Wednesday, July 16, 2008

ಚಂದಮಾಮ ಬಾರೋ

ರಾತ್ರಿ ಮಲಗಲೆಂದು ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದೆ
ಅಲ್ಲಿ ತೆರದ ಕಿಟಕಿಯಾಚೆ ನಿಂತಿದ್ದ ಒಬ್ಬ ಪೋರ
ನನ್ನಂಥ ಅನೇಕ ಹುಡುಗಿಯರ ನಿದ್ದೆ ಕೆಡಿಸಿದ ಚೋರ
ನನ್ನನ್ನೇ ದಿಟ್ಟಿಸುತ್ತಾ……..
ನಾಚಿಕೆಯಿಂದ ಹಾಗೆ ಮುಖವನ್ನು ಮುಚ್ಚಿಕೊಂಡೆ….
ಅವನ ಪ್ರತಿಕ್ರಿಯೆ ಏನಿತ್ತೋ ನಾ ಕಾಣೆ
ಯಾಕೋ ಏನೋ ಅವನು ನನ್ನವನೇ ಅಲ್ಲವೇ ನೋಡಿದರೆ ತಪ್ಪೇನು????
ಎಂದು ಮುಸುಕು ಸರಿಸಿ ಅವನನ್ನೇ ನಾನೂ ದಿಟ್ಟಿಸಿದೆ……
ಅದು ಏನಾಯ್ತೋ ಏನೋ ಅವನೇ ನಾಚಿಕೆಯಿಂದ ಮೋಡಗಳ ಮುಸುಕೆಳೆದುಕೊಂಡುಬಿಟ್ಟ……..

ಹೌದು ಕಣ್ರೀ ಮೊನ್ನೆ ನಾನು ಮಲಗಿದ್ದಾಗ ಕಿಟಕಿಯಿಂದ ಆ ಚಂದ್ರನನ್ನು ನೋಡಿದಾಗ ನನ್ನ ಮನಸಿಗನಿಸಿದ್ದೆ ಹೀಗೆ……

ವೈಜ್ಞಾನಿಕವಾಗಿ ಮಾತಾಡೋವಾಗ ಚಂದ್ರ ಒಂದು ಆಕಾಶಕಾಯ ಅಷ್ಟೆ……..ಆದ್ರೆ ಅದರೊಂದಿಗೆ ನಾವು ಒಂದು ರೀತಿಯ ಸಂಬಂಧ ಬೆಳೆಸಿಕೊಂಡುಬಿಟ್ಟಿದ್ದೀವಿ…… ಭೂಮಿನ ತಾಯಿ ಅಂತ ಪೂಜಿಸಿದರೆ ಚಂದ್ರನ್ನ ಪ್ರೀತಿಯಿಂದ ಮಾಮ ಅಂತ ಕರೀತೀವಿ ಅಲ್ವ……. ಅದೇನು ಮೋಡಿನೋ ಅದೇನೋ ಮಂತ್ರನೋ ಆ ಚಂದ್ರ ಒಂದು ನಿರ್ಜೀವ ವಸ್ತು ಅಂತ ನಂ ಮನಸು ಅಷ್ಟು ಸುಲಭವಾಗಿ ಒಪ್ಪಿಕೊಳ್ಳೊಲ್ಲ…….ಅದರೊಂದಿಗೆ ಒಂದು ಭಾವನಾತ್ಮಕ ಬಂಧವನ್ನು ಇಟ್ಟುಕೊಳ್ಳುವುದಕ್ಕೆ ಹಾತೊರೆಯುತ್ತೆ…… ಚಂದ್ರನನ್ನು ನೋಡಿದಾಗ ಒಂದು ರೀತಿಯ ಆನಂದವನ್ನು ಅನುಭವಿಸುತ್ತೆ…… ನಿಮ್ಮ ಬದುಕಲ್ಲೂ ಒಂದಿಲ್ಲೊಂದು ಬಾರಿ ಹಾಗೆ ಆಗಿರುತ್ತೆ ಅಲ್ವ…..

ಅಲ್ಲ ಯಾವ ತಾಯಿ ತಾನೆ ಚಂದ್ರನ್ನ ತೋರಿಸದೇ ತನ್ ಮಗುಗೆ ಊಟ ಮಾಡಿಸಿರುತ್ತಾಳೆ ಹೇಳಿ……ನಾವು ನೀವು ಎಲ್ಲ ಮಗುವಾಗಿದ್ದಾಗ ಅಮ್ಮನ ಕೈ ತುತ್ತಿನ ಸವಿಯ ಜೊತೆ ಚಂದ್ರನ ನೋಟದ ಸವಿಯನ್ನು ಅನುಭವಿಸಿದವರೇ ಅಲ್ಲವೇ……….ಅಲ್ಲಿ ನೋಡು ಚಂದ್ರ ಅಂತ ಚಂದ್ರನ್ನ ತೋರಿಸಿ ಚಂದ್ರನ್ನ ನೋಡುವಾಗ ಗೊತ್ತಿಲ್ಲದ ಹಾಗೆ ಬಾಯಿಗೆ ತುತ್ತಿಡುವ ತಾಯಿಯರೆಷ್ಟೋ…….ಅವರೆಲ್ಲ ಚಂದ್ರನಿಗೊಂದು ಥ್ಯಾಂಕ್ಸ್ ಹೇಳ್ಬೇಕು…….. ಯಾಕಂದ್ರೆ ಚಂದ್ರನೇ ಇರ್ಲಿಲ್ಲ ಆದ್ರೆ ಅವರು ಮಗುಗೆ ಊಟ ಮಾಡಿಸೋಕೆ ಎಷ್ಟು ಕಷ್ಟ ಪಡಬೇಕಿತ್ತು ಅಲ್ವ……

ಈ ಚಂದ್ರನ್ನ ನೋಡುತ್ತಾ ಊಟ ಮಾಡೋದು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಷ್ಟ……ಅದಕ್ಕೆ ಮೂನ್ ಲೈಟ್ ಡಿನ್ನರ್ ಅಂತ ಬೆಳದಿಂಗಳ ಊಟ ಮಾಡೋಕೆ ಇಷ್ಟ ಪಡೋದು….. ನಾವು ಒಂದು ಸಲ ಹಬ್ಬದ ದಿನ ಬೆಳದಿಂಗಳ ಊಟ ಮಾಡಿದ್ವಿ…..ಅದು ಒಂಥರಾ ಹೊಸ ಅನುಭವ………

ಕವಿಗಳಿಗೆ ಸಾಹಿತಿಗಳಿಗಂತೂ ಚಂದ್ರ ಅಂದ್ರೆ ತುಂಬ ಇಷ್ಟ ತಮ್ಮ ಅನೇಕ ಕವಿತೆಗಳಿಗೆ ರೂಪಕವಾಗಿ ಬಳಸಿರುತ್ತಾರೆ….. ಕುವೆಂಪು ಅವರು “ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು” ಅಂತ ಹಾಡಿದರೆ ಬೇಂದ್ರೆಯವರು “ ಬಿದಿಗಿ ಚಂದ್ರ ಚೋಗಡಿ ನಗಿ ಹೂ ಮಲ್ಲಿಗೆ ಮೂಡಿತ್ತ” ಅಂತಾರೆ……ಜನಪದ ಕವಿಗಳಂತೂ ಚಂದ್ರನ ಬಗ್ಗೆ ಅನೇಕ ಹಾಡುಗಳನ್ನು ಹಾಡುತ್ತಾರೆ……ಇನ್ನು ನಮ್ಮ ಸಿನಿಮಾ ಸಾಹಿತಿಗಳು ಈ ವಿಷಯದಲ್ಲಿ ಹಿಂದೆ ಇಲ್ಲ…..

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೋದ್ರೆ ಭಾದ್ರಪದ ಚೌತಿಯ ಚಂದ್ರನನ್ನು ನೋಡಬಾರದು ಅಂತಾರೆ…….ರಾತ್ರಿ ಹೊತ್ತಲ್ಲಿ ನಕ್ಷತ್ರಗಳ ಮಧ್ಯೆ ಚಕ್ರಾಧಿಪತಿಯಂತೆ ರಾರಾಜಿಸುವ ಆ ಚಂದ್ರನಿಗೆ ಅದೆಷ್ಟು ಧೈರ್ಯ ಅಲ್ವ ನಮ್ಮ ಗಣೇಶನನ್ನೇ ಆಡಿಕೊಂಡು ನಕ್ಕುಬಿಟ್ಟ…….ಅದಕ್ಕೆ ನಂ ಗಣುಮಾಮ ಅವನಿಗೆ ಶಾಪ ಕೊಟ್ಟು ಅವನ ಕೊಬ್ಬನ್ನು ಕಡಿಮೆ ಮಾಡಿದ….. ಅಲ್ವೇನ್ರಿ……

ಅದೇ ನಮ್ಮ ಊರ ಕಡೆ ಯುಗಾದಿಯ ಮರುದಿನದ ಚಂದ್ರನನ್ನು ನೋಡಿ ಆ ವರ್ಷದ ಆಯ-ವ್ಯಯ…ಮಳೆ-ಬೆಳೆ ಹೇಗಿರುತ್ತೆ ಅಂತ ಹೇಳ್ತಾರೆ……ಅದರಲ್ಲಿ ಎಷ್ಟು ನಿಜನೋ ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ ಆದ್ರೆ ಇದೆಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ ಅಲ್ವ…..ಅದಕ್ಕೆ ಅವರ ಮನಸಿನ ನಂಬಿಕೆಯನ್ನು ನಾವು ಪ್ರಶ್ನಿಸೋದು ಬೇಡ ಅಲ್ವ….

ಚಂದ್ರನ ಬಗ್ಗೆ ಯಾರು ಏನೇ ಹೇಳಲಿ ಈ ಭೂಮಿ ಮೇಲಿಂದ ನೋಡೋಕೆ ಅವನು ಫಳ ಫಳ ಹೊಳೆಯುವ ಬೆಳ್ಳಿ ತಟ್ಟೆಯಂತೆ ಕಾಣುತ್ತಾನೆ…..ಆ ತಟ್ಟೆಯಲ್ಲಿ ಕಾಣೋ ಅನೇಕ ಉಬ್ಬು ತಗ್ಗುಗಳು….ಅವುಗಳ ಮಧ್ಯೆಯೂ ನಮ್ಮನ್ನು ಆಕರ್ಷಿಸುವ ಆ ಸೌಂದರ್ಯ……ಆಹಾ…..ಪ್ರಕೃತಿಯ ಸೊಬಗನ್ನು ಅನುಭವಿಸಬೇಕು ಅನ್ನೋ ಆಸೆ ಇದ್ದರೆ ನಿಜವಾಗ್ಲೂ ಆ ನೋಟ ನಮ್ಮ ಮನಸೂರೆಗೊಂಡುಬಿಡುತ್ತೆ ಅಲ್ವ…….

ಆದ್ರೆ ನಾವೆಲ್ಲರೂ ವಾರ ವಾರ ರಜ ತಗೊಂಡ್ರೆ ಈ ಚಂದ್ರಂದು ಇನ್ನೊಂದು ಥರ ರಜ……. ಮೊದ್ಲು ಪೂರ್ತಿ ಕಂಡ್ರೆ ದಿನ ದಿನ ಸ್ವಲ್ಪ ಸ್ವಲ್ಪ ಭಾಗ ರಜೆ ತಗೊಳ್ಳುತ್ತ ಹೋಗುತ್ತೆ……. ಕೊನೆಗೆ ಒಂದು ದಿನ ಪೂರ್ತಿ ರಜ…….ಆ ದಿನ ಆಕಾಶ ನೋಡಿದಾಗ ಚಂದ್ರಿನಿಲ್ಲದ ಬೇಸರ ಕಾಡಿದರೂ…… ಅಲ್ಲಲ್ಲಿ ಮಿನುಗುವ ನಕ್ಷತ್ರಗಳ ಸೊಬಗನ್ನು ಆಸ್ವಾದಿಸೋ ಅವಕಾಶ ಸಿಗುತ್ತೆ…… ಆಮೇಲೆ ಮತ್ತೆ ಸ್ವಲ್ಪ ಭಾಗ ಮತ್ತೆ ಪ್ರತ್ಯಕ್ಷ ಆಗಿ ಅದು ಹೆಚ್ಚುತ್ತಾ ಹೋಗಿ ಕೊನೆಗೆ ಒಂದು ತಿಂಗಳೊಳಗೆ ಪೂರ್ಣ ಚಂದ್ರನ ದರ್ಶನ ಭಾಗ್ಯ ನಮಗೆ ದೊರೆಯುತ್ತೆ…….

ಇದನೆಲ್ಲ ನೋಡಿ ಅದರಿಂದ ಸಿಗುವ ಆನಂದವನ್ನು ನಮ್ಮ ಮನಸಿನ ಮೂಲೆಯಲ್ಲಿ ಅಚ್ಚಳಿಯದ ಹಾಗೆ ಕಾಪಾಡಿಕೊಂಡು ಪ್ರತಿ ದಿನ ಆ ಚಂದ್ರನಿಗೆ….. "ಚಂದಮಾಮ ಬಾರೋ" ಅಂತ ಹಾಡಿ ಕರೆಯೋಣವಾ?????

No comments:

Post a Comment