Monday, September 6, 2010

ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ

"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ"
"ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?"
"ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು."
ಹೌದಲ್ಲ... ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?

ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ "ಇಲ್ಲ". ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ.....

ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ ಶಕ್ತಿಶಾಲಿ ಆಂಟೆನಾದ ಮೂಲಕ ಸುಮಾರು ೫೦ ಕಿ.ಮೀ. ದೂರದವರೆಗೆ ಸಂದೇಶಗಳನ್ನು ಬ್ರಾಡ್ ಕಾಸ್ಟ್ ಮಾಡಲಾಗುತ್ತಿತ್ತು. ಆದರೆ ಸೆಲ್ಯುಲಾರ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಒಂದು ಶಕ್ತಿಶಾಲಿ ಆಂಟೆನಾದ ಬದಲಿಗೆ ಅನೇಕ ಕಡಿಮೆ ಶಕ್ತಿಯ ಆಂಟೆನಾಗಳಿಂದ ವ್ಯಾಪ್ತಿ ಪ್ರದೇಶದೊಳಗಿನ ಗ್ರಾಹಕರನ್ನು ತಲುಪುವ ವ್ಯವಸ್ಥೆ ಆರಂಭವಾಯಿತು. ಇಂಥ ಒಂದು ಕಡಿಮೆ ಶಕ್ತಿಯ ಆಂಟೆನಾದಿಂದ ಸಂಪರ್ಕ ಸೇವೆ ಪಡೆಯುವ ಒಂದು ಭೌಗೋಳಿಕ ಪ್ರದೇಶಕ್ಕೆ "ಸೆಲ್" ಎಂದು ಹೆಸರು. ಹಾಗೆ ಈ ಆಂಟೆನಾ ಹಾಗೂ ಅದಕ್ಕೆ ಸಂಬಂಧಿಸಿದ ಸಿಗ್ನಲ್ ಪ್ರೊಸೆಸಿಂಗ್ ಹಾರ್ಡ್ ವೇರ್ ಗೆ ಬೇಸ್ ಟ್ರಾನ್ಸೀವರ್ ಸ್ಟೇಷನ್(BTS) ಎಂಬ ಹೆಸರು.ಒಂದು ಅಥವಾ ಅದಕ್ಕಿಂತ ಹೆಚ್ಚು BTS ಗಳನ್ನು ನಿಯಂತ್ರಿಸುವುದು ಬೇಸ್ ಸ್ಟೇಷನ್ ಕಂಟ್ರೋಲರ್ (BSC) . ಹಲವಾರು BSCಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಕರೆ ಪೂರ್ಣಗೊಳಿಸುವುದು ಮೊಬೈಲ್ ಸ್ವಿಚಿಂಗ್ ಸೆಂಟರ್ (MSC). ಇಲ್ಲಿ ಕೇವಲ BTS ಮತ್ತು ಮೊಬೈಲ್ ನಡುವೆ ಮಾತ್ರ ಗಾಳಿಯಲ್ಲಿ ತರಂಗಗಳ ಮೂಲಕ ಸಂದೇಶ ರವಾನೆಯಾಗುತ್ತದೆ.

ಗ್ರಾಹಕರಿಗೆ ಮೊಬೈಲ್ ಸೇವೆ ಒದಗಿಸುವ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ BTS, BSC ಹಾಗೂ MSCಗಳನ್ನು ಹೊಂದಿರುತ್ತದೆ. ಒಂದು ನೆಟ್ ವರ್ಕ್ ನ MSC ತನ್ನ ನೆಟ್ ವರ್ಕಿನ ಇತರೆ MSCಗಳೊಂದಿಗೆ ಹಾಗೂ ಇತರೆ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕಗಳ ಎಕ್ಸ್ ಚೇಂಜ್ ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.ಇದಲ್ಲದೇ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ ಕೆಲವು ಮಾಹಿತಿಗಳನ್ನು ಹೋಂ ಲೊಕೇಶನ್ ರೆಜಿಸ್ಟರ್(HLR) ಹಾಗೂ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR) ನಲ್ಲಿ ಹೊಂದಿರುತ್ತವೆ.ಅನೇಕ MSCಗಳು ಕಾರ್ಯ ನಿರ್ವಹಿಸುತ್ತಿರುವ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಎಲ್ಲಾ ಗ್ರಾಹಕರ ಮಾಹಿತಿಯನ್ನು  HLR ಹೊಂದಿದ್ದರೆ, ಒಂದು MSCಯ ವ್ಯಾಪ್ತಿಗೊಳಪಡುವ ಭೌಗೋಳಿಕ ಪ್ರದೇಶದಲ್ಲಿ ಆ ಸಮಯದಲ್ಲಿರುವ ಗ್ರಾಹಕರ ಮಾಹಿತಿಯನ್ನು VLR ಹೊಂದಿರುತ್ತದೆ.ಪ್ರತಿಯೊಂದು MSCಯೊಂದಿಗೆ ಒಂದು VLR ಇರುತ್ತದೆ.ಯಾವ ಗ್ರಾಹಕ ಯಾವ MSC-VLR ಗೆ ಸೇರಿದ ಪ್ರದೇಶದಲ್ಲಿದ್ದಾನೆ ಎಂಬುದು HLR ಗೆ ತಿಳಿದಿರುತ್ತದೆ. ಗ್ರಾಹಕರಿಗೆ ಸೇವೆ ಒದಗಿಸಲು ಬೇಕಾದ ಎಲ್ಲಾ ಮಾಹಿತಿಗಳನ್ನು HLRನಿಂದ VLR ಪಡೆಯುತ್ತದೆ.

ಪ್ರತಿಯೊಂದು ಅಧಿಕೃತ ಮೊಬೈಲ್ ಹ್ಯಾಂಡ್ ಸೆಟ್ ೧೫ ಅಂಕಿಗಳ IMEI (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. (ನಿಮ್ಮ ಮೊಬೈಲಿನ IMEI ನಂಬರ್ ತಿಳಿಯಲು *#೦೬# ಡಯಲ್ ಮಾಡಿ) . ಎಲ್ಲಾ ಅಧಿಕೃತ ಮೊಬೈಲ್ ಹ್ಯಾಂಡ್ಸೆಟ್ ಗಳ IMEI ನಂಬರ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್ ರೆಜಿಸ್ಟರಿನಲ್ಲಿ( EIR) ದಾಖಲಾಗಿರುತ್ತದೆ. ಮೊಬೈಲ್ ಗ್ರಾಹಕರನ್ನು ಗುರುತಿಸಲು ಪ್ರತಿ ಸಿಮ್ ಕಾರ್ಡ್ ೧೫ ಅಂಕಿಗಳ IMSI(ಇಂಟರ್ನ್ಯಾಷನಲ್ ಮೊಬೈಲ್ ಸುಬ್ಸ್ ಕ್ರೈಬರ್ ಐಡೇಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. ಇದೇ ನಂಬರ್ ಅಥೆಂಟಿಕೇಶನ್ ಸೆಂಟರ್( AUC) ನಲ್ಲಿಯೂ ದಾಖಲಾಗಿರುತ್ತದೆ.

ನಾವು ಒಂದು ನೆಟ್ ವರ್ಕ್ ಇಂದ ಸೇವೆ ಪಡೆಯಲು ಅರ್ಜಿ ಸಲ್ಲಿಸಿ ಸಿಮ್ ಕಾರ್ಡ್ ಪಡೆದಾಗ ನಮ್ಮ ವಿವರಗಳು,ನಾವು ಪಡೆದಿರುವ ಸರ್ವೀಸಸ್ ನ ವಿವರಗಳು ಹಾಗೂ ನಾವು ಸಬ್ಸ್ ಕ್ರೈಬ್ ಮಾಡಿರುವ ಪ್ಲಾನ್ ಎಲ್ಲಾ ಆ ನೆಟ್ ವರ್ಕಿನ ಹೋಂ ಲೊಕೇಶನ್ ರೆಜಿಸ್ಟರಿನಲ್ಲಿ(HLR) ದಾಖಲಾಗುತ್ತದೆ. ನಮ್ಮ ಮೊಬೈಲ್ ಉಪಕರಣದೊಳಗೆ ನಾವು ಸಿಮ್ ಅಳವಡಿಸಿದಾಗ ಅದು ಎಲ್ಲಾ ನೆಟ್ ವರ್ಕ್ ಗಳಿಗೆ ಸೇರಿರುವ BTSಗಳಿಗೆ ಸಂದೇಶ ರವಾನಿಸುತ್ತದೆ.ಸಂದೇಶ ರವಾನಿಸುತ್ತಿರುವ ಸಿಮ್ ನಲ್ಲಿರುವ IMSI ನಂಬರನ್ನೂ ತನ್ನ HLR ಅಲ್ಲಿರುವ ಮಾಹಿತಿಯನ್ನೂ ಪರಿಶೀಲಿಸಿ ಅಧಿಕೃತ ನೆಟ್ ವರ್ಕ್ ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತದೆ. ಗ್ರಾಹಕರ ಮಾಹಿತಿಯನ್ನು ಗೌಪ್ಯವಾಗಿಡಲು ಟೆಂಪೊರರಿ ಮೊಬೈಲ್ ಸಬ್ಸ್ ಕ್ರೈಬರ್ ಐಡೆಂಟಿಫಿಕೇಶನ್(TMSI) ನಂಬರ್ ಗಳನ್ನು ನೀಡಲಾಗುತ್ತದೆ.

ನಾವು ಮೊಬೈಲನ್ನು ಬಳಸದಿದ್ದಾಗಲೂ ಅದು ಆನ್ ಆಗಿದ್ದಲ್ಲಿ ಮೊಬೈಲ್ ನಿಯಮಿತವಾಗಿ BTSಗಳಿಗೆ ಸಂದೇಶ ರವಾನಿಸುತ್ತಿರುತ್ತದೆ. ನಮ್ಮ ಮೊಬೈಲ್ ತನ್ನ ಸುತ್ತಲಿನ ಗರಿಷ್ಟ ೬ BTSಗಳಿಂದ ಸಂದೇಶಗಳನ್ನು ಸ್ವೀಕರಿಸಲು ಶಕ್ತವಾಗಿರುತ್ತದೆ. ಸ್ವೀಕರಿಸಿದ ಸಿಗ್ನಲ್ ಗಳ ವಿವರವನ್ನು ಪುನಃ BTSಗಳ ಮುಖಾಂತರ BSC ಪಡೆಯುತ್ತದೆ. ಹಾಗೂ ಗರಿಷ್ಟ ಶಕ್ತಿ ಹೊಂದಿರುವ ಸಿಗ್ನಲ್ ಯಾವ BTSನಿಂದ ಮೊಬೈಲನ್ನು ತಲುಪುತ್ತಿರುತ್ತದೆಯೋ ಅದರ ಮೂಲಕ ಸೇವೆ ಒದಗಿಸುತ್ತದೆ.ನಾವು ಯಾವ BTSನಿಂದ ಸೇವೆ ಪಡೆಯುತ್ತಿದ್ದೇವೆ ಎಂಬುದರ ಆಧಾರದ ಮೇಲೆ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR)ನಲ್ಲಿ ನಾವೀಗಿರುವ ಸ್ಥಳದ ಮಾಹಿತಿ ಅಪ್ಡೇಟ್ ಆಗುತ್ತದೆ. ಒಂದು BTS ಮುಖೇನ ಸೇವೆ ಪಡೆಯುತ್ತಿದ್ದರೂ ಮೊಬೈಲ್ ತನ್ನ ಸುತ್ತಲಿನ ಇತರೆ BTSಗಳಿಂದ ಪಡೆಯುತ್ತಿರುವ ಸಿಗ್ನಲ್ ಬಗೆಗಿನ ಮಾಹಿತಿಯನ್ನು ನಿಯಮಿತವಾಗಿ BSCಗಳಿಗೆ ರವಾನಿಸುತ್ತಿರುತ್ತದೆ. ಇದು Idle state.

ನಾವು ಕರೆ ಮಾಡಲು ಡಯಲ್ ಮಾಡಿದಾಗ ನಮ್ಮ ಮೊಬೈಲ್ ಇಂದ BSCಗೆ ಹಾಗೂ ಅಲ್ಲಿಂದ MSCಗೆ ಸಂದೇಶ ಹೋಗುತ್ತದೆ. ನಮ್ಮ ಕರೆ MSCಗೆ ತಲುಪಿದಾಗ ಕರೆ ಪೂರ್ಣಗೊಳಿಸುವ ಮೊದಲು EIR ನಲ್ಲಿ ನಮ್ಮ ಮೊಬೈಲ್ ಸೆಟ್ ನ IMEI ದಾಖಲಾಗಿದೆಯೇ ಎಂದು ಪರಿಶೀಲಿಸುತ್ತದೆ. AUCಯಲ್ಲಿರುವ ಕೆಲವು ರಾಂಡಮ್ ಸಂಕೇತಗಳನ್ನು ನಮ್ಮ ಮೊಬೈಲ್ ಗೆ ಕಳುಹಿಸುತ್ತದೆ. ಅದಕ್ಕುತ್ತರವಾಗಿ ನಮ್ಮ ಮೊಬೈಲ್ ಕಳುಹಿಸಿದ ಸಂಕೇತಗಳ ಆಧಾರದ ಮೇಲೆ ನಾವು ಅಧಿಕೃತ ಗ್ರಾಹಕರೆಂಬುದನ್ನು ದೃಢೀಕರಿಸುತ್ತದೆ.(ಗ್ರಾಹಕರ ಕರೆಗೆ ಸುರಕ್ಷತೆ ಒದಗಿಸುವುದು ಇದರ ಉದ್ದೇಶ. ಈ ಸಂಕೇತಗಳು ಒಂದು ಕರೆಯಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತವೆ. ಹಾಗಾಗಿ ಒಂದು ಕರೆಯ ಸಂಕೇತಗಳು ತಿಳಿದರೂ ಪ್ರಯೋಜನವಿಲ್ಲ.) HLR ನಲ್ಲಿರುವ ಡಾಟಾಬೇಸ್ ನ ಮಾಹಿತಿಯನ್ನನುಸರಿಸಿ ನಾವು ಮಾಡುತ್ತಿರುವ ಕರೆ ನಾವು ಪಡೆದಿರುವ ಸೇವೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ಈ ಎಲ್ಲಾ ದೃಢೀಕರಣದ ನಂತರ MSC ಕರೆ ಸ್ವೀಕರಿಸಬೇಕಾದ ವ್ಯಕ್ತಿಗೆ ಸೇವೆ ಒದಗಿಸುತ್ತಿರುವ MSCಯ ಆಧಾರದ ಮೇಲೆ ಮುಂದಿನ ಕೆಲಸವನ್ನು ನಿಭಾಯಿಸುತ್ತದೆ. ಕರೆ ಸ್ವೀಕರಿಸುತ್ತಿರುವ ವ್ಯಕ್ತಿ ಕೂಡ ಅದೇ MSC VLR ಪ್ರದೇಶಕ್ಕೆ ಸೇರಿದವನಾದರೆ ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವಿಸ್ ನ ದೃಢೀಕರಣವನ್ನು ತನ್ನ AUC ,EIR, HLR VLR ನ ಮೂಲಕ ಮುಗಿಸಿ ನಂತರ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವನ್ನೇರ್ಪಡಿಸುತ್ತದೆ. ಬೇರೆ MSC ಗೆ ಸೇರಿದವನಾದರೆ ಗೇಟ್ ವೇ MSCಗೆ ಸಂದೇಶ ಹೋಗುತ್ತದೆ. ಗೇಟ್ ವೇ MSC ತನ್ನಲ್ಲಿರುವ  ಮಾಹಿತಿಗನುಗುಣವಾಗಿ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ MSCಗೆ ಸಂದೇಶ ರವಾನಿಸುತ್ತದೆ. ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವೀಸ್ ದೃಢೀಕರಣದ ನಂತರ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವೇರ್ಪಡುತ್ತದೆ.  ಒಮ್ಮೆ ನಮ್ಮ ಕರೆಗೆ ಒಂದು ಸಂಪರ್ಕ ಕೊಂಡಿ ಏರ್ಪಟ್ಟ ಮೇಲೆ ಕರೆ ಸ್ವೀಕರಿಸುತ್ತಿರುವ ಮೊಬೈಲ್ ರಿಂಗಣಿಸುತ್ತದೆ. ಕರೆ ಸ್ವೀಕರಿಸಿದರೆ  MSC ಕರೆಯ ಸಮಯ, ಕಾಲಾವಧಿ ಹಾಗೂ ನಮ್ಮ ಪ್ಲಾನ್ ನ ಆಧಾರದ ಮೇಲೆ ನಮ್ಮ ಕರೆಗೆ ಚಾರ್ಜ್ ಗಳನ್ನು ವಿಧಿಸುತ್ತದೆ. ಕರೆ ಸ್ವೀಕರಿಸದಿದ್ದರೆ ಅದು ಮಿಸ್ಡ್ ಕಾಲ್.

ನೋಡಿ ನಾವು ಕರೆ ಮಾಡಿದ್ರೂ ಮಿಸ್ಡ್ ಕಾಲ್ ಕೊಟ್ರೂ ಈ ಎಲ್ಲಾ ಸಿಗ್ನಲ್ಲಿಂಗ್ ನಡೆಯಲೇಬೇಕು. ಹಾಗಾಗಿ ಮುಂದೆ ನೀವು ಮಿಸ್ಡ್ ಕಾಲ್ ಕೊಡುವ ಮುನ್ನ ಒಂದು ಮಿಸ್ಡ್ ಕಾಲ್ ಗೆ ಎಷ್ಟೆಲ್ಲಾ ಸಿಗ್ನಲ್ಲಿಂಗ್ ವ್ಯರ್ಥವಾಗುತ್ತದೆಂಬುದನ್ನು ಯೋಚಿಸಿ.

ಮುಗಿಸುವ ಮುನ್ನ: ನಿಮ್ಮ  ಮೊಬೈಲಿನ IMEI ನಂಬರನ್ನು ತಿಳಿದುಕೊಂಡು ಅದನ್ನು ಒಂದೆಡೆ ಜೋಪಾನವಾಗಿಟ್ಟುಕೊಳ್ಳಿ. ಅಕಸ್ಮಾತ್ ದುರದೃಷ್ಟವಶಾತ್ ನಿಮ್ಮ ಮೊಬೈಲ್ ಕಳೆದುಹೋದರೆ ಆ ನಂಬರನ್ನು ಬಳಸಿ EIR ನಲ್ಲಿ ಅದನ್ನು ಬ್ಲಾಕ್ ಲಿಸ್ಟ್ ಮಾಡಬಹುದು. ಆಗ ಕದ್ದವರೂ ನಿಮ್ಮ ಮೊಬೈಲನ್ನು ಬಳಸಲಾರರು.

Sunday, September 5, 2010

ನನ್ನ ಟೀಚರ್ಸ್

ನಾನು ಚಿಕ್ಕವಳಿದ್ದಾಗ ಸ್ಕೂಲಿಗೆ ಸೇರುವ ಮುನ್ನವೇ ಪ್ರತಿದಿನ ಅಕ್ಕನನ್ನು ಸ್ಕೂಲಿಗೆ ಬಿಟ್ಟು ಬರೋದಕ್ಕೆ ಅಪ್ಪನ ಜೊತೆ ಹೋಗ್ತಿದ್ದೆ. ಅದೇನು ಸ್ಕೂಲಿನ ಬಗ್ಗೆ ಇದ್ದ ಆಸೆಯೋ ಅಥವಾ ಅಪ್ಪನ ಸ್ಕೂಟರಿನ ಮೇಲಿನ ಮೋಹವೋ ಗೊತ್ತಿಲ್ಲ. ಆದ್ರೆ ಒಂದು ದಿನ ಅಪ್ಪ ಏನಾದ್ರೂ ನನ್ನ ಮನೇಲಿ ಬಿಟ್ಟು ಹೋದ್ರೆ ಮನೇಲಿ ರಂಪ ಆಗ್ತಿದ್ದಿದ್ದು ಗ್ಯಾರಂಟಿ. ಅಮ್ಮನ ಕೈಯಿಂದ ಎರಡೇಟು ಬಾಯಿ ಮೇಲೆ ಬೀಳೋವರೆಗೆ ಸೈರನ್ ನಿಲ್ತಿರ್ಲಿಲ್ಲ. ಅದು ಇರ್ಲಿ ನನ್ನ ಚಿಕ್ಕ ವಯಸ್ಸಿನ ತರ್ಲೆ ತುಂಟಾಟಗಳ ಬಗ್ಗೆ ಇನ್ನೊಮ್ಮೆ ಬರೀತೀನಿ ಈಗ ಬರೆಯಬೇಕು ಅಂತಿರೋದು ನನ್ನ ಸ್ಕೂಲಿನ ಬಗ್ಗೆ. ಅಲ್ಲಿನ ಶಿಕ್ಷಕರ ಬಗ್ಗೆ...

ಅಕ್ಕ, ನಾನು, ಈಗ ನನ್ನ ತಮ್ಮ ಎಲ್ರೂ ಓದಿದ್ದು ಒಂದೇ ಸ್ಕೂಲಿನಲ್ಲಿ.ವಿಜಯನಗರದ ಬಳಿ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಕಾರ್ಡಿಯಲ್ ಪ್ರೌಢಶಾಲೆಯಲ್ಲಿ. ಹನ್ನೆರಡು ವರ್ಷ ಒಂದೇ ಸ್ಕೂಲು. ಮೊದಲಿನಿಂದಲೂ ಸ್ಕೂಲಿಗೆ ಹೋಗ್ಬೇಕು ಅಂತ ಇಷ್ಟ ಇದ್ದಿದ್ರಿಂದ ನಾನ್ಯಾವತ್ತೂ ಸ್ಕೂಲಿಗೆ ಹೋಗೊಲ್ಲ ಅಂತ ಹಠ ಮಾಡಿಲ್ಲ. LKGಯಲ್ಲಿ ಸ್ಲೇಟ್ ಮೇಲೆ ತಿದ್ದಿಸಿದ್ದ ಲಕ್ಷ್ಮಿ ಮ್ಯಾಮ್, UKGಯಲ್ಲಿ ಸ್ಪೋರ್ಟ್ಸ್ ಅಲ್ಲಿ ಗೆದ್ದಾಗ ಖುಷಿಪಟ್ಟ ರಮಾಮಣಿ ಮ್ಯಾಮ್ , ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹಾಡಿಗೆ ಡಾನ್ಸ್ ಹೇಳಿಕೊಟ್ಟಿದ್ದ ರಮಾಮಣಿ , ರಮಾರಾವ್ ಮತ್ತೆ ಲಕ್ಷ್ಮಮ್ಮಮ್ಮ ಮ್ಯಾಮ್- ಎಲ್ಲರ ಮುಖಗಳು ಆ ಸನ್ನಿವೇಶಗಳು ಇನ್ನು ಅದು ಹೇಗೆ ನೆನಪಲ್ಲಿವೆ ಅನಿಸುತ್ತೆ.

ನರ್ಸರಿ ಮುಗಿಸಿ ಮೊದಲನೇ ತರಗತಿಗೆ ಹೋಗಬೇಕಾದ ಮೊದಲ ದಿನ ಇನ್ನು ಚೆನ್ನಾಗಿ ನೆನಪಿದೆ. ಮೊದಲೇ ಸ್ವಲ್ಪ ತಡವಾಗಿ ಹೋಗಿದ್ದೆ. ಅಷ್ಟು ಹೊತ್ತಿಗಾಗಲೇ ನಮ್ಮ HM ಮೇರಿ ಜಾರ್ಜ್ ಪ್ರಾರ್ಥನೆಗೆ ಅಂತ ಮೊದಲನೇ ಮಹಡಿಯಲ್ಲಿರುವ ಅವರ ಕೋಣೆಯಿಂದ ಕೆಳಗಿಳಿದು ಬಂದಿದ್ರು. ಬೆಲ್ ಇನ್ನೂ ಆಗಿರಲಿಲ್ಲ. ನಾನು ನನ್ನ ಹೊಸ ಬ್ಯಾಗ್ ಲಂಚ್ ಬ್ಯಾಗ್ ಎಲ್ಲಾ ಹಿಡಿದು ಸೀದಾ ಅವರ ಬಳಿ ಹೋಗಿ "ಮಿಸ್ ಫಸ್ಟ್ ಸ್ಟ್ಯಾಂಡರ್ಡ್ ವೇರ್?" ಅಂತ ಕೇಳಿದ್ದೆ. ಅವರೇ ಕರೆದುಕೊಂಡು ಹೋಗಿ ನನ್ನ ತರಗತಿಯಲ್ಲಿ ಬಿಟ್ಟಿದ್ರು. ಆಗ ನಮಗೆ ಕ್ಲಾಸ್ ಟೀಚರ್ ಆಗಿದ್ದು ನಳಿನಿ ಮ್ಯಾಮ್.

ಆಮೇಲೆ ಬಂದ ಗೀತಾ ಮ್ಯಾಮ್ ,ಇಂಗ್ಲೀಶ್ ಅಲ್ಲೇ ಮಾತಾಡಬೇಕು ಅಂತ ಕಟ್ಟಪ್ಪಣೆ ಮಾಡಿದ್ದ ಉಷಾ ಮ್ಯಾಮ್, ಕ್ರಾಫ್ಟ್ ಹೇಳಿಕೊಡಲಿಕ್ಕೆ ಬರ್ತಾ ಇದ್ದ ನಮ್ಮ ಸ್ಕೂಲಿನಲ್ಲಿ ಎಲ್ಲರಿಗಿಂತ ಹಿರಿಯರಾಗಿದ್ದ ಪಾರ್ವತಮ್ಮ ಮ್ಯಾಮ್ (ಅಜ್ಜಿ ಮಿಸ್) ,ಅವರೇ ಹೇಳುತ್ತಿದ್ದಂತೆ ಕೋಳಿ ಕಾಲಿನಂತಿದ್ದ ನನ್ನ ಕನ್ನಡ ಬರವಣಿಗೆಯನ್ನು ಗುಂಡಗೆ ಮಾಡಿದ ಭವಾನಿ ಭಟ್ ಮ್ಯಾಮ್, ಗಣಿತ ಪುಸ್ತಕದಲ್ಲಿ ಪ್ರತಿ ಬಾರಿಯೂ ಗುಡ್, ವೆರಿ ಗುಡ್ ಕೊಡ್ತಾ ಇದ್ದ, ಪ್ರತಿ ಬಾರಿಯೂ ಶಾಲಾ ವಾರ್ಷಿಕೋತ್ಸವಕ್ಕೆ ಸಮೂಹ ಗಾನಕ್ಕೆ ಹಾಡು ಹೇಳಿಕೊಡ್ತಾ ಇದ್ದ ಶಾಂತಲಾ ಮ್ಯಾಮ್, "ಯಾಕೋ ದಡ್ಡ" ಅಂತ ಬೈತಿದ್ದ ರತ್ನ ಮ್ಯಾಮ್ , ಹಿಂದಿ ಹೇಳಿಕೊಟ್ಟಿದ್ದ ಉಮಾ ಮಹೇಶ್ವರಿ ಮ್ಯಾಮ್, ಪ್ರೀತಿಯ ಪ್ರೇಮಾ ಮ್ಯಾಮ್, ನನ್ನ ಈಗಿನ ಇಂಕ್ ಪೆನ್ ಪ್ರೀತಿಗೆ ನಾಂದಿ ಹಾಡಿದ ಸರಸ್ವತಿ ಮ್ಯಾಮ್, "ಅಕ್ಕನ ತದ್ವಿರುದ್ಧ ನೀನು- ಚಾಟರ್ ಬಾಕ್ಸ್" ಅಂತ ಬೈತಿದ್ದ ನಿರ್ಮಲಾ ಮ್ಯಾಮ್,"ನೀನು ತುಂಬಾ ಜಾಣ, ತು.......ಸ್ಸು ಕೋಣ" ಅಂತ ಪ್ರೀತಿಯಿಂದಾನೇ ಮೂದಲಿಸ್ತಾ ಇದ್ದ ಅನ್ನಪೂರ್ಣ ಮ್ಯಾಮ್, "Stand at ease"  "attention" ಅಂತಿದ್ದವರಿಗೆ ಹಿಂದಿಯಲ್ಲಿ "ಸಾವ್ ಧಾನ್", "ವಿಶ್ರಾಮ್" ಅಂತ PT ಮಾಡಿಸಿದ್ದ ಸುರೇಶ್ ಸರ್, ಆನಂತರ ಬಂದ ಜೈ ಶಂಕರ್ ಸರ್, ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾನೆಣಿಸಿದಷ್ಟು ಅಂಕ ಬರದಿದ್ದಾಗ ಸಮಾಧಾನ ಮಾಡಿದ್ದ ವನಮಾಲಾ ಮ್ಯಾಮ್, ಸಮಾಜ ಶಾಸ್ತ್ರದ ತರಗತಿಗಳಲ್ಲಿ ರಾಜರ ಕತೆಗಳನ್ನು ಹೇಳ್ತಾ ಇದ್ದ ಸುನಂದಾ ಮ್ಯಾಮ್, ಪ್ರೇಯರ್ ಹೇಳಿಕೊಟ್ಟಿದ್ದ ಸುಜಯಾ ಮ್ಯಾಮ್, ಸಂಸ್ಕೃತವನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದ ನಾಗವೇಣಿ ಮ್ಯಾಮ್,ಎಲ್ಲರಿಗೂ ಒಂದೊಂದು ನಿಕ್ ನೇಮ್ ಇಟ್ಟು ಕರೀತಿದ್ದ ಸುಭಾಷಿಣಿ ಮ್ಯಾಮ್, ತಮ್ಮ ಇಂಗ್ಲೀಶ್ ಮಾತನಾಡುವ ಶೈಲಿಯಿಂದ ಸ್ಕೂಲಲೆಲ್ಲಾ ಪ್ರಸಿದ್ಧರಾಗಿದ್ದ ರಂಗರಾಜು ಸರ್, ಸರಿಯಾಗಿ ತಯಾರಾಗದೇ ಬಂದು ವಿದ್ಯಾರ್ಥಿಗಳಿಂದಾನೆ ಗಣಿತದ ಸಮಸ್ಯೆಗಳನ್ನು ಬಿಡಿಸುವುದನ್ನು ಹೇಳಿಸಿಕೊಂಡಿದ್ದ ಮಂಜುನಾಥ್ ಸರ್, ನಮ್ ಮನೆ ಹತ್ರಾನೆ ಇದ್ದ ಹೆಗಡೆ ಸರ್, ಮೂರ್ತಿ ಸರ್ ಮತ್ತೆ ನರಸಯ್ಯ ಸರ್, ಡ್ರಾಮಾ ಹೇಳಿಕೊಟ್ಟಿದ್ದ ರಮೇಶ್ ಸರ್, ಮೊದಲ ಬಾರಿ ಸ್ಕೂಲ್ ಡೇಯಲ್ಲಿ ನಿರೂಪಣೆ ಮಾಡಲು ಅವಕಾಶ ಮಾಡಿಕೊಟ್ಟ ರೋಷಿಣಿ ಮ್ಯಾಮ್, CETಯಲ್ಲಿ rank ತಗೊಂಡು ಸ್ಕೂಲಿಗೆ ಹೋದಾಗ ಖುಷಿ ಪಟ್ಟ ಎಲ್ಲಾ ಟೀಚರ್ಸ್.... ಎಲ್ಲಾ ಮರೆಯಲಾಗದ ದಿನಗಳು...

ನೆನಪಿನ ಭಿತ್ತಿಯ ಮೇಲೆ ತಮ್ಮ ಹಸ್ತಾಕ್ಷರವನ್ನು ಅಚ್ಚಳಿಯದಂತೆ ಮೂಡಿಸಿರುವ ನನ್ನೆಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....