Friday, August 5, 2016

ಮಳೆ

ಈ ಪ್ರಕೃತಿ ತನ್ನಲ್ಲಿ ಏನೇನೆಲ್ಲ ಅದ್ಭುತಗಳನ್ನ ಹುದುಗಿಸಿಟ್ಟುಕೊಂಡಿದೆ…..ಈ ಅದ್ಭುತಗಳು ಒಂದು ಸಣ್ಣ ಕಲ್ಲಿರಬಹುದು ಅಥವಾ ಬೃಹತ್ ಪರ್ವತವಿರಬಹುದು…. ಪ್ರತಿಯೊಂದನ್ನು ಆಸ್ವಾದಿಸುವ ಮನಸಿದ್ದರೆ ಪ್ರಕೃತಿಯ ಪ್ರತಿ ವಸ್ತುವಿನಲ್ಲು ಒಂದು ಅದ್ಭುತ ವಿಷಯ ಅಡಗಿರುತ್ತೆ ಅಲ್ವ…..ಅಂಥ ಅದ್ಬುಥಗಳಲ್ಲಿ ಒಂದು ಈ ಮಳೆ….

ಮಳೆ ತುಂತುರು ಹನಿಯಾಗಿರಬಹುದು…..ಧೋ ಎಂದು ಸುರಿಯುವ ಸುರಿಮಳೆಯಾಗಿರಬಹುದು….. ಒಂದೇ ಸಲ ಅಚಾನಕ್ಕಾಗಿ ಬಂದು ಅಷ್ಟೆ ಬೇಗ ನಿಂತು ಹೋಗುವ ಜಲವರ್ಷವಾಗಿರಬಹುದು……ಎಲ್ಲ ಒಂದು ರೀತಿಯ ಅದ್ಭುತಗಳೇ…..

ಸೋನೆ ಮಳೆಯಲ್ಲಿ ಛತ್ರಿಯಿಲ್ಲದೆ ಆ ಚಿಟಪಟ ಹನಿಗಳಿಗೆ ಮುಖ ಒಡ್ಡಿ ನಡೆಯುವಾಗ…..ಆ ತುಂತುರು ಹನಿಗಳ ನಡುವೆಯೇ ಸ್ಕೂಟಿ ಓಡಿಸುವಾಗ ನಮಗೆ ತಾಗುವ ಪ್ರತಿಯೊಂದು ಹನಿಯು ಒಂಥರಾ ಆನಂದವನ್ನುಂಟು ಮಾಡುತ್ತೆ…..ಹಾಗೆ ಜೋರಾಗಿ ಮಳೆ ಸುರಿಯುವಾಗ ಛತ್ರಿ ಹಿಡಿದು ಕಾಲಲ್ಲಿ ನೀರನ್ನು ಚಿಮ್ಮುತ್ತ ನಡೆಯುವುದು……ಆಹಾ ಏನು ಮಜಾ ಅಲ್ವ…….

ಈ ಮಳೆಗಾಲ ಬಂತು ಅಂದ್ರೆ ನಮ್ಮ ನಾಲಿಗೆ ಚಪಲನು ಜಾಸ್ತಿಯಾಗುತ್ತೆ…… ಹೊರಗೆ ಮಳೆ ಸುರಿಯುತ್ತ ಇದ್ರೆ ಒಳಗೆ ಬೆಚ್ಚಗೆ ಕುಳಿತು ಬಿಸಿಯಾದ ತಿಂಡಿ ತಿನ್ನಬೇಕೆನ್ನುವ ಆಸೆ……. ಹುರಿದ ಕಡಲೆಬೀಜ, ಮುಸುಕಿನ ಜೋಳ…..ಆಹಾ ಏನು ಮಸ್ತಾಗಿರುತ್ತೆ …

ಈ ಮಳೆ ನೋಡಿದರೆ ಒಬ್ಬಬ್ಬರಿಗೆ ಒಂದೊಂದು ನೆನಪಾಗುತ್ತೆ…. ಮಳೆಯಲ್ಲಿ ನೆನೆದು ಜ್ವರ ಬಂದದ್ದು, ಸ್ಕೂಲಿಂದ ಮನೆಗೆ ಬರುವಾಗ ಮಳೆ ಬಂದು ಮನೆಗೆ ಓಡಿ ಬಂದದ್ದು, ಮಳೆಯಿಂದ ಒದ್ದೆಯಾಗಿರುವ ನೆಲದ ಮೇಲೆ ನಡೆಯುವಾಗ ಕಾಲು ಜಾರಿ ಬಿದಿದ್ದು, ಮಳೆ ನಿಂತ ಮೇಲೆ ದಾರಿಯಲ್ಲಿ ಹೋಗುವಾಗ ಯಾರೋ ನೀರು ಸಿಡಿಸಿದ್ದು, ಒಂದೇ ಛತ್ರಿಯನ್ನು ಮೂವರು ಹಿಡಿದುಕೊಂಡು ಮೂವರು ನೆನೆದರು ಛತ್ರಿ ಹಿಡಿದೆ ಮನೆಗೆ ಹೋಗಿದ್ದು, ಮಳೆಯಲ್ಲಿ ನಿಂತು ಐಸ್ ಕ್ರೀಮ್ ತಿಂದಿದ್ದು, ದಾರಿಯಲ್ಲಿ ಹೋಗುವಾಗ ಮಳೆ ಬಂದು ಮರದ ಕೆಳಗೆ ನಿಂತಿದ್ದು …..

ಭೂಮಿ ಮೇಲೆ ತನಗಿರೋ ಪ್ರೀತಿಯನ್ನು ವ್ಯಕ್ತ ಪಡಿಸೋಕೆ ಅಂತ ಆ ಆಗಸ ಕಳಿಸುವ ಪ್ರೇಮ ಸಂದೇಶ ಹೊತ್ತು ಬರುವ ಆ ನೀರ ಹನಿಗಳು ಭೂಮಿಗೆ ಚುಂಬಿಸಿ ಸಾರ್ಥಕವಾಗುತ್ತವೆ….ಭೂಮಿಯ ಅಂತರಾಳವನ್ನು ಸೇರಿ ಅದರೊಳಗೆ ಕೆಲ ಹೊತ್ತು ಕಳೆದು ನಂತರ ಆವಿಯಾಗಿ ಆಗಸಕ್ಕೆ ಭೂಮಿಯ ಪ್ರತಿನುಡಿಯನ್ನು ತಿಳಿಸುವ ಸಲುವಾಗಿ ತಮ್ಮ ಪಯಣ ಮುಂದುವರೆಸುತ್ತವೆ……ಈ ಪ್ರಕೃತಿಯಲ್ಲಿ ಇದಕ್ಕಿಂತ ಒಳ್ಳೆಯ ಪ್ರೇಮ ಸಂದೇಶ ರವಾನೆ ವ್ಯವಸ್ಥೆ ಇದೆಯಾ?

ಒಂದೊಂದು ಸಲ ನನಗನಿಸುತ್ತೆ ಈ ಮಳೆಗೂ ಪ್ರೀತಿಗೂ ಎಷ್ಟು ಸಾಮ್ಯತೆ ಇದೆ ಅಲ್ವ…… ಮೋಡ ತುಂಬಿದ ಆಗಸ ನೋಡಿ ಮಳೆ ಬರಬಹುದು ಎಂದು ಆಶಿಸುವಂತೆ ನಾವು ಪ್ರೀತಿಸುವವರು ನಮ್ಮ ಕಣ್ಣೆದುರಿಗೆ ಬಂದರೆ ಅವರ ಮಾತುಗಳನ್ನು ಕೇಳಲು ಮನಸು ಹಾತೊರೆಯುತ್ತೆ….. ಮಳೆ ಬಂದರೆ ಮಾತ್ರ ಭೂಮಿ ತಂಪಾಗುವುದು ಹಾಗೆ ಪ್ರೀತಿ ವ್ಯಕ್ತ ಪಡಿಸಿದಾಗ ಮಾತ್ರ ಅದು ಮನಸಿಗೆ ಸಂತೋಷ ಉಂಟು ಮಾಡುವುದು……ನನ್ನ ಪ್ರಕಾರ ಪ್ರೀತಿ ಅನ್ನೋದು ಕಪ್ಪೆಚಿಪ್ಪಿನಲ್ಲಿಟ್ಟು ಕಾಪಾಡುವಂಥದಲ್ಲ ಮಳೆಯಂತೆ ಎಲ್ಲ ಕಡೆ ಸುರಿದು ಎಲ್ಲರಿಗು ಸಂತೋಷ ನೀಡುವಂಥದ್ದು…ಮಳೆ ಅತಿಯಾದರೆ ಹೇಗೆ ಪ್ರವಾಹ ಉಂಟಾಗಿ ಕಷ್ಟ ನಷ್ಟ ಸಂಭವಿಸುತ್ತೋ ಹಾಗೆ ಪ್ರೀತಿ ಹೆಚ್ಚಾದರೆ ಅದು ನಮ್ಮ ಜೀವನಕ್ಕೆ ಅಡ್ಡಿ ಉಂಟು ಮಾಡುವಂಥದ್ದು…..ಅದಕ್ಕೆ ಪ್ರೀತಿ ಕೂಡ ಮಳೆಯಂತೆ ಹಿತ ಮಿತವಾಗಿರಬೇಕು……

ಏನೇ ಆಗ್ಲಿ ಮಳೆಯಿಂದ ಎಲ್ಲರಿಗೂ ಸಂತೋಷ ಸಿಗುತ್ತೆ…….ಚಿಟ ಪಟ ಮಳೆ ಹನಿಗಳಿಗೆ ಕೈ ಒಡ್ಡಿ ಆ ಹನಿಗಳ ಕಚಗುಳಿ ಅನುಭವಿಸುವುದಕ್ಕೆ ಈ ಕಾಲ ಸುಸಮಯ….ಅಂಥ ಅನುಭವವನ್ನು ಮಿಸ್ ಮಾಡಿಕೊಳ್ಳಬಾರದು ಅಲ್ವ……..

No comments:

Post a Comment