Friday, May 29, 2009

ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?

ನಮ್ಮ ಕಾಲೇಜಿಗೆ ಸ್ವಾಯತ್ತತೆ ಬಂದಾಗಿನಿಂದ ನಮಗೆ ಕೊನೆಗೆ ಫಲಿತಾಂಶ ಅಂತ ಕೊಡೋದು ಹತ್ತಕ್ಕೆ ಇಷ್ಟು ಅಂಕ ಅಂತ. ಅದರಲ್ಲಿ ೯ಕ್ಕಿಂತ ಜಾಸ್ತಿ ಬಂದವರಿಗೆ ಜಯನಗರದಲ್ಲಿರೋ ’ಬುಕ್ ಪ್ಯಾರಡೈಸ್’ ನಲ್ಲಿ ಪುಸ್ತಕ ಕೊಳ್ಳಲು ೧೦೦೦ ರೂಪಾಯಿಗಳ ಬಹುಮಾನ. ಕಳೆದೆರಡು ಸೆಮೆಸ್ಟರಿನ ಬಹುಮಾನ ಒಟ್ಟಿಗೆ ಬಂದದ್ದರಿಂದ ೨೦೦೦ ರೂ ಮೌಲ್ಯದ ಪುಸ್ತಕಗಳನ್ನು ಆ ಪುಸ್ತಕದಂಗಡಿಯಿಂದ ಪಡೆಯಬೇಕಿತ್ತು.
ಈಗ್ಗೆ ಒಂದು ತಿಂಗಳ ಹಿಂದೆ ಅಪ್ಪನ್ನ ಜಯನಗರಕ್ಕೆ ಕರೆದುಕೊಂಡು ಹೋಗಿ ೧೦೦೦ ರೂ. ಮೌಲ್ಯದ ಪುಸ್ತಕ ತಂದಿದ್ದೆ ಇನ್ನು ೧೦೦೦ ರೂ.ಗಳ ಪುಸ್ತಕ ತೆಗೆದುಕೊಳ್ಳುವುದು ಬಾಕಿಯಿತ್ತು. ಅದಕ್ಕೆ ಬೇರೆ ಈ ಭಾನುವಾರವೇ (ಮೇ ೩೧) ಕೊನೆಯ ದಿನ ಅಂತ ಘೋಷಿಸಿಯಾಗಿತ್ತು.ಅಪ್ಪ ಈ ಸಲ ಸರಿಯಾಗಿ ದಾರಿ ನೋಡಿಕೋ ಮುಂದಿನ ಸಲದಿಂದ ನಾನು ಬರೊಲ್ಲ ಅಂತ ಹೇಳಿ ಕರೆದುಕೊಂಡು ಹೋಗಿದ್ರು.ಹೋಗ್ತಾ ಒಂದು ದಾರಿ ಬರ್ತಾ ಒಂದು ದಾರಿ. ಸರಿಯಾಗಿ ತಿಳಿಯಲಿಲ್ಲ. ಏನೇ ಆಗಲಿ ಈ ಸಲ ನಾನೇ ಹೋಗಿ ಪುಸ್ತಕ ತೆಗೆದುಕೊಳ್ಳೋಣ ಅಂತ ನನ್ನ ಗೆಳತಿ ಅಶ್ವಿನಿಯನ್ನು ಕೇಳಿದೆ "ಬರ್ತೀರೇನ್ರೀ ಹೋಗಿ ಪುಸ್ತಕ ತಂದುಬಿಡೋಣ" ಅಂತ "ಸರಿ" ಅಂದಳು.
ಮೈಕ್ರೊ ಪ್ರೊಸೆಸರ್ ಪರೀಕ್ಷೆ ಮುಗಿಸಿಕೊಂಡು ಗಿರಿನಗರದಲ್ಲಿರುವ ಹುಡುಗಿಯರ ಹಾಸ್ಟೆಲ್ ಕಡೆ ಹೊರಟೆ. ಅಷ್ಟು ಹೊತ್ತಿಗೆ ನನ್ನ ಗೆಳತಿ ತಯಾರಾಗಿದ್ದಳು. ಇಬ್ಬರೂ ಸ್ಕೂಟಿಯೇರಿ ಅಲ್ಲಿಂದ ಹೊರಟ್ವಿ. ಇನ್ನು ಮುಖ್ಯರಸ್ತೆಗೆ ಬಂದಿರಲಿಲ್ಲ ನನ್ನ ಗೆಳತಿಯನ್ನು ಕೇಳಿದೆ " ನಿಮಗೆ ಜಯನಗರಕ್ಕೆ ಹೋಗೋದು ಹೇಗೆ ಅಂತ ಗೊತ್ತೇನ್ರೀ" ಅಂತ.ಅದಕ್ಕವಳು "ಯಾಕ್ರೀ ನಿಮ್ಗೆ ಗೊತ್ತಿಲ್ವಾ?" ಅಂತ ನನ್ನನ್ನೇ ಕೇಳಿದ್ಳು. "ಇಲ್ಲ" ಅಂದೆ "ಮತ್ತೆ ಹೇಗೆ ಹೋಗೋದು" ಅಂದ್ಳು. "ನೋಡೋಣ ನಡೀರಿ ಕೇಳಿಕೊಂಡು ಹೋಗೋಣ" ಅಂತ ಧೈರ್ಯ ಮಾಡಿ ಮುಖ್ಯರಸ್ತೆಗೆ ಬಂದೇ ಬಿಟ್ವಿ.
ಸರಿ ಕಾಲೇಜು, ಕತ್ರಿಗುಪ್ಪೆ,ಪದ್ಮನಾಭನಗರ( ನಮ್ಮ ಕಾಲೇಜು ಸುತ್ತಮುತ್ತ ನನಗೆ ತಿಳಿದಿರುವುದಿಷ್ಟೇ) ಎಲ್ಲ ದಾಟಿ ಸ್ವಲ್ಪ ಮುಂದೆ ಬಂದ್ವಿ ರಸ್ತೆ ದುರಸ್ತಿಯಲ್ಲಿತ್ತು. ಅಲ್ಲಿ ಹೋಗುತ್ತಿದ್ದ ಎಲ್ಲ ವಾಹನಗಳೂ ಎಡಕ್ಕೆ ತಿರುಗುತ್ತಿದ್ದರಿಂದ ನಾನೂ ಗಾಡಿಯನ್ನು ಆ ಕಡೆ ತಿರುಗಿಸಿದೆ. ಅಶ್ವಿನಿ "ಹೀಗೆ ಏನ್ರೀ ಹೋಗೋದು" ಅಂದ್ಳು. "ಗೊತ್ತಿಲ್ಲ, ಕೇಳೋಣ" ಅಂದೆ. ಅಂದ್ರೂ ಗಾಡಿ ನಿಲ್ಲಿಸದೆ ಹಾಗೆ ಮುಂದೆ ಹೋಗ್ತಾ ಇದ್ದೆ. ಆದ್ರೆ ಹೋಗ್ತಾ ಅಲ್ಲಿಗೆ ರಸ್ತೆ ಮುಗಿದಿತ್ತು ಬಲಕ್ಕೋ ಎಡಕ್ಕೊ ತಿರುಗಲೇಬೇಕಿತ್ತು. ಎಡಕ್ಕೆ ತಿರುಗಿ ಅಲ್ಲಿದ್ದ ಹಣ್ಣಿನಂಗಡಿಯವರನ್ನು ಕೇಳಿದೆ " ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು" ಅವರೇನೋ ಹೇಳ್ತಿದ್ರು ಸರಿಯಾಗಿ ಕೇಳ್ತಾ ಇರ್ಲಿಲ್ಲ. ಅಶ್ವಿನಿ ಗಾಡಿಯಿಂದ ಕೆಳಗಿಳಿದು ಹೋಗಿ ಕೇಳಿಕೊಂಡು ಬಂದು "ಬಲಕ್ಕೆ ತಿರುಗಿಸಬೇಕಿತ್ತಂತೆ" ಅಂದ್ಳು ಸರಿ ಬಲಕ್ಕೆ ತಿರುಗಿಸ್ದೆ.
ಹಾಗೆ ಸ್ವಲ್ಪ ಮುಂದೆ ಬಂದ್ರೆ ಯಾಕೋ ಸರಿ ದಾರಿ ಅಲ್ಲವೇನೋ ಅನ್ನಿಸ್ತು. ಅಲ್ಲಿದ್ದ ಪೇಪರ್ ಅಂಗಡಿಯವರನ್ನು ಅದೇ ಪ್ರಶ್ನೆ ಕೇಳಿದ್ವಿ ಅವರು "ದಯಾನಂದ ಸಾಗರ್ ಕಾಲೇಜು ಮುಂದೆ ಹೋಗಿ ಬಂಟರ ಸಂಘದತ್ತ ಕೇಳೀ ಯಾರು ಬೇಕಾದ್ರೂ ಹೇಳ್ತಾರೆ" ಅಂದ್ರು. ಅಯ್ಯೊ ಅದೆಲ್ಲ ಎಲ್ಲಿದೆ ಅಂತ ಗೊತ್ತಿಲ್ಲ ಅನ್ನೋದು ನನ್ನ ಮುಖದಿಂದಲೇ ಗೊತ್ತಾಯ್ತು ಅನಿಸುತ್ತೆ. " ಈಗ ಬಂದಿದ್ದೀರಲ್ಲ ಇದೇ ದಾರಿಯಲ್ಲಿ ಹಿಂದೆ ಹೋಗಿ ದಯಾನಂದ ಸಾಗರ್ ಕಾಲೇಜು ಸಿಗುತ್ತೆ. ಅಲ್ಲಿಂದ ಮುಂದೆ ಹೋಗಿ ಅಂದ್ರು" ಸರಿ ಮತ್ತೆ ಆ ಕಡೆ ಹೊರಟ್ವಿ . ಆ ಹಣ್ಣಿನಂಗಡಿಯನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಸ್ವಲ್ಪವೇ ದೂರದಲ್ಲಿ ಕಾಲೇಜು ಸಿಕ್ಕಿತು. ಅಲ್ಲಿಂದ ಮುಂದೆ ಹೋಗಿ ಒಂದು ಸಿಗ್ನಲ್ ಹತ್ರ ನಿಂತಿದ್ದಾಗ ಪಕ್ಕದಲ್ಲಿದ್ದ ಸವಾರರನ್ನು ಮತ್ತೆ ಅದೇ ಪ್ರಶ್ನೆ ಕೇಳಿದೆ ಅವರು ಸೀದಾ ಹೋಗಿ ಎಡಕ್ಕೆ ತಿರುಗಿ ಅಂದ್ರು. ಮುಂದೆ ಬರ್ತಾ ಇದ್ದಾಗ ಒಬ್ಬ ಸೈಕಲ್ ಸವಾರ ನಮ್ಮ ಮುಂದೇನೇ ಬಂದು ಇಲ್ಲಿ ಹೋಗಿ ಅಂತ ಆ ತಿರುವನ್ನು ತೋರಿಸಿದ. ಬಿಜಾಪುರದವಳಾದ ಅಶ್ವಿನಿ "ಏನ್ರೀ ಬೆಂಗಳೂರಿನವರು ಇಷ್ಟೊಂದು ಹೆಲ್ಪ್ ಫುಲ್ಲಾ" ಅಂದ್ಳು. ಮಾತಾಡದೆ ಮುಂದೆ ಹೋಗ್ತಾ ಇದ್ದಾಗ ಬನಶಂಕರಿ ಬಸ್ ನಿಲ್ದಾಣದ ಸಮೀಪ ಬಂದಿದ್ದೀವಿ ಅಂತ ಗೊತ್ತಾಯ್ತು.
ಅಲ್ಲಿ ಪಕ್ಕದಲ್ಲಿದ್ದ ಆಟೋ ಚಾಲಕನಿಗೂ ಮತ್ತದೇ ಪ್ರಶ್ನೆ "ಇಲ್ಲಿಂದ ಮೂರನೇ ಸಿಗ್ನಲ್ಲಲ್ಲಿ ಎಡಕ್ಕೆ ತಿರುಗಿ" ಅಂತ ಹೇಳಿದ್ರು.ಹೋದ್ವಿ. ಕೆಂಪು ಸಿಗ್ನಲ್ ಇತ್ತು. ಎಡಕ್ಕೆ ತಿರುಗುವ ಮುನ್ನ ಪಕ್ಕದಲ್ಲಿದ್ದ ಬಸ್ ಚಾಲಕನಿಗೆ ಮತ್ತೆ ಅದೇ ಪ್ರಶ್ನೆ. "ಇಲ್ಲೇ ಎಡಕ್ಕೆ ತಿರುಗಿ"ಅಂದ್ರು. ಹಾಗೆ ಹೋದ್ವಿ. ಜಯನಗರ ನಾಲ್ಕನೇ ಹಂತ ತಲುಪಿಯಾಗಿತ್ತು. ಅಲ್ಲಿ ೯ನೇ ಮುಖ್ಯರಸ್ತೆಗೆ ಹೋಗಬೇಕಿತ್ತು. ಸರಿ ೬ , ೭ , ೮ ಕಂಡ್ರೂ ೯ ಕಾಣಲೇ ಇಲ್ಲ ಮುಂದೆ ಹೋಗಿಬಿಟ್ಟಿದ್ವಿ. ಅಲ್ಲಿ ಮತ್ತೊಬ್ಬರನ್ನು ಕೇಳಿದ್ವಿ ಆದ್ರೆ ಪ್ರಶ್ನೆ ಬೇರೆ " ೯ನೇ ಮುಖ್ಯರಸ್ತೆಯಲ್ಲಿರೋ ಬುಕ್ ಪ್ಯಾರಡೈಸ್ ಗೆ ಹೇಗೆ ಹೋಗೋದು" ಅಂತ. ಅವರು ಹೇಳಿದ ಹಾಗೆ ಹೋಗ್ತಾ ಇದ್ವಿ ಅಷ್ಟರಲ್ಲಿ ಅಲ್ಲಿದ್ದ ಒಂದು ದೇವಾಲಯ ಕಣ್ಣಿಗೆ ಬಿತ್ತು. ಹೋದ ಸಲ ಅಪ್ಪನ ಜೊತೆ ಹೋದಾಗ ನೋಡಿದ್ದ ನೆನೆಪಿತ್ತು.ಅಲ್ಲಿ ಎಡಕ್ಕೆ ತಿರುಗಿ ನೋಡಿದ್ರೆ ಬುಕ್ ಪ್ಯಾರಡೈಸ್ ಗೆ ಹೋಗೋ ದಾರಿ ’ಒನ್ ವೇ’. ಸರಿ ಮುಂದಿನ ರಸ್ತೆಯಿಂದ ಅಲ್ಲಿಗೆ ಹೋಗಿ ಪುಸ್ತಕ ತಂದದ್ದಾಯಿತು. ಅಲ್ಲಿಂದ ಬರುವಾಗ ಅಪ್ಪ ತೋರಿದ್ದ ದಾರಿ ನೆನಪಿದ್ದುದರಿಂದ ಅದೇ ದಾರಿಯಲ್ಲಿ ವಾಪಸ್ ಬಂದು ಅಶ್ವಿನಿಯನ್ನು ಹಾಸ್ಟೆಲ್ ಗೆ ಬಿಟ್ಟು ನಾನೂ ಮನೆ ಸೇರಿದೆ.
ನನಗೆ "ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?" ಅಂತ ಹೇಳಿದ ಎಲ್ಲರಿಗೂ ನನ್ನ ಧನ್ಯವಾದಗಳು. ಇದರಿಂದ ನನಗೆ ಇನ್ನು ಬೆಂಗಳೂರಲ್ಲಿ ಎಲ್ಲಿಗೆ ಬೇಕಾದ್ರು ಹೋಗಬಹುದು ಅನ್ನೋ ಧೈರ್ಯ ಬಂದಿದೆ.

Saturday, April 25, 2009

ಮಳೆ

ಬಾನಲ್ಲಿ ಗುಡುಗಿದನು ಮೇಘರಾಜ
ಭೂಮಿಯ ಜೊತೆ ಮಾತನಾಡಬಯಸಿ
ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ
ಕೇಳಲೇ ಇಲ್ಲವೆಂಬಂತೆ ನಟಿಸಿ

ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು
ಕಳುಹಿಸಿದನವ ಮಿಂಚೆಂಬ ಬೆಳಕು
ಆದರೆ ಅದೂ ನೀಡಲಿಲ್ಲ
ಭೂಮಿಯ ನಟನೆಗೆ ಯಾವುದೇ ತೊಡಕು

ಗಾಢ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ
ಎಂದು ಸುರಿಸಿದ ವರ್ಷಧಾರೆ
ಅದರಿಂದ ಪುಳಕಗೊಂಡು ಪರಿಮಳ ಸೂಸಿದರೂ
ಪ್ರತಿಕ್ರಿಯಿಸಲಿಲ್ಲ ಧರೆ

ಕುಪಿತನಾದ ಮೇಘರಾಜ
ಆರ್ಭಟಿಸಿದಾಗ ಸಿಡಿಲು ಬಂದೆರಗಿತು
ನಡುಗಿ ಹೋದಳು ಭೂಮಿ
ಇದರೊಂದಿಗೆ ಅವಳ ನಟನೆಯೂ ಕೊನೆಗೊಂಡಿತು

ಭೂಮಿಯ ಚುಂಬಿಸಿ ಮೇಘರಾಜನ
ಸಂದೇಶ ರವಾನಿಸಿತು ಮಳೆ
ಅವನೆಲ್ಲ ತನ್ನ ಒಡಲಾಳದಲ್ಲಿ
ಬೆಚ್ಚಗೆ ತುಂಬಿಸಿಕೊಂಡಳು ಇಳೆ

Wednesday, March 11, 2009

ನಿನ್ನಲೊಂದು ಬಿನ್ನಹ

ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ?

ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ?


ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ?

ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ ಸಹಮತವಿದ್ದುದೂ ನಿಜವಲ್ಲವೆ?


ಏಕೀ ಸಂಶಯ ಅಪನಂಬಿಕೆ ನುಸುಳಿದೆ ನಮ್ಮ ನಡುವಲ್ಲಿ?

ಅಥವಾ ಸಮಾಜ ಏನೆನ್ನಬಹುದೆಂಬ ಭಯ ಮನೆಮಾಡಿದೆಯೇ ನಿನ್ನಲ್ಲಿ?


ಇದೇ ಮೊದಲಲ್ಲ ನೀ ನನ್ನ ಬಯಕೆಗೆ ತಣ್ಣೀರೆರಚಿದ್ದು

ಸವಿಮಾತ ಮೂಲಕವೇ ನನ್ನ ಪುಟ್ಟ ಹೃದಯಕ್ಕೆ ಚುಚ್ಚಿದ್ದು


ಕಂಗಳ ತುಂಬಿರುವ ಹನಿಗಳು ನಿನಗೆ ಕಾಣದೆ?

ತಾಳಲಾರೆ ನೋವ ನಾನಿನ್ನು ಮುಂದೆ


ನಾ ಬರೆದ ಬಾಳಚಿತ್ರ ಕಣ್ಣೀರಿನಿಂದಲೇ ಅಳಿಸಿ ಹೋಗಿದೆ

ಪುನಃ ಅದನು ಚಿತ್ರಿಸುವ ಆಸೆಯು ಬತ್ತಿ ಹೋಗಿದೆ

ಇನ್ನು ನೀನೆ ನನ್ನೀ ಬಾಳ ಕಥೆಗಾರ

ಮರುನುಡಿಯಿಲ್ಲದೆ ಪಾಲಿಸುವೆ ನಿನ್ನ ಆದೇಶವ ಪೂರ"


ಇಲ್ಲ…. ಹೀಗೆ ಹೇಳಿ ನನ್ನ ಕನಸನ್ನೆಲ್ಲ ಸುಟ್ಟು ಹಾಕಲು ನಾ ಯೋಗಿಯಲ್ಲ

ನನ್ನಾಸೆಯ ನೀನು ಗೌರವಿಸುವೆಯೆಂಬ ಆಶಯವೂ ಸೋತಿಲ್ಲ


ಹೇಳು ಮುಂದೊಂದು ದಿನ ನನಗೂ ಸಮಯ ಬರುವುದಲ್ಲವೇ?

ನನ್ನ ಕನಸಿನ ಜೀವನ ಜೀವಿಸಲು ಅವಕಾಶ ಕೊಡುವೆಯಲ್ಲವೇ?

Sunday, March 1, 2009

ಬಾ ನನ್ನ ಜೊತೆಯಾಗಿ

ಬೈಕನ್ನೇರಿ ಇರುಳಿನಲಿ
ಬೀಸುವ ಗಾಳಿಯ ವೇಗದಲಿ
ಘಟ್ಟದ ತಿರುವುಗಳನ್ನು ದಾಟಿ
ದೂರ ಕಳೆದು ಹೋಗುವ||

ಮನೋಹರ ಬೆಟ್ಟದಂಚಿನಲ್ಲಿ
ಹೂಗಳ ಏಣಿ ಮಾಡಿ
ಮೋಡದ ಮೇಲೆ ಏರುತ
ಚಂದ್ರಲೋಕಕ್ಕೆ ಹಾರುವ||

ಚುಕ್ಕಿ ಚಂದ್ರಮರ ಮದುವೆಗೆ
ಚಪ್ಪರವ ಕಟ್ಟುವ
ಅವರ ಮಿಲನ ಮಹೋತ್ಸವದಿ
ಸಂಭ್ರಮದಿ ಪಾಲ್ಗೊಳ್ಳುವ||

ಬಂದ ತಾರೆಗಳನೆಲ್ಲ ಎಣಿಸುವ
ಪ್ರತಿ ತಾರೆಗೂ ನಮ್ಮ
ಕನಸ ಬರೆದು ಕಟ್ಟುವ
ಸ್ವಪ್ನಲೋಕವನ್ನೆ ಬರಿದು ಮಾಡುವ||

ಜಗದ ನಿಯಮ ಮುರಿಯುವ
ಕಾಲವನ್ನೆ ತಡೆಯುವ
ಮೈ ಮರೆತು ವಿಹರಿಸುತ
ಇರುಳ ಪೂರ ಕಳೆಯುವ||

ನಾ ಪ್ರಕೃತಿಯ ಮಡಿಲಲ್ಲಿ
ನೀ ನನ್ನ ಮಡಿಲಲ್ಲಿ
ಬೇರೇನು ಬೇಕು ಹೇಳು
ಪ್ರೀತಿಯೆ ತುಂಬಿರಲು ಕಂಗಳಲಿ||

ಹೇಳು ಗೆಳೆಯ ಬೇರೆಲ್ಲಿದೆ
ಅವನಿಯೊಳಿಂಥ ಸುಖ
ನನಗ್ಯಾರುಂಟು ನೀನಲ್ಲದೆ
ಬಾ ನನ್ನ ಜೊತೆಯಾಗಿ ಸಖ||

Friday, February 27, 2009

ನಿನಗಾಗಿ ಕಾದಿರುವೆ

ಹುಚ್ಚೆದ್ದು ಕುಣಿಯುತಿರುವ

ಆಸೆಗಳನೆಲ್ಲ ತಡೆದಿಟ್ಟುಕೊಂಡು

ಹಾರಾಡುತಿರುವ ಮನಸನ್ನು

ತಹಬಂದಿಗೆ ತಂದುಕೊಂಡು

ತಪ್ಪದೆ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||


ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ

ಕಾಳಜಿಯಿಂದ ಸಿಂಗರಿಸಿಕೊಂಡು

ಮನದಾಳದಲ್ಲಿ ನಿನ್ನ

ನೆನಪುಗಳನ್ನೇ ತುಂಬಿಕೊಂಡು

ನಿರಾಸೆಗೊಳಿಸದೆ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||


ಮುನಿಸಿಕೊಂಡಿದ್ದರೆ ರಮಿಸಿ

ಕೋಪ ತಣಿಸುವೆಯೆಂದು

ಜೊತೆಯಲ್ಲಿ ಕುಳಿತು ನನ್ನ

ಕನಸುಗಳಿಗೆ ರೂಪ ಕೊಡುವೆಯೆಂದು

ನನಗೋಸ್ಕರ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||


ಮುಡಿದ ಮಲ್ಲಿಗೆ

ಹೂವಿನ ದಂಡೆ ಬಾಡಿದರೂ

ಕಾಯುವ ಬೇಸರ

ಎಡಬಿಡದೆ ಕಾಡಿದರೂ

ತಡವಾದರೂ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||

Monday, February 16, 2009

ಹೃದಯ ಗೀತೆ

ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ

ಬಾ ಬೇಗ ನೀ ನನ್ನ ಬಳಿಗೆ

ಎನುತ ಮೀಟಿದನವ ನನ್ನ ಹೃದಯ ವೀಣೆ

ಅಂದಿನಿಂದ ನನಗೇನಾಗಿದೆಯೋ ನಾ ಕಾಣೆ


ಮನಸಿನ ಪುಟಗಳ ಮೇಲೆ

ಅವ ಬರೆದ ಹಾಡಿದೆ

ಹೃದಯ ತನನಂ ಎಂದಿದೆ

ಕಣಕಣವು ಅದ ಪ್ರತಿಧ್ವನಿಸಿದೆ


ಕಂಡ ಕನಸೆಲ್ಲ ನನಸಾಗಲೆಂಬ ಬಯಕೆ

ಸದಾ ನಿನ್ನ ನೆನಪುಗಳದೆ ಕನವರಿಕೆ

ಇದ್ದ ಕೋಟೆಗಳನೆಲ್ಲ ದಾಟಿ ಒಳಬಂದಿಹೆ ನೀ ಗೆಳೆಯ

ಬಿಡಬೇಡ ಎಂದೆಂದಿಗೂ ನೀ ಹಿಡಿದ ಈ ಕೈಯ

Monday, February 9, 2009

ನಿರೀಕ್ಷೆ

ಎಲ್ಲೋ ಮಲಗಿದೆ ಬೇಸರ
ಕಣ್ಣ ತುಂಬ ಕಾತರ
ಬರುವನೇ ನನ್ನ ಚಂದಿರ
ಕೇಳಲು ನನ್ನ ಇಂಚರ

ಕೊನೆಯಾಯ್ತು ಅನುದಿನದ ದುಗುಡ
ಚಿಗುರುತಿದೆ ಹೊಸತನದ ಗಿಡ
ಬರುವನೇ ನನ್ನ ಚಂದಿರ
ಆಡಲು ನನ್ನ ಸಂಗಡ

ಆವರಿಸುತಿದೆ ಇರುಳ ಹಿತ
ಹರಡುತಿದೆ ಮಂದಬೆಳಕ ಸ್ಮಿತ
ಬರುವನೇ ನನ್ನ ಚಂದಿರ
ತಿಳಿಯಲು ನನ್ನ ಇಂಗಿತ

ಕಳಚುತಿದೆ ಮಬ್ಬಿನ ತೆರೆ
ಸರಿಯುತಿದೆ ಮೋಡದ ಮರೆ
ಬರುವನೇ ನನ್ನ ಚಂದಿರ
ಸವಿಯಲು ನನ್ನ ಅಕ್ಕರೆ

Wednesday, December 31, 2008

ಐ ಮಿಸ್ ಯು 2008

ನಮ್ಮೆಲ್ಲರ ಬಾಳಿನ ಕಾದಂಬರಿಯ ಮತ್ತೊಂದು ಅಧ್ಯಾಯ ಇವತ್ತು ಪೂರ್ಣ ಗೊಳ್ಳುತ್ತಾ ಇದೆ. ನಾಳೆಯಿಂದ ಹೊಸ ವರ್ಷ ನಮ್ಮ ಬಾಳ ಹೊಸ ಅಧ್ಯಾಯ ಶುರುವಾಗ್ತಾ ಇದೆ ಒಂಥರಾ ಹೊಸ ಅನುಭೂತಿ ಹೊಸ ಸ್ಪರ್ಶ ಹೊಸ ಹರ್ಷ…. ಒಟ್ಟಿನಲ್ಲಿ ನಮಗೆಲ್ಲ ನವ ವರ್ಷ

ನಾನು ಇದುವರೆಗೆ ನನ್ನ ಬಾಳ ಕಾದಂಬರಿಯನ್ನು ಬರೆಯುತ್ತಾ ಹೋಗಿದ್ದೀನಿ ಈಗ ಆ ಪುಟಗಳನೆಲ್ಲ ತಿರುವಿ ಹಾಕಿ ಏನಾಯ್ತು ಅಂತ ವಿಮರ್ಶಿಸೋಣ ಅಂತ ಅನ್ನಿಸ್ತಾ ಇದೆ… ಅದಕ್ಕೆ ಈ ಸಮಯವೇ ಸುಸಮಯ ಅಂತ ಅನ್ನಿಸ್ತು ಹೇಗಿದ್ರು ನಾಳೆಯಿಂದ ಎಲ್ಲ ಹೊಸತೇ ಅಲ್ವ…. ಯಾವುದನ್ನಾದ್ರು ಮರೆಯಬೇಕು ಅನ್ನಿಸಿದ್ರೆ ಇವತ್ತೇ ಮರೆತು ನಾಳೆಯಿಂದ ಎಲ್ಲ ಫ್ರೆಶ್ ಆಗಿ ಶುರು ಮಾಡಬಹುದು ನೀವೇನಂತೀರಿ…

ನನ್ನ ೧೯ ವರ್ಷಗಳ ಜೀವನದಲ್ಲಿ ಇದೆ ಮೊದಲ ಬಾರಿಗೆ ಇಂಥ ಒಂದು ವಿಮರ್ಶೆ ಮಾಡ್ತಾ ಇರೋದು… ಕಳೆದ ವರ್ಷ ನಾನು ಏನೇನು ಮಾಡಿದೆ ಅಂತ ಯೋಚಿಸಿದರೆ ನೆನಪು ಬರೋ ವಿಷಯಗಳು ತುಂಬ ಕಮ್ಮಿ….ಅದರಲ್ಲಿ ಪ್ರಮುಖವಾದವು ನಾನು ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ್ದು… ಒಂದು ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದು … ಹೇಗೆ ಮರೀಲಿ ನನ್ನೀ ಬ್ಲಾಗ್ ಶುರು ಮಾಡಿದ್ದು…. ಅಷ್ಟೆ…ಉಳಿದವು ನೆನಪಿನಲ್ಲೂ ಇಲ್ಲ….

ಆದರು ೨೦೦೮ ನಂಟುಗಳ ಗಂಟನ್ನು ಹೊತ್ತು ತಂದು ಈ ನನ್ನ ಪುಟ್ಟ ಹೃದಯದಲ್ಲಿ ಹೊಸ ಚೈತನ್ಯವನ್ನಂತು ತಂದಿದೆ…. ಕಳೆದ ಅಧ್ಯಾಯವನ್ನು ಪರಾಮರ್ಶಿಸಿದರೆ ಅದೊಂದು ಅನೇಕ ಘಟನೆಗಳ ಸರಮಾಲೆ… ಅವುಗಳಲ್ಲಿ ಮಿರಿ ಮಿರಿ ಮಿಂಚ್ತಾ ಕೆಲವಿದ್ರೆ ಇನ್ನು ಕೆಲವು ಯಾವುದೋ ಒಂದು ಮೂಲೆಯಲ್ಲಿ ಹಾಯಾಗಿ ಕುಳಿತಿದ್ದು ಬೇಕೆಂದಾಗ ಮಾತ್ರ ನೆನಪಿಗೆ ಬರುವಂಥವು…

2008 ಅನೇಕ ಸ್ನೇಹಿತರನ್ನು ಕೊಟ್ಟಿದೆ… ಇರೋ ಬಂಧಗಳನ್ನು ಗಟ್ಟಿ ಮಾಡಿದೆ… ಆದ್ರೆ ಆಗಲೇ ಇರುವ ಕೆಲವು ಕೊಂಡಿಗಳು ಸಂಪರ್ಕದ ಕೊರತೆಯಿಂದ ಕಳಚುತ್ತಿರುವುದು ನಿಜಾನೆ… ಏನೇ ಆದರು ಈ ವರ್ಷ ಚೆನ್ನಾಗಿಯೇ ಆಯ್ತು ಅನ್ನೋದು ನನ್ನ ಭಾವನೆ…

ಪ್ರತಿ ವರ್ಷ ನಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ಅಲ್ವ.. ಕೆಲವೊಂದು ಎಲ್ಲರಿಗೂ ಹೇಳಿ ಸಂತೋಷ ಪಟ್ರೆ ಇನ್ನು ಕೆಲವನ್ನು ನಮ್ಮೆದೆ ಗೂಡಿನಲ್ಲಿ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ ಕಾಪಾಡ್ತೀವಿ… ಕೆಲವು ಹೃದಯಾನ ಹುಚ್ಚೆದ್ದು ಕುಣಿಸಿದ್ರೆ ಕೆಲವು ಎಲ್ಲರಿಂದ ದೂರಾಗಿ ಒಬ್ಬಳೇ ಕುಳಿತು ಅಳುವಂತೆ ಮಾಡುತ್ತವೆ…. ಹೌದಲ್ವಾ “ಈ ಜೀವನ ಬೇವು ಬೆಲ್ಲ ಬಲ್ಲಾತಗೆ ನೋವೆ ಇಲ್ಲ..” ಎಂಥ ಅರ್ಥಪೂರ್ಣ ಸಾಲು…ಆದ್ರೆ ನಮ್ಮಂಥವರು ಸುಖ ದುಃಖ ಎರಡನ್ನು ಸಾಮಾನಾಗಿ ಕಾಣಬೇಕು ಅಂದ್ರೆ ಇನ್ನಷ್ಟು ಪ್ರೌಢಿಮೆ ಬೇಕು ಅಲ್ವ…

ಈಗ ಏನೇ ಯೋಚನೆ ಮಾಡಿದ್ರು ೨೦೦೮ ತನ್ನ ಗಂಟು ಕಟ್ಟಿಕೊಂಡು ಹೊರಡೋಕೆ ಸಿದ್ಧವಾಗಿದೆ… ಎಷ್ಟೇ ಕೇಳಿದ್ರು ಇನ್ನೊಂದು ಕ್ಷಣಾನೂ ಹೆಚ್ಚಿಗೆ ಇರೋಲ್ಲ…. ನೀವೆಲ್ಲ ಕೇಳಿರ್ತೀರ
ಜಿಪುಣ ಅಂದ್ರೆ ಜಿಪುಣ ಈ ಕಾಲ
ಎಷ್ಟೇ ಬಡ್ಡಿ ಕೊಟ್ರು
ಎಷ್ಟೇ ಗಿರವಿ ಇಟ್ರು
ಸಿಕ್ಕೋದಿಲ್ಲ ಒಂದು ಘಳಿಗೆ ಸಾಲ
ಅದಕ್ಕೆ ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೀನಿ… ೨೦೦೮ ರಲ್ಲಿ ಏನು ಆಗಿದೆಯೋ ಅದು ಒಳ್ಳೆಯದಕ್ಕೆ ಆಗಿದೆ… ೨೦೦೯ ಇನ್ನು ಚೆನ್ನಾಗಿರುತ್ತೆ ಅಂತ ಆಶಿಸ್ತೀನಿ

ಈ ಹೊಸ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಅಲೆಯೊಂದನ್ನು ಶುರು ಮಾಡಿ ನಿಮೆಲ್ಲರ ಬಾಳು ಹಸನಾಗಿರಲಿ ಎಂದು ಆಶಿಸ್ತಾ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!!!!!!!

Friday, September 5, 2008

ಮಿಂಚು
ನೀ ಬಂದಾಗ ನಾನೆಣಿಸಿದೆ
ನೀ ನನ್ನ ಬಾಳ ಬೆಳಕೆಂದು
ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು
ಆದರೆ ನೀನು ಮಿಂಚಿ ಮರೆಯಾಗುವ
ಬಾಳನ್ನೇ ಛಿದ್ರ ಮಾಡುವ ಸಿಡಿಲೆಂದು ತಿಳಿದದ್ದು
ಆ ಎದೆ ನಡುಗಿಸುವ ಶಬ್ದ ಕೇಳಿದ ನಂತರವಷ್ಟೇ….

ನೆನಪು
ಮಳೆಯ ಹನಿ ನಿಂತರು
ಮರದ ಎಲೆಯ ಹನಿ ನಿಲ್ಲದೋ ಗೆಳೆಯ
ನೀ ನನ್ನಿಂದ ದೂರ ನಡೆದರೂ
ನಿನ್ನ ಹೆಜ್ಜೆಗುರುತು ಮಾಸದೋ ನನ್ನೊಡೆಯ!!!

Monday, August 18, 2008

ನಾನು!!!!!?

ಈ ಬಾಳವೀಣೆಯ ತಂತಿ ನಾನು
ವೈಣಿಕನ್ಯಾರೋ….
ಈ ಬಾಳನೌಕೆಯಲಿ ಪಯಣಿಗಳು ನಾನು
ನಾವಿಕನ್ಯಾರೋ

ಮಿಡಿದ ಧ್ವನಿ ಶ್ರುತಿಯೋ ಅಪಶ್ರುತಿಯೋ
ಕಾರಣಳು ನಾನಲ್ಲ
ನೌಕೆ ಮುಳುಗುವುದೋ ತೇಲುವುದೋ
ಬಲ್ಲವರು ಯಾರಿಲ್ಲ….

ವೈಣಿಕನ ಕೈಚಳಕದಲಿ
ಅಡಗಿದೆ ನನ್ನ ಜೀವನ
ನಾವಿಕನ ಜ್ಞಾನದಲಿ
ಸಂಸಾರಸಾಗರಯಾನ…..

ವೈಣಿಕನ ಕಲಾನೈಪುಣ್ಯತೆಗೆ
ನನಗೆ ಹೊಗಳಿಕೆಯೇ?
ನನ್ನ ತಪ್ಪಿಗೆ ನಾವಿಕನ
ಮೂದಲಿಕೆ ಸರಿಯೇ?

ನಾವಿಕನಲ್ಲಿ ಭರವಸೆಯಿಟ್ಟು
ನೌಕೆಯೇರಿದವಳು ನಾನು
ವೈಣಿಕನಲ್ಲಿ ನಂಬಿಕೆಯಿಟ್ಟು
ಅವನಿಗೆ ಸಮರ್ಪಿತಳಾದವಳು ನಾನು

ಈ ಬಾಳ ಪ್ರತಿನುಡಿಯ ಪ್ರತಿಶ್ರುತಿಯ
ಸೂತ್ರಧಾರ ಆ ವೈಣಿಕ
ಈ ಬಾಳ ದಾರಿಯ
ಮಾರ್ಗದರ್ಶಕ ಆ ನಾವಿಕ…..

ತಾನು ನುಡಿಸುವ ಧ್ವನಿ ಶುದ್ಧ
ಆಗಿರಬೇಕೆಂಬ ಆಸೆ ವೈಣಿಕನಿಗಿಲ್ಲವೇ
ಗುರಿ ತಲುಪಿಸುವ ಬಯಕೆ
ನಾವಿಕನಿಗಿರುವುದಿಲ್ಲವೇ…..

ವೈಣಿಕನ ಕೈಬೆರಳ ತುದಿಯಲ್ಲಿ ನಾದವಾಗಿ
ನಾವಿಕನ ನೆರಳಲ್ಲಿ ಕೂಸಾಗಿ
ಬಾಳ ಗುರಿಯ ತಲುಪಿಸುವರೆಂಬ ಭರವಸೆಯಲ್ಲಿ
ಸಾಗುತಿರುವೆ ನಾನು ಈ ಜೀವನದಲ್ಲಿ……..