ನನ್ನು |

ದುರ್ಜನರು ಹೆಚ್ಚಾದಾಗ ಪ್ರಕೃತಿವಿಕೋಪ ಎನ್ನುತ್ತೆ ಸಿದ್ಧಾಂತ
ಆದರೆ ತುಸು ಹೆಚ್ಚೇ ಆಯಿತು ನೀನು ಸೃಷ್ಟಿಸಿದ ರಾದ್ಧಾಂತ |

ಪಾಪ! ಏನೂ ಮಾಡದ ಮುಗ್ಧ ಮಕ್ಕಳು ಸತ್ತರು
ಇನ್ನೂ ಕೆಲವು ಮಕ್ಕಳು ಅನಾಥರಾಗಿ ಅತ್ತರು

ಸುನಾಮಿ- ನಿನಗೆ ಸಿಕ್ಕ ಸಂತೋಷವಾದರೂ ಏನು?
ಜನರ ಸಾವು ನೋವು ದುಃಖಗಳೇನು?

ಹಿಂಸಿಸಬೇಡ ನಮ್ಮನ್ನು ಈ ರೀತಿ ತ್ರಾಸ ಕೊಟ್ಟು
ಪ್ರಾರ್ಥಿಸುವೆ ನಿನ್ನನ್ನು ಮತ್ತೆ ಬರಬೇಡ ದಯವಿಟ್ಟು

ಸುನಾಮಿ ಅಲೆ ಭಾರತದ ಸಮುದ್ರ ಕಿನಾರೆಗಳಿಗೆ ಬಡಿದು ಈ ಶನಿವಾರಕ್ಕೆ ೫ ವರ್ಷ.ಆಗ (೫ ವರ್ಷಗಳ ಹಿಂದೆ) ಒಂದು ಪುಸ್ತಕದಲ್ಲಿ ಸುನಾಮಿ ಬಗ್ಗೆ ನಾನು ಬರೆದಿದ್ದ ಕೆಲವು ಸಾಲುಗಳು ಇತ್ತೀಚೆಗೆ ನನಗೆ ಮತ್ತೆ ಸಿಕ್ಕವು. ಆ ಪುಸ್ತಕದಲ್ಲಿ ನಾನು ನಮೂದಿಸಿರುವಂತೆ ನಾನಿದನ್ನು ಬರೆದಿದ್ದುದು ೧೮/೧/೦೫ ರಂದು. ಅಂದು ಅಪ್ಪನ ಸ್ನೇಹಿತರೊಬ್ಬರು ಮನೆಗೆ ಬಂದು ಸುನಾಮಿಯಲ್ಲಿ ಕಾಣೆಯಾದ ತಮ್ಮ ಮಗನ ವಿಚಾರ ಹೇಳುತ್ತಿದ್ದುದನ್ನು ಕೇಳಿ ಬರೆದಿದ್ದು ಇದು...ಈಗ ಓದಿದ್ರೆ ಕೆಲವು ಕಡೆ ಸ್ವಲ್ಪ ಬದಲಾವಣೆಯ ಅಗತ್ಯ ಇದೆ ಅನಿಸುತ್ತೆ. ಆದ್ರೆ ಇದು ನಾನು ನನ್ನ ಆಲೋಚನೆಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಲು ಮಾಡಿದ ಮೊದಲ ಪ್ರಯತ್ನಗಳಲ್ಲೊಂದು. ಬದಲಾಯಿಸಲು ಮನಸ್ಸಾಗಲಿಲ್ಲ. ಆಗ ಬರೆದಿದ್ದಂತೆಯೇ ಇಲ್ಲಿ ಬರೆದಿದ್ದೇನೆ.

Sunday, October 4, 2009

ನೀನಿಲ್ಲದಿರೆ...

ಮುಂಜಾನೆ ಆಗಷ್ಟೇ ಎದ್ದು
ಕಿಟಕಿಯಾಚೆ ಕಣ್ಣ ಹಾಯಿಸಿದಾಗ
ಉದಯರವಿಯ ಹೊನ್ನ ಕಿರಣಗಳಲ್ಲಿ
ತುಂಬಿತ್ತು ನಿನ್ನದೇ ಹೊಳಪು
ಹೊತ್ತು ತಂದಿತ್ತು ನಿನ್ನ ನೆನಪು||

ಮಂಚದಿಂದಿಳಿದು ಈಚೆ ಬಂದು
ಎಲ್ಲರಿಗೂ ಸುಪ್ರಭಾತವ ಹೇಳುವಾಗ
ಮನೆಯವರೆಲ್ಲರ ನಗುವಿನಲ್ಲಿ
ಕಂಡಿತ್ತು ನಿನ್ನದೇ ಬಿಂಬ
ಆ ಬಿಂಬವೇ ಎನ್ನ ಕಣ್ಣ ತುಂಬ||

ನಿದ್ದೆಯ ಮಂಪರಿನಿಂದ ಹೊರಬಂದು
ಸ್ನಾನಕ್ಕೆ ಬಿಸಿನೀರ ತುಂಬಿಸುವಾಗ
ಅದರಿಂದ ಹೊರಬರುತ್ತಿದ್ದ ಆವಿಯಲ್ಲಿ
ನಿನ್ನ ಬಿಸಿಯುಸಿರ ಸ್ಪರ್ಶವಿತ್ತು
ಆ ಪುಳಕಕ್ಕೆ ಮನ ಕುಣಿದಾಡಿತ್ತು||

ಮನೆಯಿಂದ ಹೊರಹೋಗಲೆಂದು
ಸ್ಕೂಟಿಯನೇರಿ ಹೋಗುತ್ತಿದ್ದಾಗ
ಮುಖಕ್ಕೆ ಮುತ್ತಿಡುತ್ತಿದ್ದ ತಂಗಾಳಿಗೆ
ನಿನ್ನ ಸ್ಪರ್ಶದ ಸೆಳಹಿತ್ತು
ಆ ಸುಖವನ್ನರಸಿ ಹೃದಯ ಒದ್ದಾಡಿತ್ತು||

ಕಾಣುವ ನೂರಾರು ಕಂಗಳೊಂದಿಗೆ
ನನ್ನ ನೋಟ ಬೆರೆತಾಗ
ಹುಡುಕಿದವು ಈ ನಯನಗಳು
ನಿನ್ನ ಕುಡಿನೋಟದಲ್ಲಿನ ಸೆಳೆತ
ಆ ನೋಟದಲ್ಲೇ ಲೀನವಾಗುವ ತುಡಿತ||

ಮತ್ತೆ ನನ್ನ ಸ್ಕೂಟಿಯನೇರಿ
ಮನೆಗೆ ಹಿಂದಿರುಗುವಾಗ
ಮಳೆಹನಿಯ ಚಿಟಪಟ ಸದ್ದಲ್ಲಿ
ನಿನ್ನ ಪಿಸುಮಾತು ಕೇಳಿತ್ತು
ಆ ಮಾತಿಗೆ ನನ್ನ ಕಿವಿ ನಿಮಿರಿತ್ತು||

ನೀಲಾಕಾಶ ತಾ ಕೆಂಪಾಗಿ
ಸೂರ್ಯ ಹೊರಡಲು ಸಜ್ಜಾದಾಗ
ಹಚ್ಚಿದ ಜ್ಯೋತಿಯ ಬೆಳಕಿಂದ
ಎಲ್ಲಿಯೋ ಓಡಿಹೋಗಿತ್ತು ಕತ್ತಲು
ಕಂಡಿತ್ತು ನಿನ್ನ ಗುರುತೇ ಸುತ್ತಲು||

ಹಾಲ ಬೆಳದಿಂಗಳ ಚಂದ್ರ ತಾ ಚೆಲ್ಲಿ
ತಾರೆಗಳು ಬಾನನ್ನೆಲ್ಲಾ ಆವರಿಸಿದಾಗ
ಮಲಗಿ ಮುಚ್ಚಿದ ಕಂಗಳ ಹಿಂದೆ
ನಿನ್ನ ನೆನಪುಗಳನ್ನೆ ಕನವರಿಸಿದ್ದೆ
ಇನ್ನೆಲ್ಲಿ ಹತ್ತಿರ ಸುಳಿದೀತು ನಿದ್ದೆ||

ಹಾದಿಯಲ್ಲೆಲ್ಲೋ ಜೊತೆಯಾಗಿ
ನೂರ್ಕಾಲ ಜೊತೆಯಾಗಿರುವೆನೆಂದು
ಭರವಸೆಯಿತ್ತು ನನ್ನಾವರಿಸಿದೆ ನೀನು
ಈಗ ನನ್ನ ಕಣಕಣದಲ್ಲೂ ತುಂಬಿರುವೆ ನೀನು
ನೀನಲ್ಲದಿರೆ ನಿನ್ನ ಪ್ರೀತಿ ಬೇರಿನ್ನೇನು?

Sunday, September 13, 2009

ಏಕೆ ಹೀಗಾಯ್ತೋ......

ಈ ಸೆಮಿಸ್ಟರಿನ ಮೊದಲನೆ analog communication lab ಅಲ್ಲಿ amplitude modulation using collector modulation technique ಅನ್ನೊ experiment ಮಾಡಬೇಕಿತ್ತು. ೨ ಗಂಟೆ ಪ್ರಯತ್ನ ಪಟ್ರೂ output ಅಲ್ಲಿ ಬರೀ noise ಕಾಣಿಸ್ತಿತ್ತು. ಆಗ ನನ್ನ lab partner ನಯನ ಮತ್ತೆ ನಾನು "ಏಕೆ ಹೀಗಾಯ್ತೋ ನಾವು ಕಾಣೆವು " ಅಂತ ಹಾಡೋಕೆ ಶುರು ಮಾಡಿದ್ವಿ. ಆಮೇಲೆ ಅದನ್ನೆ ಮುಂದುವರೆಸುವ ಅನ್ನೋ ಯೋಚ್ನೆ ಬಂತು. ಅಂತೂ ಇಂತೂ ನಮ್ಮ ಮೊದಲ ಅಣಕವಾಡನ್ನು ಬರೆದು ಮುಗಿಸಿದ್ವಿ. ಅದೇ ಧಾಟಿಯಲ್ಲಿ ಹಾಡಿಕೊಳ್ಳಿ.

ಚಿತ್ರ: ಅಂಜದ ಗಂಡು
ಸಂಗೀತ : ಹಂಸಲೇಖ
ಹಾಡು: ಏಕೆ ಹೀಗಾಯ್ತೋ ನಾನು ಕಾಣೆನು

ಆರ್. ಎನ್. ಜಯಗೋಪಾಲ್ ಹಾಗೂ ಹಂಸಲೇಖ ಅವರ ಕ್ಷಮೆ ಕೋರುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ..

ಏಕೆ ಹೀಗಾಯ್ತೋ ನಾನು ಕಾಣೆನು
ಏಕೋ ಮನದಲ್ಲಿ doubtಉ ಶುರುವಾಯ್ತೋ
bread board ಮೇಲಿನ circuit ಅಂತು ಬೊಂಬಾಟಾಗಿತ್ತೋ
ಏನೇ ಆದರೂ output ಮಾತ್ರ ಕಾಣದಾಯಿತೋ || ಏಕೆ ಹೀಗಾಯ್ತೋ ||

ಈ circuitiನಲಿ ಅದು ಏನಿದೆಯೋ
sir ಕೊಟ್ಟಂಗೆನೆ components ಇದೆಯೋ|| ಬ್ರೆಡ್ ಬೋರ್ಡ್ ||


ಈ resistru.... designಗೆ ತಕ್ಕಂತೆ ನಾನು ಹುಡುಕಾಡಿ ತಂದೆ
ಈ transistru... emitteru- collectoru ಬೇಸು ಚೆಕ್ ಮಾಡಿ ತಂದೆ
ತಲೆಯಂತು ಕೆಟ್ಟು ಹೋಯಿತು
ಬೇರೇನು ತೋಚದಾಯಿತು
ಮನದಲ್ಲಿ ನಿರಾಸೆ ತುಂಬಿ ಹೋಯಿತು.... || ಏಕೆ ||


ಈ components... check ಮಾಡಿ test ಮಾಡಿ ನಾನಂತೂ ಸುಸ್ತಾದೆ
ಈ IFT... wire ಕಿತ್ತು ಹೋಗಿತ್ತಂತ ನಾನಾಗ ತಿಳಿದೆ
IFT ಬದಲು ಆಯಿತು
outputಉ clearಉ ಆಯಿತು
circuitಉ ಕೊನೆಗೂ debug ಆಯಿತು .....|| ಏಕೆ ||

Friday, August 28, 2009

ಕಲಿಗಾಲ

ವಿಸ್ಮಯವೇನೋ ಇದು - ನನ್ನ ನಿನ್ನ ಮಿಲನ
ವಾರೆಗಣ್ಣನೋಟ, ಪಿಸುಮಾತು, ಲಜ್ಜೆ ,ತುಂಬು ಸಡಗರದ ನಡುವೆ
ರುಷವೇ ಮನೆಮಾಡಿತ್ತು ಮನದಿ ನಮ್ಮ ವಿವಾಹದಂದು

ವಿಪರ್ಯಾಸವೇನೋ - ಇದು ನನ್ನ ನಿನ್ನ ಕದನ
ವಾದ ವಿವಾದ, ಸಿಡುಕು, ಮುನಿಸು, ಭಿನ್ನಾಭಿಪ್ರಾಯವೆಲ್ಲಾ ಸೇರಿ
ಡ ಸೇರದ ದೋಣಿಯಾಯ್ತು ನಮ್ಮ ಬಾಳು

ವಿಧಿಯಾಟವೇನೋ ಇದು - ನನ್ನ ನಿನ್ನ ವಿಚ್ಛೇದನ
ಣರಂಗದಲ್ಲಿರುವಂಥ ದ್ವೇಷ, ದರ್ಪ, ಅಸೂಯೆ, ದುರಭಿಮಾನಗಳ ನಡುವೆ
ತ್ಯೆಯಾಗಿತ್ತು ಸುಖ ಸಂತೋಷ ನಮ್ಮ ಒಡಲಾಳದಲ್ಲಿ

ಇದು ನಾನು ನನ್ನ ಗೆಳತಿ ನಯನ analog communication theory class ಅಲ್ಲಿ ಬರೆದಿದ್ದು... ಹಾಗಾಗಿ ಇದರ ಕ್ರೆಡಿಟ್ ಇಬ್ಬರಿಗೂ ಸೇರುತ್ತೆ....

ಪಲ್ಲವಿ - ಚರಣ

ಪ್ರೀತಿಯೆಂಬ ಹಾಡಿಗೆ ಪಲ್ಲವಿಯ ನೀ ಬರೆದೆ
ಚರಣವಿನ್ನು ನಿನ್ನ ಪಾಲು ತುಂಬಿಸದನು ನೀನೇ ಎಂದೆ

ಪ್ರೀತಿಯ ಅಡಿಪಾಯಕ್ಕೆ ವಿಶ್ವಾಸವನ್ನು ತುಂಬಿ
ಆಸೆ-ಭಾವಗಳಿಂದ ಕನಸಿನ ಗೂಡನ್ನು ಕಟ್ಟಿ
ಸಾಮರಸ್ಯದ ಹಸೆಯಿಟ್ಟು ಸಹಬಾಳ್ವೆಯ ಜ್ಯೋತಿ ಬೆಳಗಿಸಿದರೆ ಸಾಕು
ಚರಣ ಪೂರ್ಣವಾಗಲು ಇನ್ನೇನು ಬೇಕು

ಎಂದೆನಿಸುತಿರುವಾಗಲೇ ನನಗಾಯಿತು ಅರಿವು
ಇವೆಲ್ಲವೂ ತುಂಬಿದ್ದ ನನ್ನ ಮನವೇ ಆಗಿದೆ ಕಳುವು

ಮನಸನ್ನೇ ಕದ್ದಿರುವೆಯಲ್ಲ ಆಸೆಗಳನೆಲ್ಲಿಂದ ತರಲಿ
ಬರಿದಾದ ಈ ಎದೆಗೂಡಲ್ಲಿ ಅಕ್ಷರಗಳ ಹೇಗೆ ಹುಡುಕಲಿ

ಅರ್ಥವಿಲ್ಲದ ಸಾಲುಗಳಿಂದ ಚರಣ ಪೂರ್ತಿಯಾಗುವುದು ಹೇಗೆ
ಒಬ್ಬಂಟಿಯಾಗಿ ಈ ಪ್ರೇಮಗೀತೆಯ ಹಾಡುವುದು ಹೇಗೆ

ಸಪ್ತಸಾಗರಗಳಾಚೆಯೆಲ್ಲೋ ನೀ ಅಡಗಿ ಕುಳಿತು
ಮೂಡಿಸಿರುವೆ ನನ್ನೊಳಗೆ ಎಂದೂ ಮಾಸದ ಗುರುತು

ಒಮ್ಮೆ ಬಂದು ನನ್ನ ನೋಡು ಕಣ್ಣ ತುಂಬಾ
ರೆಪ್ಪೆ ಹಿಂದೆ ಹಿಡಿದಿಡುವೆ ನಾ ನಿನ್ನ ಬಿಂಬ

ಭೂಮಿಗೂ ಬಾನಿಗೂ ಇರುವುದೆಷ್ಟೋ ಅಂತರ
ನಿನ್ನ ನೋಡಲಿಲ್ಲಿ ನನಗೆ ಅಷ್ಟೇ ಕಾತರ

ಹುಡುಗಾಟ ಸಾಕಿನ್ನು ಬೇಕೇ ಈ ಪರೀಕ್ಷೆ
ಚರಣ ಬರೆಯಲು ಜೊತೆಯಾಗು ಹುಸಿ ಮಾಡದೆ ನಿರೀಕ್ಷೆ

Tuesday, August 18, 2009

ನಾನು ಕಾರ್ ಡ್ರೈವ್ ಮಾಡುತ್ತಿದ್ದಾಗ...

ಹೋದ ಸಾರಿ ಊರಿಗೆ ಸ್ವಾತಂತ್ರ್ಯದಿನದಂದು ಹೋಗಿದ್ದಾಗ ನಾನು ನಮ್ ತಾತಂಗೆ ಹೇಳಿದ್ದೆ "ಇನ್ನೊಂದು ವರ್ಷದಲ್ಲಿ ನಾನೇಕಾರ್ ಡ್ರೈವ್ ಮಾಡಿಕೊಂಡು ಬರ್ತೀನಿ" ಅಂತ.ಆಗ ನಮ್ ತಾತ ಅಜ್ಜಿ ಇಬ್ರೂ "ನೀನು ಓಡಿಸ್ತೀಯಾ?" ಅಂತ ನಕ್ಕಿದ್ರು. ಅಮ್ಮನೋಡ್ತಾ ಇರಿ ಮುಂದಿನ ವರ್ಷ ಅವಳೇ ಓಡಿಸಿಕೊಂಡು ಬರ್ತಾಳೆ " ಅಂದ್ರು. ಅಂತೂ ಇಂತೂ ಕಾರ್ ಡ್ರೈವಿಂಗ್ ಕಲಿತು ಕಳೆದಭಾನುವಾರ(೧೬ರಂದು) ಒಂದು ಮದುವೆಗೆ ಹೋಗಬೇಕಿದ್ದರಿಂದ ನಾನೇ ಬೆಂಗಳೂರಿನಿಂದ ಕಾರ್ ಓಡಿಸಿಕೊಂಡು ಹೋಗಿದ್ದೆ.

ಹೋಗ್ತಾ ದಾರಿಯಲ್ಲಿ.....

. ತುಮಕೂರು - ಗುಬ್ಬಿ ಮಧ್ಯದ ದಾರಿಯಲ್ಲಿ ಮಲ್ಲಸಂದ್ರ ಅನ್ನೋ ಒಂದು ಊರು ಸಿಗುತ್ತೆ. ಅಪ್ಪ ಅಲ್ಲಿ ಹೂವು ತರ್ತೀನಿ ಗಾಡಿನಿಲ್ಲಿಸು ಅಂದ್ರು. ನಿಲ್ಲಿಸಿ ಅಪ್ಪ ಬರೋದನ್ನೆ ಕಾಯ್ತಾ ಇದ್ದೆ. ಆಗ ಒಬ್ಳು ಹುಡುಗಿ ಸುಮಾರು ೧೦ ವರ್ಷ ಇರ್ಬೇಕು ನೀರು ತಗೊಂಡುಹೋಗ್ತಿದ್ಳು. ಕಾರ್ ಒಳ್ಗೆ ಇಣುಕಿ ನಾನು ಕೂತಿದ್ದನ್ನ ನೋಡಿ ಅವರಮ್ಮನಿಗೆ "ನೋಡಿಲ್ಲಿ ಈಯಮ್ಮ ಕಾರ್ ಬಿಡ್ತಾ ಇರೋದಾ" ಅಂದ್ಳು.ಅವರಮ್ಮನೂ ಸೋಜಿಗದಿಂದ ಒಮ್ಮೆ ಕಾರ್ ಒಳಗೆ ಇಣುಕಿ ಮುಂದೆ ಹೋದಳು.

. ತುಮಕೂರು ಡೈರಿಯ ಬಳಿ ಅಪ್ಪ ಪೇಡ ತಗೊಳ್ಳೋಣ ಅಂದ್ರು. ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಹಿಂದೆ ಬರುತ್ತಿದ್ದಗಾಡಿಗಳ ಕಡೆ ನೋಡಿ ಯಾವುದೇ ಗಾಡಿಯಿರಲಿಲ್ಲವಾದ್ದರಿಂದ ಬಲಕ್ಕೆ ಬಂದೆ. ಅಲ್ಲಿ ನಿಂತಿದ್ದ ಒಬ್ಬ ಹುಡುಗ " ' L' ಬೋರ್ಡು " ಅಂದ. ನನ್ ಕಾರು ನನ್ನಿಷ್ಟ 'L' ಬೋರ್ಡಾದ್ರೂ ಹಾಕ್ತೀನಿ ಏನಾದ್ರು ಹಾಕ್ತೀನಿ ನಾನು ಸರಿಯಾಗಿ ಓಡಿಸ್ತಾ ಇರ್ಬೇಕಾದ್ರೆ ಕಾಮೆಂಟ್ ಯಾಕೆ ಅಂತ ಕೇಳ್ಬೇಕು ಅನ್ನಿಸಿದ್ರೂ ಸುಮ್ನೆ ಜಗಳ ಯಾಕೆ ಅಂತ ಏನೂ ಮಾತಾಡಲಿಲ್ಲ.

. ಮದುವೆಮನೆಗೆ ಹೋಗಿ ಮದುವೆ ಮುಗಿಸಿಕೊಂಡು ಬರುವಾಗ ಅಪ್ಪ ಕಾರ್ ಕೀ ಕೊಟ್ಟು ಗೇಟ್ ಹತ್ರ ಕಾರ್ ತಗೊಂಡು ಬಾಅಂದ್ರು. ನಾನು ತಂದು ಗೇಟ್ ಮುಂದೆ ನಿಲ್ಲಿಸಿದಾಗ ಅಪ್ಪ ಅಮ್ಮ ದೊಡ್ಡಪ್ಪ ದೊಡ್ಡಮ್ಮನ ಜೊತೆ ಮಾತಾಡ್ತಾ ಇದ್ರು. ನಾನುಬಂದಿದ್ದನ್ನು ನೋಡಿ ದೊಡ್ಡಪ್ಪ ವ್ಯಂಗ್ಯವಾಗಿ "ಯಾಕೆ ಇವತ್ತು ಬೇರೆ ಯಾರೂ ಡ್ರೈವರ್ ಸಿಗ್ಲಿಲ್ವಾ" ಅಂದ್ರು. ನಂಗೆ ಕೋಪ ಬಂತು. "ಯಾಕೆ ನಾನು ಡ್ರೈವ್ ಮಾಡ್ಬಾರ್ದಾ?" ಅಂದೆ. ಅಪ್ಪ ಇವತ್ತು ಬೆಂಗಳೂರಿಂದ ಅವಳೆ ಓಡಿಸಿಕೊಂಡು ಬಂದಿರೋದು ಅಂದ್ರು. ದೊಡ್ಡಪ್ಪ ಮತ್ತೊಮ್ಮೆ ವ್ಯಂಗ್ಯವಾಗಿ ನಕ್ಕು ಸುಮ್ಮನಾದ್ರು.

. ಮುಂದೆ ಊರಿಗೆ ಹೋಗಿ ಮನೆ ಮುಂದೆ ನಿಲ್ಲಿಸಿದಾಗ ಎಲ್ರೂ ಏನೋ ಜೋರಾಗಿ ನಗ್ತಿದ್ರು. ತಾತ ಏನೂ ಮಾತಾಡ್ಲಿಲ್ಲ. ಇನ್ನೂ೧೩ ವರ್ಷದ ನನ್ ತಮ್ಮಂಗೆ ನೀನು ಯಾವಾಗ್ ಕಲಿಯೋದು ಅಂದ್ರು ಅಷ್ಟೆ. ಅಜ್ಜಿ ನೀನೆ ಓಡಿಸ್ಕೊಂಡು ಬಂದುಬಿಟ್ಟಿದ್ದೀಯಾಅಂದ್ರು. ಅಜ್ಜಿಗೆ ಖುಷಿಯಾಗಿತ್ತು ನಾ ಕಲಿತದ್ದು. ತಾತಂಗೆ ಯಾಕೋ ಬೇಜಾರಾದಂಗಿತ್ತು.

. ಊಟ ಮುಗಿಸಿ ಮತ್ತೆ ವಾಪಸ್ ಹೊರಟ್ವಿ. ಅಲ್ಲಿ ದಾರಿಯಲ್ಲಿ ಒಂದು ಹುಡುಗಿ ಆಟ ಆಡ್ತಾ ಇದ್ದಳು. ಹಾರ್ನ್ ಮಾಡಿದೆ. ಗಾಡಿನೋಡಿ ಕಿರುಚಿದ್ಳು. "ಅಮ್ಮ ಬೇಗ ಓಡ್ ಬಾ. ಒಂದು ಹೆಂಗ್ಸು ಕಾರ್ ಓಡಿಸ್ತಾ ಇದ್ದಾಳೆ" ಅಂತ. ನಕ್ಕು ಮುಂದೆ ಬಂದೆ.

. ಇನ್ನು ಮುಂದೆ ಬಂದ್ರೆ ಒಂದು ನಾಲ್ಕೈದ್ ಜನ ಹುಡುಗ್ರು ನಿಂತಿದ್ರು. " ಟ್ರೈನಿಂಗ್ ಕೊಡ್ತಾ ಅವ್ರೆ" ಅಂತ ಇನ್ನೊಂದು ಕಾಮೆಂಟ್.

. ಮತ್ತೆ ಇನ್ನೇನು ಗುಬ್ಬಿ ಸಮೀಪ ಬಂದಾಗ ಯಾರೋ ಒಬ್ರು ಸೈಕಲ್ ತುಳಿಯುತ್ತಾ ಹಿಂದೆ ನೋಡ್ಕೊಂಡು ಬರ್ತಿದ್ರು. ಜೋರಾಗಿಹಾರ್ನ್ ಮಾಡಿದೆ. ತಕ್ಷಣ ಗಾಡಿ ಕಡೆ ನೋಡಿ ಒಂದು ಕ್ಷಣ ಹಾಗೇ ನಿಂತಿದ್ದು ಆಮೇಲೆ ಸೈಕಲ್ ಪಕ್ಕಕ್ಕೆ ನಿಲ್ಲಿಸಿ ಕಾರನ್ನೇ ನೋಡ್ತಾಇದ್ರು ಅಂತ ಹಿಂದೆ ಕುಳಿತಿದ್ದ ನನ್ ತಮ್ಮ ಹೇಳ್ದ. ಅಲ್ಲ ಒಬ್ಳು ಹುಡುಗಿ ಕಾರ್ ಡ್ರೈವ್ ಮಾಡಿದ್ರೆ ಇವ್ರಿಗೆಲ್ಲಾ ಏನಾಗುತ್ತೆ ಅಂತ. ಅಲ್ಲೆಲ್ಲಾ ಕಾರ್ ಡ್ರೈವಿಂಗ್ ಗೊತ್ತಿರೋ ಹುಡುಗಿಯರು ಕಮ್ಮಿ ಇರ್ಬಹುದು ಆದ್ರೆ ಅದೇ ಒಂದು ಸೋಜಿಗ ಅನ್ನುವಂತೆ ನೋಡೋದಾ?

ಇದೆಲ್ಲಾ ನನ್ ಕಿವಿಗೆ ಬಿದ್ದಿದ್ದಂತೂ ನಿಜ. ಆದ್ರೆ ಮೊದಲನೇ ಸಲ ಊರಿಗೆ ಕಾರ್ ಡ್ರೈವ್ ಮಾಡಿಕೊಂಡು ಹೋಗ್ತಾ ಇದ್ದೀನಿ ಅಂತನಾನು ತುಂಬಾ excite ಆಗಿ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೀನಾ??

ಗೊತ್ತಿಲ್ಲ "