Wednesday, July 28, 2010

ನಾ ಕಳೆದುಹೋದೇನು....

ಮನಸಿದು ನನ್ನದು
ಪುಟ್ಟ ಕಂದಮ್ಮನಂತೆ.
ಮುಗ್ಧತೆಯೇ ಎಲ್ಲಾ
ಇನಿತೂ ಕಪಟವಿಲ್ಲ.

ಪುಟ್ಟ ಅಂಗಳದಲ್ಲಿನ
ವಿಹಾರ ಮುಗಿದಾಯ್ತು.
ಪ್ರಪಂಚದೊಳು ಕಾಲಿಡುವ
ಸಮಯ ಬಂದಾಯ್ತು.

ಮನೆಯಿಂದಾಚೆ
ಕಾಲಿರಿಸಲೂ ಅಂಜಿಕೆ.
ಕಾಣದ ಲೋಕವಿದು
ನಾ ಎದುರಿಸಲಿ ಹೇಗೆ?

ಹೊರಗೆ ಕತ್ತಲಲ್ಲೂ ಹೊಳೆವ
ಮಿಣುಕು ದೀಪಗಳ ಮಾಯೆಯೊಳಗೆ
ನಾ ಕುರುಡಿಯಾದೇನು.

ಕ್ಷಣಕೊಂದರಂತೆ ಬದಲಾಗುವ
ಬಿನ್ನಾಣದ ಮಾತುಗಳ ನಡುವೆ
ನಾ ಮೂಕಿಯಾದೇನು.

ಪರಿಚಿತರೂ ಅಜ್ಞಾತರಂತಿರುವ
ಸ್ವಾರ್ಥ ಜನರ ನಡುವೆ
ನಾ ಕಳೆದುಹೋದೇನು.

ನಂಬಿಹೆನು ನಾನು
ಆಸರೆಯು ನೀನೆಂದು.
ಈ ಕ್ರೂರ ಲೋಕದೊಳು
ಬೆಂಗಾವಲೆನಗೆಂದು.

ಹಿಡಿಯುವೆನು ಬಿಗಿಯಾಗಿ
ನಾ ನಿನ್ನ ಕೈಯನ್ನು.
ನಡೆಯದಿರು ದೂರಾಗಿ
ಸಡಿಲಿಸಿ ಹಿಡಿತವನ್ನು.

11 comments:

  1. ನ೦ಬುಗೆಯ ಅ೦ಬಿಗನಿರುವಾಗ ಏಕೆ ಅ೦ಜಿಕೆ? ಸುಗಮವಾಗಲಿ ನಿಮ್ಮ ಪಯಣ. ಸಿಗುತಿರಲಿ ಮಧುರ ತಾಣ..ಕ್ಷಣ ಕ್ಷಣ..!

    ಅನ೦ತ್

    ReplyDelete
  2. ಆತ್ಮೀಯ
    <>
    ಈ ಕವನವನ್ನು ನಿಮ್ಮ ತ೦ದೆಯವರನ್ನುದ್ದೇಶಿಸಿ ಬರೆದದ್ದು ಹೌದೇ(?) . ಅದಕ್ಕುತ್ತರ
    ಕೈ ಹಿಡಿಸು ನಡೆಸಲು
    ನೀನೀಗ ಮಗುವಲ್ಲ ಮಗಳೇ
    ನಿನಗೆ ನಿನ್ನದೇ ವ್ಯಕ್ತಿತ್ವವಿದೆ
    ಜವಾಬ್ದಾರಿಯಿದೆ ಅಷ್ಟನ್ನೂ
    ನಿನಗೆ ಹೇಳಿಕೊಟ್ಟಿದ್ದೇನೆ

    ಇನ್ನು ನೀನು ನಿನ್ನದೇ ಕಣ್ಣಲ್ಲಿ
    ಜಗವ ನೋಡು ಮತ್ತು ಅಳೆದುಬಿಡು
    ಸುತ್ತ ಕಾಣುವ ಮ೦ದಿ
    ಕಣ್ಣೊಳ ಬೀಳುವ ಧೂಳೂ ಹೌದು
    ಆನ೦ದ ಬಾಷ್ಪವೂ ಹೌದು

    ಧೂಳನ್ನು ತೆಗೆಯುವ ಕೈ ನಿನ್ನದು
    ಬೀಳದ೦ತೆ ತಡೆಯಿಡಿಯುವ ಮನವೂ ನಿನ್ನದು
    ನಾನು ಕೇವಲ ನೋಡುಗ
    ಮತ್ತು ಪುಟ್ಟ ನಿರ್ದೇಶಕ
    ನಟನೆ ನಿನ್ನದು ಫಲವೂ ನಿನ್ನದು

    ಹೊರಗೆಲ್ಲೂ ಹೋಗದಿರು ಮಗಳೇ
    ಕತ್ತಲಿದೆ ಎನ್ನುವ ಕಾಲ ಇನ್ನಿಲ್ಲ
    ನೀನೀಗ ಪ್ರಬುದ್ಧೆ ಮತ್ತು
    ನನ್ನ ಹಾಗೆಯೇ ನಿನ್ನ ಮನವೂ
    ಎಚ್ಚರಿಕೆಯ ಗೂಡು

    ಮುಖವಾಡಗಳ ನಡುವೆ
    ಮೂಕಿಯಾಗದಿರು. ಮತ್ತು
    ಮುಗ್ಧೆಯಾಗದಿರು.
    ಕಾಣು ಎಲ್ಲವನು
    ಕಣಸಿಸು ಎಲ್ಲವನು
    ನೀ ನೀನಾಗಿರು
    ನಾ ಇದ್ದರೂ ಇಲ್ಲದಿದ್ದರೂ

    ಹರಿ

    ReplyDelete
  3. ಚೆಂದದ ಕವನ. ಸರಳಭಾಷೆ ಮನಸ್ಸಿಗೆ ಮುದ ನೀಡಿತು. ಕವನದ ಆಶಯ ಸಾಧುವಾದದ್ದು. ಹರಿಷರ ಪ್ರತಿಕ್ರೀಯೇಯಲ್ಲಿನ ಕವನವು ಚೆನ್ನಾಗಿದೆ.

    ReplyDelete
  4. ಕವನ ಸರಳವಾಗಿದ್ದು ಸೊಗಸಾಗಿದೆ..

    ReplyDelete
  5. ಕವನ.. ಕವನದ ಭಾವ..ಹಿಡಿಸಿತು.ಚೆನ್ನಾಗಿದೆ .

    ReplyDelete
  6. ನಮ್ಮ ಬಾಳ್ವೆ ನಾವೇ ಬೆಳಗಿಸಬೇಕು,
    ಹೆದರಿ ಕುಳಿತರೆ ಕಾಣದು ಬೆಳಕು......
    ಧೈರ್ಯದಿ ಮುನ್ನಡೆದರೆ ಇಗುವುದು ಗುರಿ
    ಇಲ್ಲವಾದರೆ ನೀನಲ್ಲೇ ಇದನ್ನರಿ......

    ಚನ್ನಾಗಿದೆ ನಿಮ್ಮ ಕವನ.......

    ReplyDelete
  7. @ ಅನಂತರಾಜ್
    @ಶ್ರೀಕಾಂತ್
    @ವಿನಯಣ್ಣ
    @ಸೀತಾರಾಮ್ ಕೆ
    @ವಸಂತ್
    @ಶಿವು ಕೆ.
    @ಮನಮುಕ್ತಾ
    @ಪ್ರವೀಣ್
    @Snow white
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
    @ಹರೀಶ್
    ಅಪ್ಪನಿಗೋ ಆ ಸರ್ವಶಕ್ತನಿಗೋ ನನಗೆ ತಿಳಿದಿಲ್ಲ....ಬಹುಶಃ ಇಬ್ಬರಿಗೂ...
    ನಿಮ್ಮ ಕವನ ಚೆನ್ನಿದೆ. :)

    ReplyDelete