Tuesday, July 19, 2011

ನೆನಪೇ!

ಕ್ಷಣ ಮಾತ್ರ ಹತ್ತಿರ ಸುಳಿದು
ನಗೆಯರಳಿಸುವ ನೆನಪೇ
ನೀ ನನ್ನ ಸಖನೇ?

ನಗುವಿನಲ್ಲೂ ಅಳುವ
ಹೆಕ್ಕಿ ತೆಗೆವ ನೆನಪೇ
ನೀ‌ ಪರಮ ಸಿನಿಕನೇ?

ಏಕಾಂತದಲಿ ಬೆಂದ ಮನಕೆ
ಸಾಂತ್ವನ ತರುವ ನೆನಪೇ
ನೀನಮೃತಸಿಂಚನವೇ?

ಭೂತದ ಗೋರಿಯ ಮೇಲೆ
ಕುಣಿ ಕುಣಿದಾಡುವ ನೆನಪೇ
ನೀ‌ ಕಾಡುವ ಪಿಶಾಚಿಯೇ?

ಗತದ ಗೋಡೆಗೆ ಬಡಿದು
ಮರಳಿ ಬರುವ ನೆನಪೇ
ನೀ‌ ನನ್ನಾತ್ಮಬಂಧುವೇ?

ಹೆಸರ ಹಂಗಿಲ್ಲದೆ ನನ್ನ
ಬರಸೆಳೆದು ಅಪ್ಪುವ ನೆನಪೇ
ನಮ್ಮದು ದಿವ್ಯ ಅನುಬಂಧವೇ?