Wednesday, July 28, 2010

ನಾ ಕಳೆದುಹೋದೇನು....

ಮನಸಿದು ನನ್ನದು
ಪುಟ್ಟ ಕಂದಮ್ಮನಂತೆ.
ಮುಗ್ಧತೆಯೇ ಎಲ್ಲಾ
ಇನಿತೂ ಕಪಟವಿಲ್ಲ.

ಪುಟ್ಟ ಅಂಗಳದಲ್ಲಿನ
ವಿಹಾರ ಮುಗಿದಾಯ್ತು.
ಪ್ರಪಂಚದೊಳು ಕಾಲಿಡುವ
ಸಮಯ ಬಂದಾಯ್ತು.

ಮನೆಯಿಂದಾಚೆ
ಕಾಲಿರಿಸಲೂ ಅಂಜಿಕೆ.
ಕಾಣದ ಲೋಕವಿದು
ನಾ ಎದುರಿಸಲಿ ಹೇಗೆ?

ಹೊರಗೆ ಕತ್ತಲಲ್ಲೂ ಹೊಳೆವ
ಮಿಣುಕು ದೀಪಗಳ ಮಾಯೆಯೊಳಗೆ
ನಾ ಕುರುಡಿಯಾದೇನು.

ಕ್ಷಣಕೊಂದರಂತೆ ಬದಲಾಗುವ
ಬಿನ್ನಾಣದ ಮಾತುಗಳ ನಡುವೆ
ನಾ ಮೂಕಿಯಾದೇನು.

ಪರಿಚಿತರೂ ಅಜ್ಞಾತರಂತಿರುವ
ಸ್ವಾರ್ಥ ಜನರ ನಡುವೆ
ನಾ ಕಳೆದುಹೋದೇನು.

ನಂಬಿಹೆನು ನಾನು
ಆಸರೆಯು ನೀನೆಂದು.
ಈ ಕ್ರೂರ ಲೋಕದೊಳು
ಬೆಂಗಾವಲೆನಗೆಂದು.

ಹಿಡಿಯುವೆನು ಬಿಗಿಯಾಗಿ
ನಾ ನಿನ್ನ ಕೈಯನ್ನು.
ನಡೆಯದಿರು ದೂರಾಗಿ
ಸಡಿಲಿಸಿ ಹಿಡಿತವನ್ನು.

Friday, July 16, 2010

ಇನ್ನು ತಡವೇಕೆ?

ನನ್ನ ಎದುರು ನಿಂತು ನೀನು
ಮಾತನಾಡದಿದ್ದರೇನು
ನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?

ನನ್ನ ಕಂಡ ಒಡನೆ ನಿನ್ನ
ತುಟಿಯಂಚಿನಲ್ಲಿ ಮಿಂಚಿ ಹೋದ
ನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?

ನಾನು ಕಾಣದಿಲ್ಲದಾಗ
ರಾತ್ರಿ ಪೂರ ನಿದ್ರೆಯಿರದೆ
ನನ್ನ ನೆನೆದು ಕಂಡ ಕನಸು ಇನ್ನು ಗೌಪ್ಯವೇ?

ಹೃದಯ ಬರೆದ ಒಲವಿನೋಲೆ
ನನಗೆ ತೋರದಿದ್ದರೇನು
ನಿನ್ನ ಮನದ ಭಾವಗೀತೆ ನನಗೆ ಕೇಳದೆ?

ಸರಿಸಿಬಿಡು ಮೌನ ತೆರೆಯ
ಅರಳಲಿನ್ನು ಸುಖದ ಘಳಿಗೆ
ಕನಸು ಮನಸು ಹಂಚಿಕೊಳಲು ತಡವು ಏತಕೆ?

(ಪ್ರೇರಣೆ : ನನಗೆ ಬಂದ ಒಂದು sms )

Friday, July 2, 2010

ಪಯಣ

ಅಂತ್ಯವಿರದ ಹಾದಿಯಲ್ಲಿ
ದಿಗಂತದಾಚೆಗಿನ ಊರಿಗೆ
ವಿಶ್ರಾಂತಿಯಿಲ್ಲದ ಪಯಣ

ನೂರಾರು ಕವಲುಗಳು
ಹಲವಾರು ಯೋಚನೆಗಳು
ಹೊಸ ಲೋಕದನಾವರಣ

ದಾರಿ ತೋರುವ ಫಲಕಗಳಿಲ್ಲ
ಹೆಜ್ಜೆಗುರುತುಗಳ ಸುಳಿವಿಲ್ಲ
ನನ್ನದೇ ಹಾದಿಯ ಅನ್ವೇಷಣೆ

ಎದುರುಗೊಂಡ ಹಲವಾರು ಮುಖಗಳು
ಮುಗುಳ್ನಗೆಯೇ ಮಾತು
ಹೆಸರಿಲ್ಲದ ಸಂಬಂಧದಂಕುರ

ಜೊತೆಜೊತೆಗೆ ಕೆಲವು ಹೆಜ್ಜೆ
ಸವಿ ಮಾತ ಮಕರಂದ
ಸ್ನೇಹದಮೃತ ಸಿಂಚನ

ಕ್ರಮಿಸಿರುವುದೆರಡೇ ಮೈಲಿ
ಗಮ್ಯವಿನ್ನೂ ಬಹುದೂರ
ಗುರಿಯೆಡೆಗಿನ ನಡಿಗೆ ನಿರಂತರ

Thursday, July 1, 2010

ಮೊಗ್ಗಿನ ಮನಸು

ಸಂಜೆಯ ತಂಗಾಳಿಗೆ
ತನ್ನನ್ನೊಡ್ಡಿ ನಿಂತ ಮೊಗ್ಗು
ಮಾಸದ ನಗೆಯೊಂದಿಗೆ
ನಾಳೆಗೆ ಕಾದಿದೆ.

ಇರುಳ ಬೆಳದಿಂಗಳಾಟ
ರವಿಯ ಹೊಂಗಿರಣ ಸ್ಪರ್ಶ
ಕಚಗುಳಿಯಿಡುವ ಮಳೆ
ಕನಸಿನ ತೇರು ಹೊರಟಿದೆ.

ನಾಳೆಯನಿಂದೇ ಕಂಡವರ್ಯಾರು?
ಕನಸಿಗೆ ಬೇಲಿ ಕಟ್ಟುವರ್ಯಾರು?
ನಾಳೆಯ ಗೆಲ್ಲುವ ಛಲವೊಂದಿರಲು
ಹೂವಿನ ನಗುವನು ಕಸಿಯುವರ್ಯಾರು?

Wednesday, June 23, 2010

In love...

ನೀನು ನಮ್ಮ ಮನೆಗೆ ಬರೋದಕ್ಕೆ ಮುಹೂರ್ತ ನಿಗದಿಯಾದಾಗ ನನಗೇನೋ ಒಂಥರಾ ಕಾತರ. ನಾನು ತುಂಬಾ ದಿನದಿಂದ ಕಾಣ್ತಾ ಇದ್ದ ಕನಸು ನನಸಾಗೋ ಸಮಯ ಬಂತು ಅಂತ ಒಳಗೊಳಗೇ ಖುಷಿ. ಹೇಗಿರ್ತೀಯೋ ಏನೋ ಅನ್ನೋ ಅನುಮಾನ ಇದ್ರೂ ನನ್ ಸೆಲೆಕ್ಷನ್ ಅಲ್ವಾ ಚೆನ್ನಾಗೇ ಇರ್ತೀಯ ಅನ್ನೋ ವಿಶ್ವಾಸ. ಅಂತೂ ಇಂತೂ ಭಾನುವಾರ ಸಂಜೆ ನಮ್ಮನೆಗೆ ನೀನು ಬಂದಿದ್ದು ಯಾರಿಗೆ ಇಷ್ಟ ಆಯ್ತೋ ಇಲ್ವೋ ನನಗಂತೂ ತುಂಬಾ ಸಂತೋಷ ಆಯ್ತು.ನನ್ನ ತಮ್ಮಂಗೆ ಕೂಡ ನಿನ್ನ ಬಗ್ಗೆ ಕುತೂಹಲ ಇದ್ದಿದ್ದು ಗೊತ್ತಾಯ್ತು. ಪರವಾಗಿಲ್ಲ ನನ್ನ ಸೆಲೆಕ್ಷನ್ ಅಪ್ರೂವ್ ಮಾಡೋಕೆ ಇನ್ನೊಬ್ರು ಜೊತೆಗೆ ಸಿಕ್ಕಿದ್ರು ಅಂತನ್ನಿಸ್ತು.
ನೀನು ಮನೆಗೆ ಬಂದಾಗಿನಿಂದ ನಿನ್ನ ಬಗ್ಗೆ ತಿಳಿದುಕೊಳ್ಳೋಕೆ ತುಂಬಾ ಪ್ರಯತ್ನ ಪಡ್ತಾ ಇದ್ದೀನಿ. ನಿನ್ನ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದಾಗಲೂ ನಿನ್ನ ಬಗ್ಗೆ ಅಭಿಮಾನ ಜಾಸ್ತಿಯಾಗ್ತಾ ಇದೆ. ಹಾಗೆ ನನ್ನ ಆಯ್ಕೆ ಬಗ್ಗೆ ಹೆಮ್ಮೆ ಆಗ್ತಾ ಇದೆ. ನಾನು ನಿನ್ನನ್ನು ಇಷ್ಟೊಂದು ಹಚ್ಚಿಕೊಳ್ತೀನಿ. ಇಷ್ಟೊಂದು ಇಷ್ಟ ಪಡೋಕೆ ಶುರು ಮಾಡ್ತೀನಿ ಅಂತ ನಿಜವಾಗಲೂ ಅಂದುಕೊಂಡಿರಲಿಲ್ಲ. ಅಂತೂ ನನ್ನ ಜೀವನದಲ್ಲಿ ಪ್ರೀತಿ ಚಿಗುರೊಡೆದಿದೆ.
Yes I am in love... in love with my new cam...

ನಾನು ಮೊದಲನೇ ವರ್ಷದ ಪದವಿಪೂರ್ವ ತರಗತಿಯಲ್ಲಿದ್ದಾಗ ಅಪ್ಪನ camera ತಗೊಂಡು ಹೋಗಿ ಕಳೆದುಕೊಂಡಾಗಿನಿಂದ ನಾನು ಒಂದು camera ತಗೊಳ್ಳಬೇಕು ಅಂತ ತುಂಬಾ ಇಷ್ಟ ಇತ್ತು. ಆದ್ರೆ ಅಪ್ಪಂಗೆ ನೀವು ನನಗೊಂದು camera ಕೊಡಿಸಿ ಅಂತ ಕೇಳೋ ಧೈರ್ಯ ಇರ್ಲಿಲ್ಲ.ಪ್ರತಿ ಬಾರಿ ಅದರ ಬಗ್ಗೆ ಮಾತಾಡುವಾಗ ಮನೇಲಿದ್ದ camera ಕಳೆದು ಹಾಕಿದ್ದೀನಿ ಅನ್ನೋ ಪಾಪ ಪ್ರಜ್ಞೆ ನಾನು ಆ ಅರ್ಹತೆ ಕಳೆದುಕೊಂಡಿದ್ದೀನಿ ಅಂತ ನನ್ನನ್ನ ಎಚ್ಚರಿಸುತ್ತಿತ್ತು. ಆದ್ರೆ ನನಗೆ ನಮ್ಮ ಕಾಲೇಜಿನ ವತಿಯಿಂದ Prof.MRD Merit Scholarship ಅಂತ ರೂ.೫೦೦೦ ಕೈಗೆ ಬಂದಾಗ ಇದರಿಂದ ನಾನು camera ತಗೊಳ್ಳಬೇಕು ಅಂತ ಅನ್ನಿಸಿದ್ರೂ ಈ ದುಡ್ಡಿಗೆ ನಾನು ಬಯಸುವಂಥಾ camera ಸಿಗೋದಿಲ್ಲ ಅಂತ ಗೊತ್ತಿತ್ತು. ಆದ್ರೂ ಅಪ್ಪ "ಈ ದುಡ್ಡಲ್ಲಿ ಏನ್ಮಾಡ್ತೀಯಮ್ಮಾ? " ಅಂತ ಕೇಳಿದಾಗ," ಅಪ್ಪ ನಾನು camera ತಗೊಳ್ತೀನಿ" ಅಂತ ಹೇಳ್ದೆ. ಅಪ್ಪ "ತಗೊಳ್ಳೋದು ತಗೊಳ್ತೀಯ ಚೆನ್ನಾಗಿರೋದೇ ತಗೋ. ಉಳಿದ ದುಡ್ಡು  ನಾನು ಕೊಡ್ತೀನಿ" ಅಂತ ಹೇಳಿದಾಗ ಖುಷಿಯಿಂದ ಕುಣಿದಾಡಿದ್ದೆ. ಇದಾಗಿ ೬-೭ ತಿಂಗಳಾದರೂ camera ತೆಗೆದುಕೊಳ್ಳುವ  ಯೋಜನೆ ಮುಂದೂಡುತ್ತಲೇ ಹೋಯ್ತು.

ಹೋದ ವಾರ ಅಪ್ಪನ ಜೊತೆ bank ಗೆ ಹೋದಾಗ "ಅಪ್ಪ, camera ತಗೊಳ್ತೀನಿ. ನನ್ನ ಅಕೌಂಟಲ್ಲಿರೋ ದುಡ್ಡು ಡ್ರಾ ಮಾಡ್ತೀನಿ" ಅಂತ ಹೇಳಿ ದುಡ್ಡು ಡ್ರಾ ಮಾಡಿ ಮನೆಗೆ ತಂದಿಟ್ಟೆ. ಆಮೇಲೆ BSNL Training ಗೆ ನೋಂದಣಿ ,GRS trip ಅಂತ ಸಮಯ ಹೊರಟೇ ಹೋಯ್ತು. ಭಾನುವಾರ ಬೆಳಿಗ್ಗೆ ಎಲ್ರೂ ತಿಂಡಿ ತಿಂದು ಮಾತಾಡ್ತಾ ಕೂತಿದ್ದಾಗ "ಅಪ್ಪ ಇವತ್ತು ಏನಾದ್ರೂ ಕೆಲ್ಸ ಇದ್ಯಾ?" ಅಂದೆ. ಅಪ್ಪ "ಯಾಕೆ camera ತಗೊಳ್ಳೋಕಾ?" ಅಂದ್ರು. ಹೂಂ ಅಂದೆ. "ಸರಿ. ಸಂಜೆ ಹೋಗೋಣ" ಅಂದ್ರು. ಸಂಜೆ ರಾಜಾಜಿನಗರದಲ್ಲಿರೋ ezone ಕಡೆ ಹೊರಟಿತು ನಮ್ಮ ಸವಾರಿ. ಅಲ್ಲಿ ನಾನು ತಗೊಂಡಿದ್ದು ನಮ್ಮ budget ಗೆ ಒಪ್ಪುವಂಥ Sony Cybershot W320.

ಅದರ features ಬಗ್ಗೆ handbook ಅಲ್ಲಿ ಓದಿ ಒಂದೊಂದನ್ನೇ ಪ್ರಯೋಗ ಮಾಡುತ್ತಾ, Image editing tool PMB ಅಲ್ಲಿ ನಾನು Image Processing ಅಲ್ಲಿ ಕಲಿತದ್ದನ್ನು ಉಪಯೋಗಿಸಿ ಚಿತ್ರಗಳನ್ನು edit ಮಾಡ್ತಾ ಈ ರಜೆ ಕಳೀತಾ ಇದ್ದೀನಿ.ದಿನೇ ದಿನೇ ನನ್ನ camera ಬಗ್ಗೆ ಒಲವು ಜಾಸ್ತಿಯಾಗ್ತಾ ಇದೆ. ಒಲವು ಜಾಸ್ತಿಯಾಗುತ್ತೋ ಅಥವಾ ಹೋಗ್ತಾ ಹೋಗ್ತಾ ಕಮ್ಮಿಯಾಗುತ್ತೋ ಗೊತ್ತಿಲ್ಲ. ಆದ್ರೆ ಒಂದಂತೂ ನಿಜ "Photography is not my passion. Its just that I am interested in it" . ಈ ವಾರ ನಾ ತೆಗೆದ ಚಿತ್ರಗಳಲ್ಲಿ ನನಗೆ ಇಷ್ಟ ಆದ ಚಿತ್ರಗಳು ಇವು.... :)



Friday, June 4, 2010

ನೀನ್ಯಾರೋ???

ಪರಿಚಯಕ್ಕೂ ಮೊದಲೇ ನನ್ನ
ಸೆಳೆದುಕೊಂಡು ನಿನ್ನ ಕಡೆಗೆ
ನನ್ನ ಗೆದ್ದ ಜಾದುಗಾರ ನೀನ್ಯಾರೋ?

ನನ್ನ ಮನದಂಗಳಕ್ಕೆ ಇಣುಕಿ
ಮಧುರ ತರಂಗಗಳನೆಬ್ಬಿಸಿ
ಮನವ ಕದಡಿದ ಪೋರ ನೀನ್ಯಾರೋ?

ಕಣ್ಣ ರೆಪ್ಪೆಯನ್ನು ಮುಚ್ಚಿದ್ದರೂ
ನೆನಪಾಗಿ ನನ್ನ ಬಿಡದೆ ಕಾಡಿ
ನಿದ್ರೆ ದೂರ ಮಾಡಿದ ತುಂಟ ನೀನ್ಯಾರೋ?

ಬೇಕು ಎಂದು ನನ್ನ ಕೂಡದೆ
ಬೇಡವೆಂದು ದೂರ‍ ದೂಡದೆ
ಹತ್ತಿರವಿದ್ದೂ ದೂರ ನಿಲ್ಲೋ ಗೆಳೆಯ ನೀನ್ಯಾರೋ?

ಕಷ್ಟ ಸುಖದಿ ಜೊತೆಗೆ ನಿಂತು
ನನ್ನ ತುಂಬಾ ನೀನೇ ತುಂಬಿ
ಹೆಸರ ತಿಳಿಸದ ಚೋರ ನೀನ್ಯಾರೋ?

Wednesday, June 2, 2010

ದಾರಿ ಹುಡುಕಬೇಕಿದೆ...

ಮನಸಿನ ಎಲ್ಲಾ ಮಾತುಗಳು
ಮೌನದ ಮುಸುಕಿನಲ್ಲೇ ಜೀವಿಸುತ್ತಿದ್ದಾಗ
ಅವುಗಳಿಗೆ ಅಕ್ಷರ ರೂಪ ಕೊಡಬಲ್ಲೆನೆಂಬ
ಆಶಾಭಾವನೆಯಿಂದ ಬರೆಯಲಾರಂಭಿಸಿದೆ.
ಆದರೆ ನನಗೀಗ ಅನಿಸುತಿದೆ
ತೋಚಿದ್ದನ್ನೆಲ್ಲಾ ನಾ ಬರೆಯಲಾರೆನೆಂದು
ಕೆಲವು ತುಸು ಗಂಭೀರ‍..ಹಲವು ತೀರಾ ಬಾಲಿಶ
ಕೆಲವೋ ಅರ್ಥವಿಲ್ಲದ ದಿಕ್ಕಿಲ್ಲದ ಆಸೆಗಳು....
ಮನಸಿನೊಳಗಿರುವುದನ್ನು ನಾನು ಹಂಚಿಕೊಳ್ಳಬೇಕಿದೆ
ಆದರೆ ಅವುಗಳನ್ನು ಅಕ್ಷರಗಳಲ್ಲಿ ಬಂಧಿಸಲಾರೆ...
ಭಾವಗಳನ್ನು ಬಂಧನದಿಂದ ಮುಕ್ತಗೊಳಿಸಬೇಕಿದೆ
ಆದರೆ ಅದಕ್ಕೊಂದು ದಾರಿಯನ್ನು ಹುಡುಕಬೇಕಿದೆ...

Saturday, May 15, 2010

ಮನಸಿದು ಗೊಂದಲಗಳ ಗೂಡು

ಇಲ್ಲಿ ಕೊನೆ ಮೊದಲಿಲ್ಲ
ಅರ್ಥದ ಹುಡುಕಾಟ ವ್ಯರ್ಥ
ಅಯೋಮಯ ಪದಪುಂಜ

ಸ್ಮೃತಿ ಪಟಲದ ಮೇಲೆ
ಬೇಡದ ಗೊಡವೆಗಳ ತಾಂಡವ ನೃತ್ಯ
ಅರ್ಧಸತ್ಯದ ಅಟ್ಟಹಾಸ

ಸುಡುವ ನಿರಾಸೆಯ ಬೆಂಕಿ
ಕನಸೆಂಬ ಕೂಸುಗಳ ಕಗ್ಗೊಲೆ
ಸಿಡಿದೇಳಲಾಗದ ಅಸಹಾಯಕತೆ

ಅಂಜಿಕೆಯ ನೆಳಲಲ್ಲೇ ಕೊಳೆತ
ದಾಕ್ಷಿಣ್ಯದರಮನೆಯಲ್ಲಿ ದಾಸ್ಯ
ಇನ್ನೆಲ್ಲೋ ಸ್ವಾತಂತ್ರ್ಯದ ಮೊಳಕೆ

ಭ್ರಮೆಯ ಜಾಲದೊಳಗೆ ಬಂಧಿ
ಕಣ್ಣು ಕುಕ್ಕುವ ಕಾಮನೆಗಳು
ಚಾಂಚಲ್ಯವಷ್ಟೇ ಸ್ಥಿರ

ಮನದ ಕಿನಾರೆಯ ಮೇಲೆ
ದ್ವಂದ್ವಗಳ ಚಂಡಮಾರುತ ದಾಳಿ
ಗೊಂದಲಗಳ ಓಕುಳಿ

ನಾ ನೋಡಿದಂತೆ ಲೋಕ
ಅಂತರಾಳದಲ್ಲಿ ಸೌಖ್ಯ
ಕಂಡದ್ದಷ್ಟೇ ನನಗೆ ತಿಳಿದ ಸತ್ಯ

ಕಾರ್ಮೋಡ ಕವಿದ ಬಾನು
ಅಂಚಲ್ಲೊಂದು ಬೆಳ್ಳಿರೇಖೆ
ಅವಕಾಶಗಳ ದಿಗಂತದ ವಿಸ್ತರಣ

Saturday, May 8, 2010

ಅಮ್ಮ

ಇವತ್ತು ಬೆಳಿಗ್ಗೆ ಎದ್ದು ದಿನಪತ್ರಿಕೆ ಓದೋಣ ಅಂತ ಹೋದಾಗ ಅಪ್ಪ ಮುಖಪುಟ ಹಿಡಿದು ಕೂತಿದ್ದರು.ಪಕ್ಕದಲ್ಲೇ ಇದ್ದ ಲವಲvk ಹಿಡಿದವಳಿಗೆ ಮೊದಲ ಕಂಡದ್ದು ಅಮ್ಮಂದಿರ ದಿನದ ವಿಶೇಷ ಅಂಕಣ. ಆಗ ನಾನು ಯಾಕೆ ನನ್ನಮ್ಮನ ಬಗ್ಗೆ ಬರೆಯಬಾರದು ಅನ್ನಿಸ್ತು. ಅದರ ಫಲವಾಗಿ ಈ ಪೋಸ್ಟ್.

ನನಗಿಂತ ಮೊದಲು ನಮ್ಮಪ್ಪ ಅಮ್ಮನಿಗೆ ಒಂದು ಹೆಣ್ಣು ಮಗು ಇದ್ದಿದ್ದರಿಂದ ನಾನು ಹುಟ್ಟಿದಾಗ ಗಂಡು ಮಗು ಆಗಬೇಕು ಅಂತಾನೆ ಎಲ್ಲರ ಬಯಕೆಯಾಗಿತ್ತು.ಅದು ಸುಳ್ಳಾದಾಗ ಈ ವಿಷಯವಾಗಿ ಮಾತುಗಳನ್ನು ಕೇಳಿದ್ದು ನನ್ನಮ್ಮ, ಆ ಮಾತುಗಳು ನನ್ನ ತಮ್ಮ ಹುಟ್ಟುವವರೆಗೆ ಕೇಳುತ್ತಲೇ ಬಂದರು.ಆದರೂ ಅಮ್ಮ ಯಾವತ್ತೂ ಆ ಅಸಹನೆಯನ್ನು ನಮ್ಮ ಮುಂದೆ ತೋರಿಸಿಲ್ಲ.

ಬಹುಶಃ ಬೇರಾವುದೇ ಮಗು ನೀಡಿರದಷ್ಟು ಕಷ್ಟವನ್ನು ಚಿಕ್ಕವಳಿದ್ದಾಗ ನಾನು ಅಮ್ಮಂಗೆ ಕೊಟ್ಟಿದ್ದೀನಿ. ಅಮ್ಮನ್ನ ಬಿಟ್ಟು ಬೇರೆ ಯಾರ ಬಳಿಯೂ ಹೋಗುತ್ತಿರಲಿಲ್ಲ. ಅಪ್ಪನ ಬಳಿ ಕೂಡ ಹೋಗ್ತಾ ಇರ್ಲಿಲ್ಲ. ಅಮ್ಮ ಅಡುಗೆ ಮಾಡುತ್ತಿರಲಿ,ಬಟ್ಟೆ ಒಗೆಯುತ್ತಿರಲಿ ಅಥವಾ ಮನೆ ಒರೆಸುತ್ತಿರಲಿ ನನ್ನನ್ನು ಯಾವಾಗಲೂ ಎತ್ತಿಕೊಂಡೇ ಇರ್ಬೇಕಿತ್ತು. ಒಂದು ನಿಮಿಷ ಕೆಳಗಿಳಿಸಿದರೂ ನನ್ನ ಸೈರನ್ ಶುರು. ೧೦ ತಿಂಗಳಿಗೆಲ್ಲಾ ಚೆನ್ನಾಗಿ ಮಾತನಾಡಲು ನೆಡೆದಾಡಲು ಕಲಿತ ಮೇಲಂತೂ ನನ್ನನ್ನು ಸುಧಾರಿಸುವುದೇ ಅಮ್ಮನಿಗೆ ದೊಡ್ಡ ತಲೆನೋವಾಗಿತ್ತು. ನಮ್ಮಮ್ಮನ ಮೂರೂ ಮಕ್ಕಳಲ್ಲಿ ಆರೋಗ್ಯದ ವಿಷಯದಲ್ಲಿ ತುಂಬಾ ಸೆನ್ಸಿಟಿವ್ ಆಗಿದ್ದು ನಾನು. ಹಾಗಾಗಿ ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು.

ನನಗಾಗ ಸುಮಾರು ೩ ವರ್ಷವಿದ್ದಿರಬೇಕು. ವಿಪರೀತ ಜ್ವರದಿಂದ ಪ್ರಜ್ಞೆ ತಪ್ಪುವಂತಾಗಿತ್ತು. ಆ ಜ್ವರ ಗುಣವಾದ ಮೇಲೆ ನಾನು ನನ್ನಪ್ಪನನ್ನು ತುಂಬಾ ಹಚ್ಚಿಕೊಂಡಿದ್ದು. ಅಲ್ಲಿಯವರೆಗೆ ಎಲ್ಲದಕ್ಕೂ ಅಮ್ಮ ಅಮ್ಮ ಅನ್ನುತ್ತಿದ್ದವಳು ಅಪ್ಪನ ಮುದ್ದಿನ ಮಗಳಾಗಿದ್ದು ಅಮ್ಮನಿಗೆ ಸ್ವಲ್ಪವಾದರೂ ಬೇಜಾರಾಗಿರುತ್ತೆ ಅಲ್ಲಾ...

ಆಮೇಲೆ ಅಮ್ಮನಿಗಿಂತ ಅಪ್ಪನೇ ಹತ್ತಿರವಾಗುತ್ತಾ ಹೋದರು. ಅಪ್ಪ ಮನೆಗೆ ಬಂದ ತಕ್ಷಣ ಅವರ ತೊಡೆಯೇರಿ ಕುಳಿತುಬಿಡುತಿದ್ದೆ. ಯಾರಾದರೂ ನೀನು ಅಪ್ಪನ ಮಗಳಾ ಅಮ್ಮನ ಮಗಳಾ ಅಂತ ಕೇಳಿದ್ರೆ ನಾನು ನಮ್ಮಪ್ಪನ ಮಗಳು ಅಂತಾನೇ ಹೇಳ್ತಿದ್ದೆ. ನನಗೆ ನೆನಪಿರೋ ಹಾಗೆ ನಾನು ನಮ್ಮಮ್ಮನ ಮಗಳು ಅಂತ ಹೇಳಿಯೇ ಇಲ್ಲ. ಅಮ್ಮಂಗೆ ಆಗ ನಾನೆಷ್ಟು ಕಷ್ಟ ಪಟ್ರೂ ನನ್ನ ಮಗಳು ಅದನ್ನು ತಿಳಿದುಕೊಳ್ತಾ ಇಲ್ಲವಲ್ಲಾ ಅನ್ನೋ ನೊವಿತ್ತಾ?? ಗೊತ್ತಿಲ್ಲ....

ಆದ್ರೂ ಅಮ್ಮಂಗೆ ನನ್ನ ಮೇಲಿನ ಕಾಳಜಿ ಕಡಿಮೆಯಾಗಲಿಲ್ಲ. ನನ್ನಂತೆ ನನ್ನ ಮಕ್ಕಳೂ ಆಗಬಾರದು. ಪ್ರತಿಯೊಂದಕ್ಕೂ ಇನ್ನೊಬ್ಬರ ಮೇಲೆ ಡಿಪೆಂಡ್ ಆಗಬಾರದು. ಹೆಣ್ಣು ಮಕ್ಕಳೂ ಸ್ವಾವಲಂಬಿಗಳಾಗಬೇಕು ಎಂಬುದು ನಮ್ಮಮ್ಮನ ಆಸೆಯಾಗಿತ್ತು. ಹಾಗಾಗಿಯೇ ಅಕ್ಕ ಡಿಗ್ರಿ ಮುಗಿಸುವ ಮುನ್ನ ಬಂದ ಎಲ್ಲಾ ಪ್ರಪೋಸಲ್ ಗಳನ್ನೂ ಅಮ್ಮ ತಾವಾಗಿಯೇ ತಿರಸ್ಕರಿಸಿದ್ದರು. ಕೆಲವನ್ನಂತೂ ಮನೆಯವರೆಲ್ಲರ(ಅಪ್ಪನದೂ ಸಹ) ವಿರೋಧ ಕಟ್ಟಿಕೊಂಡು ತಾವೊಬ್ಬರೇ ಎದುರಿಸಿದ್ದರು.

ಕೆಲವೊಮ್ಮೆ ಅಮ್ಮ ನಾನಾಡಿದ ಮಾತನ್ನ ವಿರೋಧಿಸಿದಾಗ ಅವರು ನನ್ನ ಶತ್ರುವೇನೋ ಅನ್ನೋ ಹಾಗೆ ನೋಡಿದ್ದೀನಿ. ಯಾವಾಗಲೋ ಅಮ್ಮನ ಮಡಿಲಲ್ಲಿ  ಮಲಗಲು ಹೋದಾಗ ಅಮ್ಮ "ಅಯ್ಯೋ ಕಾಲು ನೋಯ್ತಾ ಇದೆ ನೀನು ಬೇರೆ ಬಂದ್ಯಾ ಮಲಗೋಕೆ" ಅಂತ ಅಂದಿದ್ದನ್ನೇ ಹಿಡಿದುಕೊಂಡು ಅಮ್ಮನಿಗೆ ನನ್ನ ಬಗ್ಗೆ ಪ್ರೀತಿನೇ ಇಲ್ಲ ಅಂತಾನೂ ಯೋಚ್ನೆ ಮಾಡಿದ್ದೀನಿ. ಅಮ್ಮನಿಗಿಂತ ನಾನು ಹೆಚ್ಚು ವಿಷಯ ತಿಳಿದುಕೊಂಡಿದ್ದೀನಿ ಅಂತ ಅಮ್ಮನ ಮುಂದೇನೆ ಬೀಗಿದ್ದೀನಿ. ಅಮ್ಮ ಏನಾದ್ರೂ ತಪ್ಪು ಮಾತಾಡಿದಾಗ ಅಪ್ಪನ ಜೊತೆ ಸೇರಿ ಅವರನ್ನು ಗೇಲಿ ಮಾಡಿದ್ದೀನಿ.

ನನಗೆ ಸಿ.ಇ.ಟಿ.ಯಲ್ಲಿ
೯ನೆಯ rank ಬಂದಾಗ "ದಿ ಹಿಂದೂ" ದಿನಪತ್ರಿಕೆಯವರು ದೂರವಾಣಿ ಸಂದರ್ಶನ ನಡೆಸಿದ್ದರು. ಆಗಲೂ ನಾನು ಅಪ್ಪನ ಮಗಳಾಗಿಯೇ ಉತ್ತರಿಸಿದ್ದೆ. "ನನಗೆ ವಿಶ್ವಾಸವಿಲ್ಲದಿದ್ದರೂ ನನ್ನಪ್ಪ ನನಗೆ ನೀನು ಒಳ್ಳೆಯ rank ಪಡೀತೀಯ ಅಂತಿದ್ರು. ಅವರು ಆ ರೀತಿ ನನ್ನಲ್ಲಿ ವಿಶ್ವಾಸ ತುಂಬಿದ್ದುದರಿಂದಲೇ ನಾನು ಈ rank ಪಡೆಯಲು ಸಾಧ್ಯವಾಯ್ತು" ಅಂತ ಹೇಳಿದ್ದೆ. ಅದನ್ನು ಕೇಳಿ ಅಮ್ಮನಿಗೇನನಿಸಿತೋ ಏನೋ "ನೋಡು ನನ್ನ ಮಗಳು ಅವರಮ್ಮ ಅವಳಿಗೇನೂ ಮಾಡೇ ಇಲ್ಲ ಅನ್ನೋ ಥರಾ ಮಾತಾಡ್ತಾಳೆ. ಅವಳಿಗೆ ಅವಳ ಅಪ್ಪಾನೇ ಎಲ್ಲ " ಅಂತಂದ್ರು. ಮೊದಲ ಸಲ ನನಗೆ ನಾನು ನಮ್ಮಮ್ಮನ್ನ neglect ಮಾಡ್ತಾ ಇದ್ದೀನಾ ಅನ್ನೊ ಪಾಪ ಪ್ರಜ್ಞೆ ಕಾಡಿದ್ದು ಆಗಲೇ.

ನಾನು ಇಂಜಿನಿಯರಿಂಗ್ ಸೇರಿದ ಮೇಲೆ ಅಮ್ಮನಿಗೆ gall bladder ಅಲ್ಲಿ ತೊಂದರೆ ಉಂಟಾಗಿ ಸುಮಾರು ೨ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಗಲೂ ನಾನು ಅಮ್ಮನ್ನ ನೋಡೋಕೆ ಅಂತ ಆಸ್ಪತ್ರೆಗೆ ಹೋಗಿದ್ದು ಮೂರೋ ನಾಲ್ಕು ಬಾರಿ ಅಷ್ಟೆ. ನನಗ್ಯಾಕೋ ಆಸ್ಪತ್ರೆಯಲ್ಲಿರುವವರನ್ನು ಹೋಗಿ ಮಾತಾಡಿಸಬೇಕು ಅಂತ ಅನ್ನಿಸೋದೇ ಇಲ್ಲ.ಆಗಂತೂ ಅಮ್ಮ ನಾನು ಸತ್ರೂ ನನ್ನ ಮಗಳು ಬೇಜಾರು ಮಾಡಿಕೊಳ್ಳೊಲ್ಲವೇನೋ ಅಂದ್ರು. ಈಗಲೂ ಕೆಲವೊಮ್ಮೆ ನಾನು ಆಗ ಮಾಡಿದ್ದು ಸರೀನಾ ತಪ್ಪಾ ಗೊತ್ತಾಗದೇ ಒದ್ದಾಡ್ತೀನಿ.

ಆದರೂ ಇವತ್ತಿಗೂ ನಾನು ಅಪ್ಪನ ಮಗಳೇ. ಅಪ್ಪನ ತೊಡೆಯ ಮೇಲೆ ಮಲಗಿದಂತೆ ಅಮ್ಮನ ಮಡಿಲಲ್ಲಿ ಮಲಗೊಲ್ಲ. ಅಪ್ಪನ ಕೈತುತ್ತು ಸವಿದಂತೆ "ಅಮ್ಮ ತಿನ್ನಿಸು" ಅಂತಾನೂ ಕೇಳೊಲ್ಲ. ಹೀಗ್ಯಾಕೆ??? ನನಗೋಸ್ಕರ ಅಮ್ಮ ಕಷ್ಟ ಪಡ್ತಾರೆ ಅಂತ ಗೊತ್ತಿದ್ರೂ ಅಮ್ಮ ಎಲ್ಲರಿಗಿಂತ ನಂಗೆ ನೀವು ತುಂಬಾ ಇಷ್ಟ ಅಂತ ಯಾಕೆ ಹೇಳೊಲ್ಲ? ನಂಗೊತ್ತು ನೀನು ಯಾವತ್ತಿದ್ರೂ ನಿಮ್ಮಪ್ಪನ ಮಗಳೇ ಅಂತ ಅಮ್ಮ ಅಂದಾಗ, ಇಲ್ಲಮ್ಮ ನಾನು ನಿಮ್ಮ ಮಗಳೂ ಕೂಡ ಅಂತ ಯಾಕೆ ಹೇಳೊಲ್ಲ? ಅಪ್ಪನ ಪ್ರೀತಿ ಮುಂದೆ ಅಮ್ಮನ ಪ್ರೀತಿ ಯಾಕೆ ಮಂಕಾಗಿ ಕಾಣ್ತಾ ಇದೆ? ಉತ್ತರ ಗೊತ್ತಿಲ್ಲ...