Tuesday, July 15, 2008

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ನಂ ಮನಸಲ್ಲಿ ಮೂಡೋ ಎಲ್ಲ ಭಾವನೆಗಳಿಗೂ ಈ ಪ್ರೀತಿನೆ ಕಾರಣ ಅಲ್ವ……..ಅನುಕಂಪ, ವಾತ್ಸಲ್ಯ, ಮಮತೆ ಏನೇ ಆಗಿರಬಹುದು ಅದಕ್ಕೆಲ್ಲ ಪ್ರೀತಿನೆ ಕಾರಣ……… ಇನ್ನೊಂದು ವಿಷಯ ಹೇಳಲಾ???? ನನ್ ಪ್ರಕಾರ ದ್ವೇಷದ ಹಿಂದೇನು ಪ್ರೀತಿ ಇದ್ದೇ ಇರುತ್ತೆ…….. ಒಂದು ಕ್ಷಣ ಕಣ್ಣು ಮುಚ್ಚಿ ಯೋಚನೆ ಮಾಡ್ರಿ………… ಈ ಜಗತ್ತಲ್ಲಿ ಪ್ರೀತಿ ಅನೋದೆ ಇರ್ಲಿಲ್ಲ ಅಂದ್ರೆ ಏನಾಗುತ್ತಿತ್ತು????

ನಾವು ಹುಟ್ಟಿದಾಗಿನಿಂದ ನಂ ಜೊತೇನೆ ಇದ್ದು ನಮ್ಮನ್ನ ತುಂಬ ತುಂಬ ತುಂಬ ಪ್ರೀತಿ ಮಾಡೋ ತಂದೆ ತಾಯಿ ನಮಗೋಸ್ಕರ ಎಷ್ಟು ಕಷ್ಟ ಪಡ್ತಾ ಇದ್ದಾರೆ ಅಲ್ವ……ತಮ್ಮ ನೋವನ್ನೆಲ್ಲ ಮರೆತು ನಮ್ಮೆದುರು ನಗ್ತಾ ಇರ್ತಾರೆ…… ಇದೆಲ್ಲ ಅವರು ನಂ ಮೇಲಿರೋ ಪ್ರೀತಿಯಿಂದಾನೆ ಮಾಡೋದು…. ಅಕಸ್ಮಾತ್ ಅವರಿಗೆ ನಂ ಮೇಲೆ ಪ್ರೀತಿ ಇಲ್ಲದಿದ್ದರೆ ನಾವು ಈಗ ಹೇಗಿದ್ದೇವೋ ಹಾಗೆ ಇರೋಕೆ ಅಗ್ತಿತ್ತಾ???..... ಜಗತ್ತೇ ನಮ್ಮ ವಿರುದ್ಧ ನಿಂತರೂ ನಾನು ನಿನ್ ಜೊತೆಗಿರ್ತೀನಿ ಅನ್ನೋ ಆ ಮಾತು……ಅಳುವಾಗ ತಬ್ಬಿ ಸಂತೈಸೋ ಆ ತೋಳುಗಳು…..ಹಸಿದಾಗ ತುತ್ತಿಟ್ಟು ತಿನ್ನಿಸೋ ಆ ಕೈಗಳು…..ಸುಸ್ತಾದಾಗ ಮಲಗೋಕೆ ಜಾಗ ಕೊಡೊ ಆ ಮಡಿಲು………ಇವೆಲ್ಲ ಇಲ್ಲ ಅಂದ್ರೆ……ಬೇಡ ಬೇಡ ಅದರ ಬಗ್ಗೆ ಮಾತೇ ಬೇಡ…….

ನಾವು ಪ್ರೈಮರಿ ಸ್ಕೂಲಿಂದ ಕಲಿತಾ ಇರೋದು ಮನುಷ್ಯ ಸಂಘ ಜೀವಿ ಅವನು ಯಾವಾಗಲು ಬೇರೆಯವರನ್ನು ಅವಲಂಬಿಸಿಯೇ ಇರುತ್ತಾನೆ ಅಂತ……. ಅಲ್ಲ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ ಇರ್ಲಿಲ್ಲ ಅಂದ್ರೆ ನಾವು ಸಮಾಜ ಶಾಸ್ತ್ರ ಓದೋದೇ ಬೇಕಾಗ್ತಾ ಇರ್ಲಿಲ್ಲ…… ಯಾಕಂದ್ರೆ ಆಗ ಸಮಾಜ ಅನ್ನೋ ವಿಚಾರಾನೆ ನಂ ತಲೆಗೆ ಹೊಳೀತಾ ಇರ್ಲಿಲ್ಲ ಅಲ್ವ………

ಯಾರಿಗಾದರು ನೋವಾದಾಗ ಮಿಡಿಯೋ ಮನಸು….ಅಯ್ಯೋ ಪಾಪ ಹಾಗಾಗಬಾರದಿತ್ತು ಅಂತ ಮರುಕ ಪಡೋ ಮನಸು……..ಛೆ ಯಾಕಾದ್ರೂ ದೇವ್ರು ಇಷ್ಟು ಕ್ರೂರಿ ಆಗ್ತಾನೋ ಅಂತ ಶಪಿಸೋ ಮನಸು….ಇವೆಲ್ಲ ನೀವು ಅನುಕಂಪ ಅಂತ ಅನ್ನಬಹುದು ಆದ್ರೆ ನಾನು ಇದನ್ನೂ ಪ್ರೀತಿ ಅಂತಾನೆ ಕರೀತೀನಿ…..ಪ್ರೀತಿ ಇಲ್ಲ ಅಂದ್ರೆ ನಂ ಮನಸಿಗೆ ಇಂಥ ಯೋಚನೆಗಳೇ ಬರೋಲ್ಲ ಅಲ್ವ…..

ಜೊತೆಗೆ ಇಲ್ಲದೆ ಇದ್ರೂ ಸದಾ ನಮ್ಮ ಬಗ್ಗೆನೇ ಕಾಳಜಿ ವಹಿಸೋ ಅಕ್ಕ……ಸದಾ ಒಂದಿಲ್ಲೊಂದು ವಿಷಯಕ್ಕೆ ಜಗಳ ಆಡಿದರು ಅಷ್ಟೆ ಗೌರವಾದರಗಳಿರೋ ತಮ್ಮ……… ವಾತ್ಸಲ್ಯ ಭರಿತ ಮಾತುಗಳಿಂದ ಸದಾ “ಹುಷಾರು” ಅಂತ ಹೇಳೋ ತಾತ ಅಜ್ಜಿ …….ನಗುನಗುತ್ತ ಮಾತಾಡಿಸೋ ಚಿಕ್ಕಪ್ಪ ಚಿಕ್ಕಮ್ಮಂದಿರು…….. “ಅಕ್ಕ ಅಕ್ಕ” ಅಂತ ಜೊತೆಗೆ ಓಡಾಡೋ ಅವರ ಮಕ್ಕಳು…....ದೊಡ್ಡಪ್ಪ, ದೊಡ್ಡಮ್ಮ, ಸೋದರ ಮಾವ, ಅತ್ತೆ, ಅವರ ಮಕ್ಕಳು, ಅಕ್ಕನ ಮಕ್ಕಳು, ಅಣ್ಣಂದಿರು…… ಇನ್ನು ಹೇಳ್ತಾ ಹೋದ್ರೆ ಇಂಥ ನೂರೆಂಟು ಸಂಬಂಧಗಳು …… ಪ್ರೀತಿನೇ ಇಲ್ಲ ಅಂದ್ರೆ ಇವರೆಲ್ಲ ನಮ್ಮವರು ಅಂತಿದ್ವಾ? ಅಷ್ಟೆಲ್ಲಾ ಯಾಕೆ ಇಂಥ ಸಂಬಂಧಗಳೇ ಇರುತ್ತಿರಲಿಲ್ಲ ಅಲ್ವೇನ್ರಿ……. ಆ ಸಂಬಂಧಗಳೇ ಇಲ್ಲದ ಬದುಕು ಹೇಗಿರುತ್ತೆ????? ಊಹೆ ಮಾಡೋಕೂ ಸಾಧ್ಯ ಇಲ್ಲ ಅಲ್ವ…….

ಅಕಸ್ಮಾತಾಗಿ ನಮ್ಮ ಬದುಕಲ್ಲಿ ಬಂದು ನಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಅನುಭವಿಸುವಲ್ಲಿ ಜೊತೆಗಾರರಾಗಿದ್ದು ನಮ್ಮ ಮನಸಿಗೆ ಸಂತೋಷವಾದಾಗ ಅದನ್ನು ಹಂಚಿಕೊಂಡು ದುಃಖವಾದಾಗ ನಮ್ಮನ್ನು ಸಂತೈಸೋ ಸ್ನೇಹಿತರಿಗೆ ನಮ್ಮ ಮೇಲೆ ಪ್ರೀತಿನೇ ಇರ್ಲಿಲ್ಲ ಅಂದ್ರೆ…… ಈ ಜಗತ್ತಲ್ಲೇ ಒಂದು ಅತ್ಯುತ್ತಮ ಬಂಧ ಅಂತ ನಾವು ಕರೆಯೋ ಸ್ನೇಹಕ್ಕೆ ಆಗ ಏನು ಬೆಲೆ ಇರ್ತಿತ್ತು ನೀವೇ ಹೇಳ್ರಿ……. ಸ್ನೇಹಿತರೂ ಒಬ್ಬರನ್ನೊಬ್ಬರು ಪ್ರೀತಿಸದೆ ಇದ್ರೆ ಮನಸುಗಳ ನಡುವೆ ಸೇತುವೆ ಕಟ್ಟೋಕೆ ಆಗುತ್ತಾ ಹೇಳಿ………

ನಮಗೆ ಪರಿಚಿತರಲ್ಲದ ಹಲವರು ನಮಗೆ ಎಷ್ಟೋ ಸಂದರ್ಭದಲ್ಲಿ ಸಹಾಯ ಮಾಡಿರ್ತಾರೆ…. ಅವರನ್ನೆಲ್ಲ ನಾವು ನೆನಪಲ್ಲಿಟ್ಟುಕೊಳ್ಳದೆ ಇರಬಹುದು ಆದ್ರೆ ಅವರು ನಮಗೆ ಸಹಾಯ ಮಾಡಿದ್ದು ನಂ ಮೇಲಿನ ಪ್ರೀತಿಯಿಂದಾನೆ………ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲದೆ ಹೋಗಿದ್ರೆ ನಾವು ಅವರಿಂದ ಯಾವುದೇ ಸಹಾಯ ಅಪೇಕ್ಷಿಸೋದಿಕ್ಕೆ ಆಗೋಲ್ಲ………

ಇಷ್ಟು ಹೊತ್ತು ಬೇರೆಯವರಿಗೆ ನಮ್ಮ ಬಗ್ಗೆ ಪ್ರೀತಿ ಇಲ್ಲದೆ ಹೋದ್ರೆ ಏನಾಗುತ್ತಿತ್ತು ಅಂತ ಹೇಳಿದ್ದಾಯ್ತು ......ನಾವೇ ಯಾರನ್ನು ಪ್ರೀತಿಸಲಿಲ್ಲ ಅಂದ್ರೆ…..ನಮ್ಮ ಮನಸಲ್ಲಿ ಯಾವುದೇ ಭಾವನೆಗಳೇ ಇರೋಲ್ಲ ಅಲ್ವ……ಆಗ ನಾನು ತುಂಬ ಇಷ್ಟ ಪಡೋ ಮನಸನ್ನು ದ್ವೇಷಿಸುತ್ತಿದ್ದೆನೇನೋ………ಓಹ್……ಆಗ ದ್ವೇಷ ಅನ್ನೋದು ತಾನೆ ಹೇಗೆ ಬರ್ತಿತ್ತು ಯಾಕಂದ್ರೆ ನಾನು ಈಗಾಗಲೇ ಹೇಳಿರೋ ಹಾಗೆ ಪ್ರೀತಿ ಇದ್ರೇನೆ ದ್ವೇಷನು ಇರೋದು ಅಲ್ವ………

ಅದಕ್ಕೆ ಈ ಭೂಮಿ ಮೇಲೆ ಎಲ್ಲಿವರೆಗೂ ಮನುಷ್ಯರಿರುತ್ತರೋ ಅಲ್ಲಿವರೆಗೆ ಪ್ರೀತಿನೂ ಇರುತ್ತೆ……. ಯಾಕಂದ್ರೆ ಮನುಷ್ಯ ಒಂದು ಕ್ಷಣ ಜೀವಿಸೋಕು ಅವನಿಗೆ ಪ್ರೀತಿ ಬೇಕು……..ತಾಯಿ ತನ್ನ ಮಗುನ ಪ್ರೀತಿಸದೆ ಇದ್ರೆ ಆ ಮಗು ಈ ಜಗತ್ತಿಗೆ ಬರೋಕೆ ಆಗೋಲ್ಲ. ಹಾಗಾಗಿ ಈ ಭೂಮಿ ಮೇಲೆ ಪ್ರೀತಿ ಇದ್ದೇ ಇರುತ್ತೆ…….ಪ್ರೀತಿ ಯಾಕೆ ಭೂಮಿ ಮೇಲಿದೆ ಅಂತ ಪ್ರಶ್ನಿಸಿ ನಮ್ಮ ಸಮಯ ಹಾಳು ಮಾಡಿಕೊಳ್ಳೋದಕ್ಕಿಂತ ಅದರಿಂದ ನಮಗಾಗುಗುವ ಆ ವರ್ಣನಾತೀತ ಅನುಭವವನ್ನು ಅನುಭವಿಸುವುದೇ ಮೇಲು ಅಲ್ವ……..

No comments:

Post a Comment