Saturday, May 15, 2010

ಮನಸಿದು ಗೊಂದಲಗಳ ಗೂಡು

ಇಲ್ಲಿ ಕೊನೆ ಮೊದಲಿಲ್ಲ
ಅರ್ಥದ ಹುಡುಕಾಟ ವ್ಯರ್ಥ
ಅಯೋಮಯ ಪದಪುಂಜ

ಸ್ಮೃತಿ ಪಟಲದ ಮೇಲೆ
ಬೇಡದ ಗೊಡವೆಗಳ ತಾಂಡವ ನೃತ್ಯ
ಅರ್ಧಸತ್ಯದ ಅಟ್ಟಹಾಸ

ಸುಡುವ ನಿರಾಸೆಯ ಬೆಂಕಿ
ಕನಸೆಂಬ ಕೂಸುಗಳ ಕಗ್ಗೊಲೆ
ಸಿಡಿದೇಳಲಾಗದ ಅಸಹಾಯಕತೆ

ಅಂಜಿಕೆಯ ನೆಳಲಲ್ಲೇ ಕೊಳೆತ
ದಾಕ್ಷಿಣ್ಯದರಮನೆಯಲ್ಲಿ ದಾಸ್ಯ
ಇನ್ನೆಲ್ಲೋ ಸ್ವಾತಂತ್ರ್ಯದ ಮೊಳಕೆ

ಭ್ರಮೆಯ ಜಾಲದೊಳಗೆ ಬಂಧಿ
ಕಣ್ಣು ಕುಕ್ಕುವ ಕಾಮನೆಗಳು
ಚಾಂಚಲ್ಯವಷ್ಟೇ ಸ್ಥಿರ

ಮನದ ಕಿನಾರೆಯ ಮೇಲೆ
ದ್ವಂದ್ವಗಳ ಚಂಡಮಾರುತ ದಾಳಿ
ಗೊಂದಲಗಳ ಓಕುಳಿ

ನಾ ನೋಡಿದಂತೆ ಲೋಕ
ಅಂತರಾಳದಲ್ಲಿ ಸೌಖ್ಯ
ಕಂಡದ್ದಷ್ಟೇ ನನಗೆ ತಿಳಿದ ಸತ್ಯ

ಕಾರ್ಮೋಡ ಕವಿದ ಬಾನು
ಅಂಚಲ್ಲೊಂದು ಬೆಳ್ಳಿರೇಖೆ
ಅವಕಾಶಗಳ ದಿಗಂತದ ವಿಸ್ತರಣ

9 comments:

  1. ಪದಗಳ ಬಳಕೆ ತುಂಬ ಚೆನ್ನಾಗಿದೆ :) ಕವನ ಇಷ್ಟವಾಯ್ತು :)

    ReplyDelete
  2. ಚಾಂಚಲ್ಯವಷ್ಟೇ ಸ್ಥಿರ!ಬಹಳ ಉನ್ನತ ಮಟ್ಟದ ಕವನ!ಪದಗಳ ಬಳಕೆ ಎಲ್ಲಿಯೂ
    ಕ್ಲೀಷೆ ಎನ್ನಿಸುವುದಿಲ್ಲ.ಮನಸ್ಸಿನ ತುಮುಲಗಳನ್ನು,ಗೊಂದಲಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ.ಅಭಿನಂದನೆಗಳು.

    ReplyDelete
  3. ಒಳ್ಳೆಯ ಕವನ.. ಹೀಗೆ ಬರೆಯುತ್ತೀರಿ..
    ನಿಮ್ಮವ,
    ರಾಘು.

    ReplyDelete
  4. ಹಮ್.. ಇಂದೂರವರೆ,
    Exam ಹತ್ತಿರ ಬಂದಂತೆಲ್ಲ ಮನಸ್ಸು ಗೊಂದಲ ಗೂಡಾಗಲು ಶುರುವಾಗಿಬಿಡುತ್ತದೆ! ಅಲ್ವಾ? ;-)

    On a serious note, ಆಳವಾದ ವಿಚಾರಲಹರಿ...ಅಸೆ-ನಿರಾಸೆ-ಅಸಹಾಯಕತೆ ಇವು ಮೂರರ ಮಧ್ಯೆ ಅದೇನೇನೆಲ್ಲ ಗಿರಾಕಿ ಹೊಡೆಯುತ್ತದೆ!..ಅವಕಾಶಗಳ ದಿಗಂತ ಇನ್ನಷ್ಟು ವಿಸ್ತರಿಸಲಿ ಅಂತಷ್ಟೇ ನಮ್ಮ ಹಾರೈಕೆ..

    ReplyDelete
  5. nimma padagala jodhane tumba ista aithu indu :)

    ReplyDelete
  6. @ಗೌತಮ್ ಹೆಗಡೆ
    @ ಡಾ. ಕೃಷ್ಣಮೂರ್ತಿ ಡಿ.ಟಿ.
    @ ರಾಘು
    @ Snow White
    ಧನ್ಯವಾದಗಳು
    @ ವಿನಾಯಕ
    exam ಹತ್ತಿರವಾದಂತೆಲ್ಲಾ ಅಲ್ಲಾ... ಈಗ exam time...ಹಾಗಾಗಿ ಪರೀಕ್ಷೆಗಳ ಸಮಯದಲ್ಲಿ ಅಂತಾನೇ ಹೇಳಬಹುದು....
    ಆದ್ರೆ ನಂಗೆ ಪರೀಕ್ಷೆ ಸಮಯದಲ್ಲಿ ಯಾವಾಗಲೂ ಒಂದಲ್ಲ ಒಂದು ಕೆಲ್ಸದಲ್ಲಿ ತೊಡಗಿಸಿಕೊಂಡಿರೋದರಿಂದ ಮನಸಿನ ಕಡೆ ಯೋಚನೆ ಇರೊಲ್ಲ... ಏನೂ ಮಾಡದೆ ಸುಮ್ಮನೆ ಇದ್ದಾಗಲೇ ಗೊಂದಲಗಳು ಹೆಚ್ಚಾಗೋದು...

    ReplyDelete
  7. ಕತ್ತಲಿನ, ಕಣ್ಮುಚ್ಚಿನಲ್ಲಿನ, ಕನಸ ಪರದೆಯಲ್ಲಿನ ಚಿತೆಅಣಗಳು ನನಸಿನಲ್ಲಿ ಹಸಿ ಕಗ್ಗೊಲೆಯಾಗುವಾಗ, ಸಿಡಿದೇಳಲಾಗದ ಅಸಹಾಯಕತೆಯ ಚಿತ್ರಣ ಮತ್ತು ಅದರ ಪರಿಣಾಮಗಳ ಚಿತ್ರಣ ಅದ್ಭುತವಾಗಿ ಹೇಳಿ ಗೊ೦ದಲಿನ ಗೂಡನ್ನು ವಿಸ್ತರಿಸಿ ಮತ್ತೆ ನಕಾರಾತ್ಮಕ ಕವನವೇನೋ ಎನ್ನುತ್ತಿರುವಾಗ ಕೊನೆಯಲ್ಲಿ-
    "ಕಾರ್ಮೋಡ ಕವಿದ ಬಾನು
    ಅಂಚಲ್ಲೊಂದು ಬೆಳ್ಳಿರೇಖೆ
    ಅವಕಾಶಗಳ ದಿಗಂತದ ವಿಸ್ತರಣ " ಹೇಳಿದ್ದು ಮನಸ್ಸಿಗೆ ಮುದ ನೀಡಿತು.

    ReplyDelete
  8. ಆತ್ಮೀಯ
    <<
    ಅಂಜಿಕೆಯ ನೆಳಲಲ್ಲೇ ಕೊಳೆತ
    ದಾಕ್ಷಿಣ್ಯದರಮನೆಯಲ್ಲಿ ದಾಸ್ಯ
    ಇನ್ನೆಲ್ಲೋ ಸ್ವಾತಂತ್ರ್ಯದ ಮೊಳಕೆ>>

    ನೀವು ಅಪ್ಪ ಅಮ್ಮನ ಜೊತೆ ಇದೀರೋ ಇಲ್ಲಾ ನೆ೦ಟರ ಮನೇಲಿ ಇದ್ದುಕೊ೦ಡು ಓದ್ತಾ ಇದೀರೋ?
    ಯಾಕೇ೦ದ್ರೆ ಇದು ನಾನು ಅನುಭವಿಸಿದ ನೋವು
    ಚ೦ದನೆಯ ಕವನ
    ನಿಮ್ಮವ
    ಹರಿ

    ReplyDelete
  9. @ ಸೀತಾರಾಮ್ ಕೆ.
    ಧನ್ಯವಾದಗಳು
    @ ಹರೀಶ್ ಆತ್ರೇಯ
    ಬರೆದದ್ದೆಲ್ಲಾ ನನ್ನ ಅನುಭವವಾಗಿರಬೇಕೆಂದೇನೂ ಇಲ್ಲ ಅಲ್ವಾ...ನನ್ನನುಭವ ಮಾತ್ರವಲ್ಲ ನನ್ನ ಕಲ್ಪನೆಯೂ ನನ್ನ ಬ್ಲಾಗಿನ ಒಂದು ಅಂಗ... ಕಲ್ಪನೆಗೆ ಮಿತಿಯುಂಟೆ??

    ReplyDelete