Saturday, May 8, 2010

ಅಮ್ಮ

ಇವತ್ತು ಬೆಳಿಗ್ಗೆ ಎದ್ದು ದಿನಪತ್ರಿಕೆ ಓದೋಣ ಅಂತ ಹೋದಾಗ ಅಪ್ಪ ಮುಖಪುಟ ಹಿಡಿದು ಕೂತಿದ್ದರು.ಪಕ್ಕದಲ್ಲೇ ಇದ್ದ ಲವಲvk ಹಿಡಿದವಳಿಗೆ ಮೊದಲ ಕಂಡದ್ದು ಅಮ್ಮಂದಿರ ದಿನದ ವಿಶೇಷ ಅಂಕಣ. ಆಗ ನಾನು ಯಾಕೆ ನನ್ನಮ್ಮನ ಬಗ್ಗೆ ಬರೆಯಬಾರದು ಅನ್ನಿಸ್ತು. ಅದರ ಫಲವಾಗಿ ಈ ಪೋಸ್ಟ್.

ನನಗಿಂತ ಮೊದಲು ನಮ್ಮಪ್ಪ ಅಮ್ಮನಿಗೆ ಒಂದು ಹೆಣ್ಣು ಮಗು ಇದ್ದಿದ್ದರಿಂದ ನಾನು ಹುಟ್ಟಿದಾಗ ಗಂಡು ಮಗು ಆಗಬೇಕು ಅಂತಾನೆ ಎಲ್ಲರ ಬಯಕೆಯಾಗಿತ್ತು.ಅದು ಸುಳ್ಳಾದಾಗ ಈ ವಿಷಯವಾಗಿ ಮಾತುಗಳನ್ನು ಕೇಳಿದ್ದು ನನ್ನಮ್ಮ, ಆ ಮಾತುಗಳು ನನ್ನ ತಮ್ಮ ಹುಟ್ಟುವವರೆಗೆ ಕೇಳುತ್ತಲೇ ಬಂದರು.ಆದರೂ ಅಮ್ಮ ಯಾವತ್ತೂ ಆ ಅಸಹನೆಯನ್ನು ನಮ್ಮ ಮುಂದೆ ತೋರಿಸಿಲ್ಲ.

ಬಹುಶಃ ಬೇರಾವುದೇ ಮಗು ನೀಡಿರದಷ್ಟು ಕಷ್ಟವನ್ನು ಚಿಕ್ಕವಳಿದ್ದಾಗ ನಾನು ಅಮ್ಮಂಗೆ ಕೊಟ್ಟಿದ್ದೀನಿ. ಅಮ್ಮನ್ನ ಬಿಟ್ಟು ಬೇರೆ ಯಾರ ಬಳಿಯೂ ಹೋಗುತ್ತಿರಲಿಲ್ಲ. ಅಪ್ಪನ ಬಳಿ ಕೂಡ ಹೋಗ್ತಾ ಇರ್ಲಿಲ್ಲ. ಅಮ್ಮ ಅಡುಗೆ ಮಾಡುತ್ತಿರಲಿ,ಬಟ್ಟೆ ಒಗೆಯುತ್ತಿರಲಿ ಅಥವಾ ಮನೆ ಒರೆಸುತ್ತಿರಲಿ ನನ್ನನ್ನು ಯಾವಾಗಲೂ ಎತ್ತಿಕೊಂಡೇ ಇರ್ಬೇಕಿತ್ತು. ಒಂದು ನಿಮಿಷ ಕೆಳಗಿಳಿಸಿದರೂ ನನ್ನ ಸೈರನ್ ಶುರು. ೧೦ ತಿಂಗಳಿಗೆಲ್ಲಾ ಚೆನ್ನಾಗಿ ಮಾತನಾಡಲು ನೆಡೆದಾಡಲು ಕಲಿತ ಮೇಲಂತೂ ನನ್ನನ್ನು ಸುಧಾರಿಸುವುದೇ ಅಮ್ಮನಿಗೆ ದೊಡ್ಡ ತಲೆನೋವಾಗಿತ್ತು. ನಮ್ಮಮ್ಮನ ಮೂರೂ ಮಕ್ಕಳಲ್ಲಿ ಆರೋಗ್ಯದ ವಿಷಯದಲ್ಲಿ ತುಂಬಾ ಸೆನ್ಸಿಟಿವ್ ಆಗಿದ್ದು ನಾನು. ಹಾಗಾಗಿ ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು.

ನನಗಾಗ ಸುಮಾರು ೩ ವರ್ಷವಿದ್ದಿರಬೇಕು. ವಿಪರೀತ ಜ್ವರದಿಂದ ಪ್ರಜ್ಞೆ ತಪ್ಪುವಂತಾಗಿತ್ತು. ಆ ಜ್ವರ ಗುಣವಾದ ಮೇಲೆ ನಾನು ನನ್ನಪ್ಪನನ್ನು ತುಂಬಾ ಹಚ್ಚಿಕೊಂಡಿದ್ದು. ಅಲ್ಲಿಯವರೆಗೆ ಎಲ್ಲದಕ್ಕೂ ಅಮ್ಮ ಅಮ್ಮ ಅನ್ನುತ್ತಿದ್ದವಳು ಅಪ್ಪನ ಮುದ್ದಿನ ಮಗಳಾಗಿದ್ದು ಅಮ್ಮನಿಗೆ ಸ್ವಲ್ಪವಾದರೂ ಬೇಜಾರಾಗಿರುತ್ತೆ ಅಲ್ಲಾ...

ಆಮೇಲೆ ಅಮ್ಮನಿಗಿಂತ ಅಪ್ಪನೇ ಹತ್ತಿರವಾಗುತ್ತಾ ಹೋದರು. ಅಪ್ಪ ಮನೆಗೆ ಬಂದ ತಕ್ಷಣ ಅವರ ತೊಡೆಯೇರಿ ಕುಳಿತುಬಿಡುತಿದ್ದೆ. ಯಾರಾದರೂ ನೀನು ಅಪ್ಪನ ಮಗಳಾ ಅಮ್ಮನ ಮಗಳಾ ಅಂತ ಕೇಳಿದ್ರೆ ನಾನು ನಮ್ಮಪ್ಪನ ಮಗಳು ಅಂತಾನೇ ಹೇಳ್ತಿದ್ದೆ. ನನಗೆ ನೆನಪಿರೋ ಹಾಗೆ ನಾನು ನಮ್ಮಮ್ಮನ ಮಗಳು ಅಂತ ಹೇಳಿಯೇ ಇಲ್ಲ. ಅಮ್ಮಂಗೆ ಆಗ ನಾನೆಷ್ಟು ಕಷ್ಟ ಪಟ್ರೂ ನನ್ನ ಮಗಳು ಅದನ್ನು ತಿಳಿದುಕೊಳ್ತಾ ಇಲ್ಲವಲ್ಲಾ ಅನ್ನೋ ನೊವಿತ್ತಾ?? ಗೊತ್ತಿಲ್ಲ....

ಆದ್ರೂ ಅಮ್ಮಂಗೆ ನನ್ನ ಮೇಲಿನ ಕಾಳಜಿ ಕಡಿಮೆಯಾಗಲಿಲ್ಲ. ನನ್ನಂತೆ ನನ್ನ ಮಕ್ಕಳೂ ಆಗಬಾರದು. ಪ್ರತಿಯೊಂದಕ್ಕೂ ಇನ್ನೊಬ್ಬರ ಮೇಲೆ ಡಿಪೆಂಡ್ ಆಗಬಾರದು. ಹೆಣ್ಣು ಮಕ್ಕಳೂ ಸ್ವಾವಲಂಬಿಗಳಾಗಬೇಕು ಎಂಬುದು ನಮ್ಮಮ್ಮನ ಆಸೆಯಾಗಿತ್ತು. ಹಾಗಾಗಿಯೇ ಅಕ್ಕ ಡಿಗ್ರಿ ಮುಗಿಸುವ ಮುನ್ನ ಬಂದ ಎಲ್ಲಾ ಪ್ರಪೋಸಲ್ ಗಳನ್ನೂ ಅಮ್ಮ ತಾವಾಗಿಯೇ ತಿರಸ್ಕರಿಸಿದ್ದರು. ಕೆಲವನ್ನಂತೂ ಮನೆಯವರೆಲ್ಲರ(ಅಪ್ಪನದೂ ಸಹ) ವಿರೋಧ ಕಟ್ಟಿಕೊಂಡು ತಾವೊಬ್ಬರೇ ಎದುರಿಸಿದ್ದರು.

ಕೆಲವೊಮ್ಮೆ ಅಮ್ಮ ನಾನಾಡಿದ ಮಾತನ್ನ ವಿರೋಧಿಸಿದಾಗ ಅವರು ನನ್ನ ಶತ್ರುವೇನೋ ಅನ್ನೋ ಹಾಗೆ ನೋಡಿದ್ದೀನಿ. ಯಾವಾಗಲೋ ಅಮ್ಮನ ಮಡಿಲಲ್ಲಿ  ಮಲಗಲು ಹೋದಾಗ ಅಮ್ಮ "ಅಯ್ಯೋ ಕಾಲು ನೋಯ್ತಾ ಇದೆ ನೀನು ಬೇರೆ ಬಂದ್ಯಾ ಮಲಗೋಕೆ" ಅಂತ ಅಂದಿದ್ದನ್ನೇ ಹಿಡಿದುಕೊಂಡು ಅಮ್ಮನಿಗೆ ನನ್ನ ಬಗ್ಗೆ ಪ್ರೀತಿನೇ ಇಲ್ಲ ಅಂತಾನೂ ಯೋಚ್ನೆ ಮಾಡಿದ್ದೀನಿ. ಅಮ್ಮನಿಗಿಂತ ನಾನು ಹೆಚ್ಚು ವಿಷಯ ತಿಳಿದುಕೊಂಡಿದ್ದೀನಿ ಅಂತ ಅಮ್ಮನ ಮುಂದೇನೆ ಬೀಗಿದ್ದೀನಿ. ಅಮ್ಮ ಏನಾದ್ರೂ ತಪ್ಪು ಮಾತಾಡಿದಾಗ ಅಪ್ಪನ ಜೊತೆ ಸೇರಿ ಅವರನ್ನು ಗೇಲಿ ಮಾಡಿದ್ದೀನಿ.

ನನಗೆ ಸಿ.ಇ.ಟಿ.ಯಲ್ಲಿ
೯ನೆಯ rank ಬಂದಾಗ "ದಿ ಹಿಂದೂ" ದಿನಪತ್ರಿಕೆಯವರು ದೂರವಾಣಿ ಸಂದರ್ಶನ ನಡೆಸಿದ್ದರು. ಆಗಲೂ ನಾನು ಅಪ್ಪನ ಮಗಳಾಗಿಯೇ ಉತ್ತರಿಸಿದ್ದೆ. "ನನಗೆ ವಿಶ್ವಾಸವಿಲ್ಲದಿದ್ದರೂ ನನ್ನಪ್ಪ ನನಗೆ ನೀನು ಒಳ್ಳೆಯ rank ಪಡೀತೀಯ ಅಂತಿದ್ರು. ಅವರು ಆ ರೀತಿ ನನ್ನಲ್ಲಿ ವಿಶ್ವಾಸ ತುಂಬಿದ್ದುದರಿಂದಲೇ ನಾನು ಈ rank ಪಡೆಯಲು ಸಾಧ್ಯವಾಯ್ತು" ಅಂತ ಹೇಳಿದ್ದೆ. ಅದನ್ನು ಕೇಳಿ ಅಮ್ಮನಿಗೇನನಿಸಿತೋ ಏನೋ "ನೋಡು ನನ್ನ ಮಗಳು ಅವರಮ್ಮ ಅವಳಿಗೇನೂ ಮಾಡೇ ಇಲ್ಲ ಅನ್ನೋ ಥರಾ ಮಾತಾಡ್ತಾಳೆ. ಅವಳಿಗೆ ಅವಳ ಅಪ್ಪಾನೇ ಎಲ್ಲ " ಅಂತಂದ್ರು. ಮೊದಲ ಸಲ ನನಗೆ ನಾನು ನಮ್ಮಮ್ಮನ್ನ neglect ಮಾಡ್ತಾ ಇದ್ದೀನಾ ಅನ್ನೊ ಪಾಪ ಪ್ರಜ್ಞೆ ಕಾಡಿದ್ದು ಆಗಲೇ.

ನಾನು ಇಂಜಿನಿಯರಿಂಗ್ ಸೇರಿದ ಮೇಲೆ ಅಮ್ಮನಿಗೆ gall bladder ಅಲ್ಲಿ ತೊಂದರೆ ಉಂಟಾಗಿ ಸುಮಾರು ೨ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಗಲೂ ನಾನು ಅಮ್ಮನ್ನ ನೋಡೋಕೆ ಅಂತ ಆಸ್ಪತ್ರೆಗೆ ಹೋಗಿದ್ದು ಮೂರೋ ನಾಲ್ಕು ಬಾರಿ ಅಷ್ಟೆ. ನನಗ್ಯಾಕೋ ಆಸ್ಪತ್ರೆಯಲ್ಲಿರುವವರನ್ನು ಹೋಗಿ ಮಾತಾಡಿಸಬೇಕು ಅಂತ ಅನ್ನಿಸೋದೇ ಇಲ್ಲ.ಆಗಂತೂ ಅಮ್ಮ ನಾನು ಸತ್ರೂ ನನ್ನ ಮಗಳು ಬೇಜಾರು ಮಾಡಿಕೊಳ್ಳೊಲ್ಲವೇನೋ ಅಂದ್ರು. ಈಗಲೂ ಕೆಲವೊಮ್ಮೆ ನಾನು ಆಗ ಮಾಡಿದ್ದು ಸರೀನಾ ತಪ್ಪಾ ಗೊತ್ತಾಗದೇ ಒದ್ದಾಡ್ತೀನಿ.

ಆದರೂ ಇವತ್ತಿಗೂ ನಾನು ಅಪ್ಪನ ಮಗಳೇ. ಅಪ್ಪನ ತೊಡೆಯ ಮೇಲೆ ಮಲಗಿದಂತೆ ಅಮ್ಮನ ಮಡಿಲಲ್ಲಿ ಮಲಗೊಲ್ಲ. ಅಪ್ಪನ ಕೈತುತ್ತು ಸವಿದಂತೆ "ಅಮ್ಮ ತಿನ್ನಿಸು" ಅಂತಾನೂ ಕೇಳೊಲ್ಲ. ಹೀಗ್ಯಾಕೆ??? ನನಗೋಸ್ಕರ ಅಮ್ಮ ಕಷ್ಟ ಪಡ್ತಾರೆ ಅಂತ ಗೊತ್ತಿದ್ರೂ ಅಮ್ಮ ಎಲ್ಲರಿಗಿಂತ ನಂಗೆ ನೀವು ತುಂಬಾ ಇಷ್ಟ ಅಂತ ಯಾಕೆ ಹೇಳೊಲ್ಲ? ನಂಗೊತ್ತು ನೀನು ಯಾವತ್ತಿದ್ರೂ ನಿಮ್ಮಪ್ಪನ ಮಗಳೇ ಅಂತ ಅಮ್ಮ ಅಂದಾಗ, ಇಲ್ಲಮ್ಮ ನಾನು ನಿಮ್ಮ ಮಗಳೂ ಕೂಡ ಅಂತ ಯಾಕೆ ಹೇಳೊಲ್ಲ? ಅಪ್ಪನ ಪ್ರೀತಿ ಮುಂದೆ ಅಮ್ಮನ ಪ್ರೀತಿ ಯಾಕೆ ಮಂಕಾಗಿ ಕಾಣ್ತಾ ಇದೆ? ಉತ್ತರ ಗೊತ್ತಿಲ್ಲ...

7 comments:

 1. ಅಮ್ಮನ ಬಗೆಗಿನ ಯಾವ ನೆನಪೂ ಬೆಚ್ಚನೆ ಮತ್ತು ಸುಮಧುರ. ಲೇಖನದಲ್ಲಿ ಮೂಡಿಬಂದ ಅಮ್ಮನ ನೆನಪುಗಳು ಖುಷಿ ಕೊಟ್ಟವು.
  ಇನ್ನು ನಿಮಗೆ ಅಮ್ಮನ ಬಗ್ಗೆ ನೆಗ್ಲೆಕ್ಟ್ ಮಾಡ್ತಿನೋ ಅಂತ ಅನ್ನಿಸೋದರ ಬಗ್ಗೆ-
  ಈ ಥರ ಅನ್ನಿಸೋದು ನೀವು ನಿಮ್ಮ ಮನೇಲಿ ಇರೋ ವರೆಗಷ್ಟೇ. ಒಮ್ಮೆ ನೀವು ಕೆಲಸದ ಮೇಲಾಗಲಿ, ಮದುವೆಯಾದ ಮೇಲಾಗಲಿ ಮನೆಯಿಂದ ಹೊರಕ್ಕೆ ಬರುತ್ತೀರಲ್ಲ.. ಆವಾಗ ನೋಡುತ್ತಿರಿ, ನೀವು ಅತಿ ಹೆಚ್ಚು ಮಿಸ್ ಮಾಡೋದು ಅಮ್ಮನ ಸಖ್ಯವನ್ನು. ಊರಿಗೆ ಬಂದಾಗೆಲ್ಲ ಅಮ್ಮನ ಬಳಿ ಹೇಳಿಕೊಳ್ಳೋವಷ್ಟು ಇನ್ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಇದು ನಿಮ್ಮಂತೆಯೇ ಅಪ್ಪನ ಮಗಳಂತಿದ್ದ ನನ್ನ ಕುಟುಂಬದ ಅಕ್ಕಂದಿರ, ಕಸಿನ್ ಗಳೆಲ್ಲರ ಕಥೆ. ನೀವೂ ಕೂಡ ಬದುಕಿನ ಆ ಮಜಲಿಗೆ ಹೋಗೇ ಹೋಗುತ್ತೀರಿ. ಅಲ್ಲಿವರೆಗೆ ಅಮ್ಮನ ಒಡನಾಟದ ರುಚಿ ಸವಿಯುತ್ತಿರಿ..

  ReplyDelete
 2. ವಿಷಯದ ಬಗ್ಗೆ ಅಭಿಪ್ರಾಯ..ಏನೇ ಇರಲಿ,
  ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ..
  ಮುಂದುವರಿಸಿ...

  ReplyDelete
 3. ಹೆಣ್ಣು ಮಕ್ಕಳಿಗೆ ಅಪ್ಪನ ಮೇಲೆ..
  ಗಂಡು ಮಕ್ಕಳಿಗೆ ಅಮ್ಮನ ಮೇಲೆ..

  ಪ್ರೀತಿ.. ಜಾಸ್ತಿ...

  ಇದು ಸಹಜ...

  ನೀವು ಮದುವೆಯಾಗಿ..
  ಗಂಡನ ಮನೆಗೆ ಹೋಗುತ್ತೀರಲ್ಲ...

  ಆಗ

  ಅಮ್ಮನ ಪ್ರೀತಿ..
  ಪ್ರೇಮ ವಾತ್ಸ್ಯಲ್ಯ..
  ಅಮ್ಮನನ
  ನೆನಪನ್ನೂ..
  ತೆಗೆದು ಕೊಂಡು ಹೋಗುತ್ತೀರಿ...

  ಕಣ್ಣಲ್ಲಿ..
  ಹನಿ..
  ಹನಿಯಾಗಿ
  ನೆನಪಿಸಿಕೊಳ್ಳುತ್ತೀರಿ..

  ಸೊಗಸಾದ ಬರವಣಿಗೆ..
  ಅಭಿನಂದನೆಗಳು...

  ReplyDelete
 4. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು....
  ನಾನು ನನ್ನಮ್ಮನನ್ನು ಪ್ರೀತಿಸ್ತೀನಿ.... ಅವರೂ ನನ್ನನ್ನು ತುಂಬಾ ಪ್ರೀತಿಸ್ತಾರೆ ಅನ್ನೋದು ನಂಗೆ ಗೊತ್ತು... ಆದ್ರೆ ನಾನು ಅಪ್ಪನ್ನ ಸ್ವಲ್ಪ ಜಾಸ್ತಿ ಪ್ರೀತಿಸ್ತೀನಿ ಅಷ್ಟೇ...
  ಇದರಿಂದ ಅಮ್ಮ ಕೂಡ ನನ್ ಮಕ್ಕಳು ನನ್ನನ್ನು ಬಿಟ್ಟು ದೂರ ಇದ್ರೂ ಅವರಪ್ಪನ್ನ ಬಿಟ್ಟು ಇರೊಲ್ಲ ಅಂತಾರೆ... ನಾನು ನಮ್ಮಮ್ಮನ್ನ ತುಂಬಾ ಇಷ್ಟ ಪಡ್ತೀನಿ ಆದ್ರೆ ಅಪ್ಪನ್ನ ಇನ್ನೂ ಜಾಸ್ತಿ... ನಾನು ಮೇಲೆ ಹೇಳಿರುವ ಸನ್ನಿವೇಶಗಳಲ್ಲಿ ನನ್ನಿಂದ ಅಮ್ಮನಿಗೆ ಬೇಜಾರಾದವು ಮಾತ್ರ ಇವೆ. ಹಾಗೆಯೇ ನಮ್ಮ ನಡುವೆ ಖುಷಿಯ ಸಂದರ್ಭಗಳೂ ಇವೆ. ನನ್ನ ಪ್ರಕಾರ ನಾವು ಯಾರನ್ನೂ ಎಲ್ಲಾ ಸಮಯದಲ್ಲೂ ಇಷ್ಟಪಡ್ತೀವಿ ಅಂತ ಹೇಳೋಕಾಗೊಲ್ಲ... ನಾನೆಷ್ಟೇ ಅಪ್ಪನ ಮಗಳು ಅಂದ್ರೂ ಕೆಲವೊಮ್ಮೆ ನನ್ನ ತಂದೆಯ ಬಗ್ಗೆ ಅಸಮಾಧಾನದಿಂದ ವರ್ತಿಸಿದ ಉದಾಹರಣೆಗಳಿವೆ. ಮೊನ್ನೆ ನಾನು ಈ ಲೇಖನ ಬರೆದಾಗ ಕೇವಲ ನನ್ನ ಮತ್ತು ನಮ್ಮಮ್ಮನ ನಡುವೆ ಉಂಟಾದ ಇಂಥ ಭಿನ್ನಾಭಿಪ್ರಾಯದ ಸನ್ನಿವೇಶಗಳೇ ನೆನಪಾದವು ಎನಿಸುತ್ತದೆ....

  ReplyDelete
 5. ನಿಮ್ಮ ಬರವಣಿಗೆಯಲ್ಲಿರುವ ಸರಳತೆ ನನಗೆ ಬಹಳ ಅಚ್ಚುಮೆಚ್ಚು

  ReplyDelete
 6. nanagu aste indu nimma baravanige tumba ista..bareyutta iri :)

  ReplyDelete