Monday, December 8, 2014

ಸ್ನೇಹ

ಧ್ವನಿಯಾಗುವ ಮೊದಲೇ
ಹೃದಯದ ಮಾತನ್ನರಿಯುವ
ಮಾಯಾಶಕ್ತಿ ಸ್ನೇಹ

ಸೋತು ಬಳಲಿದ ಜೀವಕೆ
ಭರವಸೆಯ ತುಂಬುವ
ಜೀವ ಚೈತನ್ಯ ಸ್ನೇಹ

ಕಂಡ ಕನಸನು ಕಾಯ್ದು
ತಪ್ಪಿಲ್ಲದೆ ಗುರಿ ತಲುಪಿಸುವ
ಮಾರ್ಗದರ್ಶಕ ಸ್ನೇಹ

ಕಂಬನಿ ತುಂಬಿದ ಮೊಗದಿ
ನಗೆಯ ಹೂವನ್ನರಳಿಸುವ
ವಿದೂಷಕ ಸ್ನೇಹ

ಮನಕೆ ಇರುಳಾವರಿಸಿದಾಗ
ಪ್ರೀತಿಯ ಬೆಳಕಿನೆಡೆಗೊಯ್ಯುವ
ದಿವ್ಯ ಪ್ರಣತಿ ಸ್ನೇಹ

ದಾರಿಯಲ್ಲೆಲ್ಲೊ ಒಂದಾಗಿ
ಜೊತೆಯಾಗಿಯೇ ನಡೆವ
ನಮ್ಮದೇ ನೆರಳು ಸ್ನೇಹ

ಯಾವ ಬೇಲಿಗೂ ತೊಡಕದ
ಯಾವ ಮಾತಿಗೂ ನಿಲುಕದ
ಬಣ್ಣಿಸಲಾಗದ ಬಂಧ ಸ್ನೇಹ

ಬಾಳಿನ ಬೃಹತ್ ಗ್ರಂಥದಲಿ
ಕಲೆತ ಮನಸು ಜೊತೆಗೆ ಬರೆದ
ಮಧುರ ಕಾವ್ಯ ಸ್ನೇಹ

Monday, December 1, 2014

ನಿವೇದನೆ

ನಿನ್ನಾಗಮನದಿಂದ ಮನೋರಾಜ್ಯದಲಿ
ಮೂಡಿ ಬಂತು ಒಲವಿನಾ ಮಧುರ ಕಾಂತಿ
ಜಗವೊಂದರೆಚಣ ತಟಸ್ಥವಾಯಿತೋ ಎಂಬ ಭ್ರಾಂತಿ

ಆ ನಿನ್ನ ಮೋಹಕ ನಗೆಯ ಸೂಸಿ
ಮೊದಲ ನೋಟದಲ್ಲೇ ಮನಸ ಕದ್ದೆಯಲ್ಲಾ
ನಿನ್ನ ಹೆಸರಿನದೇ ಜಪವಾಗಿದೆ ನನಗೀಗ ದಿನವೆಲ್ಲಾ

ನೀನು ಕಾಣದಾದಾಗ ತಳಮಳಿಸಿ
ಕಾಯುವೆನು ಅನವರತ ನಿನಗಾಗಿ ಹಂಬಲಿಸಿ
ಸದಾಕಾಲ ನಿನ್ನೊಂದಿಗಿರಬೇಕೆಂದು ಅನುಕ್ಷಣವೂ ಅಪೇಕ್ಷಿಸಿ

ಸೋಲಿನ ಭೀತಿಯ ಮಬ್ಬಿನಲ್ಲಿಯೂ
ತೋರಿದೆ ನೀನು ಗುರಿಯೆಡೆಗಿನ ಹಾದಿ ಸ್ಪಷ್ಟವಾಗಿ
ಪೆದ್ದು ಮನದ ಮೊದ್ದು ಮಾತಿಗೆಲ್ಲಾ ಬೇಸರಿಸದೆ ಕಿವಿಯಾಗಿ

ಮನಸೂರೆಗೊಳ್ಳುವ ವ್ಯಕ್ತಿತ್ವ
ಅಮಿತ ಆತ್ಮವಿಶ್ವಾಸ ಚೈತನ್ಯದ ಗಣಿ ನೀನು
ನಿನ್ನಿಂದ ಸ್ಫೂರ್ತಿ ಪಡೆದು ನಿನಗೆಂದೆಂದೂ ಋಣಿ ನಾನು

ನೀ ನನಗೆಂದೆಂದಿಗೂ ಸಿಗುವುದಿಲ್ಲ
ಎಂಬರಿವಿದ್ದರೂ ನನ್ನಲ್ಲೊಂದು ಬಯಕೆ
ಮಾಡಬೇಕು ನಿನ್ನಲ್ಲಿ ನನ್ನ ಮೊದಲ ಪ್ರೇಮದರಿಕೆ

Monday, November 24, 2014

ಬಯಕೆ

ಮುಗ್ಧ ಮನದ ಅಂಗಳದಲ್ಲಿ
ಯಾರೋ ಎಸೆದ ಬೀಜವೊಡೆದು
ಚಿಗುರಿತೊಂದು ಪುಟ್ಟ ಬಯಕೆ

ತಿಳಿಯದ ಭಾವಗಳ ನೀರ ಕುಡಿದು
ಕೇಳದ ಮಾತುಗಳ ಆರೈಕೆ ಪಡೆದು
ಹೆಮ್ಮರವಾಯ್ತು ಬಯಕೆ

ಕೋಟೆಯ ಕಾವಲನ್ನು ಭೇದಿಸಿ
ಬಂಧನದ ಕೊಂಡಿಯನ್ನು ಛೇದಿಸಿ
ಜೀವ ತಳೆಯುವ ಮನಸು

ಯಾರೂ ಕೇಳದ ಹಾಡನ್ನು ಹಾಡಿ
ಯಾರೂ ಬಾರದ ಹಾದಿಯಲ್ಲಿ ನಡೆದು
ಕಾಣದೂರಿನ ಬೆಳಕ ಕಾಣುವ ಕನಸು

ಗೊಂದಲಗಳ ಗೂಡಲ್ಲಿ ಅರಳಿದ
ಆಸೆಯ ಅಭಿವ್ಯಕ್ತಿ ಹೇಗೆ?
ಭಾವಗಳೆಲ್ಲಾ ಚೆಲ್ಲಾಪಿಲ್ಲಿ

ಮನದಲ್ಲಿ ಮೂಡದ ಮಾತುಗಳಿಗೆ
ಸವಿಜೇನ ಬೆರೆಸುವುದು ಹೇಗೆ?
ಮೌನವೇ ಭಾಷೆ ಇಲ್ಲಿ

ಪದಗಳ ಗೋಜಲಿಗೆ ಸಿಲುಕದೆ
ವ್ಯಕ್ತವಾಯ್ತು ಅಂತರ್ದನಿ
ಮನಸೀಗ ಒಡೆದ ಕನ್ನಡಿ