Friday, December 28, 2018

ಶುಭರಾತ್ರಿ!

ನಭದಿ ಹೊಳೆವ ಶಶಿಯು ತಾನು
ಮುದದಿ ನೂರು ಕನಸ ತಂದು
ಯಾಕೆ ಗೊಡವೆ ನಿನಗೆ ಇನ್ನು
ಮಲಗಿಬಿಡು ಹೊದಿಕೆ ಹೊದ್ದು
ಎನುತ ನನ್ನ ಕಾಡುತಿರಲು
ನಾನು ವಿದಾಯ ಹೇಳುವೆ
ದಣಿದ ಮನಕೆ ಸುಖವ ನೀಡಿ
ನೀವು ಕಣ್ಣ ತುಂಬ ನಿದ್ರೆ ಮಾಡಿ
ಕನಸ ನನಸು ಮಾಡುವತ್ತ

ದಿನದ ಬೆಳಗು ದಾರಿ ತೋರಲಿ

Friday, September 14, 2018

ಅಡೆತಡೆಗಳಿಲ್ಲದೆಡೆಗೆ


ಮಾತಿನಂಗಡಿಯಲ್ಲಿ ಪದಗಳೆಲ್ಲಾ ಚೆಲ್ಲಾಪಿಲ್ಲಿ
ಮನದಾಳದಲ್ಲಿ ಭಾವಗಳ ಬಣ್ಣದೋಕುಳಿ
ಪದಗಳು ಬೆಸೆದು ಕಾವ್ಯ ಅರಳಲಿ
ಬಣ್ಣಗಳು ಬೆರೆತು ಚಿತ್ತಾರ ಬೆಳಗಲಿ

Wednesday, July 4, 2018

ಮೂಕ ಮೌನ ತೂಕ ಮೀರಿದಾಗ

ಕಳೆದು ಹೋಗುತಿರುವೆ ನಾನು ಮೌನದರಮನೆಯೊಳಗೆ
ಹುಡುಕುತ ದನಿಯ ನನ್ನಂತರಾಳದ ಭಾವಗಳಿಗೆ
ಭಾವಕೂ ಮಾತಿಗೂ ಎಲ್ಲಿಗೆಲ್ಲಿಯ ಬಂಧ
ಮಾತಿಲ್ಲದ ಭಾವಕೆ ಈ ಭಾವಗೀತೆಯ ಛಂದ

Wednesday, May 2, 2018

ಕಾಲನ ಅಪ್ಪುಗೆ

ನಿರಾಕರಿಸಿದೆ. ಹತ್ತಿರ ಬಂದ.
ದೂರ ನಡೆದೆ. ಬರಸೆಳೆದು ಅಪ್ಪಿದ.
ಬಿಡಿಸಿಕೊಳ್ಳಲು ಒದ್ದಾಡಿದೆ.
ತನ್ನಲ್ಲೇ ಒಂದಾಗಿಸಿಕೊಂಡುಬಿಟ್ಟ.

ಇತ್ತೀಚೆಗೆ ನೋಡಿದ ಸಿನಿಮಾವೊಂದರಲ್ಲಿ ಸಾವನ್ನು ಎದುರಿಸಿ, ಅದರ ವಿರುದ್ಧ ಸೆಣಸಾಡಿ ಕೊನೆಗೂ ಕಾಲದ ನಿರ್ಣಯಕ್ಕೆ ತಲೆಬಾಗಿದ ಪಾತ್ರವೊಂದರಿಂದ ಪ್ರೇರಿತ

Wednesday, February 21, 2018

ಯಶೋದೆಯ ಸ್ವಗತ

ಕರುಳ ಬಳ್ಳಿಗಿಂತ ಮಿಗಿಲಾದ
ಸಂಬಂಧವೊಂದು ಬಂಧಿಸಿತ್ತು
ನಮ್ಮಿಬ್ಬರನ್ನು ಪ್ರೀತಿ ಒಲುಮೆ  
ಮಮಕಾರಗಳೆಂಬ ಸರಪಳಿಯಿಂದ..

ನಾನು ಅವನನ್ನೆಷ್ಟೇ ಬೈದರು
ಮನದೊಳಗೆಲ್ಲ ಅವನೊಬ್ಬನಷ್ಟೇ..
ಊರ ಮುಂದೆಲ್ಲ ಅವನನ್ನು ಹಂಗಿಸಿದರು
ಮನದೊಳಗಿನ ಪ್ರೀತಿಗೆ ಕೊನೆಯುಂಟೆ?

ಎಂದಿದ್ದರು ಎಂತಾದರು ಅವನೆಂದು ನನ್ನವನೇ
ನಾ ಇರದೇ ಅವನು ಬದುಕುವುದು ಸಾಧ್ಯವೇ?
ಎಂದು ನಾ ತಿಳಿದದ್ದು ಭ್ರಮೆಯೇ  
ಅಥವಾ ನಾ ಇಷ್ಟು ದಿನ ಕಂಡದ್ದು ಕನಸೇ

ಕನಸೋ ನನಸೋ ನಾ ಕಾಣೆ
ನಾ ಇರದೇ ಅವ ಬದುಕಬಲ್ಲನಾದರು
ಅವನಿರದೆ ನಾ ಇರಲಾರೆ

ನಾ ಎಂದೂ ಎಣಿಸದ ದಿನ ಬರುವುದು ನಾಳೆ
ನನ್ನವನು ನನ್ನಿಂದ ದೂರ ಹೋಗುವನಂತೆ

ಅಲ್ಲಿಗೆ ಹೋದ ಮೇಲೆ ನನ್ನ ನೆನಪು
ಅವನ ಕಾಡದೇ ಇರುವುದೇ?
ನಿನ್ನ ಬಿಟ್ಟು ನಾನಿರಲಾರೆ
ಎಂದು ಮತ್ತೆ ನನ್ನ ಮಡಿಲ ಸೇರನೆ?  

ಆದರು ಅವನನ್ನು ನನ್ನವನು  
ಎಂದು ಹೇಳಲು ನನಗೆ ಹಕ್ಕಿದೆಯೇ?
ಮಾತನ್ನು ನನ್ನ ಹೃದಯ ಒಪ್ಪುತಿಲ್ಲವೇಕೆ..  

ಇದು ಮೋಹವೇ ಅಥವಾ ಮಮಕಾರವೇ?
ಇಷ್ಟೆಲ್ಲಾ ಆಗುವುದಾದರೂ ಏಕೆ
 ನನ್ನವನು ನನ್ನ ಬಳಿಯೇ ಉಳಿಯ ಬಾರದೇಕೆ…..
ಹೇ ಪ್ರಭು ನನ್ನವನು ನನ್ನ ಬಿಟ್ಟು ಹೋಗದಂತೆ ನೀ ತಡೆಯಬಾರದೇಕೆ?

Tuesday, January 23, 2018

ಕರುಳ ಬಳ್ಳಿ


ನೂರಾರು ನಿರೀಕ್ಷೆಗಳ ನಿಕ್ಷೇಪ
ನನ್ನೆಲ್ಲಾ ನಲಿವುಗಳ ನಿಧಿ
ನನ್ನೊಲುಮೆಯ ನಕ್ಷತ್ರ ‘ನೀತಿ’
P.S. : ಇದೆ ಜನವರಿ ೧೨,೨೦೧೮ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಆ ಪರಮಗುರುವಿನ ಕೃಪೆಯಿಂದ ನಮ್ಮ ಮನೆಯಂಗಳದಲ್ಲೊಂದು ನಕ್ಷತ್ರ ಉದಯಿಸಿದೆ. ಆ ಪುಟ್ಟ ಕಂದಮ್ಮನಿಗೆ ನಾವಿಟ್ಟಿರುವ ಹೆಸರು "ನೀತಿ". 

Thursday, December 14, 2017

ಲಾಲಿಹಾಡು

ಜೋ‌ ಜೋ‌ ಜೋ ಲಾಲಿ
ಜೋ‌ ಜೋ‌ ಜೋ ಲಾಲಿ
ಲಾಲಿ ಜೋ‌ ಜೋ‌ ಲಾಲಿಯೇ...
ಜೋ‌ ಜೋ‌ ಜೋ ಲಾಲಿ
ಜೋ‌ ಜೋ‌ ಜೋ ಲಾಲಿ
ಲಾಲಿ ಜೋ‌ ಜೋ‌ ಲಾಲಿಯೇ...

ಜೋ ಜೋ ಪುಟ್ಟಮ್ಮ
ಜೋ ಮುದ್ದು ಕಂದಮ್ಮ
ಲಾಲಿಯ ನಾ ಹಾಡುವೆ‌|
ತಾರೆಗಳ ಲೋಕದಲಿ
ತಿಂಗಳಿನ ತೊಟ್ಟಿಲಲಿ
ಮಲಗಿಸಿ ನಾ ತೂಗುವೆ ||ಜೋ‌ ಜೋ‌ ||

ಚೆಲುವಿನ ಖನಿ ನೀನು
ನಗುವಿನ ಗಣಿ ನೀನು
ಮುದ್ದಿನ ಕಣ್ಮಣಿಯೇ|
ತಾಯಿಯ ಖುಷಿ ನೀನು
ತಂದೆಯ ಸಿರಿ ನೀನು
ಈ ಮನೆಯ ಸಂಭ್ರಮವೇ||ಜೋ‌ ಜೋ‌ ||

ಪಿಳಪಿಳನೆ ಬಡಿಬಡಿದು
ಕಣ್ರೆಪ್ಪೆ ಸುಸ್ತಾಯ್ತು
ಯಾಕಿನ್ನು ಚೆಲ್ಲಾಟವು?
ಘಲಘಲನೆ ದನಿಗೈದು
ಗೆಜ್ಜೆಗೂ ದಣಿವಾಯ್ತು
ಸಾಕಿನ್ನು ತುಂಟಾಟವು||ಜೋ‌ ಜೋ‌ ||

ನಿದಿರೆಯು ಬಳಿ ಬಂದು
ನಿನ್ನನ್ನಾವರಿಸುವಳು
ನಿದ್ರಿಸು ಬಂಗಾರಿಯೇ|
ಸ್ವಪ್ನಲೋಕದಿ ಈಗ
ನಿನ್ನದೇ ಆಳ್ವಿಕೆಯು
ಸುಖಿಸಿನ್ನು ಸಿಂಗಾರಿಯೇ||ಜೋ‌ ಜೋ‌ ||

- ಇನ್ನೊಂದು ತಿಂಗಳಲ್ಲಿ ಹುಟ್ಟಲಿರುವ ಮುದ್ದು ಕಂದಮ್ಮನಿಗೆ ಲಾಲಿ ಹಾಡು