Wednesday, July 28, 2010

ನಾ ಕಳೆದುಹೋದೇನು....

ಮನಸಿದು ನನ್ನದು
ಪುಟ್ಟ ಕಂದಮ್ಮನಂತೆ.
ಮುಗ್ಧತೆಯೇ ಎಲ್ಲಾ
ಇನಿತೂ ಕಪಟವಿಲ್ಲ.

ಪುಟ್ಟ ಅಂಗಳದಲ್ಲಿನ
ವಿಹಾರ ಮುಗಿದಾಯ್ತು.
ಪ್ರಪಂಚದೊಳು ಕಾಲಿಡುವ
ಸಮಯ ಬಂದಾಯ್ತು.

ಮನೆಯಿಂದಾಚೆ
ಕಾಲಿರಿಸಲೂ ಅಂಜಿಕೆ.
ಕಾಣದ ಲೋಕವಿದು
ನಾ ಎದುರಿಸಲಿ ಹೇಗೆ?

ಹೊರಗೆ ಕತ್ತಲಲ್ಲೂ ಹೊಳೆವ
ಮಿಣುಕು ದೀಪಗಳ ಮಾಯೆಯೊಳಗೆ
ನಾ ಕುರುಡಿಯಾದೇನು.

ಕ್ಷಣಕೊಂದರಂತೆ ಬದಲಾಗುವ
ಬಿನ್ನಾಣದ ಮಾತುಗಳ ನಡುವೆ
ನಾ ಮೂಕಿಯಾದೇನು.

ಪರಿಚಿತರೂ ಅಜ್ಞಾತರಂತಿರುವ
ಸ್ವಾರ್ಥ ಜನರ ನಡುವೆ
ನಾ ಕಳೆದುಹೋದೇನು.

ನಂಬಿಹೆನು ನಾನು
ಆಸರೆಯು ನೀನೆಂದು.
ಈ ಕ್ರೂರ ಲೋಕದೊಳು
ಬೆಂಗಾವಲೆನಗೆಂದು.

ಹಿಡಿಯುವೆನು ಬಿಗಿಯಾಗಿ
ನಾ ನಿನ್ನ ಕೈಯನ್ನು.
ನಡೆಯದಿರು ದೂರಾಗಿ
ಸಡಿಲಿಸಿ ಹಿಡಿತವನ್ನು.

Friday, July 16, 2010

ಇನ್ನು ತಡವೇಕೆ?

ನನ್ನ ಎದುರು ನಿಂತು ನೀನು
ಮಾತನಾಡದಿದ್ದರೇನು
ನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?

ನನ್ನ ಕಂಡ ಒಡನೆ ನಿನ್ನ
ತುಟಿಯಂಚಿನಲ್ಲಿ ಮಿಂಚಿ ಹೋದ
ನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?

ನಾನು ಕಾಣದಿಲ್ಲದಾಗ
ರಾತ್ರಿ ಪೂರ ನಿದ್ರೆಯಿರದೆ
ನನ್ನ ನೆನೆದು ಕಂಡ ಕನಸು ಇನ್ನು ಗೌಪ್ಯವೇ?

ಹೃದಯ ಬರೆದ ಒಲವಿನೋಲೆ
ನನಗೆ ತೋರದಿದ್ದರೇನು
ನಿನ್ನ ಮನದ ಭಾವಗೀತೆ ನನಗೆ ಕೇಳದೆ?

ಸರಿಸಿಬಿಡು ಮೌನ ತೆರೆಯ
ಅರಳಲಿನ್ನು ಸುಖದ ಘಳಿಗೆ
ಕನಸು ಮನಸು ಹಂಚಿಕೊಳಲು ತಡವು ಏತಕೆ?

(ಪ್ರೇರಣೆ : ನನಗೆ ಬಂದ ಒಂದು sms )

Friday, July 2, 2010

ಪಯಣ

ಅಂತ್ಯವಿರದ ಹಾದಿಯಲ್ಲಿ
ದಿಗಂತದಾಚೆಗಿನ ಊರಿಗೆ
ವಿಶ್ರಾಂತಿಯಿಲ್ಲದ ಪಯಣ

ನೂರಾರು ಕವಲುಗಳು
ಹಲವಾರು ಯೋಚನೆಗಳು
ಹೊಸ ಲೋಕದನಾವರಣ

ದಾರಿ ತೋರುವ ಫಲಕಗಳಿಲ್ಲ
ಹೆಜ್ಜೆಗುರುತುಗಳ ಸುಳಿವಿಲ್ಲ
ನನ್ನದೇ ಹಾದಿಯ ಅನ್ವೇಷಣೆ

ಎದುರುಗೊಂಡ ಹಲವಾರು ಮುಖಗಳು
ಮುಗುಳ್ನಗೆಯೇ ಮಾತು
ಹೆಸರಿಲ್ಲದ ಸಂಬಂಧದಂಕುರ

ಜೊತೆಜೊತೆಗೆ ಕೆಲವು ಹೆಜ್ಜೆ
ಸವಿ ಮಾತ ಮಕರಂದ
ಸ್ನೇಹದಮೃತ ಸಿಂಚನ

ಕ್ರಮಿಸಿರುವುದೆರಡೇ ಮೈಲಿ
ಗಮ್ಯವಿನ್ನೂ ಬಹುದೂರ
ಗುರಿಯೆಡೆಗಿನ ನಡಿಗೆ ನಿರಂತರ

Thursday, July 1, 2010

ಮೊಗ್ಗಿನ ಮನಸು

ಸಂಜೆಯ ತಂಗಾಳಿಗೆ
ತನ್ನನ್ನೊಡ್ಡಿ ನಿಂತ ಮೊಗ್ಗು
ಮಾಸದ ನಗೆಯೊಂದಿಗೆ
ನಾಳೆಗೆ ಕಾದಿದೆ.

ಇರುಳ ಬೆಳದಿಂಗಳಾಟ
ರವಿಯ ಹೊಂಗಿರಣ ಸ್ಪರ್ಶ
ಕಚಗುಳಿಯಿಡುವ ಮಳೆ
ಕನಸಿನ ತೇರು ಹೊರಟಿದೆ.

ನಾಳೆಯನಿಂದೇ ಕಂಡವರ್ಯಾರು?
ಕನಸಿಗೆ ಬೇಲಿ ಕಟ್ಟುವರ್ಯಾರು?
ನಾಳೆಯ ಗೆಲ್ಲುವ ಛಲವೊಂದಿರಲು
ಹೂವಿನ ನಗುವನು ಕಸಿಯುವರ್ಯಾರು?