Thursday, July 3, 2008

ಮನಸುಗಳ ಮಾತು ಮಧುರ.....

ಒಮ್ಮೆ ಒಬ್ಬ ರೈತ ಸಂತೆಯಿಂದ ಮನೆಗೆ ಹಿಂದಿರುಗುವಷ್ಟರಲ್ಲಿ ಕತ್ತಲಾಗಿಹೋಯ್ತು. ಆ ರೈತ ಪ್ರತಿ ದಿನ ಗೋಧೂಳಿ ಸಮಯದಲ್ಲಿ ದೇವರ ಪ್ರಾರ್ಥನೆ ಮಾಡ್ತಾ ಇದ್ದ. ಆದ್ರೆ ಇವತ್ತು ಅವ್ನಿಗೆ ಮನೆಗೆ ಹೋಗೋಕೆ ಆಗ್ಲಿಲ್ಲ. ಆ ಪ್ರಾರ್ಥನೆ ಅವ್ನಿಗೆ ಬಾಯಿಪಾಠ ಆಗಿರಲಿಲ್ಲ. ಹೋಗ್ಲಿ ಅಂದ್ರೆ ಇವತ್ತು ಅವನು ಆ ಪ್ರಾರ್ಥನೆ ಪುಸ್ತಕನೂ ತಗೊಂಡು ಹೋಗೋದನ್ನ ಮರೆತಿದ್ದ. ಈಗ ಏನಪ್ಪಾ ಮಾಡೋದು ಅಂಥ ಯೋಚನೆ ಮಾಡಿ ದೇವರ ಹತ್ರ ಹೀಗೆ ಹೇಳ್ದ…"ದೇವ್ರೇ…ನಾನಿವತ್ತು ನನ್ ಪ್ರಾರ್ಥನೆ ಪುಸ್ತಕಾನ ಮನೇಲೆ ಬಿಟ್ಟು ಬಂದುಬಿಟ್ಟಿದ್ದೀನಿ. ಹಾಗಾಗಿ ನಾನು ಸ್ವರಮಾಲೇನ ನಿಧಾನವಾಗಿ ಐದು ಸಲ ಹೇಳ್ತೀನಿ ಸರ್ವಜ್ಞನಾದ ನೀನು ಆ ಅಕ್ಷರಗಳನ್ನ ಪ್ರಾರ್ಥನೆಯಲ್ಲಿ ಬಾರೋ ರೀತೀನೇ ಜೋಡಿಸಿಕೊಂಡು ಅರ್ಥ ಮಾಡ್ಕೋ " ಅಂತ ಹೇಳಿ ಅಕ್ಷರಮಾಲೆನ ಹೇಳ್ದ.

ಇದನ್ನ ಕೇಳಿದ ದೇವರು ಯಕ್ಷರಿಗೆ ಹೇಳ್ದ, "ನಾನಿವತ್ತು ಕೇಳಿದ ಎಲ್ಲ ಪ್ರಾರ್ಥನೆಗಳಿಗಿಂತ ಆ ರೈತನ ಪ್ರಾರ್ಥನೆ ನನಗೆ ತುಂಬ ಇಷ್ಟ ಆಯ್ತು ಯಾಕೆ ಅಂದ್ರೆ ಅದು ಮನಃ ಪೂರ್ವಕವಾದ ನಿವೇದನೆಯಾಗಿತ್ತು” ಅಂತ.

ನೋಡ್ರಿ ನಮ್ಮ ಮನಸ್ಸಿನ ಅಂತರಾಳದ ಮಾತು ದೇವರಿಗೂ ಕೇಳುತ್ತೆ, ಮತ್ತೆ ಅವನಿಗೂ ಇಷ್ಟ ಆಗುತ್ತೆ ಅಂದ್ಮೇಲೆ ಮನುಷ್ಯರಿಗೆ ಇಷ್ಟ ಆಗಲ್ವ…ಮನಸುಗಳು ಮಾತಾಡಿದ್ರೆ ಯಾವುದೇ ಭಿನ್ನಾಭಿಪ್ರಾಯ ಆಗ್ಲಿ ಜಗಳ ಆಗ್ಲಿ ಇರೋದಿಲ್ಲ ಅಲ್ವ… ಆದ್ರೆ ಈ ಬಾಯಿ ಅನ್ನೋದು ಇದೆಯಲ್ಲ , ಇದು ಬಡ್ಕೊಳ್ಳೋಕೆ ಶುರು ಮಾಡಿದ್ರೆನೇ ಎಲ್ಲ ಸಮಸ್ಯೆಗಳು ಉದ್ಭವ ಆಗೋದು.ಆದ್ರೆ ಏನು ಮಾಡೋದು ನನ್ನಂಥ ಬಾಯಿಬಡುಕಿಯರಿಗೆ ಮಾತಾಡದೆ ಇರೋಕೆ ಆಗೊಲ್ವಲ್ಲ. ನಿಮಗೆ ಇನ್ನು ಗೊತ್ತಿಲ್ಲ ಅಲ್ವ ನಾನ್ ಎಂಥವಳು ಅಂಥ….. ನಾನು ಎಷ್ಟು ಮಾತಾಡ್ತಾ ಇದ್ದೆ ಅನ್ನೋದಕ್ಕೆ ಒಂದು ಸಂದರ್ಭ ಹೇಳ್ತೀನಿ ಕೇಳಿ……… ಒಂದು ಸಣ್ಣ ಫ್ಲಾಶ್ ಬ್ಯಾಕ್…………………..

ನಾನಾಗ ಒಂಭತ್ತನೇ ತರಗತಿಲಿದ್ದೆ. ಅವತ್ತು ಯಾಕೋ ನಂ ಟೀಚರ್ರು ಕ್ಲಾಸಿಗೆ ಬಂದಿರಲಿಲ್ಲ. ಕ್ಲಾಸಲ್ಲಿ ಯಾರು ಇಲ್ಲ ಅಂದ್ರೆ, ಬಾಲ ಇಲ್ಲದ ಕೋತಿಗಳು ನಾವು ಸುಮ್ನಿರಬೇಕಲ್ಲ…..ಎಲ್ಲಾರೂ ಗಲಾಟೆ ಮಾಡ್ತಾ ಇದ್ವಿ……ನಂ ಗಲಾಟೆ ಕೇಳಿ ಪಕ್ಕದ್ ಕ್ಲಾಸಲ್ಲಿ ಪಾಠ ಮಾಡ್ತಾ ಇದ್ದ ಮಂಜುನಾಥ್ ಸರ್ ನಂ ಕ್ಲಾಸಿಗೆ ಬಂದು, ಎಲ್ಲಾರಿಗೂ ಬೈದು, ಯಾರೋ ಒಬ್ರಿಗೆ ಮಾತಾಡಿದವರ ಹೆಸರು ಬರೆದು ಕೊಡೋಕೆ ಹೇಳಿದ್ರು. ಆಗಿಂದ ಎಲ್ಲಾರು ಗಪ್ ಚುಪ್ …..ಸೂಜಿ ಬಿದ್ರು ಕೇಳೋ ಅಷ್ಟು ಮೌನ……..ಯಾರು ಮಾತಾಡ್ತಾ ಇಲ್ಲ……ನನಿಗೋ ಮಾತಾಡದೆ ಆ ಪೀರಿಯಡ್ ಮುಗಿಯೋ ಹೊತ್ತಿಗೆ ತಲೆ ನೋವೇ ಬಂದು ಬಿಟ್ಟಿತ್ತು……ಅಷ್ಟು ಮಾತಾಡ್ತಿದ್ದೆ……

ಆದ್ರೆ ಈಗೀಗ ಸ್ವಲ್ಪ ಮಾತು ಕಡಿಮೆ ಮಾಡ್ಕೊಂಡಿದ್ದೀನಿ…….ನನಗೂ ಮೌನದ ಮಹತ್ತ್ವ ತಿಳೀತ ಇದೆ. ನಾವು ಮೌನವಾಗಿದ್ದಾಗ್ಲೆ ನಂ ಮನಸ್ಸಿನ ಮಾತು ನಮಗೆ ಸ್ಪಷ್ಟವಾಗಿ ಅರ್ಥ ಆಗೋದು. ಅಷ್ಟೆ ಅಲ್ಲ ಬೇರೆಯವರ ಮನಸಿನ ಮಾತು ಕೇಳುತ್ತೆ. ಈ ಮನಸುಗಳು ಮಾತಾಡೋವಾಗ ಬಾಯಿಗಿನ್ನೇನು ಕೆಲಸ? ಆ ಮನಸುಗಳು ಮಾತಾಡೋವಾಗ ಅರ್ಥ ಆಗೋದು ಭಾವನೆಗಳೇ ಹೊರತು ಶಬ್ಧಗಳಲ್ಲ. ನಮ್ಮೆಲ್ಲ ಭಾವನೆಗಳನ್ನು ಶಬ್ಧಗಳಿಂದ ಹೇಳೋಕಾಗೋಲ್ಲ ನೋಡಿ. ಆದ್ರೆ ಅರ್ಥ ಮಾಡ್ಕೊಳ್ಳೋ ಮನಸ್ಸು ಇದ್ರೆ ನಾವು ಶಬ್ದಗಳಲ್ಲಿ ಹೇಳೋದನ್ನೆಲ್ಲ ಭಾವನೆಗಳ ಮೂಲಕ ಹೇಳಬಹುದು…..ಅಲ್ವ?? ಅದಕ್ಕೆ ನಂ ಮನಸಿಗೂ ಮಾತಾಡೋದನ್ನ, ಮಾತಾಡಿದ್ದನ್ನ ಅರ್ಥ ಮಾಡಿಕೊಳ್ಳೋದನ್ನ ಹೇಳಿಕೊಡಬೇಕು. ಆಗ ಭಾಷೆ ಸಮಸ್ಯೆ ಬರೋದೇ ಇಲ್ಲ. ಯಾರ್ ಜೊತೆ ಬೇಕಾದರು ವ್ಯವಹರಿಸಬಹುದು ಅಲ್ವ……

ಹಾಗಂತ ಈ ಮನಸು ಹೇಳೋ ಮಾತೆಲ್ಲ ಸರಿ ಅಂಥ ಅಲ್ಲ ನಾನ್ ಹೇಳ್ತಾ ಇರೋದು… ಮನಸಿನ ಮಾತಿಗೆ ನಮ್ಮ ಅಂತಃ ಸಾಕ್ಷಿನೂ ಒಪ್ಪಿದರೆ ಅಂತ ಮಾತು ಖಂಡಿತ ಸರೀನೇ ಇರುತ್ತೆ. ಆದ್ರೆ ಸಮಸ್ಯೆ ಏನಪ್ಪಾ ಅಂದ್ರೆ ಕೆಲವೊಂದ್ಸಲ ಈ ಸಾಕ್ಷಿ ಸುಮ್ನೆ ಇದ್ದು ಬಿಡುತ್ತೆ ……ಏನು ಹೇಳೋದೇ ಇಲ್ಲ ಅಂತೀನಿ…. ಆಗ ಮನಸಿನ ಮಾತನ್ನ ಕೇಳದೆ ಇರೋದೇ ಉತ್ತಮ…… ಯಾಕಂದ್ರೆ ಆಮೇಲೆ ಅದರ ಪರಿಣಾಮಗಳನ್ನ ಎದುರಿಸಬೇಕಾದವ್ರು ನಾವೇ ತಾನೆ……..

ಏನೇ ಆದ್ರೂ ಈ ಮನಸಿನ ಮಾತನ್ನ ಕೇಳೋದ್ರಲ್ಲಿ ಒಂಥರಾ ಖುಷಿ ಇರುತ್ತೆ…… ನಾನೀಗ ಸ್ವಲ್ಪ ಮಾತು ಕಡಿಮೆ ಮಾಡ್ಕೊಂಡಿದ್ದೀನಿ ಅಂದೆನಲ್ಲ…….. ಅದು ಬರಿ ಬಾಯಿಂದ ಬರೋ ಮಾತನ್ನ ಕಡಿಮೆ ಮಾಡಿದ್ದೀನಿ ಅಷ್ಟೆ……. ಆದ್ರೆ ನನ್ ಮನಸ್ಸಿನ ಜೊತೆ ಮಾತಾಡೋದನ್ನ, ಅದು ಹೇಳಿದ್ದನ್ನ ಕೇಳಿಸಿಕೊಳ್ಳೋದನ್ನ ಜಾಸ್ತಿ ಮಾಡಿದ್ದೀನಿ…….ಆ ಮಾತುಗಳು ಒಂದೊಂದು ಸಲ ಏನ್ ಚೆನ್ನಾಗಿರುತ್ತೆ ಅಂತೀನಿ….. ನೀವು ಯಾವತ್ತಾದ್ರು ಮನಸಿನ ಮಾತುಗಳನ್ನ ಕೇಳಿದ್ದೀರಾ????? ಕೇಳಿದ್ರೆ ಗೊತ್ತಾಗುತ್ತೆ ಅದ್ರಲ್ಲಿರೋ ಸುಖ…….

ಸರಿ……ನಾನು ಮುಂದಿನ ಪೋಸ್ಟ್ ಕಳಿಸೋವರೆಗೆ ನೀವು ನಿಮ್ಮ ಮನಸಿನ ಮಾತುಗಳನ್ನ ಕೇಳ್ತಾ ಇರಿ….. ಆಯ್ತಾ…..???

1 comment:

  1. Hey rightly said, conveying between souls is called telepathy. I remember guruji saying it. if u do meditation in Brahmi mugurtha in early morning u can convey msgs mutualy it seems

    ReplyDelete