Friday, May 29, 2009

ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?

ನಮ್ಮ ಕಾಲೇಜಿಗೆ ಸ್ವಾಯತ್ತತೆ ಬಂದಾಗಿನಿಂದ ನಮಗೆ ಕೊನೆಗೆ ಫಲಿತಾಂಶ ಅಂತ ಕೊಡೋದು ಹತ್ತಕ್ಕೆ ಇಷ್ಟು ಅಂಕ ಅಂತ. ಅದರಲ್ಲಿ ೯ಕ್ಕಿಂತ ಜಾಸ್ತಿ ಬಂದವರಿಗೆ ಜಯನಗರದಲ್ಲಿರೋ ’ಬುಕ್ ಪ್ಯಾರಡೈಸ್’ ನಲ್ಲಿ ಪುಸ್ತಕ ಕೊಳ್ಳಲು ೧೦೦೦ ರೂಪಾಯಿಗಳ ಬಹುಮಾನ. ಕಳೆದೆರಡು ಸೆಮೆಸ್ಟರಿನ ಬಹುಮಾನ ಒಟ್ಟಿಗೆ ಬಂದದ್ದರಿಂದ ೨೦೦೦ ರೂ ಮೌಲ್ಯದ ಪುಸ್ತಕಗಳನ್ನು ಆ ಪುಸ್ತಕದಂಗಡಿಯಿಂದ ಪಡೆಯಬೇಕಿತ್ತು.
ಈಗ್ಗೆ ಒಂದು ತಿಂಗಳ ಹಿಂದೆ ಅಪ್ಪನ್ನ ಜಯನಗರಕ್ಕೆ ಕರೆದುಕೊಂಡು ಹೋಗಿ ೧೦೦೦ ರೂ. ಮೌಲ್ಯದ ಪುಸ್ತಕ ತಂದಿದ್ದೆ ಇನ್ನು ೧೦೦೦ ರೂ.ಗಳ ಪುಸ್ತಕ ತೆಗೆದುಕೊಳ್ಳುವುದು ಬಾಕಿಯಿತ್ತು. ಅದಕ್ಕೆ ಬೇರೆ ಈ ಭಾನುವಾರವೇ (ಮೇ ೩೧) ಕೊನೆಯ ದಿನ ಅಂತ ಘೋಷಿಸಿಯಾಗಿತ್ತು.ಅಪ್ಪ ಈ ಸಲ ಸರಿಯಾಗಿ ದಾರಿ ನೋಡಿಕೋ ಮುಂದಿನ ಸಲದಿಂದ ನಾನು ಬರೊಲ್ಲ ಅಂತ ಹೇಳಿ ಕರೆದುಕೊಂಡು ಹೋಗಿದ್ರು.ಹೋಗ್ತಾ ಒಂದು ದಾರಿ ಬರ್ತಾ ಒಂದು ದಾರಿ. ಸರಿಯಾಗಿ ತಿಳಿಯಲಿಲ್ಲ. ಏನೇ ಆಗಲಿ ಈ ಸಲ ನಾನೇ ಹೋಗಿ ಪುಸ್ತಕ ತೆಗೆದುಕೊಳ್ಳೋಣ ಅಂತ ನನ್ನ ಗೆಳತಿ ಅಶ್ವಿನಿಯನ್ನು ಕೇಳಿದೆ "ಬರ್ತೀರೇನ್ರೀ ಹೋಗಿ ಪುಸ್ತಕ ತಂದುಬಿಡೋಣ" ಅಂತ "ಸರಿ" ಅಂದಳು.
ಮೈಕ್ರೊ ಪ್ರೊಸೆಸರ್ ಪರೀಕ್ಷೆ ಮುಗಿಸಿಕೊಂಡು ಗಿರಿನಗರದಲ್ಲಿರುವ ಹುಡುಗಿಯರ ಹಾಸ್ಟೆಲ್ ಕಡೆ ಹೊರಟೆ. ಅಷ್ಟು ಹೊತ್ತಿಗೆ ನನ್ನ ಗೆಳತಿ ತಯಾರಾಗಿದ್ದಳು. ಇಬ್ಬರೂ ಸ್ಕೂಟಿಯೇರಿ ಅಲ್ಲಿಂದ ಹೊರಟ್ವಿ. ಇನ್ನು ಮುಖ್ಯರಸ್ತೆಗೆ ಬಂದಿರಲಿಲ್ಲ ನನ್ನ ಗೆಳತಿಯನ್ನು ಕೇಳಿದೆ " ನಿಮಗೆ ಜಯನಗರಕ್ಕೆ ಹೋಗೋದು ಹೇಗೆ ಅಂತ ಗೊತ್ತೇನ್ರೀ" ಅಂತ.ಅದಕ್ಕವಳು "ಯಾಕ್ರೀ ನಿಮ್ಗೆ ಗೊತ್ತಿಲ್ವಾ?" ಅಂತ ನನ್ನನ್ನೇ ಕೇಳಿದ್ಳು. "ಇಲ್ಲ" ಅಂದೆ "ಮತ್ತೆ ಹೇಗೆ ಹೋಗೋದು" ಅಂದ್ಳು. "ನೋಡೋಣ ನಡೀರಿ ಕೇಳಿಕೊಂಡು ಹೋಗೋಣ" ಅಂತ ಧೈರ್ಯ ಮಾಡಿ ಮುಖ್ಯರಸ್ತೆಗೆ ಬಂದೇ ಬಿಟ್ವಿ.
ಸರಿ ಕಾಲೇಜು, ಕತ್ರಿಗುಪ್ಪೆ,ಪದ್ಮನಾಭನಗರ( ನಮ್ಮ ಕಾಲೇಜು ಸುತ್ತಮುತ್ತ ನನಗೆ ತಿಳಿದಿರುವುದಿಷ್ಟೇ) ಎಲ್ಲ ದಾಟಿ ಸ್ವಲ್ಪ ಮುಂದೆ ಬಂದ್ವಿ ರಸ್ತೆ ದುರಸ್ತಿಯಲ್ಲಿತ್ತು. ಅಲ್ಲಿ ಹೋಗುತ್ತಿದ್ದ ಎಲ್ಲ ವಾಹನಗಳೂ ಎಡಕ್ಕೆ ತಿರುಗುತ್ತಿದ್ದರಿಂದ ನಾನೂ ಗಾಡಿಯನ್ನು ಆ ಕಡೆ ತಿರುಗಿಸಿದೆ. ಅಶ್ವಿನಿ "ಹೀಗೆ ಏನ್ರೀ ಹೋಗೋದು" ಅಂದ್ಳು. "ಗೊತ್ತಿಲ್ಲ, ಕೇಳೋಣ" ಅಂದೆ. ಅಂದ್ರೂ ಗಾಡಿ ನಿಲ್ಲಿಸದೆ ಹಾಗೆ ಮುಂದೆ ಹೋಗ್ತಾ ಇದ್ದೆ. ಆದ್ರೆ ಹೋಗ್ತಾ ಅಲ್ಲಿಗೆ ರಸ್ತೆ ಮುಗಿದಿತ್ತು ಬಲಕ್ಕೋ ಎಡಕ್ಕೊ ತಿರುಗಲೇಬೇಕಿತ್ತು. ಎಡಕ್ಕೆ ತಿರುಗಿ ಅಲ್ಲಿದ್ದ ಹಣ್ಣಿನಂಗಡಿಯವರನ್ನು ಕೇಳಿದೆ " ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು" ಅವರೇನೋ ಹೇಳ್ತಿದ್ರು ಸರಿಯಾಗಿ ಕೇಳ್ತಾ ಇರ್ಲಿಲ್ಲ. ಅಶ್ವಿನಿ ಗಾಡಿಯಿಂದ ಕೆಳಗಿಳಿದು ಹೋಗಿ ಕೇಳಿಕೊಂಡು ಬಂದು "ಬಲಕ್ಕೆ ತಿರುಗಿಸಬೇಕಿತ್ತಂತೆ" ಅಂದ್ಳು ಸರಿ ಬಲಕ್ಕೆ ತಿರುಗಿಸ್ದೆ.
ಹಾಗೆ ಸ್ವಲ್ಪ ಮುಂದೆ ಬಂದ್ರೆ ಯಾಕೋ ಸರಿ ದಾರಿ ಅಲ್ಲವೇನೋ ಅನ್ನಿಸ್ತು. ಅಲ್ಲಿದ್ದ ಪೇಪರ್ ಅಂಗಡಿಯವರನ್ನು ಅದೇ ಪ್ರಶ್ನೆ ಕೇಳಿದ್ವಿ ಅವರು "ದಯಾನಂದ ಸಾಗರ್ ಕಾಲೇಜು ಮುಂದೆ ಹೋಗಿ ಬಂಟರ ಸಂಘದತ್ತ ಕೇಳೀ ಯಾರು ಬೇಕಾದ್ರೂ ಹೇಳ್ತಾರೆ" ಅಂದ್ರು. ಅಯ್ಯೊ ಅದೆಲ್ಲ ಎಲ್ಲಿದೆ ಅಂತ ಗೊತ್ತಿಲ್ಲ ಅನ್ನೋದು ನನ್ನ ಮುಖದಿಂದಲೇ ಗೊತ್ತಾಯ್ತು ಅನಿಸುತ್ತೆ. " ಈಗ ಬಂದಿದ್ದೀರಲ್ಲ ಇದೇ ದಾರಿಯಲ್ಲಿ ಹಿಂದೆ ಹೋಗಿ ದಯಾನಂದ ಸಾಗರ್ ಕಾಲೇಜು ಸಿಗುತ್ತೆ. ಅಲ್ಲಿಂದ ಮುಂದೆ ಹೋಗಿ ಅಂದ್ರು" ಸರಿ ಮತ್ತೆ ಆ ಕಡೆ ಹೊರಟ್ವಿ . ಆ ಹಣ್ಣಿನಂಗಡಿಯನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಸ್ವಲ್ಪವೇ ದೂರದಲ್ಲಿ ಕಾಲೇಜು ಸಿಕ್ಕಿತು. ಅಲ್ಲಿಂದ ಮುಂದೆ ಹೋಗಿ ಒಂದು ಸಿಗ್ನಲ್ ಹತ್ರ ನಿಂತಿದ್ದಾಗ ಪಕ್ಕದಲ್ಲಿದ್ದ ಸವಾರರನ್ನು ಮತ್ತೆ ಅದೇ ಪ್ರಶ್ನೆ ಕೇಳಿದೆ ಅವರು ಸೀದಾ ಹೋಗಿ ಎಡಕ್ಕೆ ತಿರುಗಿ ಅಂದ್ರು. ಮುಂದೆ ಬರ್ತಾ ಇದ್ದಾಗ ಒಬ್ಬ ಸೈಕಲ್ ಸವಾರ ನಮ್ಮ ಮುಂದೇನೇ ಬಂದು ಇಲ್ಲಿ ಹೋಗಿ ಅಂತ ಆ ತಿರುವನ್ನು ತೋರಿಸಿದ. ಬಿಜಾಪುರದವಳಾದ ಅಶ್ವಿನಿ "ಏನ್ರೀ ಬೆಂಗಳೂರಿನವರು ಇಷ್ಟೊಂದು ಹೆಲ್ಪ್ ಫುಲ್ಲಾ" ಅಂದ್ಳು. ಮಾತಾಡದೆ ಮುಂದೆ ಹೋಗ್ತಾ ಇದ್ದಾಗ ಬನಶಂಕರಿ ಬಸ್ ನಿಲ್ದಾಣದ ಸಮೀಪ ಬಂದಿದ್ದೀವಿ ಅಂತ ಗೊತ್ತಾಯ್ತು.
ಅಲ್ಲಿ ಪಕ್ಕದಲ್ಲಿದ್ದ ಆಟೋ ಚಾಲಕನಿಗೂ ಮತ್ತದೇ ಪ್ರಶ್ನೆ "ಇಲ್ಲಿಂದ ಮೂರನೇ ಸಿಗ್ನಲ್ಲಲ್ಲಿ ಎಡಕ್ಕೆ ತಿರುಗಿ" ಅಂತ ಹೇಳಿದ್ರು.ಹೋದ್ವಿ. ಕೆಂಪು ಸಿಗ್ನಲ್ ಇತ್ತು. ಎಡಕ್ಕೆ ತಿರುಗುವ ಮುನ್ನ ಪಕ್ಕದಲ್ಲಿದ್ದ ಬಸ್ ಚಾಲಕನಿಗೆ ಮತ್ತೆ ಅದೇ ಪ್ರಶ್ನೆ. "ಇಲ್ಲೇ ಎಡಕ್ಕೆ ತಿರುಗಿ"ಅಂದ್ರು. ಹಾಗೆ ಹೋದ್ವಿ. ಜಯನಗರ ನಾಲ್ಕನೇ ಹಂತ ತಲುಪಿಯಾಗಿತ್ತು. ಅಲ್ಲಿ ೯ನೇ ಮುಖ್ಯರಸ್ತೆಗೆ ಹೋಗಬೇಕಿತ್ತು. ಸರಿ ೬ , ೭ , ೮ ಕಂಡ್ರೂ ೯ ಕಾಣಲೇ ಇಲ್ಲ ಮುಂದೆ ಹೋಗಿಬಿಟ್ಟಿದ್ವಿ. ಅಲ್ಲಿ ಮತ್ತೊಬ್ಬರನ್ನು ಕೇಳಿದ್ವಿ ಆದ್ರೆ ಪ್ರಶ್ನೆ ಬೇರೆ " ೯ನೇ ಮುಖ್ಯರಸ್ತೆಯಲ್ಲಿರೋ ಬುಕ್ ಪ್ಯಾರಡೈಸ್ ಗೆ ಹೇಗೆ ಹೋಗೋದು" ಅಂತ. ಅವರು ಹೇಳಿದ ಹಾಗೆ ಹೋಗ್ತಾ ಇದ್ವಿ ಅಷ್ಟರಲ್ಲಿ ಅಲ್ಲಿದ್ದ ಒಂದು ದೇವಾಲಯ ಕಣ್ಣಿಗೆ ಬಿತ್ತು. ಹೋದ ಸಲ ಅಪ್ಪನ ಜೊತೆ ಹೋದಾಗ ನೋಡಿದ್ದ ನೆನೆಪಿತ್ತು.ಅಲ್ಲಿ ಎಡಕ್ಕೆ ತಿರುಗಿ ನೋಡಿದ್ರೆ ಬುಕ್ ಪ್ಯಾರಡೈಸ್ ಗೆ ಹೋಗೋ ದಾರಿ ’ಒನ್ ವೇ’. ಸರಿ ಮುಂದಿನ ರಸ್ತೆಯಿಂದ ಅಲ್ಲಿಗೆ ಹೋಗಿ ಪುಸ್ತಕ ತಂದದ್ದಾಯಿತು. ಅಲ್ಲಿಂದ ಬರುವಾಗ ಅಪ್ಪ ತೋರಿದ್ದ ದಾರಿ ನೆನಪಿದ್ದುದರಿಂದ ಅದೇ ದಾರಿಯಲ್ಲಿ ವಾಪಸ್ ಬಂದು ಅಶ್ವಿನಿಯನ್ನು ಹಾಸ್ಟೆಲ್ ಗೆ ಬಿಟ್ಟು ನಾನೂ ಮನೆ ಸೇರಿದೆ.
ನನಗೆ "ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?" ಅಂತ ಹೇಳಿದ ಎಲ್ಲರಿಗೂ ನನ್ನ ಧನ್ಯವಾದಗಳು. ಇದರಿಂದ ನನಗೆ ಇನ್ನು ಬೆಂಗಳೂರಲ್ಲಿ ಎಲ್ಲಿಗೆ ಬೇಕಾದ್ರು ಹೋಗಬಹುದು ಅನ್ನೋ ಧೈರ್ಯ ಬಂದಿದೆ.