Wednesday, August 6, 2008

ನಗು ನಗುತಾ…….

ಯಾವುದೋ ಹೊಸ ಊರು, ಹೊಸ ಪರಿಸರ, ಹೊಸ ಜನ, ಒಬ್ಬಂಟಿಯಾಗಿ ಅಲ್ಲಿಗೆ ಕಾಲಿಟ್ಟಾಗ ನಮಗೆ ಎದುರಾದವರು ಒಂದು ಸುಂದರ ಹೂ ನಗೆ ಬೀರಿದರೆ ನಮ್ಮ ಮನಸಿಗೆ ಒಂಥರಾ ಖುಷಿಯಾಗುತ್ತೆ ಅಲ್ವ…. ಯಾರೋ ನಮ್ಮ ಸ್ನೇಹ ಬಯಸ್ತಾ ಇದ್ದಾರೆ ಅವರು ನಮ್ಮ ಸ್ವಲ್ಪ ಹೊತ್ತು ಜೊತೆಗಿರ್ತಾರೆ ಅನ್ನೋ ಭಾವನೆ ತಕ್ಷಣ ಮನಸ್ಸಲ್ಲಿ ಬಂದು ಹೋಗುತ್ತೆ….. ಒಂದು ನಗು ಇಬ್ಬರ ನಡುವೆ ಸಂಪರ್ಕ ಕೊಂಡಿಯಾಗಿಬಿಡುತ್ತೆ ಹೌದೋ ಅಲ್ಲವೋ….

ಅಂಥ ನಗು ಎಂಥ ಸಂದರ್ಭದಲ್ಲೂ ಮನಸಿನ ಪುಟದಿಂದ ಅಳಿಸಿ ಹೋಗೊಲ್ಲ ..... ಒಂದು ಸುಂದರ ಮುಗುಳುನಗೆ ಎಂಥ ಗಂಭೀರವಾದ ಸಂದರ್ಭವನ್ನು ತಿಳಿಯಾಗಿಸುತ್ತೆ... ಇಬ್ಬರ ನಡುವೆ ಒಂದು ಮಧುರ ಸಂಬಂಧ ಏರ್ಪಡುವ ಮುನ್ನ ಇಂಥ ಎಷ್ಟು ನಗು ವಿನಿಮಯವಾಗಿರುತ್ತೋ.... ಅವರ ಸಂಬಂಧ ಇರುವವರೆಗೂ ಇಂಥ ನಗು ವಿನಮಯ ಆಗುತ್ತಲೇ ಇರುತ್ತೆ ..... ಯಾಕಂದ್ರೆ ಈ ನಗು ನಮಗೆ ಅವರ ಮೇಲಿರೋ ಪ್ರೀತಿಯ ಸಂಕೇತವು ಹೌದು.....

ಈ ನಗುವಿಗೆ ಒಂದು ತೆರನಾದ ಮಾಂತ್ರಿಕ ಶಕ್ತಿಯಿದೆಯೇನೋ ಅಂತ ಅನಿಸುತ್ತೆ. ತುಂಬ ದುಃಖದಲ್ಲಿದ್ದಾಗ ಯಾರೋ ಹತ್ತಿರ ಬಂದು ಭುಜದ ಮೇಲೆ ಕೈಯಿಟ್ಟು ನಾನು ನಿನ್ನ ಜೊತೆಗಿರ್ತೀನಿ ಎನ್ನುವಂತೆ ಒಂದು ಸಣ್ಣ ನಗು ಅವರ ತುಟಿಯ ಮೇಲೆ ಹಾದು ಹೋದರೆ ಮನಸು ಒಂದು ಕ್ಷಣ ತನ್ನ ದುಃಖವನ್ನೆಲ್ಲ ಮರೆತುಬಿಡುತ್ತೆ…. ಜೊತೆಗೆ ಅವರ ಮೇಲಿನ ಪ್ರೀತಿನು ಜಾಸ್ತಿಯಾಗುತ್ತೆ..

ಎಲ್ಲರಿಗಿಂತ ಮುದ್ದಾದ ನಗು ಮಕ್ಕಳದ್ದು…. ಮಾತೆ ಬಾರದಿದ್ದರೂ ಅವರ ಒಂದು ನಗು ಸಾಕಷ್ಟು ವಿಷಯಗಳನ್ನು ಹೇಳುತ್ತೆ…. ಅವರು ಇಷ್ಟ ಪಡುವವರು ಎದುರು ಬಂದರಂತೂ ಕೇಕೆ ಹಾಕುತ್ತ ನಗುವ ಆ ಕಂದಮ್ಮಗಳನ್ನು ನೋಡ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗೊಲ್ಲ….. ಕೆಲವೊಂದು ಸಲ ಸಿಗ್ನಲಲ್ಲಿ ನಿಂತಾಗ ಪಕ್ಕದ ಗಾಡಿ ಮೇಲೆ ಕುಳಿತಿರುವ ಮಗುವಿನ ನಗು ನೋಡ್ತಾ ಗ್ರೀನ್ ಸಿಗ್ನಲ್ ಬಂದ್ರು ಅಲ್ಲೇ ಗಾಡಿ ನಿಲ್ಲಿಸಿಕೊಂಡಿದ್ದು ಹಿಂದಿರುವವರು ಹಾರ್ನ್ ಮಾಡಿದ ಮೇಲೆ ಮುಂದೆ ಹೋಗಿದ್ದೀನಿ….. ಆ ಸುಂದರ ನಗು ನೋಡಿ ಅವರಿಗೆ ಪ್ರತಿಕ್ರಯಿಸದವರು ನಿಜವಾಗಿಯು ಕಲ್ಲು ಹೃದಯದವರೇ ಆಗಿರಬೇಕು…… ಅಂತ ಮುಗ್ಧ ನಗು ನಾವು ದೊಡ್ದವರಾಗ್ತಾ ಆಗ್ತಾ ಎಲ್ಲಿ ಕಳೆದು ಹೋಗುತ್ತೆ????

ಬೆಳ್ಳಿಗ್ಗೆ ಎದ್ದಾಗ ನಗು ಮೊಗದಿಂದ ಗುಡ್ ಮಾರ್ನಿಂಗ್ ಹೇಳುವವರು ಇದ್ದರೆ ಆ ದಿನದ ಶುರುವಿನಲ್ಲೇ ಹೊಸ ಹುರುಪು ತುಂಬಿಕೊಳ್ತೀವಿ …… ಆ ನಗು ಮಾಸದಂತೆ ನಮ್ಮ ಮುಂದಿನ ಘಂಟೆಗಳು ಕಳೆದು ಹೋದರೆ ಆ ದಿನ ಏನೋ ಒಂಥರಾ ನೆಮ್ಮದಿಯ ಅನುಭವ…. ನಾವು ಕಾಲೇಜಿಗೆ ಹೋದಾಗ ಎದುರಾದವರಿಗೂ ಆ ನಗುವನ್ನು ಹಂಚಿ ಅವರ ನಗುವಿನಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬಹುದು…. ಹಾಗೆ ಮನೆಗೆ ಹಿಂದಿರುಗಿ ಬಂದಾಗ ಅದೇ ನಗುವನ್ನು ಮನೆಯವರಿಗೂ ಹಂಚಿ ಅವರ ಕಣ್ಣಲ್ಲಿ ಮೂಡುವ ಮಿಂಚನ್ನು ನೋಡಿ ಆನಂದ ಪಡಬಹುದು….. ಎಲ್ಲ ಕಡೆ ನಾವು ಬೀರಿದ್ದು ಅದೇ ನಗುವಾದ್ರು ಆ ನಗು ಎಂದಿಗೂ ಹಳೆಯದು ಅನಿಸೋಲ್ಲ ಅಲ್ವ…..

ಎಷ್ಟೇ ದುಃಖ ಇದ್ರೂ ನಗುವನ್ನು ಮಾಸದೆ ಇಟ್ಕೊಂಡಿರ್ತಾರಲ್ಲ ಅವರ ಬಗ್ಗೆ ನಿಜವಾಗ್ಲು ಒಂಥರಾ ಗೌರವ ಭಾವನೆ ಮೂಡುತ್ತೆ….. ನಾವು ನಮ್ಮ ಜೀವನದಲ್ಲಿ ಎದುರಾಗೋ ಸಣ್ಣ ಪುಟ್ಟ ತೊಡಕುಗಳಿಗೆ ಅಷ್ಟೊಂದು ಸಿಡುಕ್ತೀವಲ್ಲ ಇನ್ನು ಅಷ್ಟು ನೋವಿಟ್ಟುಕೊಂಡಿದ್ದರೂ ನಗುವೇ ಅವ್ರ ಮುಖದ ಮೇಲೆ ಕಾಣುತ್ತಲ್ಲ ಅವರಿಂದ ನಾವು ಕಲಿಯೋದು ಬಹಳಷ್ಟಿದೆ ಅಂತ ಅನಿಸುತ್ತೆ…. ಅದೇ ನಗು ಅವರ ನೋವುಗಳನ್ನು ಮರೆಸುತ್ತಿರಲೂ ಬಹುದು ಅಲ್ವ……..

ಕೆಲವೊಬ್ರು ಇರ್ತಾರೆ ನಕ್ಕರೆ ಎಲ್ಲಿ ಮುತ್ತು ಸುರಿದು ಹೋಗುತ್ತೋ ಅನ್ನೋ ಹಾಗೆ ಆ ಮುತ್ತುಗಳನ್ನು ಕಾಪಾಡೋ ಸಲುವಾಗಿ ತುಟಿ ಬಿರಿಯೋದೆ ಇಲ್ಲ… ನಾವು ಎಷ್ಟು ದಿನ ಇರ್ತೀವೋ ಯಾರಿಗೆ ಗೊತ್ತು…. ಇರೋ ಅಷ್ಟು ದಿನ ನಗ್ತಾ ಎಲ್ಲರನ್ನು ನಗಿಸುತ್ತ ಇದ್ದು ಬಿಡಬೇಕಪ್ಪ….. ನಗೋಕು ಕಂಜೂಸಿ ಮಾಡೋದ….ಬೇಡ….

ಎಲ್ಲರು ಅದನ್ನೇ ಬಯಸೋದು ಸದಾ ನಗ್ತಾ ನಗ್ತಾ ಇರ್ಬೇಕು ಅಂತ .... ಅಂಥ ನಗು ನಿಮ್ಮ ಬಾಳಲ್ಲಿ ಸದಾ ತುಂಬಿರಲಿ ಅಂತ ಮನಃ ಪೂರ್ವಕವಾಗಿ ನಾನು ಆಶಿಸ್ತೀನಿ……..

1 comment:

  1. Good post abt smile, they say a smile gives exercise to all ur face bones, and increase ur longevity.

    ReplyDelete