Friday, August 28, 2009

ಪಲ್ಲವಿ - ಚರಣ

ಪ್ರೀತಿಯೆಂಬ ಹಾಡಿಗೆ ಪಲ್ಲವಿಯ ನೀ ಬರೆದೆ
ಚರಣವಿನ್ನು ನಿನ್ನ ಪಾಲು ತುಂಬಿಸದನು ನೀನೇ ಎಂದೆ

ಪ್ರೀತಿಯ ಅಡಿಪಾಯಕ್ಕೆ ವಿಶ್ವಾಸವನ್ನು ತುಂಬಿ
ಆಸೆ-ಭಾವಗಳಿಂದ ಕನಸಿನ ಗೂಡನ್ನು ಕಟ್ಟಿ
ಸಾಮರಸ್ಯದ ಹಸೆಯಿಟ್ಟು ಸಹಬಾಳ್ವೆಯ ಜ್ಯೋತಿ ಬೆಳಗಿಸಿದರೆ ಸಾಕು
ಚರಣ ಪೂರ್ಣವಾಗಲು ಇನ್ನೇನು ಬೇಕು

ಎಂದೆನಿಸುತಿರುವಾಗಲೇ ನನಗಾಯಿತು ಅರಿವು
ಇವೆಲ್ಲವೂ ತುಂಬಿದ್ದ ನನ್ನ ಮನವೇ ಆಗಿದೆ ಕಳುವು

ಮನಸನ್ನೇ ಕದ್ದಿರುವೆಯಲ್ಲ ಆಸೆಗಳನೆಲ್ಲಿಂದ ತರಲಿ
ಬರಿದಾದ ಈ ಎದೆಗೂಡಲ್ಲಿ ಅಕ್ಷರಗಳ ಹೇಗೆ ಹುಡುಕಲಿ

ಅರ್ಥವಿಲ್ಲದ ಸಾಲುಗಳಿಂದ ಚರಣ ಪೂರ್ತಿಯಾಗುವುದು ಹೇಗೆ
ಒಬ್ಬಂಟಿಯಾಗಿ ಈ ಪ್ರೇಮಗೀತೆಯ ಹಾಡುವುದು ಹೇಗೆ

ಸಪ್ತಸಾಗರಗಳಾಚೆಯೆಲ್ಲೋ ನೀ ಅಡಗಿ ಕುಳಿತು
ಮೂಡಿಸಿರುವೆ ನನ್ನೊಳಗೆ ಎಂದೂ ಮಾಸದ ಗುರುತು

ಒಮ್ಮೆ ಬಂದು ನನ್ನ ನೋಡು ಕಣ್ಣ ತುಂಬಾ
ರೆಪ್ಪೆ ಹಿಂದೆ ಹಿಡಿದಿಡುವೆ ನಾ ನಿನ್ನ ಬಿಂಬ

ಭೂಮಿಗೂ ಬಾನಿಗೂ ಇರುವುದೆಷ್ಟೋ ಅಂತರ
ನಿನ್ನ ನೋಡಲಿಲ್ಲಿ ನನಗೆ ಅಷ್ಟೇ ಕಾತರ

ಹುಡುಗಾಟ ಸಾಕಿನ್ನು ಬೇಕೇ ಈ ಪರೀಕ್ಷೆ
ಚರಣ ಬರೆಯಲು ಜೊತೆಯಾಗು ಹುಸಿ ಮಾಡದೆ ನಿರೀಕ್ಷೆ

3 comments:

  1. ಚೆನ್ನಾಗಿದೆ ಪುಟ್ಟ

    ಇಂತಿ
    ವಿನಯ

    ReplyDelete
  2. ನಯನ ವಿನಯಣ್ಣ ಇಬ್ಬರಿಗೂ ಥ್ಯಾಂಕ್ಸ್

    ReplyDelete