Thursday, December 31, 2009

೨೦೦೯ ಒಂದು ಸುತ್ತು

೨೦೦೯ ನನ್ನ ಪಾಲಿಗೆ ತುಂಬ ವಿಶಿಷ್ಟವಾದ /ವಿಚಿತ್ರವಾದ ಯಾವುದೇ ಅನುಭವಗಳನ್ನು ನೀಡಲಿಲ್ಲ.... ಆದ್ರೂ ೨೦೦೯ರಲ್ಲಿ ಆದದ್ದೇನು ಅಂತ ಯೋಚಿಸಿದ್ರೆ ನೆನಪಾಗೋ ವಿಷ್ಯಗಳನ್ನು ಇಲ್ಲಿ ದಾಖಲಿಸುವ ಯತ್ನ...
ತುಂಬಾ ಖುಷಿಯಾದ ದಿನ - ನಾನು ಎಡೆಯೂರು ಮಾರ್ಗವಾಗಿ ತಿಪಟೂರು ತಾಲೂಕಿನಲ್ಲಿರುವ ನಮ್ಮ ಮನೆದೇವರ ದೇವಸ್ಥಾನಕ್ಕೆ ಸ್ವತಂತ್ರವಾಗಿ ಕಾರ್ ಓಡಿಸಿಕೊಂಡು ಹೋಗಿದ್ದು. ಅವತ್ತು ಒಟ್ಟು ೨೮೪ ಕಿ.ಮೀ. ಕ್ರಮಿಸಿದ್ವಿ.
ತುಂಬಾ ಬೇಸರ ತಂದ ಮಾತು - ಕಾರ್ ಓಡಿಸೋದು ಹೇಳಿಕೊಡುತ್ತಿದ್ದಾಗ ಅಪ್ಪ "ಈ ಜನ್ಮದಲ್ಲಿ ನೀನು ಕಾರ್ ಓಡಿಸೋದು ಕಲಿಯೊಲ್ಲ ಬಿಡು" ಅಂದಿದ್ದು
ಸಂತೋಷ ತಂದ ಮಾತು - ಅಪ್ಪ "ನೀನು ನಮ್ಮ ಮನೆಯ ಕಲಶ" ಎಂದು ಹೇಳಿದ್ದು
ಮರೆಯಲಾರದ ದಿನ -ನನ್ನಕ್ಕನ ನಿಶ್ಚಿತಾರ್ಥದ ದಿನ/ ನನ್ನ ಸ್ನೇಹಿತೆಯ ಹುಟ್ಟುಹಬ್ಬದ ಜೊತೆ ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದ ದಿನ
ಸಂತಸದ ಒಡನಾಟ - ಸಂಪದದ್ದು
ತುಂಬಾ ಬೇಸರವಾದ ಕ್ಷಣ -external evaluator ನನ್ ಸೆಮಿನಾರ್ ಕೇಳಲು ಆಸಕ್ತಿಯಿಲ್ಲ ಎಂದಾಗ
ತುಂಬಾ ನೋವಾಗಿದ್ದು - ಸಹಪಾಠಿಗಳು ಮೈಸೂರಿಗೆ ಪ್ರವಾಸಕ್ಕೆಂದು ಹೋದಾಗ ಅವರ ಜೊತೆ ನಾನು ಹೋಗಲಾಗದಿದ್ದಾಗ
ವರ್ಷ ಹೆಚ್ಚು ಬಾರಿ ಕೇಳಿದ compliment - ನಿಮ್ಮ ನಗು ಚೆನ್ನಾಗಿದೆ... ಇದನ್ನಂತೂ ಕೇಳಿ ಕೇಳಿ ನಂಗೆ ಬೇಜಾರಾಗಿ ಹೋಗಿದೆ....
ವರ್ಷ ಮಾಡಿದ ಪ್ರಮುಖ ಕೆಲಸ - ೪ ವೀಲರ್ D.L. ತಗೊಂಡಿದ್ದು... ಇನ್ನು ೨೦ ವರ್ಷ ಅದರ ಬಗ್ಗೆ ಚಿಂತೆಯಿಲ್ಲ...
ಆರೋಗ್ಯದ ದೃಷ್ಟಿಯಿಂದ ಮಾಡಿದ ನಿರ್ಣಯ- ನಾನು ದೇಹ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬುದು. ಅದರ ಬಗ್ಗೆ ಆಗಲೇ ಕಾರ್ಯಪ್ರವೃತ್ತಳಾಗಿ ಭಾಗಶಃ ಯಶಸ್ವಿಯಾಗಿದ್ದೇನೆ ;)
ಇನ್ನೊಂದು ವಿಷ್ಯ : ನನ್ನ ಮೊದಲ ಸೀರೆ ಕೊಂಡುಕೊಂಡಿದ್ದು ೨೦೦೯ರಲ್ಲೆ

Wednesday, December 23, 2009

ಸುನಾಮಿಗೆ ೫ ವರ್ಷ

ಸುನಾಮಿ
ನೀ ಪ್ರಕೃತಿಯಲ್ಲಿರುವ ಮಾಯೆ
ಬಂದು, ಇಂದಿಗೂ ಉಳಿಸಿರುವೆ ನಿನ್ನ ಕರಾಳ ಛಾಯೆ |

ಬಂದೆ ನೀ ಡಿಸೆಂಬರ್ ಇಪ್ಪತ್ತಾರರಂದು
ರಜಾದಿನವಾದ್ದರಿಂದ ಇದ್ದರು ಬಹಳ ಜನ ಬಂದರಿನಲ್ಲಿ ಅಂದು |

ನೀ ಬಂದೆ ಕೊಡದೆ ಯಾವುದೇ ಮುನ್ಸೂಚನೆ
ಇರಲಿಲ್ಲ ಒಂದು ಕ್ಷಣವೂ ಜನರಿಗೆ ಮಾಡಲು ಯೋಚನೆ |

ಸುನಾಮಿ - ಹೆಸರೇ ಹೇಳುವಂತೆ ನೀ ಬಂದರಿನ ಅಲೆ
ಆದ್ದರಿಂದ ಬೀಸಿದೆಯೇನು ಬಂದರಿನಲ್ಲಿದ್ದವರಿಗೆಲ್ಲಾ ಮರಣದ ಬಲೆ?

ನೀ ಕೊಂದೆ ಹಲವರ ಪ್ರೀತಿಪಾತ್ರರನ್ನು
ಅವರು ಶಪಿಸುತ್ತಿದ್ದಾರೆ ಇಂದಿಗೂ ನಿನ್ನನ್ನು |

ದುರ್ಜನರು ಹೆಚ್ಚಾದಾಗ ಪ್ರಕೃತಿವಿಕೋಪ ಎನ್ನುತ್ತೆ ಸಿದ್ಧಾಂತ
ಆದರೆ ತುಸು ಹೆಚ್ಚೇ ಆಯಿತು ನೀನು ಸೃಷ್ಟಿಸಿದ ರಾದ್ಧಾಂತ |

ಪಾಪ! ಏನೂ ಮಾಡದ ಮುಗ್ಧ ಮಕ್ಕಳು ಸತ್ತರು
ಇನ್ನೂ ಕೆಲವು ಮಕ್ಕಳು ಅನಾಥರಾಗಿ ಅತ್ತರು

ಸುನಾಮಿ- ನಿನಗೆ ಸಿಕ್ಕ ಸಂತೋಷವಾದರೂ ಏನು?
ಜನರ ಸಾವು ನೋವು ದುಃಖಗಳೇನು?

ಹಿಂಸಿಸಬೇಡ ನಮ್ಮನ್ನು ಈ ರೀತಿ ತ್ರಾಸ ಕೊಟ್ಟು
ಪ್ರಾರ್ಥಿಸುವೆ ನಿನ್ನನ್ನು ಮತ್ತೆ ಬರಬೇಡ ದಯವಿಟ್ಟು

ಸುನಾಮಿ ಅಲೆ ಭಾರತದ ಸಮುದ್ರ ಕಿನಾರೆಗಳಿಗೆ ಬಡಿದು ಈ ಶನಿವಾರಕ್ಕೆ ೫ ವರ್ಷ.ಆಗ (೫ ವರ್ಷಗಳ ಹಿಂದೆ) ಒಂದು ಪುಸ್ತಕದಲ್ಲಿ ಸುನಾಮಿ ಬಗ್ಗೆ ನಾನು ಬರೆದಿದ್ದ ಕೆಲವು ಸಾಲುಗಳು ಇತ್ತೀಚೆಗೆ ನನಗೆ ಮತ್ತೆ ಸಿಕ್ಕವು. ಆ ಪುಸ್ತಕದಲ್ಲಿ ನಾನು ನಮೂದಿಸಿರುವಂತೆ ನಾನಿದನ್ನು ಬರೆದಿದ್ದುದು ೧೮/೧/೦೫ ರಂದು. ಅಂದು ಅಪ್ಪನ ಸ್ನೇಹಿತರೊಬ್ಬರು ಮನೆಗೆ ಬಂದು ಸುನಾಮಿಯಲ್ಲಿ ಕಾಣೆಯಾದ ತಮ್ಮ ಮಗನ ವಿಚಾರ ಹೇಳುತ್ತಿದ್ದುದನ್ನು ಕೇಳಿ ಬರೆದಿದ್ದು ಇದು...ಈಗ ಓದಿದ್ರೆ ಕೆಲವು ಕಡೆ ಸ್ವಲ್ಪ ಬದಲಾವಣೆಯ ಅಗತ್ಯ ಇದೆ ಅನಿಸುತ್ತೆ. ಆದ್ರೆ ಇದು ನಾನು ನನ್ನ ಆಲೋಚನೆಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಲು ಮಾಡಿದ ಮೊದಲ ಪ್ರಯತ್ನಗಳಲ್ಲೊಂದು. ಬದಲಾಯಿಸಲು ಮನಸ್ಸಾಗಲಿಲ್ಲ. ಆಗ ಬರೆದಿದ್ದಂತೆಯೇ ಇಲ್ಲಿ ಬರೆದಿದ್ದೇನೆ.