Wednesday, August 5, 2009

ಕವಿ ಕಾವ್ಯ ಶ್ರಾವಣ


ಆಧುನಿಕ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯೆಲ್ಲೋ ನಶಿಸಿ ಹೋಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ವಚನಜ್ಯೋತಿ ಬಳಗವು ಕಳೆದ ಹದಿಮೂರು ವರ್ಷಗಳಿಂದ ಕನ್ನಡ ಸಾಹಿತ್ಯ-ಸಂಸ್ಕೃತಿಯ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ವಚನ ಚಳುವಳಿಯ ಪರಿಚಯ ಮಾಡಿಕೊಟ್ಟು ತನ್ಮೂಲಕ ಕನ್ನಡ ಸಂಸ್ಕೃತಿಯನ್ನು ಬಿತ್ತುವುದು ಬಳಗದ ಪ್ರಮುಖ ಕಾರ್ಯವಾಗಿದೆ.

ಈ ವರ್ಷ ಶ್ರಾವಣ ಮಾಸಾದ್ಯಂತ ಪ್ರತಿದಿನ ಒಬ್ಬೊಬ್ಬರ ಮನೆಯಲ್ಲಿ "ಕವಿ ಕಾವ್ಯ ಶ್ರಾವಣ - ಮನೆಯಿಂದ ಮನಕ್ಕೆ ಕನ್ನಡ ಸಂಸ್ಕೃತಿ ಸಂಚಾರ" ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ೨೬ನೇ ಜುಲೈ ೨೦೦೯ರಿಂದ ೨೦ನೇ ಆಗಸ್ಟ್ ೨೦೦೯ರವರೆಗೆ ಈ ಕಾರ್ಯಕ್ರಮ ಪ್ರತಿದಿನ ಸಂಜೆ ೬ ಗಂಟೆಗೆ ನಡೆಯುತ್ತದೆ. ಆದಿಕವಿ ಪಂಪನಿಂದ ಮೊದಲ್ಗೊಂಡು ರಾಷ್ಟ್ರಕವಿ ಕುವೆಂಪುರವರ ವರೆಗೆ ಕನ್ನಡದ ಪ್ರಮುಖ ಕವಿಗಳ-ದಾರ್ಶನಿಕರ ಕಿರುಪರಿಚಯವನ್ನು ಮನೆ- ಮನೆಗಳಲ್ಲಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಮೊದಲಿಗೆ ಗೀತ ಗಾಯನ ನಂತರ ಕವಿ ಕಾವ್ಯ ಪರಿಚಯದ ಮೂಲಕ ಕನ್ನಡದ ಸಿರಿವಂತಿಕೆಯನ್ನು ಆತಿಥೇಯರಿಗೂ ಅತಿಥಿಗಳಿಗೂ ಉಣಬಡಿಸುವ ಯತ್ನ ಇದಾಗಿದೆ.

ಜುಲೈ ತಿಂಗಳಲ್ಲಿ ನಮ್ಮ ತಂದೆಗೆ ಇದರ ಬಗ್ಗೆ ಮಾಹಿತಿ ಸಿಕ್ಕಿದ್ದರೂ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಬಳಗದ ಸದಸ್ಯರೊಂದಿಗೆ ಚರ್ಚೆ ನಡೆಸುವ ದಿನ ಕಾರಣಾಂತರಗಳಿಂದ ಹೋಗಲಾಗದೆ ಇದ್ದುದರಿಂದ ಮೊದಲು ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಹೋಗಿ ಬಂದ ಅಪ್ಪ ಅಮ್ಮ ಇಬ್ಬರಿಗೂ ನಮ್ಮ ಮನೆಯಲ್ಲೂ ಇಂಥ ಒಂದು ಕಾರ್ಯಕ್ರಮ ನಡೆಸಬೇಕು ಎಂಬ ಆಸೆ ಬಲವಾಯಿತು. ಈ ಬಾರಿ ಸಾಧ್ಯವಾಗದೇ ಇದ್ದರೂ ಮುಂದಿನ ಬಾರಿ ಖಂಡಿತ ನಡೆಸಬೇಕು ಎಂದು ಮಾತನಾಡುತ್ತಿದ್ದಾಗಲೇ ಕಾರ್ಯಕ್ರಮ ವ್ಯವಸ್ಥಾಪಕರಿಂದ ಒಂದು ಕರೆ ಬಂತು. "ಸೋಮವಾರ ಕಾರ್ಯಕ್ರಮ ನಡೆಸಬೇಕಿದ್ದ ಮನೆಯವರು ಕಾರ್ಯಕ್ರಮ ನಡೆಸುವುದರಿಂದ ಹಿಂದೆ ಸರಿಯುತ್ತಿದ್ದಾರೆ ನಿಮಗೆ ಆಸಕ್ತಿಯಿದ್ದರೆ ನೀವು ನಡೆಸಬಹುದು" ಎಂದರು. ಅಪ್ಪ ಒಪ್ಪಿಗೆ ನೀಡುವುದರೊಂದಿಗೆ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸುವುದು ಖಾತ್ರಿಯಾಯ್ತು.

ಸೋಮವಾರ ಸಂಜೆ ಸುಮಾರು ೬ : ೧೫ಕ್ಕೆ ಶ್ರೀಮತಿ ಸರಸ್ವತಿ ಹೆಗಡೆಯವರ ಗಾಯನದೊಂದಿಗೆ ಕಾರ್ಯಕ್ರಮ ಶುರುವಾಯಿತು. ವಚನ, ಭಕ್ತಿಗೀತೆ ಗಾಯನ ಸುಮಾರು ೭ ಗಂಟೆಯವರೆಗೆ ನಡೆಯಿತು.ನಮ್ಮ ಮನೆಯಲ್ಲಿ ಕವಿ ಷಡಕ್ಷರದೇವ ಅವರ ಕಿರುಪರಿಚಯ ನೀಡುವುದಿತ್ತು.ಗಾಯನಾನಂತರ ನಿವೃತ್ತ ತಹಸೀಲ್ದಾರರಾದ ಕೆ.ಎಂ.ರೇವಣ್ಣನವರು ಕವಿ ಷಡಕ್ಷರದೇವ ಅವರ ಬಗ್ಗೆ ತಮ್ಮ ಉಪನ್ಯಾಸ ಪ್ರಾರಂಭಿಸಿದರು. ನಿಜ ಹೇಳಬೇಕಂದ್ರೆ ಅದುವರೆಗೆ ಷಡಕ್ಷರದೇವ ಎಂಬ ಮಹಾಕವಿಯೊಬ್ಬರು ಇದ್ದರೆಂಬುದು ನನಗೆ ತಿಳಿದಿರಲಿಲ್ಲ. ಅವರು ಹೇಳಿದ್ದನ್ನು ನನಗೆ ನೆನಪಿರುವಷ್ಟು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಚಂಪೂ ಶೈಲಿಯಲ್ಲಿ ಕಾವ್ಯ ರಚಿಸಿದ ಷಡಕ್ಷರದೇವನ ಕಾಲದ ಬಗ್ಗೆ ನಿರ್ದಿಷ್ಟವಾದ ಮಾಹಿತಿಯಿಲ್ಲದಿದ್ದರೂ ಅವನ ಕಾವ್ಯಗಳ ಆಧಾರದಿಂದ ಅವನ ಕಾಲ ಹದಿನೇಳನೇ ಶತಮಾನ ಎಂದು ಗುರುತಿಸಬಹುದು.ಮೈಸೂರು ಕರ್ನಾಟಕದ ಮಳವಳ್ಳಿ ತಾಲೂಕಿನ ದನಗೂರಿನಲ್ಲ ಜನಿಸಿದ ಷಡಕ್ಷರಿದೇವ ರೇಣುಕ ಪರಂಪರೆಗೆ ಸೇರಿದ ಚಿಕ್ಕವೀರದೇಶಿಕರಲ್ಲಿ ಶಿಷ್ಯವೃತ್ತಿಯನ್ನು ಮಾಡಿ ಅಲ್ಲಿನ ಮಠದಲ್ಲಿ ಮಠಾಧಿಪತಿಯೂ ಆಗಿದ್ದನು. ಆದರೆ ನಂತರ ಯಲಂದೂರಿನ ನಾಡಪ್ರಭುವಾದ ಮುದ್ದುರಾಜನ ಪತ್ನಿಯು ತನ್ನ ತವರೂರಾದ ದನಗೂರಿನಿಂದ ಷಡಕ್ಷರದೇವನನ್ನು ಯಲಂದೂರಿಗೆ ಕರೆಸಿಕೊಂಡು ಅಲ್ಲಿಯೇ ನೆಲೆಸಲು ಕೋರಿದಳೆಂದು ಹೇಳಲಾಗುತ್ತದೆ. ಷಡಕ್ಷರದೇವನು ಮುಂದೆ ಯಲಂದೂರಿನಲ್ಲೇ ಸಮಾಧಿ ಹೊಂದಿದನು ಎಂದು ಹೇಳಲಾಗುತ್ತದೆ.

ಕನ್ನಡ ಹಾಗೂ ಸಂಸ್ಕೃತದಲ್ಲಿ ಪ್ರವೀಣನಾದ ಷಡಕ್ಷರದೇವನಿಗೆ "ಉಭಯಕವಿತಾವಿಶಾರದ" ಎಂಬ ಬಿರುದಿತ್ತು. ಇವನು ಕನ್ನಡದಲ್ಲಿ ಮೂರು ಮಹಾಕಾವ್ಯಗಳನ್ನು ಸಂಸ್ಕೃತದಲ್ಲಿ ಒಂದು ಮಹಾಕಾವ್ಯವನ್ನು ರಚಿಸಿದ್ದಾನೆ. ಕನ್ನಡದ ಕಾವ್ಯಗಳು
೧. ರಾಜಶೇಖರವಿಲಾಸ
ಪಂಚಾಕ್ಷರೀ ಮಂತ್ರದ ಮಹತ್ವವನ್ನು ಸತ್ಯೇಂದ್ರ ಚೋಳ ಹಾಗೂ ಅಮೃತಮತಿಯ ಮಗನಾದ ರಾಜಶೇಖರ ಚೋಳನ ಕತೆಯ ಮೂಲಕ ಕವಿ ಇಲ್ಲಿ ಹೇಳಿದ್ದಾನೆ. (ಉಪನ್ಯಾಸಕರು ಇದರ ಕಥೆಯನ್ನು ,ಸಾರಾಂಶವನ್ನು ತಿಳಿಸಿದರು.ನನಗೆ ಕೆಲವು ಹೆಸರುಗಳು ಸರಿಯಾಗಿ ನೆನಪಿಲ್ಲವಾದ್ದರಿಂದ ಇಲ್ಲಿ ಬರೆಯುತ್ತಿಲ್ಲ.)
೨. ವೃಷಭೇಂದ್ರವಿಜಯ
ಭಕ್ತಿರಸ ಪ್ರಧಾನವಾದ ಈ ಕಾವ್ಯ ಬಸವಣ್ಣನವರ ಜೀವನಚರಿತೆಯ ಬಗ್ಗೆ ಹೇಳುತ್ತದೆ.
೩. ಶಬರಶಂಕರವಿಲಾಸ
ಮಹಾಭಾರತದ ಒಂದು ಪ್ರಸಂಗದ ಮೇಲೆ ಈ ಕಾವ್ಯವು ಅವಲಂಬಿತವಾಗಿದೆ. ಅರ್ಜುನ ಶಿವನ ಕುರಿತು ತಪಸ್ಸನ್ನಾಚರಿಸಿದಾಗ ಶಬರನ ರೂಪದಲ್ಲಿ ಪ್ರತ್ಯಕ್ಷನಾದ ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡುವ ಕತೆಯನ್ನು ಇದು ವಿವರಿಸಿದೆ.

ಸಂಸ್ಕೃತದಲ್ಲಿ ಕರ್ಣರಸಾಯನ ಎಂಬ ಮಹಾಕಾವ್ಯವನ್ನು ಷಡಕ್ಷರದೇವ ರಚಿಸಿದ್ದಾನೆ. ಇದಲ್ಲದೆ ಆತ ರತ್ನಾವಳಿ, ಶಿವಶಕ್ತಿಮಂಜರಿ, ವೀರಭದ್ರದಂಡಕ, ಸಿದ್ಧಲಿಂಗಸ್ತವ, ಪಾದಪೂಜಾಸ್ತೋತ್ರ, ಶಿವಮಾನಸಸ್ತೋತ್ರ ,ಸಿದ್ಧಲಿಂಗಾಷ್ಟಕ, ಬಸವಾಷ್ಟಕ ಎಂಬಿತ್ಯಾದಿ ಸ್ತೋತ್ರಗಳನ್ನೂ ಬರೆದಿದ್ದಾನೆ.

ರೇವಣ್ಣನವರು ನೀಡಿದ ಷಡಕ್ಷರದೇವನ ಪರಿಚಯದ ನಂತರ ಬಳಗದ ಅಧ್ಯಕ್ಷರಾದ ಪ್ರೊ. ಟಿ.ಆರ್.ಮಹಾದೇವಯ್ಯನವರು, ಪ್ರಧಾನ ಕಾರ್ಯದರ್ಶಿಗಳಾದ ಪಿನಾಕಪಾಣಿಯವರು ಮಾತನಾಡಿದರು. ವಂದನಾರ್ಪಣೆಯ ನಂತರ ಮಂಗಳಗೀತೆಯನ್ನು ಹಾಡಿ ನಂತರ ಪ್ರಸಾದ ವಿನಿಯೋಗವಾಯಿತು. ಒಟ್ಟಿನಲ್ಲಿ ಒಂದು ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸವಿಯನ್ನು ಮನ ಅನುಭವಿಸಿತ್ತು.
(ನನ್ನ ಸ್ಮೃತಿಯ ಆಧಾರದ ಮೇಲೆ ಕವಿ ಪರಿಚಯವನ್ನು ಬರೆದಿರುವುದು. ತಪ್ಪಿದ್ದರೆ ತಿದ್ದಿರಿ. ಹೆಚ್ಚಿನ ಮಾಹಿತಿ ತಿಳಿದಿದ್ದರೆ ಹಂಚಿಕೊಳ್ಳಿ.)

No comments:

Post a Comment