Monday, August 1, 2016

ಸ್ನೇಹದ ಕಡಲಲ್ಲಿ

ಇವತ್ತು ಸ್ನೇಹಿತರ ದಿನಾಚರಣೆ ಅಲ್ವಾ ಅದಕ್ಕೆ ಮೊದಲು ನನ್ನೆಲ್ಲ ಸ್ನೇಹಿತರಿಗೂ ಶುಭಾಶಯಗಳು……ಅವರೆಲ್ಲರಿಗೂ ಉಡುಗೊರೆಯಾಗಿ ಇವತ್ತಿನ ಪೋಸ್ಟ್ ಅವರಿಗೆ ಸಮರ್ಪಿತ…….. ನಮ್ಮ ಜೀವನದಲ್ಲಿ ಯಾವಾಗಿನಿಂದ ಸ್ನೇಹಿತರಿದ್ದಾರೆ ಅಂತ ಯೋಚನೆ ಮಾಡಿದ್ರೆ ನಾವು ಮನುಷ್ಯರನ್ನ ಗುರುತಿಸೋಕೆ ಗೊತ್ತಾದಾಗಿನಿಂದ ಅಂತಾನೆ ಹೇಳಬಹುದು. ಮಾತೆ ಬರದಿದ್ದರು ಸನ್ನೆಗಳ ಮೂಲಕಾನೆ ನಮಗೆ ಬೇಕಾದವರ ಜೊತೆ ಮಾತಾಡ್ತೀವಿ…….ಒಂದೇ ವಯಸ್ಸಿನವರು ಸಿಕ್ಕಿದರಂತು ಅವರ ಭಾಷೆ ಯಾರಿಗೂ ಅರ್ಥ ಆಗದಿದ್ರೂ ಅವರಿಬ್ಬರಿಗೂ ಅರ್ಥ ಆಗುತ್ತೆ…..ಯಾಕಂದ್ರೆ ಅವರಿಬ್ಬರ ನಡುವಿರುವ ಸ್ನೇಹ ಅಂಥದ್ದಾಗಿರುತ್ತೆ….

ನಾವೆಲ್ಲ ಸ್ಕೂಲಿಗೆ ಹೋಗೋಕೆ ಶುರು ಮಾಡಿದ ಮೇಲೆ ಮನೇಲೆ ಆಗ್ಲಿ ಸಂಬಂಧಿಕರೆ ಆಗ್ಲಿ ನೀನು ಯಾವ ಸ್ಕೂಲು ನಿನ್ನ ಟೀಚರ್ ಯಾರು ಅಂತ ಕೇಳಿದ ಮೇಲೆ ನಿನ್ನ ಫ್ರೆಂಡ್ ಯಾರು ಅಂತಾನೆ ಕೇಳೋದು….ಅದಕ್ಕೆ ಈ ಸ್ಕೂಲೇನಿದೆಯಲ್ಲ ಅದು ಒಂಥರಾ ನಮಗೆ ಜೀವನ ಪೂರ ನೆನೆಪಲ್ಲುಳಿಯೋ ಸ್ನೇಹಿತರನ್ನು ಜೊತೆಯಾಗಿಸುವ ತಾಣ ಅಂತಾನೆ ಕರೆಯಬಹುದು……ನನ್ನ ವಯಸ್ಸಿನ ಹುಡುಗ ಹುಡುಗಿಯರಿಗಂತೂ ಸ್ಕೂಲ್ ಫ್ರೆಂಡ್ಸೇ ಜಾಸ್ತಿ ಯಾಕಂದ್ರೆ ನಾವಿನ್ನು ಹೊರ ಜಗತ್ತಿಗೆ ಕಾಲಿಟ್ಟಿಲ್ಲ ನೋಡಿ…..ಈ ಸ್ಕೂಲಲ್ಲಿ ಏನೇನೋ ತರ್ಲೆ ಮಾಡಿ ಸಿಕ್ಕಿ ಹಾಕಿಕೊಂಡಾಗ ಮನೇಲಿ ಹೇಳಬೇಡ ಅಂತ ಸ್ನೇಹಿತರಿಗೆ ಮಸ್ಕಾ ಹೊಡೆಯೋದು….ನಾವು ಸ್ನೇಹಿತರೇ ಸೇರಿ ತಿಂಡಿಗಳಿಗಿಟ್ಟ ಇಂಗ್ಲಿಷ್ ಹೆಸರು….ನಮ್ಮ ತಪ್ಪನ್ನು ಹೇಳದೆ ಇರೋಕೆ ನಮ್ಮ ನಮ್ಮ ನಡುವೇನೆ ಮಾಡಿಕೊಳ್ಳೋ ಆ ಒಳ ಒಪ್ಪಂದ…. ನೆನಪಿಸಿಕೊಂಡರೆ ಈಗಲೂ ನಗು ಬರುತ್ತೆ……

ಸ್ಕೂಲ್ ಅಂದ ತಕ್ಷಣ ಮೊದಲು ನೆನಪಿಗೆ ಬರೋದೇ ಸ್ನೇಹಿತರು ಅಷ್ಟರ ಮಟ್ಟಿಗೆ ನಮ್ಮನ್ನವರು ಆವರಿಸಿಕೊಂಡುಬಿಟ್ಟಿರ್ತಾರೆ ಅಲ್ವ…..ಆ ಹೊಸ ಜೀವನಕ್ಕೆ ಜೊತೆಗಾರರಾಗಿ ಜೊತೆಜೊತೆಯಲ್ಲೇ ಸಾಗಿ ಗೆದ್ದಾಗ ಸಂತೋಷ ಪಟ್ಟು, ಸೋತಾಗ ಸಂತೈಸಿ, ತಪ್ಪಿದಾಗ ಎಚ್ಚರಿಸಿ, ನಮ್ಮ ಜೊತೆ ಸ್ವಲ್ಪ ಹೊತ್ತು ಕಳೆಯಲೆಂದು ಹಾತೊರೆದು ಆ ಒಂದು ಘಳಿಗೆಯಲ್ಲೇ ಎಲ್ಲ ನೋವನ್ನು ಮರೆಸುವಂಥ ಸ್ನೇಹಿತರು ಒಬ್ಬರಾದರು ನಮ್ಮ ಜೀವನದಲ್ಲಿದ್ದೆ ಇರ್ತಾರೆ ಅಲ್ವ…..ಆ ವಿಷಯದಲ್ಲಿ ನಾನಂತೂ ಅದೃಷ್ಟವಂತೆ ಯಾಕಂದ್ರೆ ನನಗೆ ಅಂಥ ಎಷ್ಟೋ ಜನ ಸ್ನೇಹಿತರಿದ್ದಾರೆ…….

ಸ್ಕೂಳಲ್ಲಷ್ಟೇ ಅಲ್ಲ ಕಾಲೇಜಲ್ಲಾಗಿರಬಹುದು ಅಥವಾ ಬೇರೆ ಎಲ್ಲೇ ಆಗಿರಬಹುದು….. ನಾವು ಎಲ್ಲಿಗೆ ಹೋದರು….ಅಲ್ಲಿ ಕೆಲವು ಸಮಯವಷ್ಟೇ ಕಳೆದರೂ ಅಲ್ಲಿಯೂ ನಮ್ಮ ಮನಸು ಸ್ನೇಹಿತರನ್ನು ಹುಡುಕಾಡುತ್ತೆ…..ಅವರ ಜೊತೆ ಒಂದು ಅವರ್ಣನೀಯ ಬಂಧವನ್ನು ನಿರ್ಮಿಸಿ ಅವರಿಂದ ನನ್ನ ಜೀವನಕ್ಕೆ ಹೊಸದೊಂದು ಚಿಗುರು ಮೂಡಿದೆ ಅನ್ನೋ ಭಾವನೆ ಹುಟ್ಟು ಹಾಕುತ್ತೆ…..ಸ್ನೇಹಕ್ಕೆ ಇರೋ ಶಕ್ತಿನೇ ಅಂಥದ್ದು…… ಒಂದು ಸ್ನೇಹ ಹುಟ್ಟೋಕೆ ಎಷ್ಟೋ ವರ್ಷಗಳೇ ಬೇಕಿಲ್ಲ…..ಮನಸಿಗೆ ಹತ್ತಿರವಾಗುವ ಕೆಲವು ನಿಮಿಷಗಳೇ ಸಾಕು…….ಅಲ್ವ….

ಈ ಸ್ನೇಹಕ್ಕೆ ವಯಸ್ಸಿನ ಅಂತರ ಇಲ್ಲದಿದ್ದರೂ ನಮ್ಮ ಬಹುಪಾಲು ಸ್ನೇಹಿತರು ಸಮವಯಸ್ಕರಾಗಿರುತ್ತಾರೆ…..ಅವರ ಜೊತೆ ನಾವು ಮನ ಬಿಚ್ಚಿ ಮಾತಾಡುವಷ್ಟು ನಮ್ಮ ತಂದೆ ತಾಯಿಯ ಜೊತೆ ಕೂಡ ಮಾತಾಡಿರುವುದಿಲ್ಲ……ಅಂಥ ಗೆಳೆಯರ ಜೊತೆ ಮಾತಾಡಿದಾಗ ಮನಸಿಗೆ ನಿರಾಳ ಅನ್ಸುತ್ತೆ…..ಅಲ್ವ……

ನಮಗೆ ತುಂಬಾನೆ ಅಗತ್ಯವಿರೋ ಸಮಯದಲ್ಲಿ ಜೊತೆಗಿದ್ದು ನಮ್ಮನ್ನು ಯಾವತ್ತು ಬಿಟ್ಟು ಕೊಡದೆ, ನಮ್ಮಿಂದ ಸ್ನೇಹವನ್ನಲ್ಲದೆ ಬೇರೇನನ್ನು ಬಯಸದ ಸ್ನೇಹಿತರಿಗೆ ಈ ದಿನವಷ್ಟೇ ಅಲ್ಲ ಪ್ರತಿದಿನ ಒಂದಲ್ಲ ಸಾವಿರ ಸಾವಿರ ಧನ್ಯವಾದಗಳನ್ನು ಹೇಳಬೇಕು ಅಲ್ವ……..

No comments:

Post a Comment