Wednesday, July 17, 2013

ಮಾತು - ಮೌನ

ಹೇಳಬೇಕೆನಿಸಿದೆ ನನಗೆ ನೂರಾರು ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು
ಅವಿತು ಹೆದರಿ ಬಾರದಿರಲು ನಾನು ಮೂಕಿಯೇ?
ಮಾತು ಒಳಗೆ ನಶಿಸಿ ಹೋಗೆ ತಪ್ಪು ನನ್ನದೇ??

ಪೋಣಿಸಿಟ್ಟ ಮುತ್ತ ಹಾರ ಚೆಂದ ಕೊರಳಲಿ
ಆದರದನು ತೂರಿಬಿಟ್ರೆ ನೋವು ಮನದಲಿ
ಮಾತನಾಡೋ ಬಯಕೆ ನನಗೆ ತುಂಬಿ ಬರುತಿದೆ
ಮೌನ ಮರೆತುಬಿಡುವೆನೆಂಬ ಭಯವು ಕಾಡಿದೆ

ಚಂದ್ರನಿರದ ಬಾನಿನಲ್ಲಿ ಚುಕ್ಕಿರಾಜ್ಯವು
ಆದರೇನು ಕಾಡದೇನು ಚಂದ್ರನಂದವು
ಭಾವದರ್ಥ ತಿಳಿಸೆ ಭಾಷೆ ಇರಲಿ ಸಾವಿರ
ಅವನು ಮೀರಿ ನಿಂತ ಮೌನದಾಳ ಸಾಗರ

ಅರಳಿ ನಿಂತ ಸುಮಗಳೆಲ್ಲಾ ಮುಡಿಯೆ ಯೋಗ್ಯವೇ?
ತುಟಿಗೆ ಬಂದ ಮಾತನೆಲ್ಲಾ ತಿಳಿಸೆ ಸಾಧ್ಯವೇ?
ಮೌನ ಚಿನ್ನ ಮಾತು ಬೆಳ್ಳಿ ನಮ್ಮ ಜಗದಲಿ
ಇರಲಿ ಬಿಡು ಮೌನ ಪರದೆ ಏಕೆ ಸರಿಸಲಿ

Friday, June 14, 2013

ಚಿತ್ರಕಾವ್ಯ

ಮನದ ಭಿತ್ತಿಯ ಮೇಲೆ
ಭಾವತರಂಗಗಳ ಚಿತ್ತಾರ|
ಅರ್ಥೈಸುವುದು ಹೇಗಿದನು
ಇದೋ ಆಧುನಿಕ ಕಾವ್ಯ||

ವರ್ಣರಂಜಿತವೋ ವರ್ಣಾರ್ಭಟವೋ
ಬಣ್ಣಗಳದೇ ಸಾಮ್ರಾಜ್ಯವಿದು|
ಅರ್ಥಗರ್ಭಿತವೋ ಅರ್ಥರಹಿತವೋ
ಕುತೂಹಲದ ಖನಿಜವಿದು||

ಒಂದೊಂದು ಭಾವಕ್ಕೆ
ಒಂದೊಂದು ಬಣ್ಣವೇ?
ಬಣ್ಣಗಳ ಬಂಧನಕ್ಕೂ ಸಿಲುಕದ
ಅತ್ಯುನ್ನತ ಭಾವನಿರೂಪಣೆಯೇ?

ಗುರಿಯಿಲ್ಲದೆ ಅಲೆದಾಡುವ
ಹುಚ್ಚು ಮನಸಿನ ಗೊಂದಲವೇ?
ಅಥವಾ ಸಂಕೀರ್ಣ ಮನಸಿನ
ಸುವ್ಯವಸ್ಥಿತ ಕಲಾರೂಪವೇ?

ತಿಳಿಸಲು ಚಿತ್ತಾರದ ಒಳಾರ್ಥ
ಚಿತ್ರಕಾರನೊಬ್ಬನೇ‌ ಸಮರ್ಥ|
ಆದರೆ ಕಲಾವಿದನ ಪರಿಚಯವೇ ನನಗಿಲ್ಲ
ಚಿತ್ತಾರದ ಮೂಲೆಯಲ್ಲಿ ಹಸ್ತಾಕ್ಷರವಿಲ್ಲ!